ಕ್ರೀಡೆ

ಎಟಿಪಿ ಚಾಲೆಂಜರ್‌: ಸುಮಿತ್‌ ನಗಾಲ್‌, ಪ್ರಜ್ಞೇಶ್‌ ಸೆಮಿಫೈನಲ್‌ಗೆ ಎಂಟ್ರಿ

Raghavendra Adiga

ನವದೆಹಲಿ: ಗೆಲುವಿನ ಲಯ ಮುಂದುವರಿಸಿರುವ ಆರನೇ ಶ್ರೇಯಾಂಕ ಭಾರತದ ಆಟಗಾರ ಸುಮಿತ್‌ ನಗಾಲ್‌ ಬಂಜಾ ಲುಕಾ (ಬೋಸ್ನಿಯಾ ಮತ್ತು ಹರ್ಜೆಗೋವಿನಾ)ದಲ್ಲಿ ನಡೆಯುತ್ತಿರುವ ಎಟಿಪಿ ಚಾಲೆಂಜರ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಸೆಮಿಫೈನಲ್‌ ತಲುಪಿದ್ದಾರೆ.

ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಸುಮಿತ್‌ ನಗಾಲ್ 6-2, 7-5 ನೇರ ಸೆಟ್‌ಗಳ ಅಂತರದಲ್ಲಿ ಅರ್ಜೆಂಟೀನಾದ ಫೆಡೆರಿಕೊ ಕೊರಿಯಾ ವಿರುದ್ಧ ಗೆದ್ದು ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟರು.

ಇತ್ತೀಚಿಗಷ್ಟೆ ಯುಎಸ್‌ ಓಪನ್‌ ಚೊಚ್ಚಲ ಪ್ರವೇಶ ಮಾಡಿದ್ದ ಭಾರತದ ಆಟಗಾರ ರೋಜರ್‌ ಫೆಡರರ್‌ ವಿರುದ್ಧ ಮೊದಲ ಸೆಟ್‌ ಗೆದ್ದು ನಂತರ ಪಂದ್ಯದಲ್ಲಿ ಸೋಲು ಅನುಭವಿಸಿದ್ದರು. ಇದೇ ವಿಶ್ವಾಸದಲ್ಲಿರುವ ಹರಿಯಾಣದ ಸುಮಿತ್‌ ನಗಾಲ್‌ ಸೆಮಿಫೈನಲ್‌ ಕಾದಾಟದಲ್ಲಿ ಐದನೇ ಶ್ರೇಯಾಂಕದ ಸ್ಲೋವಾಕಿಯಾದ ಫಿಲಿಪ್‌ ಹೊರಾಸ್ಕಿ ವಿರುದ್ಧ ಸೆಣಸಲಿದ್ದಾರೆ.

ಇನ್ನೊಂದೆಡೆ ಭಾರತದ ಅಗ್ರ ಶ್ರೇಯಾಂಕಿತ ಆಟಗಾರ ಪ್ರಜ್ಞೇಶ್‌ ಗುಣೇಶ್ವರನ್‌ ಅವರು ಚೀನಾದ ಶಾಂಘೈನಲ್ಲಿ ನಡೆಯುತ್ತಿರುವ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿಯ ಪುರುಷರ ಸೆಮಿಫೈನಲ್‌ಗೆ ಪ್ರವೇಶ ಮಾಡಿದ್ದಾರೆ.

88 ನಿಮಿಷಗಳ ಕಾಲ ನಡೆದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಪಾರಮ್ಯೆ ಮೆರೆಡ ಪ್ರಜ್ಞೇಶ್‌ ಗುಣೇಶ್ವರನ್‌ 6-4, 6-4 ನೇರ ಸೆಟ್‌ಗಳ ಅಂತರದಲ್ಲಿ ಜಪಾನ್‌ನ ಹಿರೋಕಿ ಮೊರಿಯಾ ವಿರುದ್ಧ ಗೆದ್ದು ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ.

ಚೆನ್ನೈ ಆಟಗಾರ ಎಂಟು ಏಸ್‌ ಅಂಕಗಳೊಂದಿಗೆ ಎರಡು ಬಾರಿ ಡಬಲ್ಸ್‌ ಫಾಲ್ಟ್‌ ಮಾಡಿದರೆ, ಎದುರಾಳಿ ಆಟಗಾರ ಮೊರಿಯಾ ಅವರು ಐದು ಏಸ್ ಅಂಕಗಳನ್ನು ಗೆದ್ದು ಒಂದೇ-ಒಂದು ಡಬಲ್ಸ್‌ ಫಾಲ್ಟ್‌ ಮಾಡಿದರು. ಸೆಮಿಫೈನಲ್‌ ಹಣಾಹಣಿಯಲ್ಲಿ ನಾಲ್ಕನೇ ಶ್ರೇಯಾಂಕದ ಜಪಾನ್‌ನ ಯಸುತಕಾ ಉಚಿಯಾಮಾ ವಿರುದ್ಧ ಪ್ರಜ್ಞೇಶ್‌ ಸೆಣಸಲಿದ್ದಾರೆ. 

SCROLL FOR NEXT