ಕ್ರೀಡೆ

ಅರ್ಜುನ ಪ್ರಶಸ್ತಿ ಪಡೆಯಲು ನಾನು ಇನ್ನಾವ  ಪದಕ ಗೆಲ್ಲಬೇಕು? ಪ್ರಧಾನಿ ಮೋದಿಗೆ ಸಾಕ್ಷಿ ಮಲಿಕ್ ಪ್ರಶ್ನೆ

Raghavendra Adiga

ನವದೆಹಲಿ: ಖೇಲ್ ರತ್ನ ವಿಜೇತೆ ಸಾಕ್ಷಿ ಮಲಿಕ್ ಮತ್ತು ಮೀರಾಬಾಯಿ ಚಾನು ಅವರಿಗೆ ಅರ್ಜುನ ಪ್ರಶಸ್ತಿ ನೀಡದಿರುವ ಕ್ರೀಡಾ ಸಚಿವಾಲಯದ ನಿರ್ಧಾರದ ಬಳಿಕ  ಭಾರತೀಯ ಕುಸ್ತಿಪಟು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಪ್ರತಿಷ್ಠಿತ  ಅರ್ಜುನ ಪ್ರಶಸ್ತಿ ಸ್ವೀಕರಿಸಲು ನಾನು ಇನ್ನಾವ ಪದಕವನ್ನು ಜಯಿಸಬೇಕು ಎಂದು ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಅರ್ಜುನ ಪ್ರಶಸ್ತಿ ಘೋಷಿಸಿದ್ದ ಕ್ರೀಡಾ ಸಚಿವಾಲಯ ಪ್ರಶಸ್ತಿ ಪುರಸ್ಕೃತರ ಹೆಸರನ್ನು 29 ರಿಂದ 27ಕ್ಕೆ ಕಡಿತ ಮಾಡಿತ್ತು. ಸಾಕ್ಷಿ ಮತ್ತು ಮೀರಾಬಾಯಿ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿತ್ತು. ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಸಾಕ್ಷಿ 2016 ರಲ್ಲಿ ಖೇಲ್ ರತ್ನ ಪ್ರಶಸ್ತಿ ಸ್ವೀಕರಿಸಿದ್ದರು.

ಕ್ರೀಡಾ ಸಚಿವಾಲಯದ ವಿವರಣೆಯಿಂದ ತೃಪ್ತರಾಗದ ಸಾಕ್ಷಿ, ಪಿಎಂ ಮೋದಿ ಮತ್ತು ಕ್ರೀಡಾ ಸಚಿವ ಕಿರೆನ್ ರಿಜಿಜು ಅವರಿಗೆ ಪತ್ರವೊಂದನ್ನು ಬರೆದಿದ್ದು "ನಾನು  ನನ್ನ ವೃತ್ತಿಜೀವನದಲ್ಲಿ ಎಂದಾದರೂ ಪ್ರಶಸ್ತಿ ಗಳಿಸಿಕೊಳ್ಳುತ್ತೇನೆಯೆ?" ಎಂದು ಪ್ರಶ್ನಿಸಿದ್ದಾರೆ.

“ಖೇಲ್ ರತ್ನವನ್ನು ನೀಡಿರುವುದಕ್ಕೆ ನನಗೆ ಹೆಮ್ಮೆ ಇದೆ. ಪ್ರತಿಯೊಬ್ಬ ಕ್ರೀಡಾಪಟು ಎಲ್ಲಾ ಪ್ರಶಸ್ತಿಗಳನ್ನು ಗೆಲ್ಲುವ ಕನಸು ಕಾಣುತ್ತಾನೆ. ಒಬ್ಬ ಕ್ರೀಡಾಪಟು ತನ್ನ ಜೀವವನ್ನು ಅದಕ್ಕೆಂದೇ ಅಪಾಯಕ್ಕೆ ದೂಡುತ್ತಾನೆ. ಅರ್ಜುನ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ನನ್ನ ಹೆಸರನ್ನು ನೋಡುವ ಕನಸು ನನಗಿದೆ.

“ನಾನು ಅರ್ಜುನ ಪ್ರಶಸ್ತಿಗೆ ಪಾತ್ರವಾಗಲು ದೇಶಕ್ಕೆ ಇನ್ನೇನು ಪದಕ ಗಳಿಸಿಕೊಡಬೇಕು? ಅಥವಾ  ಈ ಕುಸ್ತಿ ಕ್ರೀಡಾ ಜೀವನದಲ್ಲಿ, ಈ ಪ್ರಶಸ್ತಿಯನ್ನು ಗೆಲ್ಲುವ ಅದೃಷ್ಟ ನನಗೆ ಎಂದಿಗೂ ಇರುವುದಿಲ್ಲವೇ?" ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಸಾಕ್ಷಿ ಬರೆದಿದ್ದಾರೆ. 

2017 ರಲ್ಲಿ ನಡೆದ ಕಾಮನ್‌ವೆಲ್ತ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಸಾಕ್ಷಿ ಚಿನ್ನ ಗೆದ್ದರೆ ನವದೆಹಲಿಯಲ್ಲಿ ನಡೆದ ಏಷ್ಯನ್ ವ್ರೆಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗಳಿಸಿದ್ದರು.  ಗೋಲ್ಡ್ ಕೋಸ್ಟ್‌ನಲ್ಲಿ ನಡೆದ 2018 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಅವರು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ರೋಹಿತ್ ಶರ್ಮಾ, ವಿನೇಶ್ ಫೋಗಾಟ್ ಸೇರಿದಂತೆ ಐವರಿಗೆ 2020 ರ ಸಾಲಿನ  ಖೇಲ್ ರತ್ನ ಪ್ರಶಸ್ತಿ ಲಭಿಸಿದೆ. 

SCROLL FOR NEXT