ಕ್ರೀಡೆ

ಕಬಡ್ಡಿ ಆಟಗಾರರು ಪಾಕಿಸ್ತಾನಕ್ಕೆ ಹೋಗಲು ಅನುಮತಿ ನೀಡಲ್ಲ- ಕಿರಣ್ ರಿಜಿಜು

Nagaraja AB

ನವದೆಹಲಿ: ವಿಶ್ವ ಕಬ್ಬಡಿ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನಕ್ಕೆ ಪ್ರಯಾಣಿಸಲು ಯಾವುದೇ ಭಾರತೀಯ ಆಟಗಾರರಿಗೆ ಅನುಮತಿ ನೀಡುವುದಿಲ್ಲ ಎಂದು ಕೇಂದ್ರ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸ್ಪಷ್ಟಪಡಿಸಿದ್ದಾರೆ

ಪಾಕಿಸ್ತಾನಕ್ಕೆ ತೆರಳಲು ಯಾವುದೇ ಕಬಡ್ಡಿ ಆಟಗಾರರಿಗೆ ಅನುಮತಿ ನೀಡಲ್ಲ. ವೀಸಾ ನೀಡುವುದು ದೇಶದ ಸಾರ್ವಭೌಮ ಹಕ್ಕು, ವೀಸಾ ನೀಡುವಲ್ಲಿ ನಮಗೆ ಯಾವುದೇ ಪಾತ್ರವಿಲ್ಲ ಎಂದು ಎಎನ್ ಐ ಸುದ್ದಿಸಂಸ್ಥೆಗೆ ರಿಜಿಜು ತಿಳಿಸಿದ್ದಾರೆ.

 ಪಾಕಿಸ್ತಾನ ಭೇಟಿ ಅಥವಾ ರದ್ದತಿ ಬಗ್ಗೆ ಮಾಹಿತಿ ನೀಡಲಾಗಿದೆಯೇ ಎಂಬ ಬಗ್ಗೆ ಕಬಡಿ ಪೆಡರೇಷನ್ ನೊಂದಿಗೆ ಮಾತುಕತೆ ನಡೆಸುತ್ತೇನೆ. ವೀಸಾಗೆ ಸಂಬಂಧಿಸಿದಂತೆ ನಮಗೆ ಯಾವುದೇ ಪಾತ್ರವಿಲ್ಲ, ಆದರೆ, ದೇಶದ ಹೆಸರಿನಲ್ಲಿ ಆಟವಾಡುವುದು ಅಥವಾ ಭಾರತದ ಧ್ವಜವನ್ನು ಬಳಸುವ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುವುದು ಎಂದು ರಿಜಿಜು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ್ದ ಭಾರತೀಯ ಅಮೆಚೂರು ಕಬಡ್ಡಿ ಫೆಡರೇಷನ್ ಆಡಳಿತಗಾರ ನ್ಯಾಯಮೂರ್ತಿ ಎಸ್ ಪಿ ಗಾರ್ಗ್, ಪಾಕಿಸ್ತಾನದಲ್ಲಿ ಪಂದ್ಯವಾಡಲು ಯಾವುದೇ ಕಬ್ಬಡಿ ತಂಡಕ್ಕೆ ಅನುಮತಿ ನೀಡಿಲ್ಲ. ಆದಾಗ್ಯೂ, ಪ್ರಯಾಣ ಬೆಳೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

ಪಾಕಿಸ್ತಾನಕ್ಕೆ ಹೋಗಲಿರುವ ಯಾವುದೇ ಕಬಡ್ಡಿ ತಂಡದ ಬಗ್ಗೆ ಭಾರತೀಯ ಅಮೆಚೂರು ಕಬಡ್ಡಿ ಫೆಡರೇಷನ್ ಯಾವುದೇ ಮಾಹಿತಿ ನೀಡಿಲ್ಲ. ಪಾಕಿಸ್ತಾನದಲ್ಲಿ ಪಂದ್ಯವಾಡಲು ಯಾವುದೇ ತಂಡಕ್ಕೂ ಅವಕಾಶ ನೀಡಿಲ್ಲ. ಮಾಹಿತಿ ಕೇಳಿದ ಬಳಿಕವಷ್ಟೇ ಈ ವಿಚಾರ ನಮಗೆ ತಿಳಿಯಿತು. ಇಂತಹ ಯಾವುದೇ ರೀತಿಯ ಚಟುವಟಿಕೆಗಳನ್ನು ಎಫ್ ಕೆಐ ಬೆಂಬಲಿಸಲ್ಲ, ವಿರುದ್ಧವಾಗಿ ನಡೆದುಕೊಳ್ಳುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗಾರ್ಗ್ ತಿಳಿಸಿದರು.

SCROLL FOR NEXT