ಕ್ರೀಡೆ

ಇಂಡೋನೇಷ್ಯಾ ಮಾಸ್ಟರ್ಸ್: ಸಿಂಧು ಶುಭಾರಂಭ-ಸೈನಾ ನಿರ್ಗಮನ

Raghavendra Adiga

ಜಕಾರ್ತ: ಭಾರತ ಹಿರಿಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಅವರು ಇಲ್ಲಿ ನಡೆಯುತ್ತಿರುವ ಇಂಡೋನೇಷ್ಯಾ ಮಾಸ್ಟರ್ಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ನಲ್ಲಿ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಆದರೆ, ಮತ್ತೊರ್ವ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಮೊದಲನೇ ಸುತ್ತಿನಲ್ಲೇ ಸೋತು ಹೊರ ನಡೆದರು.

ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್‌ ಆರಂಭಿಕ ಸುತ್ತಿನ ಪಂದ್ಯದಲ್ಲಿ ಮೊದಲನೇ ಗೇಮ್ ಸೋತರೂ ನಂತರ ಪುಟಿದೆದ್ದ ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತ ಪಿ.ವಿ ಸಿಂಧು ಅವರು 14-21, 21-15, 21-11 ಅಂತರದಲ್ಲಿ ಜಪಾನ್‌ನ ಅಯಾ ಒಹೋರಿ ವಿರುದ್ಧ ಗೆದ್ದು ಶುಭಾರಂಭ ಮಾಡಿದ್ದಾರೆ.

ವಿಶ್ವ ಚಾಂಪಿಯನ್ ಹೈದರಾಬಾದ್ ಆಟಗಾರ್ತಿ ಮುಂದಿನ ಪಂದ್ಯದಲ್ಲಿ ಜಪಾನ್‌ನ ಸಯಾಕ ತಕಹಾಶಿ ವಿರುದ್ಧ ನಾಳೆ ಸೆಣಸಲಿದ್ದಾರೆ.

ಮಹಿಳೆಯರ ಮತ್ತೊಂದು ಸಿಂಗಲ್ಸ್‌ ಮೊದಲ ಸುತ್ತಿನ ಹಣಾಹಣಿಯಲ್ಲಿ ಭಾರತ ಮತ್ತೊರ್ವ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಜಪಾನ್‌ನ ಸಯಾಕ ತಕಹಾಶಿ ವಿರುದ್ಧ ಮೊದಲ ಗೇಮ್ ಗೆದ್ದಿದ್ದರು. ಆದರೆ, ನಂತರದ ಅದೇ ಆಟ ಮುಂದುವರಿಸುವಲ್ಲಿ ವಿಫಲರಾದರು. ಹಾಗಾಗಿ, ಜಪಾನ್ ಆಟಗಾರ್ತಿ ಎದುರು 21-19, 13-21, 5-21 ಅಂತರದಲ್ಲಿ ಸೈನಾ ಸೋಲು ಒಪ್ಪಿಕೊಂಡರು.

ಇದಕ್ಕೂ ಮುನ್ನ ನಡೆದಿದ್ದ ಪುರುಷರ ಸಿಂಗಲ್ಸ್‌ ಹಣಾಹಣಿಯಲ್ಲಿ ಭಾರತದ ಕಿಡಂಬಿ ಶ್ರೀಕಾಂತ್, ಸಾಯಿ ಪ್ರನೀತ್ ಹಾಗೂ ಸೌರಭ್ ವರ್ಮಾ ಅವರು ಸೋಲು ಅನುಭವಿಸಿದ್ದರು. ಕಿಡಂಬಿ ಶ್ರೀಕಾಂತ್ ಅವರು ಸ್ಥಳೀಯ ಆಟಗಾರ ಶೆಸಾರ್ ಹಿರೆನ್ ಅವರ ವಿರುದ್ಧ 21-18, 12-21, 14-21 ಅಂತರದಲ್ಲಿ ಸೋಲು ಅನುಭವಿಸಿದರು. ಆ ಮೂಲಕ ಒಂದು ಗಂಟೆ ಮೂರು ನಿಮಿಷ ನಡೆದ ಸುದೀರ್ಘ ಕಾದಾಟದಲ್ಲಿ ಶ್ರೀಕಾಂತ್ ಸೋಲುಂಡರು.

ಭಾರತದ ಮತೊಬ್ಬ ಆಟಗಾರ ಸೌರಭ್ ವರ್ಮಾ ಅವರು ಚೀನಾದ ಲು ಗ್ವಾನ್ ಜು ಅವರ ವಿರುದ್ಧ ಮೊದಲ ಗೇಮ್‌ನಲ್ಲಿ 21-17 ಅಂತರದಲ್ಲಿ ಗೆಲುವಿನ ಹೊರತಾಗಿಯೂ ನಂತರ 15-21, 10-21 ಅಂತರದಲ್ಲಿ ಸೋಲು ಅನುಭವಿಸಿದರು. 

SCROLL FOR NEXT