ಕ್ರೀಡೆ

ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಜಾವೆಲಿನ್ ಪಟು ನೀರಜ್ ಚೋಪ್ರಾ

Raghavendra Adiga

ನವದೆಹಲಿ:  ಮೊಣಕೈ ಗಾಯದಿಂದ ಚೇತರಿಸಿಕೊಂಡ ನಂತರ, ಭಾರತದ ಅನುಭವಿ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಥ್ಲೆಟಿಕ್ಸ್ ಸೆಂಟ್ರಲ್ ನಾರ್ಥ್ ಈಸ್ಟ್ ಸ್ಪರ್ಧೆಯಲ್ಲಿ 87.86 ಮೀಟರ್ ಎಸೆಯುವ ಮೂಲಕ ಟೋಕಿಯೋ 2020ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮೊಣಕೈ ಗಾಯದಿಂದ ಚೇತರಿಸಿಕೊಂಡ ಬಳಿಕ ನೀರಜ್ ಚೋಪ್ರಾ ಅವರಿಗೆ ಇದೇ ವರ್ಷದಲ್ಲಿ ಆರಂಭವಾಗುವ ಟೋಕಿಯೊ ಒಲಿಂಪಿಕ್ಸ್‌ ಪದಕ ಗೆಲ್ಲುವುದು ಮೊದಲ ಸವಾಲಾಗಿದೆ. ನೀರಜ್ ಚೋಪ್ರಾ ಅವರನ್ನು ಅಂತಾರಾಷ್ಟ್ರೀಯ ಮಹತ್ವದ ಸ್ಪರ್ಧೆಗೆ ಮಾನ್ಯೆತ ಮಾಡುವುದಾಗಿ ದಕ್ಷಿಣ ಆಫ್ರಿಕನ್ ಸಹವರ್ತಿಗಳು ಸ್ಪಷ್ಟತೆ ನೀಡಿದ್ದಾರೆ ಎಂದು ಭಾರತೀಯ ಅಥ್ಲೆಟಿಕ್ಸ್ ಒಕ್ಕೂಟ ತಿಳಿಸಿದೆ.

ಕಳೆದ 2018ರ ಆಗಸ್ಟ್ ನಲ್ಲಿ ನಡೆದಿದ್ದ ಜಕಾರ್ತ ಏಷ್ಯನ್‌ ಕ್ರೀಡಾಕೂಟದ ನೀರಜ್ ಪಾಲಿಗೆ ಕೊನೆಯ ಸ್ಪರ್ಧೆಯಾಗಿತ್ತು. ಆ ಸ್ಪರ್ಧೆಯಲ್ಲಿ ಅವರು ಜಾವೆಲಿನ್ ಅನ್ನು 88.06 ಮೀ ಎಸೆಯುವ ಮೂಲಕ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು.

ಮೊಣಕೈ ಗಾಯಕ್ಕೆ ತುತ್ತಾದ ನೀರಜ್ ಚೋಪ್ರಾ ಕಳೆದ 2019ರ ವರ್ಷದಲ್ಲಿನ ಎಲ್ಲ ಸ್ಪರ್ಧೆಗಳಿಂದ ದೂರ ಉಳಿದಿದ್ದರು. ಕಳೆದ ವರ್ಷ ಕೊನೆಯಲ್ಲಿ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಗೆ ಮರಳಲಿದ್ದಾರೆಂದು ಊಹಿಸಲಾಗಿತ್ತು. ಆದರೆ, ಇನ್ನೂ ಹೆಚ್ಚು ಅವಧಿ ವಿಶ್ರಾಂತಿ ಪಡೆಯಲಿ ಎಂದು ಎಎಫ್‌ಐ ಸಲಹೆ ನೀಡಿತ್ತು. ಇದೀಗ ನೀರಜ್ ಸಂಪೂರ್ಣ ಚೇತರಿಸಿಕೊಂಡು ಆಡಿದ ಮೊದಲನೇ ಸ್ಪರ್ಧೆಯಲ್ಲಿಯೇ ಒಲಿಂಪಿಕ್ಸ್‌ ಟಿಕೆಟ್ ಪಡೆದುಕೊಂಡಿದ್ದಾರೆ.
 

SCROLL FOR NEXT