ಕ್ರೀಡೆ

2027ರ ಎಎಫ್ ಸಿ ಏಷ್ಯನ್ ಕಪ್ ಆತಿಥ್ಯಕ್ಕೆ ಭಾರತ ಬಿಡ್ ಸಲ್ಲಿಕೆ

Lingaraj Badiger

ಕೌಲಾಲಂಪುರ: 2027ರ ಎಎಫ್‌ಸಿ ಏಷ್ಯನ್ ಕಪ್ ಟೂರ್ನಿಗೆ ಆತಿಥ್ಯ ವಹಿಸಲು ಭಾರತ ಸೇರಿದಂತೆ ಐದು ಸದಸ್ಯ ಸಂಸ್ಥೆಗಳು ಆಸಕ್ತಿ ತೋರಿವೆ ಎಂದು ಏಷ್ಯನ್ ಫುಟ್ಬಾಲ್ ಒಕ್ಕೂಟ(ಎಎಫ್‌ಸಿ) ಬುಧವಾರ ದೃಡಪಡಿಸಿದೆ.

ಎಎಫ್‌ಸಿ ಪ್ರಕಾರ, 2027ರ ಎಎಫ್‌ಸಿ ಏಷ್ಯನ್ ಕಪ್ ಆಯೋಜಿಸಲು ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಲು ರಾಷ್ಟ್ರಗಳಿಗೆ ಜೂನ್ 30 ಕೊನೆಯ ದಿನಾಂಕವಾಗಿತ್ತು. ಏಷ್ಯನ್ ಫುಟ್ಬಾಲ್ ಆತಿಥ್ಯಕ್ಕೆ ಭಾರತವಲ್ಲದೆ, ಇರಾನ್, ಕತಾರ್, ಸೌದಿ ಅರೆಬಿಯಾ ಮತ್ತು ಉಜ್ಬೇಕಿಸ್ತಾನ ಬಿಡ್ ಸಲ್ಲಿಸಿರುವ ಇತರ ರಾಷ್ಟ್ರಗಳಾಗಿವೆ.

ಆತಿಥ್ಯಕ್ಕೆ ಆಸಕ್ತಿ ತೋರಿರುವ ಐದು ರಾಷ್ಟ್ರಗಳ ಪೈಕಿ 1956ರಿಂದ ಆರಂಭವಾದ ಟೂರ್ನಿಗೆ ಎರಡು ರಾಷ್ಟ್ರಗಳು ಈಗಾಗಲೇ ಎರಡೆರಡು ಬಾರಿ ಆತಿಥ್ಯ ನೀಡಿವೆ. ಹಾಲಿ ಚಾಂಪಿಯನ್ ಕತಾರ್ 1988 ಮತ್ತು 2011ರಲ್ಲಿ ಚಾಂಪಿಯನ್ ಷಿಪ್ ಆತಿಥ್ಯ ನೀಡಿದ್ದರೆ, ಇರಾನ್ 1968 ಮತ್ತು 1976ರಲ್ಲಿ ಆತಿಥ್ಯ ವಹಿಸಿದ್ದು, ಏಷ್ಯನ್ ಫುಟ್ಬಾಲ್ ಇತಿಹಾಸದಲ್ಲಿ ಆತಿಥ್ಯ ನೀಡಿದ್ದ ಎರಡೂ ಬಾರಿಯೂ ಪ್ರಶಸ್ತಿ ಜಯಿಸಿದ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮೂರು ಬಾರಿಯ ಚಾಂಪಿಯನ್ ಸೌದಿ ಅರೇಬಿಯಾ, ಇತ್ತೀಚಿಗೆ 2022ರ ಎಎಫ್ ಸಿ ಮಹಿಳಾ ಏಷ್ಯಾ ಕಪ್ ಗೆ ಆತಿಥ್ಯದ ಹಕ್ಕು ಪಡೆದಿರುವ ಭಾರತ ಮತ್ತು ಇದೇ ವರ್ಷ ನಡೆಯಬೇಕಿರುವ 19 ವರ್ಷದೊಳಗಿನವರ ಎಎಫ್ ಸಿ ಚಾಂಪಿಯನ್ ಷಿಪ್ ಗೆ ಆತಿಥ್ಯ ವಹಿಸಲಿರುವ ಉಜ್ಬೇಕಿಸ್ತಾನ, ಮೊದಲ ಸಲ ಆತಿಥ್ಯ ನೀಡಲು ಎದುರು ನೋಡುತ್ತಿವೆ.

''ಬಿಡ್ಡಿಂಗ್ ಪ್ರಕ್ರಿಯೆಗೆ ಅನುಗುಣವಾಗಿ ಅಗತ್ಯವಾದ ದಸ್ತಾವೇಜು ರೂಪಿಸುವ ಕುರಿತು ಬಿಡ್ ಸಲ್ಲಿಸಿರುವ ಎಲ್ಲ ಸದಸ್ಯ ರಾಷ್ಟ್ರಗಳೊಂದಿಗೆ ಚರ್ಚಿಸಲಾಗುವುದು. ನಂತರ 19ನೇ ಆವೃತ್ತಿಯ ಟೂರ್ನಿಗೆ ಆತಿಥ್ಯ ವಹಿಸುವ ರಾಷ್ಟ್ರವನ್ನು ಪ್ರಕಟಿಸಲಾಗುವುದು, '' ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆತಿಥ್ಯಕ್ಕೆ ಆಸಕ್ತಿ ವ್ಯಕ್ತಪಡಿಸಿರುವ ರಾಷ್ಟ್ರಗಳಿಗೆ ಎಎಫ್ ಸಿ ಅಧ್ಯಕ್ಷ ಶೇಖ್ ಸಲ್ಮಾನ್ ಬಿನ್ ಇಬ್ರಾಹಿಂ ಅಲ್ ಖಲೀಫಾ ಧನ್ಯವಾದಗಳನ್ನು ತಿಳಿಸಿದ್ದಾರೆ.

SCROLL FOR NEXT