ಕ್ರೀಡೆ

ಫೆಡ್ ಕಪ್ ಹಾರ್ಟ್ ಪ್ರಶಸ್ತಿ ಗೆದ್ದ ಸಾನಿಯಾ ಮಿರ್ಜಾ: ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪ್ರಶಸ್ತಿ ಮೊತ್ತ

Sumana Upadhyaya

ನವದೆಹಲಿ: ತಾಯ್ತನದ ನಂತರ ಮತ್ತೆ ಟೆನಿಸ್ ಲೋಕಕ್ಕೆ ಮರಳಿದ ಸಾನಿಯಾ ಮಿರ್ಜಾ ಅವರಿಗೆ ಫೆಡ್ ಕಪ್ ಹಾರ್ಟ್ ಅವಾರ್ಡ್ ಪ್ರಶಸ್ತಿ ಬಂದಿದೆ. ಈ ಪ್ರಶಸ್ತಿ ಪಡೆಯುತ್ತಿರುವ ಮೊದಲ ಭಾರತೀಯ ಮಹಿಳೆ ಸಾನಿಯಾ ಮಿರ್ಜಾ.

ಏಷ್ಯಾ ವಲಯದಲ್ಲಿ ಸಾನಿಯಾ ಈ ಪ್ರಶಸ್ತಿ ಗೆದ್ದುಕೊಂಡಿದ್ದು ಪ್ರಸಕ್ತ ವರ್ಷದ ಮೂರು ಸ್ಥಳೀಯ ಗುಂಪು 1 ಸೂಚಿತ ಆಟಗಾರರ ಪೈಕಿ ಒಟ್ಟು 16 ಸಾವಿರದ 985 ಮತಗಳಲ್ಲಿ 10 ಸಾವಿರಕ್ಕೂ ಅಧಿಕ ಮತಗಳು ಬಂದವು. ಅಭಿಮಾನಿಗಳು ತಮ್ಮ ನೆಚ್ಚಿನ ಕ್ರೀಡಾಪಟುಗಳನ್ನು ಆನ್ ಲೈನ್ ನಲ್ಲಿ ಆಯ್ಕೆ ಮಾಡುತ್ತಿದ್ದು ಮೇ 1ರಿಂದ ವೋಟಿಂಗ್ ಪ್ರಕ್ರಿಯೆ ಪ್ರಾರಂಭವಾಗಿತ್ತು.
ಒಟ್ಟು ಮತಗಳಲ್ಲಿ ಶೇಕಡಾ 60ಕ್ಕೂ ಹೆಚ್ಚು ಮತಗಳು ಸಾನಿಯಾಗೆ ಲಭಿಸಿದವು. ಕ್ರೀಡಾಪಟುವಿಗೆ ಜಾಗತಿಕ ಮಟ್ಟದಲ್ಲಿ ಇರುವ ಜನಪ್ರಿಯತೆಯನ್ನು ಇದು ಸೂಚಿಸುತ್ತದೆ.

ಸಾನಿಯಾ ಮಿರ್ಜಾ ಇಂಡೋನೇಷಿಯಾದ 16 ವರ್ಷದ ಪ್ರಿಸ್ಕಾ ಮ್ಯಾಡ್ಲಿನ್ ನುಗ್ರೋಹೊವನ್ನು ಹಿಂದಿಕ್ಕಿದ್ದಾರೆ. ಪ್ರಶಸ್ತಿ ಮೊತ್ತ 2 ಸಾವಿರ ಡಾಲರ್ ನಗದು ಬಹುಮಾನವಾಗಿದ್ದು ಅದನ್ನು ಕೋವಿಡ್-19 ಸಾಂಕ್ರಾಮಿಕ ವಿರುದ್ಧ ಸಹಾಯಕ್ಕೆ ತೆಲಂಗಾಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾನಿಯಾ ಮಿರ್ಜಾ, ಫೆಡ್ ಕಪ್ ಹಾರ್ಟ್ ಅವಾರ್ಡ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳೆ ಎಂಬ ಕೀರ್ತಿಗೆ ಭಾಜನವಾಗಿದ್ದು ಹರ್ಷ ತಂದಿದೆ. ಈ ಪ್ರಶಸ್ತಿಯನ್ನು ನಾನು ಭಾರತಕ್ಕೆ, ನನ್ನ ಅಭಿಮಾನಿಗಳಿಗೆ ಮತ್ತು ನನಗೆ ಮತ ಹಾಕಿದವರಿಗೆ ಸಮರ್ಪಿಸುತ್ತೇನೆ. ಭವಿಷ್ಯದಲ್ಲಿ ದೇಶಕ್ಕೆ ಇನ್ನಷ್ಟು ಕೀರ್ತಿ ತರಲು ಶ್ರಮಿಸುತ್ತೇನೆ ಎಂದು ಹೇಳಿದ್ದಾಗಿ ಅಖಿಲ ಭಾರತ ಟೆನಿಸ್ ಅಸೋಸಿಯೇಷನ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ನಾಲ್ಕು ವರ್ಷಗಳ ನಂತರ ಫೆಡ್ ಕಪ್ ಗೆ ಮರಳಿದ ಸಾನಿಯಾ ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಭಾರತ ಪ್ಲೇ-ಆಫ್ ಗೆ ಅರ್ಹತೆ ಪಡೆಯುವಂತೆ ಮಾಡಿದ್ದಾರೆ. ಪುತ್ರ ಇಸ್ಸಾನ್ ಗೆ 2018ರ ಅಕ್ಟೋಬರ್ ನಲ್ಲಿ ಜನ್ಮ ನೀಡಿದ ಸಾನಿಯಾ ಮಿರ್ಜಾ ಈ ವರ್ಷದ ಜನವರಿಯಲ್ಲಿ ಮತ್ತೆ ಟೆನಿಸ್ ಲೋಕಕ್ಕೆ ಮರಳಿದ್ದರು. ಹೊಬರ್ಟ್ ಇಂಟರ್ ನ್ಯಾಷನಲ್ ಮಹಿಳೆಯರ ಡಬಲ್ಸ್ ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.

SCROLL FOR NEXT