ಕ್ರೀಡೆ

ನನ್ನ ಮಗ ಮತ್ತೆ ಅವರಪ್ಪನನ್ನು ಯಾವಾಗ ನೋಡುತ್ತಾನೋ...: ಸಾನಿಯಾ ಮಿರ್ಜಾ ಅಳಲು

Lingaraj Badiger

ಹೈದರಾಬಾದ್: ಕೊರೋನಾ ಸಾಂಕ್ರಾಮಿಕ ಕಾರಣದಿಂದಾಗಿ ಪ್ರಪಂಚದ ಬಹುತೇಕ ದೇಶಗಳು ಲಾಕ್ ಡೌನ್ ಗೆ ಒಳಗಾಗಿವೆ. ಈ ಹಿನ್ನಲೆಯಲ್ಲಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ, ತನ್ನ ತಂದೆ - ತಾಯಿಯೊಂದಿಗೆ ಹೈದರಾಬಾದ್ ನಲ್ಲಿದ್ದಾರೆ. ಆಕೆಯ ಪತಿ, ಪಾಕಿಸ್ತಾನ ಆಟಗಾರ ಶೋಯಬ್ ಮಲಿಕ್ ಸ್ವದೇಶವಾದ ಪಾಕಿಸ್ತಾನದಲ್ಲಿ ಸಿಲುಕಿಕೊಂಡಿದ್ದಾರೆ. 

ಇದರಿಂದಾಗಿ ನಮ್ಮ ಮಗ ಇಜಾನ್ ಮತ್ತೆ ತನ್ನ ತಂದೆಯನ್ನು ಯಾವಾಗ ನೋಡುತ್ತಾನೊ..? ಎಂಬುದು ತಿಳಿಯುತ್ತಿಲ್ಲ ಎಂದು ಸಾನಿಯಾ ಮಿರ್ಜಾ ಇತ್ತೀಚಿಗೆ ನೀಡಿದ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. 

ಅಮೆರಿಕಾದಿಂದ ಭಾರತಕ್ಕೆ ಬಂದಿರುವ ಸಾನಿಯಾ ತಮ್ಮ ಸ್ನೇಹಿತರನ್ನು ಭೇಟಿಯಾಗಲು ಹೈದರಾಬಾದ್ ನಲ್ಲಿ ಉಳಿದುಕೊಂಡಿದ್ದಾರೆ. ಇನ್ನೂ ಮಲಿಕ್ ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಪಾಲ್ಗೊಳ್ಳಬೇಕಿದ್ದ ಕಾರಣ, ಸೈಲ್ ಕೋಟ್ (ಪಾಕಿಸ್ತಾನ) ದಲ್ಲಿ ಉಳಿದುಕೊಂಡಿದ್ದಾರೆ.

ಈ ವಿಷಯವನ್ನು ಸಾನಿಯಾ ಮಾಧ್ಯಮಕ್ಕೆ ನೀಡಿರುವ ಒಂದು ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದಾರೆ. ನಾನು ಇಲ್ಲಿದ್ದೇನೆ, ಅವರು(ಮಲಿಕ್) ಪಾಕಿಸ್ತಾನದಲ್ಲಿದ್ದಾರೆ, ಚಿಕ್ಕಮಕ್ಕಳಿದ್ದವರಿಗೆ ಇಂತಹ ಪರಿಸ್ಥಿತಿ ಬರುವುದು ತುಂಬಾ ನೋವಿನ ಸಂಗತಿ. 
ಇಜಾನ್ ಮತ್ತೆ ತನ್ನ ಅಪ್ಪನನ್ನು ಯಾವಾಗ ನೋಡುತ್ತಾನೋ ಗೊತ್ತಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.
ಪುಟ್ಟ ಮಕ್ಕಳಿಗೆ ತಂದೆ ಹತ್ತಿರವಿರುವುದು ಅತ್ಯಂತ ಅಗತ್ಯ. ಆದರೆ, ಪ್ರಸ್ತುತ ಸಂಕಷ್ಟದ ಪರಿಸ್ಥಿತಿ ಆದಷ್ಟು ಬೇಗ ಪರಿಹಾರವಾದರೆ ಸಾಕು ಎಂದು ಸಾನಿಯಾ ಹೇಳಿದ್ದಾರೆ.

ನಾವಿಬ್ಬರು(ನಾನು ನನ್ನ ಪತಿ) ಬಹಳ ಪ್ರಾಕ್ಟಿಕಲ್ ರೀತಿ ಆಲೋಚಿಸುತ್ತೇವೆ. ಅವರಿಗೆ ೬೫ ವರ್ಷದ ತಾಯಿಯ ಬಳಿ ಇರುವುದು ಅತ್ಯಂತ ಅಗತ್ಯವಾಗಿದೆ. ಎಲ್ಲರೂ ಆರೋಗ್ಯವಾಗಿದ್ದು, ಈ ಸಮಸ್ಯೆಯಿಂದ ಶೀಘ್ರ ಹೊರಬಂದರೆ ಸಾಕು ಎಂದು ಸಾನಿಯಾ ಹೇಳಿದ್ದಾರೆ.

SCROLL FOR NEXT