ಕ್ರೀಡೆ

ಫ್ರೆಂಚ್ ಓಪನ್: 10ನೇ ಬಾರಿ ಸೆಮಿಫೈನಲ್ಸ್ ಪ್ರವೇಶಿಸಿದ ನೊವಾಕ್ ಜೊಕೊವಿಚ್

Lingaraj Badiger

ಪ್ಯಾರೀಸ್: ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ ನೊವಾಕ್ ಜೊಕೊವಿಚ್ 10ನೇ ಬಾರಿಗೆ ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯ ಸೆಮಿಫೈನಲ್ಸ್ ಪ್ರವೇಶಿಸಿದ್ದಾರೆ.

ಫ್ರೆಂಚ್ ಓಪನ್‌ನ ಕ್ವಾರ್ಟರ್ ಫೈನಲ್ಸ್ ನಲ್ಲಿ ಸೆರ್ಬಿಯಾದ ಜೊಕೊವಿಚ್ 17ನೇ ಶ್ರೇಯಾಂಕದ ಸ್ಪೇನ್‌ನ ಪ್ಯಾಬ್ಲೊ ಕ್ಯಾರೆನೊ ಬಸ್ತಾ ಅವರನ್ನು 4-6, 6-2, 6-3, 6-4 ಸೆಟ್‌ಗಳಿಂದ ಸೋಲಿಸಿದರು.

ಸೆಮಿಫೈನಲ್ ನಲ್ಲಿ ಜೊಕೊವಿಚ್ ಐದನೇ ಶ್ರೇಯಾಂಕಿತ ಸ್ಟೀಫನೋಸ್ ಸಿಟ್ಸಿಪಾಸ್ ಅವರನ್ನು ಎದುರಿಸಲಿದ್ದಾರೆ. ಅದೇ ಸಮಯದಲ್ಲಿ, ಕ್ಲೇ ಕೋರ್ಟ್ ಕಿಂಗ್ ಖ್ಯಾತಿಯ ರಫೇಲ್ ನಡಾಲ್ 12ನೇ ಶ್ರೇಯಾಂಕದ ಅರ್ಜೆಂಟೀನಾದ ಡಿಗೋ ಸ್ವಾರ್ಟ್ಜಮನ್ ಅವರನ್ನು ಎದುರಿಸಲಿದ್ದಾರೆ.

ಕ್ವಾರ್ಟರ್‌ಫೈನಲ್ಸ್ ನಲ್ಲಿ ಜೊಕೊವಿಚ್ ನಿಧಾನಗತಿಯ ಆರಂಭವನ್ನು ಪಡೆದರು ಮತ್ತು ಮೊದಲ ಸೆಟ್‌ನಲ್ಲಿ ಪ್ಯಾಬ್ಲೊ ವಿರುದ್ಧ 4-6ರಿಂದ ಹಿನ್ನಡೆ ಅನುಭವಿಸಿದರು. ಅಷ್ಟರಲ್ಲಿ, ಅವರು ಅನೇಕ ಬಾರಿ ನೋವಿನಿಂದ ನರಳುತ್ತಿದ್ದರು. ಆದರೆ ಅವರು ಎರಡನೇ ಸೆಟ್‌ನಲ್ಲಿ ಭರ್ಜರಿ ಪುನರಾಗಮನವನ್ನು ಮಾಡಿದರು. ಮುಂದಿನ ಮೂರು ಸೆಟ್‌ಗಳನ್ನು ಸುಲಭವಾಗಿ ಗೆದ್ದು, ಸೆಮೀಸ್ ಗೆ ಪ್ರವೇಶಿಸಿದರು.

ಮೂರು ಗಂಟೆ 10 ನಿಮಿಷಗಳ ಕಾಲ ನಡೆದ ಪಂದ್ಯವನ್ನು ಗೆದ್ದ ನಂತರ, ಜೊಕೊವಿಚ್, "ನನ್ನ ಕುತ್ತಿಗೆ ಮತ್ತು ಭುಜದಲ್ಲಿ ಸ್ವಲ್ಪ ನೋವು ಇತ್ತು. ಆದರೆ ಪಂದ್ಯದಲ್ಲಿ ಸಮಯ ಕಳೆಯುತ್ತಿದ್ದಂತೆ ಚೇತರಿಸಿಕೊಂಡಿದ್ದು, ಹೆಚ್ಚು ನೋವು ಅನುಭವಿಸಿಲ್ಲ" ಎಂದು ಹೇಳಿದರು.

ಇದು ಫ್ರೆಂಚ್ ಓಪನ್‌ನಲ್ಲಿ ಜೊಕೊವಿಚ್ ಅವರ 73ನೇ ಗೆಲುವು ಇದಾಗಿದ್ದು, ಅದೇ ಸಮಯದಲ್ಲಿ ಅವರು ತಮ್ಮ 38 ನೇ ಗ್ರ್ಯಾನ್ ಸ್ಲ್ಯಾಮ್ ಸೆಮಿಫೈನಲ್ಸ್ ತಲುಪಿದರು.

SCROLL FOR NEXT