ಕ್ರೀಡೆ

ಕನಸು ನನಸಾಗಿಸಬಹುದು ಎಂಬುದಕ್ಕೆ ಲಕ್ಷಾಂತರ ಹುಡುಗಿಯರಿಗೆ ನಾವು ಸ್ಫೂರ್ತಿ: ಭಾರತೀಯ ಮಹಿಳಾ ಹಾಕಿ ತಂಡದ ಕೋಚ್

Shilpa D

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ಕಂಚಿನ ಪದಕ ಗೆಲ್ಲುವಲ್ಲಿ ಕಡೇಯ ಕ್ಷಣದಲ್ಲಿ ವಿಫಲವಾಗಿದೆ. ಗ್ರೇಟ್ ಬ್ರಿಟನ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತೀಯ ವನಿತೆಯರ ತಂಡ ಶ್ರೇಷ್ಟ ಪ್ರತಿರೋಧವನ್ನು ಒಡ್ಡಿತ್ತು. ಗೆಲುವು ಸಾಧಿಸುವ ಭರವಸೆಯನ್ನು ಕೂಡ ಮೂಡಿಸಿತ್ತು. ಆದರೆ ಅಂತಿಮವಾಗಿ ಗೆಲುವು ಸಾಧ್ಯವಾಗಲಿಲ್ಲ. 

ಆದರೆ ಭಾರತೀಯ ಮಹಿಳೆಯರ ಹಾಕಿ ತಂಡ ನೀಡಿದ ಪ್ರದರ್ಶನಕ್ಕೆ ಇಡೀ ದೇಶವೇ ಹೆಮ್ಮೆ ಪಡುವಂತಾಗಿದೆ. ಇನ್ನು ಮಹಿಳಾ ಹಾಕಿ ತಂಡ ಪ್ಲೇಆಫ್‌ನಲ್ಲಿ ಸೋಲು ಅನುಭವಿಸಿದ ಬಳಿಕ ತಂಡದ ಕೋಚ್ ಜೋರ್ಡ್ ಮರಿಜ್ನೆ ಪ್ರತಿಕ್ರಿಯೆ ನೀಡಿದ್ದು, ಭಾರತ ಮಹಿಳಾ ತಂಡ ಒಲಿಂಪಿಕ್ಸ್‌ನಲ್ಲಿ ಪದಕವನ್ನು ಗೆಲ್ಲಲು ವಿಫಲವಾದರು ಕೂಡ ದೇಶದ ಕೋಟ್ಯಂತರ ಜನರ ಹೃದಯವನ್ನು ಗೆಲ್ಲುವಲ್ಲಿ ಸಫಲವಾಗಿದೆ ಎಂದಿದ್ದಾರೆ.  ಕನಸು ನನಸಾಗಿಸಬಹುದು ಎಂಬುದಕ್ಕೆ ಲಕ್ಷಾಂತರ ಹುಡುಗಿಯರಿಗೆ ನಾವು ಸ್ಫೂರ್ತಿಯಾಗಿದ್ದೇವೆ ಎಂದು ಹೇಳಿದ್ದಾರೆ.

ಗ್ರೇಟ್ ಬ್ರಿಟನ್ ತಂಡದ ವಿರುದ್ಧ ಅನುಭವಿಸಿದ ಆಘಾತಕಾರಿ ಸೋಲಿನ ಬಳಿಕ ಭಾರತೀಯ ಹಾಕಿ ತಂಡದ ಸದಸ್ಯರನ್ನು ಕೋಚ್ ಜೋರ್ಡ್ ಮರಿಜ್ನೆ ಸಮಾಧಾನಪಡಿಸಿದರು. ಈ ಸಂದರ್ಭದಲ್ಲಿ ಅವರು ತಂಡ ಈ ಹಂತದಲ್ಲಿ ಸೋಲು ಕಂಡಿದ್ದರೂ ಕೂಡ ಈವರೆಗೆ ತಲುಪಿದ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಿದೆ ಎಂದು ಆಟಗಾರ್ತಿಯರಿಗೆ ಹುರುಪು ಮೂಡಿಸಿದರು. 

ಟೂರ್ನಿಯ ಆರಂಭಿಕ ಹಂತದಲ್ಲಿ ಹಿನ್ನೆಡೆ ಅನುಭವಿಸಿದರೂ ಬಳಿಕ ಕ್ವಾರ್ಟರ್‌ಫೈನಲ್‌ಗೇರಿದ್ದ ವನಿತೆಯರ ತಂಡ ಬಳಿಕ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿತ್ತು. ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿ ಹಿಂದೆಂದೂ ತಲುಪಲು ಸಾಧ್ಯವಾಗದ ಘಟ್ಟವನ್ನು ತಲುಪುವಲ್ಲಿ ಯಶಸ್ವಿಯಾಗಿತ್ತು. ಆದರೆ ಸೆಮಿಫೈನಲ್‌ನಲ್ಲಿ ಸೋಲು ಕಂಡಿದ್ದ ಮಹಿಳಾ ತಂಡಕ್ಕೆ ಕಂಚಿನ ಪದಕ ಗೆಲ್ಲಲು ಗ್ರೇಟ್ ಬ್ರಿಟನ್ ತಂಡವನ್ನು ಮಣಿಸಬೇಕಾಗಿತ್ತು.

ಒಂದು ಹಂತದಲ್ಲಿ 1-3 ಅಂತರದಿಂದ ಹಿನ್ನೆಡೆಯಲ್ಲಿದ್ದ ಭಾರತ ಬಳಿಕ 3-3 ಅಂತರದಿಂದ ಸಮಬಲಗೊಳಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಗ್ರೇಟ್ ಬ್ರಿಟನ್ ಮತ್ತೊಂದು ಗೋಲು ಗಳಿಸುವ ಮೂಲಕ ಪಂದ್ಯದಲ್ಲಿ ಮತ್ತೆ ಮುನ್ನಡೆ ಸಾಧಿಸಿತು. ಇದನ್ನು ಸಮಬಲಗೊಳಿಸಲು ಭಾರತೀಯ ಮಹಿಳಾ ತಂಡ ಸರ್ವಪ್ರಯತ್ನವನ್ನು ಪಟ್ಟಿತ್ತು. ಆದರೆ ಅದರಲ್ಲಿ ವಿಫಲವಾಗಿ ಸೋಲು ಕಂಡಿದೆ.

SCROLL FOR NEXT