ಕ್ರೀಡೆ

ನಾನು ಗೆದ್ದ ಈ ಬೆಳ್ಳಿ ಪದಕವನ್ನು ನನ್ನ ದೇಶಕ್ಕೆ ಸಮರ್ಪಿಸುತ್ತೇನೆ: ಟೊಕಿಯೊ ಪ್ಯಾರಾಲಿಂಪಿಕ್ಸ್‌ ಭಾರತದ ಟೇಬಲ್ ಟೆನಿಸ್ ಆಟಗಾರ್ತಿ ಭವೀನಾ

Manjula VN

ಟೊಕಿಯೊ: ನಾನು ಗೆದ್ದ ಈ ಬೆಳ್ಳಿ ಪದಕವನ್ನು ನನ್ನ ದೇಶಕ್ಕೆ ಸಮರ್ಪಿಸುತ್ತೇನೆಂದು ಟೊಕಿಯೊ ಪ್ಯಾರಾಲಿಂಪಿಕ್ಸ್‌ ಭಾರತದ ಟೇಬಲ್ ಟೆನಿಸ್ ಆಟಗಾರ್ತಿ ಭವೀನಾಬೆನ್ ಪಟೇಲ್ ಅವರು ಹೇಳಿದ್ದಾರೆ. 

ಟೊಕಿಯೊದಲ್ಲಿ ವಿಶೇಷ ಚೇತನರಿಗಾಗಿ ನಡೆಸಲಾಗುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಗುಜರಾತ್ ರಾಜ್ಯದ ಟೇಬಲ್ ಟೆನಿಸ್ ಆಟಗಾರ್ತಿ ಭಾವಿನಾ ಪಟೇಲ್ ಅವರು, ಇಂದು ನಡೆದ ಮಹಿಳಾ ಸಿಂಗಲ್ಸ್ ಟೇಬಲ್ ಟೆನಿಸ್ ಹಣಹಾಹಣಿಯಲ್ಲಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದರಂತೆ ಈ ಕ್ರೀಡೆಯಲ್ಲಿ ಭಾರತಕ್ಕೆ ಸಿಕ್ಕ ಮೊದಲ ಪ್ಯಾರಾಲಿಂಪಿಕ್ಸ್ ಪದಕವಾಗಿದೆ. 

ಬೆಳ್ಳಿ ಪದಕ ಗೆದ್ದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಭವಿನಾ ಪಟೇಲ್ ಅವರು, ನಾನು ಗೆದ್ದ ಈ ಬೆಳ್ಳಿಯನ್ನು ನನ್ನ ದೇಶಕ್ಕಾಗಿ ಸಮರ್ಪಿಸುತ್ತಿದ್ದೇನೆ. ಈ ಸಂದರ್ಭದಲ್ಲಿ ನನ್ನ ತರಬೇತುದಾರರಿಗೆ, ನನಗೆ ಬೆಂಬಲ ನೀಡಿದ ನನ್ನ ಕುಟುಂಬ ಸದಸ್ಯರಿಗೆ ಹಾಗೂ ಸ್ನೇಹಿತರಿಗೆ ಧನ್ಯವಾದಗಳನ್ನು ಹೇಳಲಿಚ್ಛಿಸುತ್ತೇನೆಂದು ಹೇಳಿದ್ದಾರೆ. 

ಪಂದ್ಯದ ಸಂದರ್ಭದಲ್ಲಿ ನಾನು ಸ್ವಲ್ಪ ಆತಂಕಕ್ಕೊಳಗಾಗಿದ್ದೆ. ಆಟದ ತಂತ್ರವನ್ನು ಸೂಕ್ತ ರೀತಿಯಲ್ಲಿ ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ. ಮುಂದಿನ ಬಾರಿ ಖಂಡಿತವಾಗಿಯು ಅತ್ಯುತ್ತಮ ಪ್ರದರ್ಶನ ನೀಡುತ್ತೇನೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಟೇಬಲ್ ಟೆನಿಸ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತ ಇತಿಹಾಸ ಸೃಷ್ಟಿಸಿದ್ದಕ್ಕೆ ನನಗೆ ಸಂತೋಷವಾಗುತ್ತಿದೆ ಎಂದು ತಿಳಿಸಿದ್ದಾರೆ. 

ಭಾರತದ ಪ್ಯಾರಾಲಿಂಪಿಕ್ಸ್‌ ಸಮಿತಿಯ ಅಧ್ಯಕ್ಷರಾಗಿರುವ ದೀಪಾ ಮಲಿಕ್ ಅವರು ಮಾತಾಡಿ, ರಾಷ್ಟ್ರೀಯ ಕ್ರೀಡಾ ದಿನದಂದು ಭವಿನಾ ಅವರು ಭಾರತಕ್ಕೆ ಬೆಳ್ಳಿ ಪದಕವನ್ನು ತಂದುಕೊಟ್ಟಿರುವುದು ಬಹಳ ಸಂತೋಷವನ್ನು ತಂದಿದೆ. ಆಕೆಯ ಬಗ್ಗೆ ಬಹಳ ಹೆಮ್ಮೆಯಿದೆ. ನಮ್ಮ ಎಲ್ಲಾ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಲಿ ಎಂದು ನಾವು ಬಯಸುತ್ತಿದ್ದೇವೆ. ಮತ್ತೊಂದು ಶುಭ ಸುದ್ದಿಗಾಗಿ ಕಾಯುತ್ತಿದ್ದೇನೆಂದು ಹೇಳಿದ್ದಾರೆ. 

ಈ ನಡುವೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಕೂಡ ಭವಿನಾ ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದು, ಭವಿನಾ ಅವರೊಂದಿಗೆ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ. ಈ ವೇಳೆ ಭವಿನಾ ಅವರ ಪರಿಶ್ರಮ ಹಾಗೂ ಸಾಧನೆಯನ್ನು ಕೊಂಡಾಡಿದ್ದಾರೆಂದು ವರದಿಗಳು ತಿಳಿಸಿವೆ.

SCROLL FOR NEXT