ಕ್ರೀಡೆ

ಟೋಕಿಯೊ ಪ್ಯಾರಾಲಿಂಪಿಕ್ಸ್: ಟೇಬಲ್ ಟೆನಿಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಭವೀನಾ ಪಟೇಲ್ ಗೆ ರಾಷ್ಟ್ರಪತಿ, ಪ್ರಧಾನಿ ಶುಭಾಶಯ: ತವರಿನಲ್ಲಿ ಸಂಭ್ರಮಾಚರಣೆ 

Sumana Upadhyaya

ನವದೆಹಲಿ: ಟೋಕಿಯೊ ಪ್ಯಾರಾಲಿಂಪಿಕ್ಸ್ ನ ಟೇಬಲ್ ಟೆನಿಸ್ ನಲ್ಲಿ ಬೆಳ್ಳಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದ ಗುಜರಾತ್ ಮೂಲದ ಆಟಗಾರ್ತಿ ಭವೀನಾಬೆನ್ ಪಟೇಲ್ ಅವರಿಗೆ ರಾಷ್ಟ್ರಪತಿ, ಪ್ರಧಾನಿಯಾದಿಯಾಗಿ ಗಣ್ಯರು, ಸೆಲೆಬ್ರಿಟಿಗಳು ಸೇರಿದಂತೆ ನಾಗರಿಕರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಭವೀನಾ ಪಟೇಲ್ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದು ಭಾರತೀಯ ತಂಡ ಮತ್ತು ಕ್ರೀಡಾ ಪ್ರೇಮಿಗಳಿಗೆ ಸ್ಫೂರ್ತಿ ನೀಡಿದ್ದಾರೆ. ಅವರ ಅಸಾಧಾರಣ ಸಮಯ ಪ್ರಜ್ಞೆ, ನಿರ್ಣಯ ಮತ್ತು ಕೌಶಲ್ಯಗಳು ಭಾರತಕ್ಕೆ ಕೀರ್ತಿ ತಂದಿದೆ. ಈ ಅಸಾಧಾರಣ ಸಾಧನೆಗೆ ನಿಮಗೆ ನನ್ನ ಅಭಿನಂದನೆಗಳು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶುಭಾಶಯ ತಿಳಿಸಿದ್ದಾರೆ.

ಪ್ಯಾರಾಲಿಂಪಿಕ್ಸ್ ನಲ್ಲಿ ಟೇಬಲ್ ಟೆನಿಸ್ ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭವೀನಾ ಇಂದು ಇತಿಹಾಸ ಸೃಷ್ಟಿಸಿದ್ದಾರೆ. ಅವರ ಜೀವನ ಪಯಣ ಸ್ಪೂರ್ತಿದಾಯಕವಾಗಿದ್ದು ಇನ್ನಷ್ಟು ಯುವಜನತೆ ಮುಂದಿನ ದಿನಗಳಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಹೊರಳುವಂತೆ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೊಂಡಿದ್ದಾರೆ.

ಅವರ ತವರೂರು ಗುಜರಾತ್ ರಾಜ್ಯದ ಮೆಹ್ಸನ್ ನಲ್ಲಿ ಕುಟುಂಬ ಸದಸ್ಯರು, ನೆರೆಹೊರೆಯವರು, ಸ್ನೇಹಿತರ ಖುಷಿ,ಸಂಭ್ರಮ ಮುಗಿಲು ಮುಟ್ಟಿದೆ, ಇಂದು ಬೆಳ್ಳಂಬೆಳಗ್ಗೆ ಎಲ್ಲರೂ ಸೇರಿ ಸಿಹಿ ಹಂಚಿ ತಿಂದು ಸಂಭ್ರಮಿಸಿದ್ದಾರೆ.

ಬೆಳ್ಳಿ ಪದಕ ಗೆಲ್ಲುವ ಮೂಲಕ ಆಕೆ ನಮ್ಮೆಲ್ಲರಿಗೂ ಇಂದು ಹೆಮ್ಮೆ ತಂದಿದ್ದಾಳೆ. ಆಕೆಗೆ ಅದ್ದೂರಿ ಸ್ವಾಗತ ನೀಡುತ್ತೇವೆ ಎಂದು ಭಾವಿನಾ ತಂದೆ ಹಮ್ಸುಖ್ ಬಾಯ್ ಪಟೇಲ್ ಪ್ರತಿಕ್ರಿಯಿಸಿದ್ದಾರೆ. 

ಕುಟುಂಬಸ್ಥರು, ಸ್ನೇಹಿತರು, ನೆರೆಹೊರೆಯವರು ಗುಜರಾತ್ ರಾಜ್ಯದ ಜನಪ್ರಿಯ ಗರ್ಬಾ ನೃತ್ಯವನ್ನು ಮಾಡಿ ಸಂತಸ ಹಂಚಿಕೊಂಡಿದ್ದಾರೆ. 

ಭಾರತದ ಟೇಬಲ್ ಟೆನಿಸ್ ಆಟಗಾರ್ತಿ ಭವೀನಾಬೆನ್ ಪಟೇಲ್ ಅವರು ಇಂದು ನಸುಕಿನ ಜಾವ ಮುಕ್ತಾಯವಾದ  ಮಹಿಳಾ ಸಿಂಗಲ್ಸ್ 4 ನೇ ಸುತ್ತಿನ ಫೈನಲ್‌ನಲ್ಲಿ 0-3 ರಿಂದ ವಿಶ್ವದ ಮೊದಲ ಶ್ರೇಯಾಂಕಿತ ಚೀನಾದ ಪ್ಯಾಡಿಂಗ್ ಆಟಗಾರ್ತಿ ಯಿಂಗ್ ಜೌ ವಿರುದ್ಧ ಸೋಲು ಕಂಡರು. ತಮ್ಮ ಚೊಚ್ಚಲ ಪ್ಯಾರಾಲಂಪಿಕ್ ಕ್ರೀಡೆಯಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ.

34 ವರ್ಷದ ಭವೀನಾಬೆನ್ ಅಂತಿಮ ಪಂದ್ಯದಲ್ಲಿ ಉತ್ತಮ ಆಟ ಆಡಿ 7-11,5-11,6-11 ಅಂತರದಲ್ಲಿ ಚೀನಾದ ಜೌ ವಿರುದ್ಧ 19 ನಿಮಿಷಗಳ ಹೋರಾಟ ಬಳಿಕ ಸೋಲು ಕಂಡಿದ್ದಾರೆ. ಜೌ ಎರಡು ಬಾರಿ ಚಿನ್ನದ ಪದಕ ಗಳಿಸಿದ ಆಟಗಾರ್ತಿ. 

SCROLL FOR NEXT