ಕ್ರೀಡೆ

ಚಿಕ್ಕ ಕನಸು ನನಸು ಮಾಡಿಕೊಂಡ 'ಚಿನ್ನದ ಹುಡುಗ' ನೀರಜ್ ಚೋಪ್ರಾ 

Sumana Upadhyaya

ಪಾಣಿಪತ್ (ಹರ್ಯಾಣ): ಟೋಕಿಯೊ ಒಲಿಂಪಿಕ್ಸ್ 2021ರ ಚಿನ್ನದ ಪದಕ ವಿಜೇತ ಅಥ್ಲೆಟಿಕ್ ನೀರಜ್ ಚೋಪ್ರಾ ತಮ್ಮ ಪೋಷಕರ ಸಣ್ಣ ಕನಸನ್ನು ನನಸು ಮಾಡಿದ್ದಾರೆ. ಅವರಿಗಿದ್ದ ಕನಸು ಏನೆಂದರೆ ವಿಮಾನದಲ್ಲಿ ಒಮ್ಮೆ ಕುಳಿತುಕೊಂಡು ಹಾರಾಟ ನಡೆಸಬೇಕೆಂದು.

ಈಟಿ ಎಸೆತದಲ್ಲಿ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ 23 ವರ್ಷದ ಮಗ ನೀರಜ್ ಚೋಪ್ರಾ ಪೋಷಕರ ಕನಸನ್ನು ಇಂದು ಈಡೇರಿಸಿದ್ದಾರೆ. ತಂದೆ-ತಾಯಿಯ ಪುಟ್ಟ ಆಸೆಯೊಂದನ್ನು ಇಂದು ತೀರಿಸಿ ಸಂತೋಷವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಪೋಷಕರೊಂದಿಗೆ ವಿಮಾನದೊಳಗೆ ಕಾಲಿಡುವ ಮತ್ತು ವಿಮಾನದೊಳಗೆ ಕುಳಿತುಕೊಂಡ ಮೇಲೆ ತೆಗೆದುಕೊಂಡ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವರ ಈ ನಡೆಗೆ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಹರಿಸುತ್ತಿದ್ದಾರೆ.

ಈ ಫೋಟೋಗಳನ್ನು ಶಾಶ್ವತವಾಗಿ ಇರಿಸಿಕೊಳ್ಳಿ, ಯಾವಾಗಲಾದರೂ ನಿಮಗೆ ಉತ್ಸಾಹ ಕುಗ್ಗಿದರೆ, ಬೇಸರವಾದರೆ ಈ ಫೋಟೋಗಳನ್ನು ನೋಡಿ ಆಗ ನಿಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಸ್ಪೂರ್ತಿ ಸಿಗುತ್ತದೆ ಎಂದು ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ.

ಟೋಕಿಯೊ ಒಲಿಂಪಿಕ್ಸ್ ಮುಗಿಸಿಕೊಂಡು ಬಂದ ನಂತರ ಸತತ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ ಮತ್ತು ಅನಾರೋಗ್ಯಕ್ಕೀಡಾದ ಕಾರಣ ನೀರಜ್ ಚೋಪ್ರಾ ಸದ್ಯಕ್ಕೆ ಯಾವುದೇ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಅವರು ಬೇಸರವನ್ನು ಕೂಡ ವ್ಯಕ್ತಪಡಿಸಿದ್ದರು. ಈ ವರ್ಷ ಡಿಸೆಂಬರ್ ವರೆಗೆ ಯಾವುದೇ ಚ್ಯಾಂಪಿಯನ್ ಷಿಪ್ ಗೇಮ್ ಗಳಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. ಮುಂದಿನ ವರ್ಷ ಹೊಸ ಉತ್ಸಾಹದೊಂದಿಗೆ ಮರಳುವ ನಿರೀಕ್ಷೆಯಿದೆ ಎಂದು ಹೇಳಿಕೊಂಡಿದ್ದಾರೆ. 

SCROLL FOR NEXT