ಕ್ರೀಡೆ

ಕೊಚ್ಚಿ: ಫೀಫಾ ವಿಶ್ವಕಪ್ ಪ್ರದರ್ಶಿಸಲು 23 ಲಕ್ಷ ರೂ. ಗೆ ಮನೆ ಖರೀದಿಸಿದ ಕೇರಳ ಅಭಿಮಾನಿಗಳು

Srinivas Rao BV

ಕೊಚ್ಚಿ: ಫೀಫಾ ವಿಶ್ವಕಪ್ ಋತುವಿನಲ್ಲಿ ಫುಟ್ ಬಾಲ್ ಅಭಿಮಾನಿಗಳು ಕ್ರೀಡೆಯೆಡೆಗೆ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಲು ಹೊಸ ಹೊಸ ಪ್ರಯೋಗಗಳಿಗೆ ಮುಂದಾಗುತ್ತಿರುತ್ತಾರೆ.

ಈಗ ಕೊಚ್ಚಿಯಲ್ಲಿ 17 ಮಂದಿ ಫುಟ್ಬಾಲ್ ಅಭಿಮಾನಿಗಳು ಮಾಡಿರುವ ಕೆಲಸ ಎಲ್ಲರ ಗಮನ ಸೆಳೆಯುತ್ತಿದ್ದು ಕ್ರೀಡಾ ಆಸಕ್ತಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಫುಟ್ಬಾಲ್ ಪಂದ್ಯದ ಪ್ರದರ್ಶನಕ್ಕಾಗಿ ಮುಂಡಕ್ಕಮುಗಲ್ ನಲ್ಲಿ ಈ ಕ್ರೀಡಾಭಿಮಾನಿಗಳು ಹಳೆಯ ಮನೆಯೊಂದನ್ನು 23 ಲಕ್ಷ ರೂಪಾಯಿಗಳಿಗೆ ಖರೀದಿಸಿದ್ದಾರೆ.

ಸ್ನೇಹಿತರೊಂದಿಗೆ ಕೂತು ಫುಟ್ಬಾಲ್ ಪಂದ್ಯ ವೀಕ್ಷಣೆಗಾಗಿಯೇ ಈ ಮನೆಯನ್ನು ಖರೀದಿಸಿರುವುದು ಮತ್ತೊಂದು ವಿಶೇಷವಾಗಿದೆ ಎಂದು ಮನೆ ಖರೀದಿಸಿರುವವರ ಪೈಕಿ ಒಬ್ಬರಾಗಿರುವ ಪಿ.ಕೆ ಹ್ಯಾರಿಸ್ ಹೇಳಿದ್ದಾರೆ.

ಫೀಫಾ ಪ್ರಾರಂಭಕ್ಕೂ ಮುನ್ನವೇ ಹ್ಯಾರಿಸ್ ಹಾಗೂ ಆತನ ಸ್ನೇಹಿತರು ವಿಶ್ವಕಪ್ ಪಂದ್ಯದ ಪ್ರದರ್ಶನಕ್ಕೆ ಸೂಕ್ತವಾಗುವ ಸ್ಥಳವನ್ನು ಹುಡುಕುತ್ತಿದ್ದರು. ಈ ಹಿಂದೆ ಪ್ರದರ್ಶನ ಮಾಡಲಾಗುತ್ತಿದ್ದ ಜಾಗಗಳ ಪೈಕಿ ಬಹುತೇಕ ಜಾಗಗಳು ಒಂದೋ ಮಾರಾಟವಾಗಿವೆ ಇಲ್ಲವೇ ಆ ಖಾಲಿ ಜಾಗಗಳ ಪೈಕಿ ಕಟ್ಟಡಗಳು ನಿರ್ಮಾಣವಾಗಿದೆ. ಆಗ ಈ ಮನೆ ಖರೀದಿಗೆ ಇರುವುದು ತಿಳಿಯಿತು. ಹಣ ಒಗ್ಗೂಡಿಸಿ ಮನೆ ಖರೀದಿಸಿದೆವು ಎಂದು ಪಿಡಬ್ಲ್ಯುಡಿ ಗುತ್ತಿಗೆದಾರನಾಗಿರುವ ಹ್ಯಾರಿಸ್ ಹೇಳುತ್ತಾರೆ.
 
ಈ ಗುಂಪಿನಲ್ಲಿ ಅರ್ಜೆಂಟೀನಾ, ಬ್ರೆಜಿಲ್, ಪೋರ್ಚುಗಲ್, ಫ್ರಾನ್ಸ್ ನ್ನು ಬೆಂಬಲಿಸುವವರೇ ಹೆಚ್ಚಾಗಿದ್ದಾರೆ. ಕಳೆದ 15 ವರ್ಷಗಳಿಂದ ಫುಟ್ಬಾಲ್ ವಿಶ್ವಕಪ್ ನ್ನು ಒಟ್ಟಿಗೆ ಕುಳಿತು ವೀಕ್ಷಿಸುವ ಕ್ರೀಡಾಭಿಮಾನಿಗಳು ಮುಂದಿನ ಪೀಳಿಗೆಗೂ ಮುಂದುವರೆಸುವುದಕ್ಕಾಗಿ ಈ ಮನೆ ಖರೀದಿಸಿದೆವು ಎಂದು ಹ್ಯಾರಿಸ್ ಹೇಳಿದ್ದಾರೆ. ಫೀಫಾದಲ್ಲಿ ಭಾಗಿಯಾಗುತ್ತಿರುವ ಎಲ್ಲಾ 32 ತಂಡಗಳ ಧ್ವಜವನ್ನೂ ಈ ಮನೆಯಲ್ಲಿ ಅಳವಡಿಸಲಾಗಿದೆ.

SCROLL FOR NEXT