ಕ್ರೀಡೆ

ಫಿಫಾ ವಿಶ್ವಕಪ್: ಮೆಸ್ಸಿ ಮ್ಯಾಜಿಕ್, ಮೆಕ್ಸಿಕೋ ವಿರುದ್ಧ ಅರ್ಜೆಂಟಿನಾಗೆ ಗೆಲುವು, ಟೂರ್ನಿಯಲ್ಲಿ ಜೀವಂತ!

Srinivasamurthy VN

ನವದೆಹಲಿ: ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ದಿನಕ್ಕೊಂದು ರೋಚಕತೆ ಪಡೆಯುತ್ತಿದ್ದು, ಈ ಹಿಂದೆ ಸೌದಿ ಅರೇಬಿಯಾ ವಿರುದ್ಧ ಸೋತು ಟೂರ್ನಿಯಿಂದ ಬಹುತೇಕ ಔಟ್ ಆಗಿದ್ದ ಹಾಲಿ ಚಾಂಪಿಯನ್ ಅರ್ಜೆಂಟಿನಾ ಇಂದು ನಡೆದ ಮೆಕ್ಸಿಕೋ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿದೆ.

ಮೆಕ್ಸಿಕೋ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಲಿಯೋನಲ್ ಮೆಸ್ಸಿ ನೇತೃತ್ವದ ಅರ್ಜೆಂಟಿನಾ ತಂಡ 2-0 ಅಂತರದ ಗೋಲುಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ ಅರ್ಜೆಂಟಿನಾ ತಂಡದ ವಿಶ್ವಕಪ್ ಅಭಿಯಾನ ಜೀವಂತವಾಗಿದ್ದು, ರೌಂಡ್-16 ಹಂತಕ್ಕೇರಲು ಅರ್ಜೆಂಟಿನಾ ತಂಡ ತನ್ನ ಮುಂದಿನ ಪಂದ್ಯಗಳನ್ನೂ ಗೆಲ್ಲಬೇಕಿದೆ.

ಮೆಸ್ಸಿ ಮ್ಯಾಜಿಕ್
ಪಂದ್ಯದ 64ನೇ ನಿಮಿಷದವರೆಗೂ ಗೋಲುಗಳಿಲ್ಲದೇ ಪಂದ್ಯ ರೋಚಕತೆ ಕಾಯ್ದುಕೊಂಡಿತ್ತು. ಮೆಕ್ಸಿಕೋ ಕೂಡ ಪ್ರಬಲ ಅರ್ಜೆಂಟಿನಾಗೆ ಭಾರಿ ಪೈಪೋಟಿ ನೀಡಿತ್ತು. ಒಂದು ವೇಳೆ ಈ ಪಂದ್ಯ ಡ್ರಾ ಆಗಿದಿದ್ದರೆ ಅರ್ಜೆಂಟಿನಾ ತಂಡ ಟೂರ್ನಿಯಿಂದಲೇ ನಿರ್ಗಮಿಸುವ ಅಪಾಯ ಇತ್ತು. ಆದರೆ64ನೇ ನಿಮಿಷದಲ್ಲಿ ಮೆಸ್ಸಿ ಬಾರಿಸಿದ ಮ್ಯಾಜಿಕಲ್ ಗೋಲು ತಂಡದ ಆತ್ಮವಿಶ್ವಾಸ ಮರಳುವಂತೆ ಮಾಡಿತು. ಬಳಿಕ ಪಂದ್ಯದ ಅಂತಿಮ ಹಂತದಲ್ಲಿ ಅಂದರೆ 87 ನೇ ನಿಮಿಷದಲ್ಲಿ ಮೆಸ್ಸಿ ನೀಡಿದ ಅದ್ಭುತ ಸ್ಟ್ರೈಕ್ ಅನ್ನು ಎಂಜೊ ಫೆರ್ನಾಂಡಿಸ್ ಅವರು ಕಿಕ್ ಮಾಡುವ ತಂಡಕ್ಕೆ ಮತ್ತೊಂದು ಗೋಲು ತಂದು ಭರ್ಜರಿ ಗೆಲುವು ಖಚಿತ ಪಡಿಸಿದರು. ಅಂತಿಮವಾಗಿ 2-0 ಅಂತರದಲ್ಲಿ ಮೆಸ್ಸಿ ಪಡೆ ಗೆದ್ದು  ಟೂರ್ನಿಯಲ್ಲಿ ತನ್ನ ಪಯಣ ಜೀವಂತವಾಗಿರಿಸಿಕೊಂಡಿದೆ.

ಈ ಗೆಲುವಿನ ಮೂಲಕ ಅರ್ಜೆಂಟಿನಾ ತಂಡ ಸಿ ಗುಂಪಿನಲ್ಲಿ ಎರಡನೇ ಸ್ಥಾನಕ್ಕೇರಿದೆ. ಎರಡು ಪಂದ್ಯಗಳಿಂದ ನಾಲ್ಕು ಅಂಕಗಳನ್ನು ಹೊಂದಿರುವ ಪೊಲೆಂಡ್ ಅಗ್ರ ಸ್ಥಾನದಲ್ಲಿದ್ದು, ಈ ಹಿಂದೆ ಅರ್ಜೆಂಟಿನಾ ತಂಡವನ್ನು ಮಣಿಸಿದ್ದ ಸೌದಿ ಅರೇಬಿಯಾ ಮೂರು ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ನಾಲ್ಕು ತಂಡಗಳ ಗುಂಪಿನಲ್ಲಿ ಮೆಕ್ಸಿಕೊ ಕೇವಲ ಒಂದು ಅಂಕದೊಂದಿಗೆ ಕೊನೆಯ ಸ್ಥಾನದಲ್ಲಿದೆ.

SCROLL FOR NEXT