ಕ್ರೀಡೆ

ಮೈಸೂರು ಓಪನ್ ಟೆನಿಸ್ ಟೂರ್ನಿ 2023: ಜಾರ್ಜ್‌ಗೆ ಪ್ರಶಸ್ತಿ, ಆಸ್ಟ್ರೇಲಿಯಾದ ಬ್ಲೇಕ್ ಎಲಿಸ್ ರನ್ನರ್ಸ್ ಅಪ್

Srinivasamurthy VN

ಮೈಸೂರು: ತೀವ್ರ ಕುತೂಹಲ ಮೂಡಿಸಿದ್ದ ಮೈಸೂರು ಓಪನ್ ಟೆನಿಸ್ ಟೂರ್ನಿ 2023ರ ಫೈನಲ್ ಪಂದ್ಯದಲ್ಲಿ ಬ್ರಿಟನ್ ನ ಸ್ಟಾರ್ ಆಟಗಾರ ಜಾರ್ಜ್ ಲ್ಹೊಫಗೆನ್ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.

ಚಾಮರಾಜಪುರಂನ ಮೈಸೂರು ಟೆನಿಸ್ ಕ್ಲಬ್(ಎಂಟಿಸಿ)ನಲ್ಲಿ ಭಾನುವಾರ ಇಲ್ಲಿ ಮುಕ್ತಾಯವಾದ ‘ಐಟಿಎಫ್- ಮೈಸೂರು ಓಪನ್’ ಟೆನಿಸ್ ಟೂರ್ನಿಯಲ್ಲಿ ಸಮಯೋಚಿತ ಆಟವಾಡಿದ ಬ್ರಿಟನ್‌ನ ಜಾರ್ಜ್ ಲ್ಹೊಫಗೆನ್ ತಮ್ಮ ಪ್ರತಿಸ್ಪರ್ಧಿ ಆಸ್ಟ್ರೇಲಿಯಾದ ಬ್ಲೇಕ್ ಎಲಿಸ್ ವಿರುದ್ಧ 4-6, 6-2, 7-6ರಲ್ಲಿ  ಜಯ ಸಾಧಿಸಿ ಟ್ರೋಫಿಗೆ ಮುತ್ತಿಕ್ಕಿದರು.

ಬಲವಾದ ಸರ್ವ್, ಗ್ರೌಂಡ್ ಸ್ಟ್ರೋಕ್ ಹೊಡೆತಗಳಿಂದ ಕಾಡಿದ ಆಸ್ಟ್ರೇಲಿಯಾದ ಬ್ಲೇಕ್ ಮೊದಲ‌ ಸೆಟ್ ಅನ್ನು ಸುಲಭವಾಗಿ ಗೆದ್ದರು. ಆದರೆ 2ನೇ ಸೆಟ್‌ನಲ್ಲಿ ತಿರುಗೇಟು ನೀಡಿದ ಜಾರ್ಜ್ 6-2 ಅಂಕಗಳಿಂದ ಬ್ಲೇಕ್ ಅವರನ್ನು ಹಿಂದಿಕ್ಕಿ ಸಮಬಲ ಸಾಧಿಸಿದರು. ನಿರ್ಣಾಯಕ 3ನೇ ಸೆಟ್‌ನಲ್ಲಿ ಇಬ್ಬರೂ ಪ್ರಬಲ ಪೈಪೋಟಿಯ ಆಟವಾಡಿದರು. ಬ್ಲೇಕ್ 5-4ರಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾಗ ಪುಟಿದೆದ್ದ ಜಾರ್ಜ್ ಲ್ಹೊಫಗೆನ್ 5-5ರ ಸಮಬಲ ಸಾಧಿಸಿದರು. ಆಕರ್ಷಕ ಸರ್ವ್‌ಗಳ ಮೂಲಕ ಮೇಲುಗೈ ಸಾಧಿಸಿದರು. 2 ಗಂಟೆ 49 ನಿಮಿಷದಲ್ಲಿ ಟೈ ಬ್ರೇಕ್ ಮೂಲಕ ಸೆಟ್ ವಶಪಡಿಸಿಕೊಂಡು 2023ರ ಮೈಸೂರು ಓಪನ್ ಟೆನಿಸ್ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿದರು‌.

ಜಿಲ್ಲಾಧಿಕಾರಿ ಡಾ.ಕೆ.ವಿ‌.ರಾಜೇಂದ್ರ ಅವರು ವಿಜೇತರಿಗೆ 2.95 ಲಕ್ಷ ರೂ ಮೊತ್ತದ ಚೆಕ್ (3,600 ಡಾಲರ್) ಅನ್ನು ನೀಡಿದರೆ, ಕರ್ನಾಟಕ ರಾಜ್ಯ ಲಾನ್‌ ಟೆನಿಸ್ ಸಂಸ್ಥೆಯ ಕಾರ್ಯದರ್ಶಿ ಮಹೇಶ್ವರ ರಾವ್ ಟ್ರೋಫಿ ವಿತರಿಸಿದರು. 

ಬಹುಮಾನ ವಿತರಣಾ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ (KSLTA) ಕಾರ್ಯದರ್ಶಿ ಮಹೇಶ್ವರ್ ರಾವ್ IAS ಮತ್ತು ಮೈಸೂರು ಜಿಲ್ಲಾಧಿಕಾರಿ ಹಾಗೂ ಪಂದ್ಯಾವಳಿಯ ಸಂಘಟನಾ ಸಮಿತಿ ಅಧ್ಯಕ್ಷರಾದ ಡಾ.ಕೆ.ವಿ.ರಾಜೇಂದ್ರ ಮತ್ತಿತರರು ಉಪಸ್ಥಿತರಿದ್ದರು. ಡಾ.ಕೆ.ವಿ.ರಾಜೇಂದ್ರ ವಿಜೇತರಿಗೆ ಚೆಕ್ ಹಸ್ತಾಂತರಿಸಿದರೆ, ರಾವ್ ಟ್ರೋಫಿಯನ್ನು ಪ್ರದಾನ ಮಾಡಿದರು.

ಪ್ರಶಸ್ತಿ ವಿತರಣೆ ಬಳಿಕ ಮಾತನಾಡಿದ ಮಹೇಶ್ವರ ರಾವ್ ಅವರು, 'ಅದ್ಭುತ ಪಂದ್ಯವನ್ನು ನಿರ್ಮಿಸಿದ್ದಕ್ಕಾಗಿ ಆಟಗಾರರಿಗೆ ಅಭಿನಂದನೆಗಳು. ಪ್ರೇಕ್ಷಕರಿಗೆ ದೊಡ್ಡ ಧನ್ಯವಾದಗಳು, ಏಕೆಂದರೆ ಅವರು ಆಟಗಾರರ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತಾರೆ ಮತ್ತು ನಾನು ಎಲ್ಲಾ ಪ್ರಾಯೋಜಕರಿಗೆ ಧನ್ಯವಾದಗಳನ್ನು ಹೇಳಲಿಚ್ಛಿಸುತ್ತೇನೆ. ನಾವು ಈಗಾಗಲೇ ಎಟಿಪಿ ಪಂದ್ಯಾವಳಿ ಮತ್ತು ಒಂದೆರಡು ಇತರ ಐಟಿಎಫ್ ಪಂದ್ಯಾವಳಿಗಳನ್ನು ನಡೆಸಿದ್ದೇವೆ. ಬೆಂಗಳೂರಿನಲ್ಲಿ ಮತ್ತು ಕರ್ನಾಟಕದಿಂದ ಹೊಸ ಪ್ರತಿಭೆಗಳು ಹೊರಹೊಮ್ಮಲು ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಲು ನಾವು ಆಶಿಸುತ್ತೇವೆ ಎಂದು ಹೇಳಿದರು.

ಬಳಿಕ ಮಾತನಾಡಿದ ಡಾ.ಕೆ.ವಿ.ರಾಜೇಂದ್ರ ಅವರು, 'ಉತ್ತೇಜಕ ಫೈನಲ್ ಕಳೆದ ವಾರದಿಂದ ನಡೆಯುತ್ತಿರುವ ಘಟನೆಗಳ ಸಾರಾಂಶವಾಗಿದೆ. ಈ ಕಾರ್ಯಕ್ರಮವನ್ನು ಆಯೋಜಿಸಲು ನಮಗೆ ಈ ಅವಕಾಶವನ್ನು ನೀಡಿದ KSLTA ಗೆ ನಾನು ಧನ್ಯವಾದ ಹೇಳುತ್ತೇನೆ ಮತ್ತು ಈ ಪಂದ್ಯಾವಳಿಯ ಭಾಗವಾಗಲು ನನಗೆ ಅತ್ಯಂತ ಗೌರವವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಪ್ರೇಕ್ಷಕರಿಗೆ ದೊಡ್ಡ ಧನ್ಯವಾದಗಳು, ಭವಿಷ್ಯದಲ್ಲಿ ನಾವು ಹೆಚ್ಚಿನ ಪಂದ್ಯಾವಳಿಗಳನ್ನು ಆಯೋಜಿಸಲು ಸಾಧ್ಯವಾಗುತ್ತದೆ ಎಂದು ಆಶಿಸುತ್ತೇವೆ" ಎಂದು ಹೇಳಿದರು.

SCROLL FOR NEXT