ಕ್ರೀಡೆ

Asian Games 2023: ಭಾರತದ ಪದಕ ಬೇಟೆ ಆರಂಭ; ಮೊದಲ ದಿನವೇ 2 ಬೆಳ್ಳಿ

Manjula VN

ಹ್ಯಾಂಗ್ಝೌ:  ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 2023ರ ಏಷ್ಯನ್ ಗೇಮ್ಸ್‌ಗೆ ಶನಿವಾರ ಅಧಿಕೃತ ಚಾಲನೆ ದೊರೆತಿದ್ದು, ಮೊದಲ ದಿನವೇ ಭಾರತದ ಕ್ರೀಡಾಪಟುಗಳು 2 ಬೆಳ್ಳಿಯೊಂದಿಗೆ ಪದಕ ಬೇಟೆ ಆರಂಭಿಸಿದ್ದಾರೆ.

ಮಹಿಳೆಯರ 10 ಮೀಟರ್ ಏರ್ ರೈಫಲ್ ಟೀಮ್ ಈವೆಂಟ್‌ನಲ್ಲಿ ಭಾರತ ಒಟ್ಟು 1886 ಅಂಕಗಳೊಂದಿಗೆ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿತು.

ರಮಿತಾ, ಮೆಹುಲಿ ಘೋಷ್ ಮತ್ತು ಆಶಿ ಚೌಕ್ಸೆ ಅವರು 2023 ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮೊದಲ ಪದಕವನ್ನು ಗೆದ್ದುಕೊಂಡಿದ್ದಾರೆ.

ಮತ್ತೊಂದೆಡೆ ಚೀನಾ 1896.6 ಅಂಕಗಳೊಂದಿಗೆ ಚಿನ್ನದ ಪದಕವನ್ನು ಗೆದ್ದುಕೊಂಡರೆ, ಮಂಗೋಲಿಯಾ ಒಟ್ಟು 1880 ಅಂಕಗಳೊಂದಿಗೆ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ.

ಹಾನ್ ಜಿಯಾಯು, ಹುವಾಂಗ್ ಯುಟಿಂಗ್ ಮತ್ತು ವಾಂಗ್ ಝಿಲಿನ್ ಅವರನ್ನೊಳಗೊಂಡ ಚೀನಾ ತಂಡ ಚಿನ್ನದ ಪದಕ ಗೆಲ್ಲುವ ಮೂಲಕ ಐದು ವರ್ಷಗಳ ಹಿಂದಿನ ಏಷ್ಯನ್ ದಾಖಲೆಯನ್ನು ಮುರಿದರು.

ಹಾನ್ ಜಿಯಾಯು ಒಟ್ಟು 634.1 ರೊಂದಿಗೆ ಹೊಸ ಅರ್ಹತಾ ಏಷ್ಯನ್ ದಾಖಲೆಯನ್ನು ಸಹ ಸ್ಥಾಪಿಸಿದರು. ಭಾರತ ಪರ, ರಮಿತಾ ಮತ್ತು ಮೆಹುಲಿ ಘೋಷ್ ಕ್ರಮವಾಗಿ 631.9 ಮತ್ತು 630.8 ಮೊತ್ತದೊಂದಿಗೆ ವೈಯಕ್ತಿಕವಾಗಿ ಫೈನಲ್‌ಗೆ ಅರ್ಹತೆ ಪಡೆದರು.

ಇನ್ನು ಏರ್ ರೈಫಲ್​ನಲ್ಲಿ ಭಾರತಕ್ಕೆ ಪದಕ ಸಿಕ್ಕ ಕೂಡಲೇ ಭಾರತದ ಅರ್ಜುನ್ ಜತ್ ಲಾಲ್ ಮತ್ತು ಅರವಿಂದ್ ಸಿಂಗ್ ಜೋಡಿಯು ಪುರುಷರ ಲೈಟ್‌ವೇಟ್ ಡಬಲ್ ಸ್ಕಲ್ಸ್‌ನ ಫೈನಲ್ A ನಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿತು. 2021 ರಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಪ್ರವೇಶಿಸಿದ ಅರ್ಜುನ್ ಲಾಲ್, ಅರವಿಂದ್ ಸಿಂಗ್ ಅವರೊಂದಿಗೆ ಶ್ಲಾಘನೀಯ ಪ್ರದರ್ಶನವನ್ನು ನೀಡಿದರು. ಇವರು 6.28.18 ಸಮಯಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟರು.

ಒಂದು ಕಂಚಿನ ಪದಕ

ಲೇಖ್ ರಾಮ್ ಮತ್ತು ಬಾಬು ಲಾಲ್ ಯಾದವ್ ಪುರುಷರ ಜೋಡಿ ಫೈನಲ್‌ನಲ್ಲಿ ಮೂರನೇ ಸ್ಥಾನ ಗಳಿಸುವ ಮೂಲಕ ಕಂಚಿನ ಪದಕ ಗೆದ್ದು, ಭಾರತಕ್ಕೆ ಮೂರನೇ ಪದಕ ತಂದುಕೊಟ್ಟರು. ಈ ಜೋಡಿ 6:50.41 ಸೆಕೆಂಡ್‌ಗಳಲ್ಲಿ ಗುರಿ ತಲುಪಿತು.

SCROLL FOR NEXT