ಕ್ರೀಡೆ

Asian Games 2023: ಸ್ಕ್ವಾಷ್‌ನಲ್ಲಿ ಪಾಕಿಸ್ತಾನ ಮಣಿಸಿ ಚಿನ್ನ ಗೆದ್ದ ಭಾರತ

Srinivasamurthy VN

ಹ್ಯಾಂಗ್‌ಝೌ: ಚೀನಾದ ಹ್ಯಾಂಗ್ ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ ಕ್ರೀಡಾಕೂಟದಲ್ಲಿ ಶನಿವಾರ ನಡೆದ ಪುರುಷರ ಟೀಮ್ ಸ್ಕ್ವಾಷ್ ಸ್ಪರ್ಧೆಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿದ ಭಾರತ ತಂಡ ಚಿನ್ನದ ಪದಕಕ್ಕೆ ಕೊರಳೊಡ್ಡಿದೆ.

ಪಾಕಿಸ್ತಾನದ ನೂರ್ ಜಮಾನ್ ಅವರನ್ನು ಭಾರತದ ಅಭಯ್ ಸಿಂಗ್ ಸೀಸಾ ಡಿಸೈಡ್‌ನಲ್ಲಿ 3-2 ಅಂತರದಲ್ಲಿ ಮಣಿಸಿದರು. ಆ ಮೂಲಕ ಭಾರತ ಮತ್ತೊಮ್ಮೆ ಸ್ಕ್ವಾಷ್ ನಲ್ಲಿ ಚಿನ್ನದ ಪದಕ ಜಯಿಸಿದೆ.

ಮತ್ತೊಂದೆಡೆ ಭಾರತದ ಮತ್ತೋರ್ವ ಆಟಗಾರ ಮಹೇಶ್ ಮಂಗಾಂವ್ಕರ್ ಪಾಕಿಸ್ತಾನದ ಇಕ್ಬಾಲ್ ನಾಸಿರ್‌ಗೆ ಓಪನರ್‌ನಲ್ಲಿ ಒಂದೇ ಅಂತರದಿಂದ ಸೋತ ನಂತರ ಅನುಭವಿ ಸೌರವ್ ಘೋಸಲ್ ಅವರು ಮುಹಮ್ಮದ್ ಅಸಿಮ್ ಖಾನ್ ವಿರುದ್ಧ 3-0 ಗೆಲುವಿನೊಂದಿಗೆ ಭಾರತೀಯರನ್ನು ಮತ್ತೆ ಸ್ಪರ್ಧೆಗೆ ತಂದರು. ಅಂತಿಮವಾಗಿ ಈ ರೋಚಕ ಹಣಾಹಣಿಯಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಮಣಿಸಿ ಪದಕ ಜಯಿಸಿದೆ.

ಇನ್ನು ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಇದು ಭಾರತಕ್ಕೆ ಸಿಕ್ಕ 10ನೇ ಚಿನ್ನದ ಪದಕವಾಗಿದ್ದು, ಒಟ್ಟಾರೆ ಕ್ರೀಡಾಕೂಟದಲ್ಲಿ ಭಾರತ 36 ಪದಕಗಳನ್ನು ಬಾಚಿಕೊಂಡಿದೆ. ಈ ಪೈಕಿ 10 ಚಿನ್ನ, 13 ಬೆಳ್ಳಿ, 13 ಕಂಚಿನ ಪದಕಗಳು ಸೇರಿವೆ.

ಈ ಹಿಂದೆ ಇದೇ ಕ್ರೀಡಾಕೂಟದ ಲೀಗ್ ಹಂತದ ಪಂದ್ಯದಲ್ಲಿ ಭಾರತ ಇದೇ ಪಾಕಿಸ್ತಾನ ಜೋಡಿಯ ವಿರುದ್ದ ಸೋಲುಕಂಡಿತ್ತು. ಆದರೆ ಫೈನಲ್ ನಲ್ಲಿ ಇದೇ ಜೋಡಿಯನ್ನು ಮಣಿಸುವ ಮೂಲಕ ತನ್ನ ಸೋಲಿನ ಸೇಡು ತೀರಿಸಿಕೊಂಡಿದೆ. ಭಾರತ ಕೊನೆಯ ಬಾರಿಗೆ 2014 ರಲ್ಲಿ ಇಂಚೆನ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಪುರುಷರ ತಂಡ ಸ್ಕ್ವಾಷ್‌ನಲ್ಲಿ ಚಿನ್ನ ಗೆದ್ದಿದ್ದರೆ, ಪಾಕಿಸ್ತಾನಿಗಳು 2010 ರಲ್ಲಿ ಗುವಾಂಗ್‌ಝೌನಲ್ಲಿ ಕೊನೆಯದಾಗಿ ಚಿನ್ನವನ್ನು ಗೆದ್ದಿದ್ದರು.

SCROLL FOR NEXT