ಬ್ರಿಜ್ ಭೂಷಣ್ ಶರಣ್ ಸಿಂಗ್
ಬ್ರಿಜ್ ಭೂಷಣ್ ಶರಣ್ ಸಿಂಗ್ PTI
ಕ್ರೀಡೆ

ಮಾಜಿ WFI ಮುಖ್ಯಸ್ಥ ಬ್ರಿಜ್ ಭೂಷಣ್ ವಿರುದ್ಧದ ಆರೋಪ ರೂಪಿಸುವ ಆದೇಶ ಮುಂದೂಡಿದ ದೆಹಲಿ ಕೋರ್ಟ್!

Vishwanath S

ನವದೆಹಲಿ: ಮಹಿಳಾ ಕುಸ್ತಿಪಟುಗಳು ದಾಖಲಿಸಿರುವ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಿಜೆಪಿ ಸಂಸದ ಮತ್ತು ಮಾಜಿ ಕುಸ್ತಿ ಸಂಸ್ಥೆಯ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಆರೋಪಗಳನ್ನು ರೂಪಿಸುವ ಆದೇಶವನ್ನು ದೆಹಲಿ ನ್ಯಾಯಾಲಯವು ಮುಂದೂಡಿದೆ. ಪ್ರಕರಣದಲ್ಲಿ ಹೆಚ್ಚಿನ ವಾದ ಮಂಡಿಸಲು ಬ್ರಿಜ್ ಭೂಷಣ್ ಅವರು ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ಹೊಸ ಅರ್ಜಿ ಸಲ್ಲಿಸಿದ್ದರು. ತನ್ನ ಮನವಿಯಲ್ಲಿ, ತನಗೆ ಕಿರುಕುಳ ನೀಡಿದಾಗ ದೂರುದಾರರಲ್ಲಿ ಒಬ್ಬರು ಭಾರತದಲ್ಲಿ ಇರಲಿಲ್ಲ ಎಂದು ಅವರು ಹೇಳಿದ್ದಾರೆ.

ಪ್ರಾಸಿಕ್ಯೂಷನ್ ಇದು ವಿಳಂಬ ತಂತ್ರ ಎಂದು ಕರೆದಿದ್ದು ಈ ಅರ್ಜಿಯನ್ನು ವಿರೋಧಿಸಿತು. ದೆಹಲಿ ಪೊಲೀಸರನ್ನು ಪ್ರತಿನಿಧಿಸಿದ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ, ಅರ್ಜಿಯನ್ನು ತಡವಾಗಿ ಸಲ್ಲಿಸಲಾಗಿದೆ. ಅಲ್ಲದೆ ಹೆಚ್ಚಿನ ತನಿಖೆಯನ್ನು ಕೋರಲಾಗಿದೆ ಎಂದು ಹೇಳಿದರು. ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪ್ರಿಯಾಂಕಾ ರಜಪೂತ್ ನಂತರ ಆದೇಶವನ್ನು ಮುಂದೂಡಿದ್ದು ಏಪ್ರಿಲ್ 26ಕ್ಕೆ ಕಾಯ್ದಿರಿಸಿದೆ.

ಬ್ರಿಜ್ ಭೂಷಣ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಇದನ್ನು ಕಳೆದ ವರ್ಷ ದೇಶದ ಅಗ್ರ ಕುಸ್ತಿಪಟುಗಳು ಪ್ರತಿಭಟಿಸಿದ್ದರು. ಈ ಆರೋಪಗಳನ್ನು ಬ್ರಿಜ್ ಭೂಷಣ್ ನಿರಾಕರಿಸಿದ್ದರು. ಆದರೆ ಜನವರಿಯಲ್ಲಿ ದೆಹಲಿ ಪೊಲೀಸರು ಬ್ರಿಜ್ ಭೂಷಣ್ ಮತ್ತು ಅವರ ಸಹ-ಆರೋಪಿ, ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮಾಜಿ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಅವರನ್ನು ವಿಚಾರಣೆಗೆ ಒಳಪಡಿಸಲು ಸಾಕಷ್ಟು "ಪ್ರಾಥಮಿಕ" ಸಾಕ್ಷ್ಯಗಳಿವೆ ಎಂದು ಪ್ರತಿಪಾದಿಸಿದರು.

12 ವರ್ಷಗಳ ಕಾಲ ಭಾರತೀಯ ಕುಸ್ತಿ ಒಕ್ಕೂಟವನ್ನು ಮುನ್ನಡೆಸಿದ್ದ ಅವರು ಕಳೆದ ವರ್ಷಾಂತ್ಯದಲ್ಲಿ ಹುದ್ದೆಯಿಂದ ಕೆಳಗಿಳಿದಿದ್ದರು. ಡಿಸೆಂಬರ್‌ನಲ್ಲಿ ನಡೆದ ಇತ್ತೀಚಿನ WFI ಚುನಾವಣೆಯಲ್ಲಿ, ಬ್ರಿಜ್‌ಭೂಷಣ್ ಅವರ ಸಹಾಯಕ ಸಂಜಯ್ ಸಿಂಗ್ ಉನ್ನತ ಹುದ್ದೆಗೆ ಆಯ್ಕೆಯಾದರು. ಆರು ಬಾರಿ ಸಂಸದರಾಗಿದ್ದ ಬ್ರಿಜ್ ಭೂಷಣ್ ಅವರನ್ನು ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಲಿಲ್ಲ.

SCROLL FOR NEXT