ನವದೆಹಲಿ: 2026ರ ಫಿಫಾ ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಭಾರತ ತಂಡ ಕಳಪೆ ಪ್ರದರ್ಶನ ನೀಡಿದ್ದರ ಪರಿಣಾಮ, ತಂಡದ ಪ್ರಧಾನ ಕೋಚ್ ಇಗೊರ್ ಸ್ಟಿಮಾಕ್ ತಲೆದಂಡವಾಗಿದೆ.
ಸೋಮವಾರ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್‌ಎಫ್) ಈ ಸಂಬಂಧ ಮಾಧ್ಯಮ ಪ್ರಕಟಣೆ ನೀಡಿದ್ದು, ತಕ್ಷಣದಿಂದಲೇ ಸ್ಟಿಮಾಕ್‌ರ ಸೇವೆ ರದ್ದುಗೊಳಿಸುತ್ತಿರುವುದಾಗಿ ಸ್ಪಷ್ಟಪಡಿಸಿದೆ.
2019ರಲ್ಲಿ ಪ್ರಧಾನ ಕೋಚ್ ಆಗಿ ಸ್ಟಿಮಾಕ್ ನೇಮಕಗೊಂಡಿದ್ದರು. ಕಳೆದ ವರ್ಷ ಅವರ ಗುತ್ತಿಗೆ ಅವಧಿಯನ್ನು ಒಂದು ವರ್ಷ ಸಮಯಕ್ಕೆ ವಿಸ್ತರಿಸಲಾಗಿತ್ತು. ಭಾರತ ಇತ್ತೀಚೆಗೆ ಕತಾರ್ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ ಸೋತು, ವಿಶ್ವಕಪ್ ಅರ್ಹತಾ ಟೂರ್ನಿಯ 3ನೇ ಸುತ್ತಿಗೆ ಪ್ರವೇಶಿಸಲು ವಿಫಲವಾಗಿತ್ತು. ಸ್ಟಿಮಾಕ್‌ರ ಮಾರ್ಗದರ್ಶನದಲ್ಲಿ ಭಾರತ ಎರಡು ಸ್ಯಾಫ್ ಚಾಂಪಿಯನ್‌ಶಿಪ್, ಒಂದು ಇಂಟರ್ ಕಾಂಟಿನೆಂಟಲ್ ಕಪ್ ಹಾಗೂ ಒಂದು ತ್ರಿಕೋನ ಸರಣಿಯನ್ನು ಜಯಿಸಿದೆ.
ಕತಾರ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಭಾರತ 2-1 ಗೋಲುಗಳಿಂದ ಸೋಲನುಭವಿಸಿದ್ದು, ಇದರ ಪರಿಣಾಮವಾಗಿ ರಾಷ್ಟ್ರೀಯ ತಂಡವು ಕುವೈತ್ ಮತ್ತು ಅಫ್ಘಾನಿಸ್ತಾನವನ್ನ ಒಳಗೊಂಡ ಗುಂಪಿನಲ್ಲಿ ಮೂರನೇ ಸ್ಥಾನ ಪಡೆಯಿತು.
ಕುವೈತ್ ವಿರುದ್ಧದ ಕೊನೆಯ ಪಂದ್ಯದ ನಂತರ ಸುನಿಲ್ ಛೆಟ್ರಿ ಅಂತಾರಾಷ್ಟ್ರೀಯ ಫುಟ್ಬಾಲ್‌ನಿಂದ ನಿವೃತ್ತರಾದ ಕೆಲವೇ ವಾರಗಳ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಿರಿಯ ಅಧಿಕಾರಿಗಳು ವರ್ಚುವಲ್ ಸಭೆ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಎಐಎಫ್‌ಎಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ