ನವದೆಹಲಿ: ಮೂರು ವರ್ಷಗಳ ಬಳಿಕ ಭಾರತದ ನೆಲದಲ್ಲಿ ಒಲಿಂಪಿಕ್ಸ್ ಚಿನ್ನದ ಹುಡುಗ ನೀರಜ್ ಚೋಪ್ರಾ ಮೊದಲ ಬಾರಿಗೆ ಚಿನ್ನ ಗೆದ್ದಿದ್ದು, ಫೆಡರೇಶನ್ ಕಪ್ 2024ರಲ್ಲಿ (Federation Cup 2024)ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ.
ಒಡಿಶಾದ ಭುವನೇಶ್ವರದ ಕಳಿಂಗ ಸ್ಟೇಡಿಯಂನಲ್ಲಿ ನಡೆದ ಫೆಡರೇಷನ್ ಕಪ್ ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ನೀರಜ್ ಚೋಪ್ರಾ ಬಂಗಾರದ ಸಾಧನೆ ಮಾಡಿದ್ದಾರೆ. ಡಿಪಿ ಮನು ಬೆಳ್ಳಿಗೆ ತೃಪ್ತಿ ಪಟ್ಟಿದ್ದಾರೆ. ಪುರುಷರ ಜಾವೆಲಿನ್ ಥ್ರೋ ವಿಭಾಗದ ಫೈನಲ್‌ನಲ್ಲಿ ಚಿನ್ನದ ಹುಡುಗ ಮತ್ತೊಂದು ಬಂಗಾರದ ಸಾಧನೆ ಮಾಡಿದ್ದಾರೆ.
ಭಾರತದ ಸ್ಟಾರ್ ಅಥ್ಲೀಟ್ ತಮ್ಮ ನಾಲ್ಕನೇ ಪ್ರಯತ್ನದಲ್ಲಿ 82.27 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ತಾನೇ ನಂಬರ್ ವನ್ ಎಂಬುದನ್ನು ಸಾಬೀತುಪಡಿಸಿದರು. ಮೂರನೇ ಸುತ್ತಿನವರೆಗೂ 82.06 ಮೀಟರ್ ಎಸೆದು ಅಗ್ರಸ್ಥಾನದಲ್ಲಿದ್ದ ಡಿಪಿ ಮನು ಅವರನ್ನು ಅಂತಿಮ ಸುತ್ತಿನಲ್ಲಿ ನೀರಜ್ ಹಿಂದಿಕ್ಕಿದರು.
ಮೈದಾನಕ್ಕಿಳಿದ ನೀರಜ್, ಮೂರು ವರ್ಷಗಳ ನಂತರ ಫೆಡರೇಶನ್ ಕಪ್‌ನಲ್ಲಿ ಆಡಿದ್ದು, ಕೊನೆಯ ಬಾರಿಗೆ 2021ರಲ್ಲಿ ಫೆಡರೇಶನ್ ಕಪ್‌ನಲ್ಲಿ ಆಡಿದ್ದ ಅವರು 87.80 ಮೀಟರ್ ದೂರ ಎಸೆದು ಚಿನ್ನದ ಪದಕವನ್ನು ಗೆದ್ದಿದ್ದರು. ನೀರಜ್ ಚೋಪ್ರಾ 2021ರ ಮಾರ್ಚ್ 17ರಲ್ಲಿ ಇದೇ ಕೂಟದಲ್ಲಿ ಭಾಗವಹಿಸಿದ ನಂತರ ದೇಶದ ಯಾವುದೇ ಕೂಟದಲ್ಲಿ ಪಾಲ್ಗೊಂಡಿರಲಿಲ್ಲ.
ಆದರೆ ಅದರ ನಂತರ ಚೋಪ್ರಾ, ಟೋಕಿಯೊ ಒಲಿಂಪಿಕ್ಸ್ ಚಿನ್ನ (2021), ಡೈಮಂಡ್ ಲೀಗ್ ಚಾಂಪಿಯನ್ (2022), ವಿಶ್ವ ಚಾಂಪಿಯನ್ (2023) ಆಗಿ ಯಶಸ್ಸಿನ ಹಾದಿಯಲ್ಲಿ ಸಾಗಿದ್ದರು. ಮೂರು ಡೈಮಂಡ್ ಲೀಗ್ ವೈಯಕ್ತಿಕ ಲೆಗ್‌ನಲ್ಲಿ ಮೊದಲಿಗರಾಗಿದ್ದರು. ಆದರೆ 90 ಮೀ. ದೂರ ಎಸೆಯುವ ಅವರ ಕನಸು ಇನ್ನೂ ಸಾಕಾರಗೊಂಡಿಲ್ಲ. ಅವರ ವೈಯಕ್ತಿಕ ಶ್ರೇಷ್ಠ ಸಾಧನೆ 89.94 ಮೀ. ಆಗಿದೆ.
ಕೂದಲೆಳೆ ಅಂತರದಲ್ಲಿ ಅಗ್ರಸ್ಥಾನ ತಪ್ಪಿಸಿಕೊಂಡ ಮನು
ಇನ್ನು ಭಾರತದ ಸ್ಟಾರ್ ಅಥ್ಲೀಟ್ ನೀರಜ್ ಚೋಪ್ರಾಗೆ ಮತ್ತೋರ್ವ ಅಥ್ಲೀಟ್ ಡಿಪಿ ಮನು ತೀವ್ರ ಪೈಪೋಟಿ ನೀಡಿದರು. ಅಂತಿಮ ಹಂತದವರೆಗೂ ಅಗ್ರಸ್ಥಾನದಲ್ಲಿದ್ದ ಮನು ಅಂತಿಮ ಸುತ್ತಿನಲ್ಲಿ ತಡವರಿಸಿ ದ್ವಿತೀಯ ಸ್ಥಾನಕ್ಕೆ ಕುಸಿದರು. ನೀರಜ್ ತಮ್ಮ ನಾಲ್ಕನೇ ಪ್ರಯತ್ನದಲ್ಲಿ 82.27 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ತಾನೇ ನಂಬರ್ ಒನ್ ಎಂಬುದನ್ನು ಸಾಬೀತುಪಡಿಸಿದರು. ಮೂರನೇ ಸುತ್ತಿನವರೆಗೂ 82.06 ಮೀಟರ್ ಎಸೆದು ಅಗ್ರಸ್ಥಾನದಲ್ಲಿದ್ದ ಡಿಪಿ ಮನು ಅವರನ್ನು ಅಂತಿಮ ಸುತ್ತಿನಲ್ಲಿ ನೀರಜ್ ಹಿಂದಿಕ್ಕಿದರು.