ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ 2024ರಲ್ಲಿ ಭಾರತ ತಂಡದ ಅತ್ಯುತ್ತಮ ಪ್ರದರ್ಶನ ಮುಂದುವರೆದಿದೆ. ಭಾರತದ ಖಾತೆಗೆ ಮತ್ತೊಂದು ಪದಕ ಬಂದಿದೆ. ವಾಸ್ತವವಾಗಿ, ಸೋಮವಾರ ಸ್ಟೇಡ್ ಡಿ ಫ್ರಾನ್ಸ್‌ನಲ್ಲಿ ನಡೆದ ಪ್ಯಾರಿಸ್ 2024 ಪ್ಯಾರಾಲಿಂಪಿಕ್ಸ್‌ನ ಪ್ಯಾರಾ-ಅಥ್ಲೆಟಿಕ್ಸ್ ಪುರುಷರ ಡಿಸ್ಕಸ್ ಎಫ್ 56 ಫೈನಲ್‌ನಲ್ಲಿ ಯೋಗೇಶ್ ಕಥುನಿಯಾ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಈ ಮೂಲಕ ಭಾರತ ಎಂಟನೇ ಪದಕ ಗೆದ್ದಿದೆ.
27 ವರ್ಷದ ಆಟಗಾರ ಈವೆಂಟ್‌ನಲ್ಲಿ 42.22 ಮೀಟರ್ ದೂರಕ್ಕೆ ಅತ್ಯುತ್ತಮವಾಗಿ ಎಸೆದಿದ್ದಾರೆ. ಇದು ಅವರ ಋತುವಿನ ಅತ್ಯುತ್ತಮ ಪ್ರದರ್ಶನವಾಗಿತ್ತು. ಬ್ರೆಜಿಲ್‌ನ ಕ್ಲೌಡಿನಿ ಬಟಿಸ್ಟಾ ಡಾಸ್ ಸ್ಯಾಂಟೋಸ್ 46.86 ಮೀಟರ್‌ಗಳ ಪ್ಯಾರಾಲಿಂಪಿಕ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು. ಗ್ರೀಸ್‌ನ ಕಾನ್‌ಸ್ಟಾಂಟಿನೋಸ್ ಝೌನಿಸ್ 41.32 ಎಸೆದು ಕಂಚಿನ ಪದಕ ಗೆದ್ದರೆ, ಸ್ಲೋವಾಕಿಯಾದ ಡುಸಾನ್ ಲಕ್ಜ್ಕೊ 41.20 ಮೀಟರ್ ದೂರ ಎಸೆದು ನಾಲ್ಕನೇ ಸ್ಥಾನ ಪಡೆದರು. ಸೆರ್ಬಿಯಾದ ನೆಬೊಜ್ಸಾ ಎರಿಕ್ ಅರ್ಹತೆ ಪಡೆದರೂ ಫೈನಲ್‌ನಲ್ಲಿ ಭಾಗವಹಿಸಲಿಲ್ಲ.
ನಿನ್ನೆ ಭಾರತದ ಮಹಿಳಾ ಅಥ್ಲೀಟ್ ಪ್ರೀತಿ ಪಾಲ್ ಮಹಿಳೆಯರ 200 ಮೀಟರ್ ಓಟದ (ಟಿ35) ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದರು. ಪ್ರೀತಿಪಾಲ್ 30.01 ಸೆಕೆಂಡುಗಳಲ್ಲಿ ಓಟವನ್ನು ಪೂರ್ಣಗೊಳಿಸಿ ಮೂರನೇ ಸ್ಥಾನ ಪಡೆದರು. ಹಾಲಿ ಪ್ಯಾರಾಲಿಂಪಿಕ್ಸ್‌ನಲ್ಲಿ ಪ್ರೀತಿಗೆ ಇದು ಎರಡನೇ ಕಂಚಿನ ಪದಕವಾಗಿದೆ.
ಇದಕ್ಕೂ ಮುನ್ನ 100 ಮೀಟರ್ ಓಟದಲ್ಲಿ ಪ್ರೀತಿ ಕಂಚಿನ ಪದಕ ಜಯಿಸಿದ್ದರು. ಇದರೊಂದಿಗೆ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ರಲ್ಲಿ ಭಾರತದ ಪದಕಗಳ ಸಂಖ್ಯೆ ಈಗ 7ಕ್ಕೆ ತಲುಪಿತ್ತು. ಭಾರತ ಇದುವರೆಗೆ ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕಗಳನ್ನು ಗೆದ್ದಿದೆ.