ಬ್ರಸೆಲ್ಸ್: ಬೆಲ್ಜಿಯಂನ ಬ್ರಸೆಲ್ನಲ್ಲಿ ನಡೆದ ಡೈಮಂಡ್ ಲೀಗ್ ಜಾವೆಲಿನ್ ಥ್ರೋ ಫೈನಲ್ನಲ್ಲಿ ಭಾರತದ ಅಥ್ಲೀಟ್ ನೀರಜ್ ಚೋಪ್ರಾ ಅವರು ದ್ವಿತೀಯ ಸ್ಥಾನ ಪಡೆದಿದ್ದಾರೆ.
ಗ್ರೆನೆಡಾದ ಪೀಟರ್ಸ್ ಆ್ಯಂಡರ್ಸನ್ ಅವರಿಗೆ ನಿಕಟ ಪೈಪೋಟಿಯೊಡ್ಡಿದ ನೀರಜ್ ಕೇವಲ 1 ಸೆಂಟಿಮೀಟರ್ ಅಂತರದಲ್ಲಿ ಡೈಮಂಡ್ ಟ್ರೋಫಿ ಜಯವನ್ನು ಕೈತಪ್ಪಿಸಿಕೊಂಡರು. ಪೀಟರ್ಸ್ ಪ್ರಥಮ ಸ್ಥಾನ ಪಡೆದರು.
ತುರುಸಿನ ಸ್ಪರ್ಧೆಯಲ್ಲಿ 87.87 ಮೀಟರ್ ದೂರಕ್ಕೆ ಜಾವೆಲಿನ್ ಎಸೆದ ಗ್ರೆನೇಡಾದ ಆಂಡರ್ಸನ್ ಪೀಟರ್ಸ್ ಚಿನ್ನದ ಪದಕ ಗಳಿಸಿದರು. ಚೋಪ್ರಾ ತಮ್ಮ ಮೂರನೇ ಪ್ರಯತ್ನದಲ್ಲಿ ತಮ್ಮ ಅತ್ಯುತ್ತಮ ಸಾಧನೆಯಾದ 86.86 ಮೀಟರ್ ದೂರವನ್ನು ಸಾಧಿಸಿದರು. ಆದರೆ ಎದುರಾಳಿಯ ಎಸೆತಕ್ಕಿಂತ 0.01 ಮೀಟರ್ ನಷ್ಟು ಹಿಂದುಳಿದರು.
ಅಂತಿಮ ಪ್ರಯತ್ನದಲ್ಲಿ ಕೇವಲ 77.75 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯಲು ಸಾಧ್ಯವಾದ ಜ್ಯೂಲಿಯನ್ ವೆಬೆರ್, ಮೊದಲ ಸುತ್ತಿನಲ್ಲಿ ಎಸೆದ 85.97 ಮೀಟರ್ ಆಧಾರದಲ್ಲಿ ಮೂರನೇ ಸ್ಥಾನ ಪಡೆದರು.
ನಾಟಕೀಯ ತಿರುವುಗಳನ್ನು ಕಂಡ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಆರಂಭಿಕ ಪ್ರಯತ್ನದಲ್ಲೇ 86.82 ಮೀಟರ್ ದೂರಕ್ಕೆ ಎಸೆದು, ಪೀಟರ್ಸ್ಗಿಂತ ಹಿಂದಿದ್ದರು. ಪ್ರತಿ ಸುತ್ತು ಮುಗಿದಂತೆಯೂ 87.87 ಮೀಟರ್ ದೂರವನ್ನು ಪೀಟರ್ಸ್ ಉಳಿಸಿಕೊಂಡರು. ನಾಲ್ಕು ಹಾಗೂ ಐದನೇ ಪ್ರಯತ್ನದಲ್ಲಿ ಚೋಪ್ರಾ 82.04 ಮತ್ತು 83.30 ಮೀಟರ್ ಗೆ ತೃಪ್ತರಾದರು.
ಕೊನೆ ಪ್ರಯತ್ನದಲ್ಲಿ ವೆಬೆರ್ 77.75 ಮೀಟರ್ ಎಸೆದು, ಚೋಪ್ರಾ 86.46 ಮೀಟರ್ ಎಸೆದರೂ, ಫಲಿತಾಂಶದಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ.
ನೀರಜ್ ಅವರು 2022ರಲ್ಲಿ ಜ್ಯೂರಿಚ್‌ನಲ್ಲಿ ನಡೆದಿದ್ದ ಡೈಮಂಡ್ ಲೀಗ್ ಕೂಟದಲ್ಲಿ ಪ್ರಥಮ ಮತ್ತು 2023ರಲ್ಲಿ ಯುಗೇನ್‌ನಲ್ಲಿ ನಡೆದಾಗ ದ್ವಿತೀಯ ಸ್ಥಾನ ಗಳಿಸಿದ್ದರು. ಇತ್ತೀಚೆಗೆ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. 2020ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.