ಟೋಕಿಯೋ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ #BoyCott ಬೆದರಿಕೆ ಹಾಕಿ ಬಳಿಕ ದಂಡದ ಭೀತಿಯಲ್ಲಿ ಮೈದಾನದತ್ತ ದೌಡಾಯಿಸಿದ್ದ ಪಾಕಿಸ್ತಾನಕ್ಕೆ ಮತ್ತೆ ಜಾಗತಿಕ ಮಟ್ಟದ ಅಪಮಾನ ಎದುರಾಗಿದೆ.
ಹೌದು.. ಇತ್ತ ಪಾಕಿಸ್ತಾನ ಕ್ರಿಕೆಟ್ ತಂಡ ಪಂದ್ಯ ಮುಕ್ತಾಯದ ಬಳಿಕ ಭಾರತ ಕ್ರಿಕೆಟ್ ತಂಡ ಹಸ್ತಲಾಘವ ಮಾಡಲಿಲ್ಲ ಎಂದು ಐಸಿಸಿ ಮತ್ತು ಎಸಿಸಿಗೆ ದೂರು ನೀಡಿ #BoyCott ಮೆಗಾ ಹೈಡ್ರಾಮಾ ಮಾಡಿತ್ತು. ಬಳಿಕ ನಡೆದ ಸಭೆಯಲ್ಲಿ ತನ್ನ ನಿರ್ಧಾರದಿಂದ ಹಿಂದೆ ಸರಿದು ಯುಎಇ ವಿರುದ್ಧದ ಪಂದ್ಯದಲ್ಲಿ ಪಾಲ್ಗೊಂಡಿತು. ಈ ಘಟನೆ ಮಾಸುವ ಮುನ್ನವೇ ಪಾಕಿಸ್ತಾನಕ್ಕೆ ಮತ್ತೆ ಜಾಗತಿಕ ಮಟ್ಟದಲ್ಲಿ ಅಪಮಾನವಾಗಿದೆ.
22 ಸದಸ್ಯರ ಪಾಕಿಸ್ತಾನ ಫುಟ್ಬಾಲ್ ತಂಡವನ್ನು ಜಪಾನ್ ನಿಂದ ಕಿಕ್ ಔಟ್ ಮಾಡಲಾಗಿದೆ. ಮೂಲಗಳ ಪ್ರಕಾರ ಪಾಕಿಸ್ತಾನ ಫುಟ್ಬಾಲ್ ತಂಡವೆಂದು ಜಪಾನ್ ಗೆ ಹೋಗಿದ್ದ ಈ ತಂಡ ಅಸಲೀ ತಂಡ ಅಲ್ಲವೇ ಅಲ್ಲ ಎಂದು ಹೇಳಲಾಗಿದ್ದು, ಇದನ್ನು ಮನಗಂಡ ಜಪಾನ್ ಅಧಿಕಾರಿಗಳು ಎಲ್ಲ 22 ಮಂದಿಯನ್ನು ಜಪಾನ್ ನಿಂದ ಗಡಿಪಾರು ಮಾಡಿದ್ದಾರೆ ಎನ್ನಲಾಗಿದೆ.
ಜಪಾನಿಗೆ ಹೋದ ನಕಲಿ ಪಾಕಿಸ್ತಾನ ಫುಟ್ಬಾಲ್ ತಂಡವನ್ನು ವಂಚನೆ ಬಹಿರಂಗಗೊಂಡ ಬಳಿಕ ಗಡೀಪಾರು ಮಾಡಲಾಗಿದೆ ಎಂದು ಪಾಕಿಸ್ತಾನದ ಫೆಡರಲ್ ತನಿಖಾ ಸಂಸ್ಥೆ (FIA) ತಿಳಿಸಿದೆ. ಮಾತ್ರವಲ್ಲದೇ 22 ಸದಸ್ಯರ ನಕಲಿ ಫುಟ್ಬಾಲ್ ತಂಡವನ್ನು ಜಪಾನ್‌ಗೆ ಕಳುಹಿಸುವಲ್ಲಿ ಮಾನವ ಕಳ್ಳಸಾಗಣೆ ಜಾಲ ಭಾಗಿಯಾಗಿದೆ ಎಂದು ಎಫ್ಐಎ ಹೇಳಿಕೆಯಲ್ಲಿ ತಿಳಿಸಿದೆ.
ಸಿಕ್ಕಿಬಿದಿದ್ದೇ ರೋಚಕ
ನಕಲಿ ಆಟಗಾರರು ಫುಟ್ಬಾಲ್ ಆಟಗಾರರಂತೆ ಸಮವಸ್ತ್ರವನ್ನು ಧರಿಸಿದ್ದರು ಮತ್ತು ಪಾಕಿಸ್ತಾನ ಫುಟ್ಬಾಲ್ ಫೆಡರೇಶನ್‌ನಲ್ಲಿ ನೋಂದಾಯಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದರು. ಅವರು ಜಪಾನಿನ ಕ್ಲಬ್‌ನೊಂದಿಗೆ ಪಂದ್ಯಗಳನ್ನು ನಿಗದಿಪಡಿಸಿರುವುದಾಗಿಯೂ ಹೇಳಿಕೊಂಡಿದ್ದರು.
15 ದಿನಗಳ ವೀಸಾ ಪಡೆಯುವಲ್ಲಿ ಯಶಸ್ವಿಯಾದ 22 ಸದಸ್ಯರ ನಕಲಿ ಫುಟ್ಬಾಲ್ ತಂಡವು ಜೂನ್ 2025ರಲ್ಲಿ ಜಪಾನ್ ತಲುಪಿತು. ಆದರೆ, ಜಪಾನಿನ ಅಧಿಕಾರಿಗಳು ವಿಮಾನ ನಿಲ್ದಾಣದಿಂದ ತಂಡವನ್ನು ಗಡೀಪಾರು ಮಾಡಿದ್ದಾರೆ ಮತ್ತು ನಂತರ ಈ ಬಗ್ಗೆ ಎಫ್ಐಎಗೆ ಮಾಹಿತಿ ನೀಡಿದ್ದಾರೆ.
ಈ ಕುರಿತು ತನಿಖಾ ನಡೆಸುತ್ತಿರುವ ತನಿಖಾ ಸಂಸ್ಥೆ ಮಾನವ ಕಳ್ಳಸಾಗಣೆ ತಂಡದ ಸದಸ್ಯ ವಕಾಸ್ ಅಲಿ ಎಂಬಾತನನ್ನು ಬಂಧಿಸಿದೆ. ತನಿಖೆಯ ಸಮಯದಲ್ಲಿ ವಕಾಸ್ ಅಲಿ ಪಾಕಿಸ್ತಾನ ಪುಟ್ಬಾಲ್ ತಂಡದ ಸದಸ್ಯರೆಂದು ಸುಳ್ಳು ಹೇಳಿಕೊಂಡು 2024ರಲ್ಲಿ 17 ಜನರನ್ನು ಜಪಾನ್‌ಗೆ ಕಳುಹಿಸಿದ್ದಾನೆ ಎಂದು ಹೇಳಿದ್ದಾನೆ.