ಮೀರಾಬಾಯಿ ಚಾನು 
ಕ್ರೀಡೆ

CWG 2026: ಗ್ಲಾಸ್ಗೋದಲ್ಲಿ ಮೀರಾಬಾಯಿ ಚಾನು ಐತಿಹಾಸಿಕ ಸಾಧನೆ; ದೇಶದಾದ್ಯಂತ ಸಂಭ್ರಮ, ಪ್ರಧಾನಿ ಮೋದಿ ಶ್ಲಾಘನೆ

2018, 2022 ಮತ್ತು ಇದೀಗ 2026ರ ಗ್ಲಾಸ್ಗೋ ಕ್ರೀಡಾಕೂಟದಲ್ಲೂ ಚಿನ್ನ ಗೆಲ್ಲುವ ಮೂಲಕ ಮೀರಾಬಾಯಿ ತಮ್ಮ ವಿಭಾಗದಲ್ಲಿ ಮತ್ತೊಮ್ಮೆ ಸಂಪೂರ್ಣ ಪ್ರಾಬಲ್ಯ ಮೆರೆದರು.

ಗ್ಲಾಸ್ಗೋ: ಭಾರತದ ಸ್ಟಾರ್ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಅವರು ಗ್ಲಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದು, ಅವರ ಸಾಧನೆಗೆ ದೇಶಾದ್ಯಂತ ಶ್ಲಾಘನೆಯ ಮಹಾಪೂರವೇ ಹರಿದುಬರುತ್ತಿದೆ.

ಇದರೊಂದಿಗೆ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸತತ ಮೂರನೇ ಬಾರಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ ಅವರು, ಭಾರತಕ್ಕೆ ಈ ಕ್ರೀಡಾಕೂಟದ ಮೊದಲ ಚಿನ್ನವನ್ನು ತಂದುಕೊಟ್ಟರು. 2018, 2022 ಮತ್ತು ಇದೀಗ 2026ರ ಗ್ಲಾಸ್ಗೋ ಕ್ರೀಡಾಕೂಟದಲ್ಲೂ ಚಿನ್ನ ಗೆಲ್ಲುವ ಮೂಲಕ ಮೀರಾಬಾಯಿ ತಮ್ಮ ವಿಭಾಗದಲ್ಲಿ ಮತ್ತೊಮ್ಮೆ ಸಂಪೂರ್ಣ ಪ್ರಾಬಲ್ಯ ಮೆರೆದರು.

ಮೀರಾಬಾಯಿ ಅವರ ಚಿನ್ನದ ಪದಕಕ್ಕೂ ಮುನ್ನ, ಪುರುಷರ 60 ಕೆಜಿ ವಿಭಾಗದಲ್ಲಿ ಭಾರತದ ರಿಷಿಕಾಂತ ಸಿಂಗ್ ಬೆಳ್ಳಿ ಪದಕ ಗೆದ್ದು ದೇಶದ ಪದಕ ಬೇಟೆಗೆ ಚಾಲನೆ ನೀಡಿದ್ದರು. ಚಿನ್ನದ ಸಾಧನೆಯ ಬಳಿಕ ಸಾಮಾಜಿಕ ಜಾಲತಾಣ 'ಎಕ್ಸ್' ನಲ್ಲಿ ಸಂತಸ ಹಂಚಿಕೊಂಡ ಮೀರಾಬಾಯಿ, ತಮ್ಮ ನಾಲ್ಕನೇ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲೇ ಈ ಹ್ಯಾಟ್ರಿಕ್ ಚಿನ್ನದ ಸಾಧನೆ ಇನ್ನಷ್ಟು ವಿಶೇಷವಾಗಿದೆ ಎಂದು ಹೇಳಿದ್ದಾರೆ.

ಐತಿಹಾಸಿಕ ಸಾಧನೆ

ಮೀರಾಭಾಯಿ ಚಾನು ಅವರು ಪ್ರದರ್ಶಿಸಿದ ಅದ್ಭುತ ಸಾಮರ್ಥ್ಯ ಹಾಗೂ ಆತ್ಮವಿಶ್ವಾಸದಿಂದ ಹಲವು ದಾಖಲೆಗಳನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿದರು. ಈ ಬಗ್ಗೆ ಮಾತನಾಡಿದ ಅವರು, "ನನ್ನ ಪ್ರದರ್ಶನದಿಂದ ಸಂತೃಪ್ತಿಯಾಗಿದ್ದೇನೆ. ಗ್ಲಾಸ್ಗೋದಲ್ಲಿ ಸತತ ಮೂರನೇ ಕಾಮನ್‌ವೆಲ್ತ್ ಕ್ರೀಡಾಕೂಟದ ಚಿನ್ನ ಗೆದ್ದಿರುವುದು ನನಗೆ ವಿನಮ್ರತೆಯ ಭಾವನೆ ಮೂಡಿಸಿದೆ.

ಇದು ನನ್ನ ನಾಲ್ಕನೇ ಕಾಮನ್‌ವೆಲ್ತ್ ಕ್ರೀಡಾಕೂಟವಾಗಿರುವುದರಿಂದ ಈ ಸಾಧನೆ ಮತ್ತಷ್ಟು ವಿಶೇಷವಾಗಿದೆ. ನನ್ನನ್ನು ಸದಾ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ಜೈ ಹಿಂದ್," ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ದಾಖಲೆಗಳ ಮಳೆ

31 ವರ್ಷದ ಮೀರಾಬಾಯಿ ಚಾನು ಸ್ಪರ್ಧೆಯಲ್ಲಿ ಒಟ್ಟು 190 ಕೆಜಿ ಭಾರ ಎತ್ತಿದರು. ಸ್ನ್ಯಾಚ್‌ನಲ್ಲಿ 85 ಕೆಜಿ ಹಾಗೂ ಕ್ಲೀನ್ ಅಂಡ್ ಜರ್ಕ್‌ನಲ್ಲಿ 105 ಕೆಜಿ ಎತ್ತಿ ಕಾಮನ್‌ವೆಲ್ತ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್ ದಾಖಲೆಗಳನ್ನು ಮುರಿದರು. ಜೊತೆಗೆ ಒಟ್ಟು ಲಿಫ್ಟ್‌ನಲ್ಲೂ ಹೊಸ ಕಾಮನ್‌ವೆಲ್ತ್ ಗೇಮ್ಸ್ ದಾಖಲೆ ನಿರ್ಮಿಸಿದರು. ಇತ್ತ ನೈಜೀರಿಯಾದ ರುತ್ ಅಸುಕ್ವೋ ನ್ಯೋಂಗ್ ಒಟ್ಟು 168 ಕೆಜಿ ಎತ್ತಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರೆ, ಮೀರಾಬಾಯಿ ಅವರಿಗಿಂತ 22 ಕೆಜಿ ಹಿಂದೆ ಉಳಿದರು.

ಆರಂಭದಲ್ಲಿ ಆತಂಕ, ಬಳಿಕ ಚಾಂಪಿಯನ್ ಆಟ

ಮೀರಾಬಾಯಿ ಸ್ಪರ್ಧೆಯನ್ನು 82 ಕೆಜಿ ಸ್ನ್ಯಾಚ್‌ನ ಮೊದಲ ಪ್ರಯತ್ನದಲ್ಲಿ ವಿಫಲರಾಗುವ ಮೂಲಕ ಆರಂಭಿಸಿದರು. ಆದರೆ ತಮ್ಮ ಅನುಭವ ಮತ್ತು ಆತ್ಮವಿಶ್ವಾಸದಿಂದ ಮುಂದಿನ ಪ್ರಯತ್ನಗಳಲ್ಲಿ ಯಶಸ್ವಿಯಾಗಿ ಭಾರ ಎತ್ತಿ ಸ್ಪರ್ಧೆಯ ಮೇಲೆ ಹಿಡಿತ ಸಾಧಿಸಿದರು.

ಕ್ಲೀನ್ ಅಂಡ್ ಜರ್ಕ್‌ನ ಮೊದಲ ಪ್ರಯತ್ನದಲ್ಲೂ ಅವರು ವಿಫಲರಾದರು. ಆದರೆ ಎರಡನೇ ಪ್ರಯತ್ನದಲ್ಲೇ 105 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತಿ ಚಿನ್ನದ ಪದಕವನ್ನು ಖಚಿತಪಡಿಸಿಕೊಂಡರು. ಈ ಲಿಫ್ಟ್‌ನೊಂದಿಗೆ ಕ್ಲೀನ್ ಅಂಡ್ ಜರ್ಕ್ ಹಾಗೂ ಒಟ್ಟು ಲಿಫ್ಟ್ ವಿಭಾಗಗಳ ಕಾಮನ್‌ವೆಲ್ತ್ ಗೇಮ್ಸ್ ದಾಖಲೆಗಳನ್ನು ಮುರಿದರು.

ಸ್ಪರ್ಧೆಯಲ್ಲಿ ಈಗಾಗಲೇ ಚಿನ್ನ ಖಚಿತವಾಗಿದ್ದರಿಂದ, ಎರಡು ತಿಂಗಳೊಳಗೆ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ಸಿದ್ಧತೆಯನ್ನು ಗಮನದಲ್ಲಿಟ್ಟುಕೊಂಡು ಮೂರನೇ ಪ್ರಯತ್ನವನ್ನು ಅವರು ಕೈಬಿಟ್ಟರು.

ಪ್ರಧಾನಿ ಮೋದಿ ಶ್ಲಾಘನೆ

ಇನ್ನು ಮೀರಾಬಾಯಿ ಚಾನು ಸಾಧನೆಗೆ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಮೀರಾಬಾಯಿ ಅವರ ಐತಿಹಾಸಿಕ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದರು.

"ಭಾರತೀಯ ವೇಟ್‌ಲಿಫ್ಟಿಂಗ್‌ಗೆ ಮತ್ತೊಂದು ಸುವರ್ಣ ಅಧ್ಯಾಯ. 48 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಿ ಚಿನ್ನ ಗೆದ್ದಿದ್ದಾರೆ. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸತತ ಚಿನ್ನದೊಂದಿಗೆ ಒಟ್ಟು ನಾಲ್ಕನೇ ಪದಕ ಗೆದ್ದಿರುವ ಅವರು ಪ್ರತಿಯೊಬ್ಬ ಭಾರತೀಯರಿಗೂ ಪ್ರೇರಣೆಯಾಗಿದ್ದಾರೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು," ಎಂದು ಮೋದಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಅಭಿನಂದನೆ ಸಲ್ಲಿಸಿ, "ಮೀರಾಬಾಯಿ ಅವರ ಅಚಲ ಸಂಕಲ್ಪ ಮತ್ತು ನಿರಂತರ ಪರಿಶ್ರಮ ರಾಷ್ಟ್ರಕ್ಕೆ ಕೀರ್ತಿ ತಂದಿದೆ. ಅವರ ಸಾಧನೆ ಲಕ್ಷಾಂತರ ಯುವಕರಿಗೆ ಪ್ರೇರಣೆಯಾಗಿದೆ," ಎಂದರು.

ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ, "ಸತತ ಮೂರು ಕಾಮನ್‌ವೆಲ್ತ್ ಚಿನ್ನ ಗೆಲ್ಲುವ ಮೂಲಕ ಮೀರಾಬಾಯಿ ಅಪರೂಪದ ಸಾಧನೆ ಮಾಡಿದ್ದಾರೆ. ಅವರ ಸ್ಥಿರ ಪ್ರದರ್ಶನ ಮತ್ತು ಅಸಾಧಾರಣ ಶಕ್ತಿ ಭಾರತವನ್ನು ಜಾಗತಿಕ ವೇದಿಕೆಯಲ್ಲಿ ಹೆಮ್ಮೆಪಡಿಸುತ್ತಿದೆ," ಎಂದು ಶ್ಲಾಘಿಸಿದರು.

ಮಣಿಪುರ ಮುಖ್ಯಮಂತ್ರಿ ವೈ. ಖೇಮ್‌ಚಂದ್ ಸಿಂಗ್, "ಮಹಿಳೆಯರ 48 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದು ಹಲವು ದಾಖಲೆಗಳನ್ನು ಮುರಿದ ಮೀರಾಬಾಯಿ ಚಾನು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಸಾಧನೆ ಸಮರ್ಪಣೆ, ಸಹನಶೀಲತೆ ಮತ್ತು ಶ್ರೇಷ್ಠತೆಯ ಪ್ರತೀಕವಾಗಿದೆ. ನೀವು ಮತ್ತೊಮ್ಮೆ ಮಣಿಪುರ ಹಾಗೂ ಭಾರತವನ್ನು ಹೆಮ್ಮೆಪಡಿಸಿದ್ದೀರಿ," ಎಂದು ಶುಭ ಹಾರೈಸಿದರು.

ಮಾಜಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಕೂಡ ಮೀರಾಬಾಯಿ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾವೇರಿಗೆ ಸಂಧಾನ ಸೂತ್ರ: ಆಗಸ್ಟ್ 3 ರಂದು ತಮಿಳುನಾಡು ಸಿಎಂ ವಿಜಯ್ ಬೆಂಗಳೂರಿಗೆ ಬರುವುದು ಡೌಟು? ಇದೇ ಕಾರಣ...!

ಪರೀಕ್ಷಾ ವ್ಯವಸ್ಥೆ ಸುಧಾರಣೆ: ನಂದನ್ ನಿಲೇಕಣಿ ನೇತೃತ್ವದಲ್ಲಿ ಉನ್ನತ ಮಟ್ಟದ ಟಾಸ್ಕ್ ಫೋರ್ಸ್ ರಚನೆ; ಪ್ರಧಾನಿ ಮೋದಿ ಘೋಷಣೆ! Video

3rd T20: ಜಿಂಬಾಬ್ವೆ ವಿರುದ್ಧ 35 ರನ್ ಗೆಲುವು; 3-0 ಅಂತರದಿಂದ ಸರಣಿ 'ಕ್ಲೀನ್ ಸ್ವೀಪ್' ಮಾಡಿದ ಭಾರತ!

ತುಮಕೂರು: ನಡುರಸ್ತೆಯಲ್ಲಿ ರೌಡಿಶೀಟರ್‌ ಬರ್ಬರ ಹತ್ಯೆ!

ನಾಲಾಯಕ್ ಗೃಹ ಸಚಿವ ಟೀಕೆ: ವಿಜಯೇಂದ್ರಗೆ ಭಯ-ಹತಾಶೆ ಶುರುವಾಗಿರುವುದು ಅವರ ಘನತೆಗೆ ತಕ್ಕದ್ದೇ? ಪ್ರಿಯಾಂಕ್ ಖರ್ಗೆ ತಿರುಗೇಟು!