2026ರ ಫಿಫಾ ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಮೆಕ್ಸಿಕೊ ತಂಡವು ದಕ್ಷಿಣ ಆಫ್ರಿಕಾವನ್ನು 2-0 ಗೋಲುಗಳಿಂದ ಸೋಲಿಸಿತು. ನಿನ್ನೆ ಜೂನ್ 11, 2026ರಂದು ಮೆಕ್ಸಿಕೊ ನಗರದ ಐತಿಹಾಸಿಕ ಎಸ್ಟಾಡಿಯೋ ಅಜ್ಟೆಕಾ ಕ್ರೀಡಾಂಗಣದಲ್ಲಿ ನಡೆದ ‘ಎ’ ಗುಂಪಿನ ಈ ಪಂದ್ಯದಲ್ಲಿ ದ್ವಿತೀಯಾರ್ಧದಲ್ಲಿ ಮೊಟ್ಟಮೊದಲ ಬಾರಿಗೆ ಮೊದಲ ಪಂದ್ಯದಲ್ಲಿಯೇ ಮೂರು ಕೆಂಪು ಕಾರ್ಡ್‌ಗಳು ಪ್ರದರ್ಶಿಸಲ್ಪಟ್ಟವು. ಅವುಗಳಲ್ಲಿ ಎರಡು ದಕ್ಷಿಣ ಆಫ್ರಿಕಾ ಆಟಗಾರರಿಗೆ ಹಾಗೂ ಒಂದು ಮೆಕ್ಸಿಕೊ ಆಟಗಾರನಿಗೆ ನೀಡಲಾಯಿತು.
ಪಂದ್ಯದ 9ನೇ ನಿಮಿಷದಲ್ಲೇ ಜೂಲಿಯನ್ ಕ್ವಿನೋನ್ಸ್ ಮೆಕ್ಸಿಕೊ ಪರ ಮೊದಲ ಗೋಲು ದಾಖಲಿಸಿದರು. 1986ರ ವಿಶ್ವಕಪ್‌ನಲ್ಲಿ ಡಿಯಾಗೋ ಮರಡೋನಾ ನೇತೃತ್ವದ ಅರ್ಜೆಂಟಿನಾ ತಂಡವು ಪಶ್ಚಿಮ ಜರ್ಮನಿಯನ್ನು ಸೋಲಿಸಿ ಪ್ರಶಸ್ತಿ ಗೆದ್ದಿದ್ದ ಇದೇ ಐತಿಹಾಸಿಕ ಅಜ್ಟೆಕಾ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಿತು.
ದ್ವಿತೀಯಾರ್ಧದ 50ನೇ ನಿಮಿಷದಲ್ಲಿ ದಕ್ಷಿಣ ಆಫ್ರಿಕಾದ ಯಾಯಾ ಸಿಥೋಲೆ ಕೆಂಪು ಕಾರ್ಡ್ ಪಡೆದು ಮೈದಾನ ತೊರೆಯಬೇಕಾಯಿತು. ಇದರಿಂದ ದಕ್ಷಿಣ ಆಫ್ರಿಕಾ 10 ಆಟಗಾರರೊಂದಿಗೆ ಆಟ ಮುಂದುವರಿಸಬೇಕಾಯಿತು. ನಂತರ ದಕ್ಷಿಣ ಆಫ್ರಿಕಾದ ಥೆಂಬಾ ಜ್ವಾನೆ ಹಾಗೂ ಮೆಕ್ಸಿಕೊದ ಸೀಸರ್ ಮೊಂಟೆಸ್ ಕೂಡ ಕೆಂಪು ಕಾರ್ಡ್ ಪಡೆದರು.
67ನೇ ನಿಮಿಷದಲ್ಲಿ ರೌಲ್ ಜಿಮೆನೆಸ್ ಹೆಡರ್ ಮೂಲಕ ಮೆಕ್ಸಿಕೊದ ಎರಡನೇ ಗೋಲು ದಾಖಲಿಸಿ ಆತಿಥೇಯ ರಾಷ್ಟ್ರದ ಜಯವನ್ನು ಖಚಿತಪಡಿಸಿದರು. ಈ ಗೆಲುವಿನೊಂದಿಗೆ ಮೆಕ್ಸಿಕೊ ಮೂರು ಅಮೂಲ್ಯ ಅಂಕಗಳನ್ನು ತನ್ನದಾಗಿಸಿಕೊಂಡಿತು.
ವಿಶೇಷವೆಂದರೆ, ಮೆಕ್ಸಿಕೊ ಮತ್ತು ದಕ್ಷಿಣ ಆಫ್ರಿಕಾ ತಂಡಗಳು 2010ರ ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲೂ ಜೂನ್ 11ರಂದು ಮುಖಾಮುಖಿಯಾಗಿದ್ದವು. ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನ ಸಾಕರ್ ಸಿಟಿ ಕ್ರೀಡಾಂಗಣದಲ್ಲಿ ನಡೆದ ಆ ಪಂದ್ಯ 1-1 ಸಮಬಲದಲ್ಲಿ ಅಂತ್ಯಗೊಂಡಿತ್ತು.
‘ಎ’ ಗುಂಪಿನಲ್ಲಿ ಮೆಕ್ಸಿಕೊ, ದಕ್ಷಿಣ ಆಫ್ರಿಕಾ, ಚೆಕಿಯಾ ಹಾಗೂ ದಕ್ಷಿಣ ಕೊರಿಯಾ ತಂಡಗಳಿವೆ. ಈ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ಪ್ರಮುಖ ಫೇವರಿಟ್ ತಂಡವಾಗಿ ಮೆಕ್ಸಿಕೊ ಪರಿಗಣಿಸಲಾಗಿದೆ. ವಿಶ್ವ ಶ್ರೇಯಾಂಕದಲ್ಲಿ 60ನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಈ ಗುಂಪಿನಲ್ಲಿರುವ ಅತಿ ಕಡಿಮೆ ಶ್ರೇಯಾಂಕದ ತಂಡವಾಗಿದೆ.
ಸತತ ಮೂರು ರೆಡ್ ಕಾರ್ಡ್ ಗಳು
ನಿನ್ನೆ ಜೂನ್ 11ರಂದು ಮೆಕ್ಸಿಕೊ ನಗರದ ಐತಿಹಾಸಿಕ ಎಸ್ಟಾಡಿಯೋ ಅಜ್ಟೆಕಾ ಕ್ರೀಡಾಂಗಣದಲ್ಲಿ ನಡೆದ ಅದ್ದೂರಿ ಉದ್ಘಾಟನಾ ಸಮಾರಂಭದೊಂದಿಗೆ ಫಿಫಾ ವಿಶ್ವಕಪ್-2026ಕ್ಕೆ ಚಾಲನೆ ದೊರೆಯಿತು. ಫುಟ್ಬಾಲ್, ಸಂಗೀತ ಹಾಗೂ ಆತಿಥೇಯ ರಾಷ್ಟ್ರಗಳಾದ ಮೆಕ್ಸಿಕೊ, ಅಮೆರಿಕ ಮತ್ತು ಕೆನಡಾ ದೇಶಗಳ ಸಾಂಸ್ಕೃತಿಕ ಪರಂಪರೆಯನ್ನು ಈ ಸಮಾರಂಭದಲ್ಲಿ ಸಂಭ್ರಮಿಸಲಾಯಿತು.
ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ಜಂಟಿಯಾಗಿ ಆತಿಥ್ಯ ವಹಿಸಿರುವ ಈ ವಿಶ್ವಕಪ್, ಮೂರು ರಾಷ್ಟ್ರಗಳಲ್ಲಿ ನಡೆಯುತ್ತಿರುವ ಮೊದಲ ವಿಶ್ವಕಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜೊತೆಗೆ, 48 ತಂಡಗಳು ಭಾಗವಹಿಸುತ್ತಿರುವ ಮೊದಲ ವಿಶ್ವಕಪ್ ಕೂಡ ಇದಾಗಿದೆ.
ಹಿಂದಿನ 32 ತಂಡಗಳ ಮಾದರಿಯಿಂದ 48 ತಂಡಗಳಿಗೆ ವಿಸ್ತರಣೆ ಮಾಡಿರುವುದರಿಂದ ಪಂದ್ಯಗಳ ಸಂಖ್ಯೆ 64ರಿಂದ 104ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಉತ್ತರ ಅಮೆರಿಕಾದಾದ್ಯಂತ ಒಂದು ತಿಂಗಳಿಗೂ ಹೆಚ್ಚು ಕಾಲ ನಡೆಯುವ ಫುಟ್ಬಾಲ್ ಹಬ್ಬವಾಗಿ ಪಂದ್ಯಾವಳಿ ರೂಪಾಂತರಗೊಂಡಿದೆ. ವಿಶ್ವಕಪ್‌ನ ಫೈನಲ್ ಪಂದ್ಯ ಜುಲೈ 19ರಂದು ನ್ಯೂಜೆರ್ಸಿಯಲ್ಲಿ ನಡೆಯಲಿದೆ.
48 ತಂಡಗಳನ್ನು ತಲಾ ನಾಲ್ಕು ತಂಡಗಳಂತೆ 12 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನ ಮೊದಲ ಎರಡು ಸ್ಥಾನಗಳ ತಂಡಗಳು ಹಾಗೂ ಮೂರನೇ ಸ್ಥಾನ ಪಡೆದ ತಂಡಗಳಲ್ಲಿ ಅತ್ಯುತ್ತಮ ಎಂಟು ತಂಡಗಳು ಹೊಸದಾಗಿ ಪರಿಚಯಿಸಲಾದ 32ರ ಸುತ್ತಿಗೆ (Round of 32) ಪ್ರವೇಶ ಪಡೆಯಲಿವೆ. ಇದರಿಂದ ಪ್ರಶಸ್ತಿಯ ಹಾದಿ ಹಿಂದೆಂದಿಗಿಂತಲೂ ಹೆಚ್ಚು ಸುದೀರ್ಘ ಮತ್ತು ಸವಾಲಿನದ್ದಾಗಿದೆ.
ಈ ಉದ್ಘಾಟನಾ ಪಂದ್ಯವು ಎಸ್ಟಾಡಿಯೋ ಅಜ್ಟೆಕಾ ಕ್ರೀಡಾಂಗಣವನ್ನು ಮತ್ತೊಮ್ಮೆ ಇತಿಹಾಸದ ಪುಟಗಳಲ್ಲಿ ದಾಖಲಿಸಿದೆ. 1970 ಮತ್ತು 1986ರ ವಿಶ್ವಕಪ್‌ಗಳ ಉದ್ಘಾಟನಾ ಪಂದ್ಯಗಳಿಗೆ ಆತಿಥ್ಯ ವಹಿಸಿದ್ದ ಈ ಕ್ರೀಡಾಂಗಣ, ಇದೀಗ ಮೂರು ವಿಭಿನ್ನ ಫಿಫಾ ವಿಶ್ವಕಪ್‌ಗಳ ಉದ್ಘಾಟನಾ ಪಂದ್ಯಗಳನ್ನು ಆಯೋಜಿಸಿದ ವಿಶ್ವದ ಮೊದಲ ಕ್ರೀಡಾಂಗಣ ಎಂಬ ದಾಖಲೆಯನ್ನು ನಿರ್ಮಿಸಿದೆ.
ಇದು ಮೆಕ್ಸಿಕೊ ತಂಡಕ್ಕೆ ವಿಶ್ವಕಪ್ ಇತಿಹಾಸದಲ್ಲಿ ಎಂಟನೇ ಉದ್ಘಾಟನಾ ಪಂದ್ಯವಾಗಿತ್ತು. ಇದಕ್ಕೂ ಮುನ್ನ ಅವರು ಐದು ಉದ್ಘಾಟನಾ ಪಂದ್ಯಗಳಲ್ಲಿ ಸೋಲು ಕಂಡಿದ್ದು, ಕೊನೆಯ ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದರು. 2010ರ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯವೂ 1-1 ಸಮಬಲದಲ್ಲಿ ಅಂತ್ಯಗೊಂಡಿತ್ತು. 2026ರಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಮೆಕ್ಸಿಕೊ ಉದ್ಘಾಟನಾ ಪಂದ್ಯಗಳಲ್ಲಿನ ತನ್ನ ನಿರೀಕ್ಷಿತ ಗೆಲುವನ್ನು ದಾಖಲಿಸಿದೆ.