ಐಚಿ-ನಗೋಯಾ: ಜಪಾನ್ ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನ ಎರಡನೇ ದಿನವಾದ ಸೋಮವಾರವೂ ಚಿನ್ನದ ಪದಕಕ್ಕಾಗಿ ಭಾರತದ ಬೇಟೆ ಮುಂದುವರೆಯಿತು. ಆದರೆ, ದಿನದ ಅಂತ್ಯಕ್ಕೆ ಪದಕಗಳ ಪಟ್ಟಿಗೆ ಇನ್ನೂ ನಾಲ್ಕು ಪದಕಗಳು ಸೇರಿದವು. ಇದರಲ್ಲಿ ಮೂರು ಪದಕಗಳು ಶೂಟಿಂಗ್‌ನಿಂದ ಬಂದವು ಮತ್ತು ಸುಚಿಕಾ ತರಿಯಾಲ್ 'ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್' (MMA) ನಲ್ಲಿ ಏಷ್ಯನ್ ಗೇಮ್ಸ್ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟುವಾಗಿ ಇತಿಹಾಸ ನಿರ್ಮಿಸಿದರು.
ವೈದ್ಯಕೀಯ ಕಾರಣಗಳಿಂದಾಗಿ ಸಹ-ಸ್ಪರ್ಧಿ ವರುಣ್ ಸನ್ಯಾಲ್ ಅವರ MMA ಅಭಿಯಾನ ಪ್ರಾರಂಭವಾಗುವ ಮುನ್ನವೇ ಕೊನೆಗೊಂಡರೂ, ಸುಚಿಕಾ ಅವರು ಭಾರತೀಯ MMA ರಂಗವನ್ನು ಪ್ರತಿನಿಧಿಸುತ್ತಾ ಜಾಗತಿಕ ಮಟ್ಟದಲ್ಲಿ ತ್ರಿವರ್ಣ ಧ್ವಜವನ್ನು ಎತ್ತಿಹಿಡಿದರು. ಸಿಂಗಾಪುರದ ಹುಯಿ ಹೂನ್ ಟಿಯೊ ವಿರುದ್ಧ 2-0 ಅಂತರದಲ್ಲಿ ಸೋಲನುಭವಿಸಿದರೂ, ಅವರು ಅಂತಿಮವಾಗಿ ಕಂಚಿನ ಪದಕವನ್ನು ಗೆದ್ದುಕೊಂಡರು.
ಈ ಸೋಲಿನ ನಿರಾಶೆಯ ಹೊರತಾಗಿಯೂ, ಸುಚಿಕಾ ಅವರ ಕಂಚಿನ ಪದಕವು ಒಂದು ಮಹತ್ವದ ಸಾಧನೆಯಾಗಿದೆ. ಹರಿಯಾಣದ ರೋಹ್ಟಕ್ ಜಿಲ್ಲೆಯ ಕಿಲೋಯಿ ಗ್ರಾಮದವರಾದ ಇವರು, ಜಿಯು-ಜಿಟ್ಸುವಿನಲ್ಲಿ 2024ರ ವಿಶ್ವ ಚಾಂಪಿಯನ್ ಆಗಿದ್ದಾರೆ. ಅಲ್ಲದೆ, ಈ ಹಿಂದೆ 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಜೂಡೋ ಹಾಗೂ 2022ರ ಏಷ್ಯನ್ ಗೇಮ್ಸ್‌ನಲ್ಲಿ ಕುರಾಶ್ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಪಂದ್ಯದ ನಂತರ ಮಾತನಾಡಿದ ಸುಚಿಕಾ, ಚಿನ್ನ ಗೆಲ್ಲಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದೆ. ಆದರೆ ಕೆಲವು ಸಂದರ್ಭಗಳು ಮತ್ತು ಸಣ್ಣ ಕೊರತೆಯೊಂದು ಅದಕ್ಕೆ ಅಡ್ಡಿಯಾಯಿತು ಎಂದು ಅವರು ಅಭಿಪ್ರಾಯಪಟ್ಟರು.
ಚಿನ್ನದ ಪದಕ ಗೆಲ್ಲಲು ಸಂಪೂರ್ಣ ಪ್ರಯತ್ನ ಮಾಡಿದೆ. ಆದರೆ ಕೆಲವು ಸಂದರ್ಭಗಳಿಂದಾಗಿ ಅದನ್ನು ಸಾಧಿಸಲು ಸಾಧ್ಯವಾಗಲಿಲ್ಲ, ಅಥವಾ ಬಹುಶಃ ನನ್ನ ಕಡೆಯಿಂದಲೇ ಏನಾದರೂ ಸಣ್ಣ ಕೊರತೆಯಾಗಿರಬಹುದು ಎಂದು ಕಂಚಿನ ಪದಕ ಗೆದ್ದ ನಂತರ ಸುಚಿಕಾ ANIಗೆ ತಿಳಿಸಿದರು. ಎರಡು ದಿನಗಳ ಸ್ಪರ್ಧೆಯ ನಂತರ ಭಾರತವು ಈಗ ಒಟ್ಟು ಆರು ಪದಕಗಳನ್ನು (ನಾಲ್ಕು ಬೆಳ್ಳಿ ಮತ್ತು ಎರಡು ಕಂಚು) ಹೊಂದಿದೆ. ಆದರೆ ಇನ್ನೂ ಚಿನ್ನದ ಪದಕ ಗೆದ್ದಿಲ್ಲ.
ಶೂಟಿಂಗ್ ವಿಭಾಗವು ಮತ್ತೊಮ್ಮೆ ಭಾರತಕ್ಕೆ ಅತಿ ಹೆಚ್ಚು ಪದಕಗಳನ್ನು ತಂದುಕೊಟ್ಟ ಕ್ಷೇತ್ರವಾಗಿ ಸಾಬೀತಾಯಿತು. ಪುರುಷರ 10 ಮೀಟರ್ ಏರ್ ರೈಫಲ್ ವೈಯಕ್ತಿಕ ವಿಭಾಗದಲ್ಲಿ ಹಿಮಾಂಶು ಧಿಲ್ಲೋನ್ ಬೆಳ್ಳಿ ಪದಕ ಮತ್ತು ರುದ್ರಾಂಕ್ಷ್ ಪಾಟೀಲ್ ಕಂಚಿನ ಪದಕ ಗೆದ್ದರು. ನಂತರ ಇವರಿಬ್ಬರೂ 18 ವರ್ಷದ ಪಾರ್ಥ್ ಮಾನೆ ಅವರೊಂದಿಗೆ ಸೇರಿ ಟೀಮ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡರು. ಈ ವಿಭಾಗದಲ್ಲಿ ಭಾರತವು ಒಟ್ಟು 1898.4 ಅಂಕಗಳನ್ನು ಗಳಿಸಿದರೆ, ಚೀನಾ 1899.0 ಅಂಕದೊಂದಿಗೆ ನೂತನ ವಿಶ್ವ ದಾಖಲೆಯೊಂದಿಗೆ ಮೊದಲ ಸ್ಥಾನ ಪಡೆದಿದೆ.
ಏಷ್ಯನ್ ಗೇಮ್ಸ್ ನ ಎರಡನೇ ದಿನವಾದ ಸೋಮವಾರ ಅನೇಕ ಪಂದ್ಯಗಳಲ್ಲಿ ಭಾರತದ ಆಟಗಾರರು ಅದ್ಬುತ ಪ್ರದರ್ಶನ ನೀಡಿದರು. ಮಹಿಳೆಯರ ಹಾಕಿ ತಂಡ ಇಂಡೋನೇಷ್ಯಾ ತಂಡವನ್ನು 17-1 ಅಂತರದಿಂದ ಸೋಲಿಸಿದರೆ, ಭಾರತ ತಂಡವು ಪುರುಷರ ಕಬಡ್ಡಿಯಲ್ಲಿ ಜಪಾನ್ ತಂಡವನ್ನು 49.24 ಅಂತರದಿಂದ ಮಣಿಸಿತು. ಬ್ಯಾಡ್ಮಿಂಟನ್ ತಂಡವು ಕೂಡ ಅತ್ಯುತ್ತಮ ಆರಂಭವನ್ನು ಪಡೆಯಿತು. ಆರಂಭಿಕ ಸುತ್ತಿನಲ್ಲಿ ಭಾರತದ ಪುರುಷರ ತಂಡವು ಬಾಂಗ್ಲಾದೇಶವನ್ನು 3-0 ಅಂತರದಿಂದ ಸೋಲಿಸಿತು. ಲಕ್ಷ್ಯ ಸೇನ್, ಕೆ. ಶ್ರೀಕಾಂತ್ ಮತ್ತು ಆಯುಷ್ ಶೆಟ್ಟಿ ತಮ್ಮ ಸಿಂಗಲ್ಸ್ ಪಂದ್ಯಗಳಲ್ಲಿ ಜಯಗಳಿಸಿದ ಕಾರಣ, ಉಳಿದ ಡಬಲ್ಸ್ ಪಂದ್ಯಗಳ ಅಗತ್ಯವೇ ಇಲ್ಲದಂತಾಯಿತು.
ಭಾರತದ ಟೇಬಲ್ ಟೆನ್ನಿಸ್ ತಂಡಗಳು ಕೂಡ ಪಾಕಿಸ್ತಾನದ ವಿರುದ್ಧ 3-0 ಅಂತರದ ಭರ್ಜರಿ ಗೆಲುವು ಸಾಧಿಸಿದವು. ಮಹಿಳಾ ತಂಡವು ಸತತ ಮೂರನೇ ಗೆಲುವಿನೊಂದಿಗೆ 'ಗ್ರೂಪ್ ಎಫ್'ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡರೆ, ಪುರುಷರ ತಂಡವು ಇರಾನ್ ವಿರುದ್ಧದ ಸೋಲಿನಿಂದ ಚೇತರಿಸಿಕೊಂಡು ಪಾಕಿಸ್ತಾನದ ವಿರುದ್ಧ ಸಂಪೂರ್ಣ ಜಯ (ಕ್ಲೀನ್ ಸ್ವೀಪ್) ದಾಖಲಿಸಿತು. ಬಾಕ್ಸಿಂಗ್‌ನಲ್ಲಿ, ಸುಮಿತ್ ಕುಂಡು ಪುರುಷರ 70 ಕೆಜಿ ವಿಭಾಗದಲ್ಲಿ ಥೈಲ್ಯಾಂಡ್‌ನ ಬುಂಜಾಂಗ್ ಸಿನ್ಸಿರಿ ಅವರನ್ನು 5-0 ಅಂತರದಿಂದ ಸೋಲಿಸುವ ಮೂಲಕ ತಮ್ಮ ಅಭಿಯಾನವನ್ನು ಭರ್ಜರಿಯಾಗಿ ಆರಂಭಿಸಿದರು.
ಈಜು ಸ್ಪರ್ಧೆಯು ಭಾರತಕ್ಕೆ ಮತ್ತೊಮ್ಮೆ ಸವಾಲಿನದ್ದಾಗಿ ಪರಿಣಮಿಸಿತು. ಪುರುಷರ 50 ಮೀಟರ್ ಬ್ಯಾಕ್‌ಸ್ಟ್ರೋಕ್ ಫೈನಲ್‌ನಲ್ಲಿ ಶ್ರೀಹರಿ ನಟರಾಜ್ 10ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಅರ್ಹತಾ ಸುತ್ತಿನಲ್ಲಿ ನಟರಾಜ್ 10ನೇ ಸ್ಥಾನ ಹಾಗೂ ರಿಷಭ್ ದಾಸ್ 11ನೇ ಸ್ಥಾನ ಪಡೆದಿದ್ದರು. ಆಕಾಶ್ ಮಣಿ ಹಾಗೂ ಹೀರ್ ಗಿತೇಶ್ ಶಾ ಪುರುಷರ 50 ಮೀ. ಫ್ರೀಸ್ಟೈಲ್ ಹೀಟ್ ನಲ್ಲಿ ಅರ್ಹತೆ ಪಡೆಯುವಲ್ಲಿ ವಿಫಲರಾದರು.
ಸಾಫ್ಟ್ ಟೆನ್ನಿಸ್‌ನಲ್ಲೂ ಭಾರತಕ್ಕೆ ನಿರಾಶೆ ಎದುರಾಯಿತು. ಫಿಲಿಪೈನ್ಸ್‌ನ ಕ್ರಿಸ್ಟಿ ಸನೋಸಾ ಮತ್ತು ಶೆರ್ವಿನ್ ರೇ ನುಗುಯಿಟ್ ವಿರುದ್ಧದ ತೀವ್ರ ಪೈಪೋಟಿಯ ಪಂದ್ಯದಲ್ಲಿ ಸೋಲುವ ಮೂಲಕ ಆಧ್ಯ ತಿವಾರಿ ಮತ್ತು ಜಯ್ ಮೀನಾ 'ರೌಂಡ್ ಆಫ್ 16' ಹಂತದಲ್ಲೇ ಹೊರಬಿದ್ದರು. ವುಶು ಸ್ಪರ್ಧೆಯಲ್ಲಿ ಫಲಿತಾಂಶ ಬಂದಿದ್ದು, ರೋಶಿಬಿನಾ ದೇವಿ ಹಾಗೂ ಆರ್ಯನ್ ಅವರು ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದರು.