ತ್ರಿಲೋಕ ಸುಂದರಿ
ಈ ಬಾರಿಯೂ ಇಳೆಗೇ
ತ್ರಿಲೋಕ ಸುಂದರಿಯ ಪಟ್ಟ
ಧರಿಸಿರುವಳು ನೋಡಿ
ಹೊಳೆಯುವ ಸೂರ್ಯನ ಕಿರೀಟ
ನನ್ನ ನಲ್ಲ
ಮೋಡಗಳಲ್ಲಿ ತೇಲಿಸುತಾ
ಮಳೆಬಿಲ್ಲ ಕನಸುಗಳ ತೊಡಿಸುತಾ
ನನ್ನ ಬಾಳ ಹಾದಿಯೊಳು
ಸಿಕ್ಕಿಹನೊಬ್ಬ
ಅವನ ಕುಡಿಮೀಸೆಯಡಿಯಲ್ಲಿ
ಮಿಂಚಿನಂತಹ ನಗೆ ಹಬ್ಬ !
ನಿನ್ನ ಕಣ್ಣುಗಳು
ನನ್ನನ್ನು ಇಂಚಿಂಚಾಗಿ
ಸೆರೆ ಹಿಡಿದು
ಭಾವ ಮಿಂಚುಗಳ ಬೆಳಗಿಸಿ
ಮುಗಿಲ ಮಂಚದಿ ತೇಲಿಸಿ
ಮೋಹಕವಾಗಿ ಶೃಂಗರಿಸುವ
ಕಾವ್ಯಮಯ ಕನ್ನಡಿ.
ಅರ್ಥವಾಗದ್ದು
ನಿನ್ನಿರುವಿಕೆಯಲ್ಲಿ
ಮೌನ ವ್ರತ ಕೈಗೊಂಡು
ನಿನ್ನ ಗೈರು ಹಾಜರಿಯಲ್ಲಿ
ನಿನ್ನ ನೆನಪುಗಳೊಡನೆ
ಮನದಣಿಯ ಮಾತಾಡುವೆ
ನೆನಪುಗಳು
ಸುರಿಯುತ್ತಿಲ್ಲ ಮಳೆ
ಹೊರಗೆಲ್ಲೂ
ಆದರೂ ಕಾಗದದ
ದೊಣಿಯೊಳಗೆ
ಕೂತ ಮನಸೇಕೋ
ಅಗಿದೆ ಒದ್ದೆ !
ಪ್ರೀತಿಯ ರಂಗೋಲಿ
ಮನೆಯಂಗಳದಿ ದಿನವೂ
ಚುಕ್ಕಿ ರಂಗೋಲಿಯನ್ನಿಟ್ಟ
ಚಲುವೆ
ಇಂದು ಅವನ
ಮನದಂಗಳದಿ
ತಾನೇ ಚುಕ್ಕಿ
ಚಿತ್ರವಾಗಿದ್ದಾಳೆ !
- ಆರತಿ ಘಟಿಕಾರ್, ದುಬೈ