ಹೊರಗೆ ಜಿಟಿ ಜಿಟಿ ಮಳೆ... ಓಹ್ ಶಿಟ್ ! ನೆಟ್ವರ್ಕ್ ಸಿಗುತ್ತಿಲ್ಲ ಕಣೇ... ಬೆಂಗ್ಳೂರಲ್ಲಿ ಸಂಜೆಯಾಗುತ್ತಿದ್ದಂತೆ ಮಳೆ ಶುರುವಾಗುತ್ತೆ..ಇದೇ ಕಿರಿಕಿರಿ ಎಂದು ರೂಮ್ ಮೇಟ್ ಗೊಣಗುತ್ತಿದ್ದಳು. ಸದ್ಯ ನನ್ನ ಫೋನ್‌ನಲ್ಲಿ ನೆಟ್ವರ್ಕ್ ಇದೆ ಎಂದು ಫೇಸ್ ಬುಕ್‌ನಲ್ಲಿ Its raining.. feeling awesome ಎಂಬ ಅವಳ ಸ್ಟೇಟಸ್ ಅಪ್‌ಡೇಟ್‌ಗೆ ಲೈಕ್ ಒತ್ತಿ ಸುಮ್ಮನಾದೆ.
ಜೋರಾಗಿ ಮಳೆ ಸುರಿಯುತ್ತಿದ್ದ ಕಾರಣ ಹಾಸ್ಟೆಲ್ ಮೌನವಾಗಿ ಮಳೆಯ ದನಿಯನ್ನು ಆಲಿಸುವಂತೆ
ಕಾಣುತ್ತಿತ್ತು. ಕಿಟಕಿ ಸರಿಸಿ ಮಳೆಯನ್ನೇ ದಿಟ್ಟಿಸುತ್ತಾ ಕುಳಿತುಕೊಳ್ಳುವುದು ನನ್ನಿಷ್ಟದ ಕೆಲಸ. ಅದೇನು ಅಂತ ಗೊತ್ತಿಲ್ಲ, ಈ ಮಳೆಗೆ ಮತ್ತು ಹಾಸ್ಟೆಲ್ ರೂಂನ ಏಕಾಂತಕ್ಕೆ ಒಂದು ವಿಶಿಷ್ಟ ಶಕ್ತಿ ಇದೆ ಅನಿಸುತ್ತಿದೆ. ಇದೇ ಏಕಾಂತ ಹಳೆಯದ್ದನ್ನೆಲ್ಲಾ ನೆನಪಿಸುವಂತೆ ಮಾಡಿ ಕಣ್ಣಲ್ಲಿ ನೀರು ತರಿಸುತ್ತದೆ. ಮರುಕ್ಷಣದಲ್ಲೇ ಈ ಮಳೆಯ ಸೊಬಗು, ನೋವು ಮರೆಯುವಂತೆ ಮಾಡಿ ಮುಂದೇನು? ಎಂಬುದರ ಬಗ್ಗೆ ಯೋಚನೆ ಮಾಡುವಂತೆ ಮಾಡುತ್ತದೆ. ಈ ಮಳೆ ಮತ್ತು ಏಕಾಂತ ನನ್ನನ್ನು ಕಾಡಿದಷ್ಟು ಇನ್ಯಾವುದೂ ಕಾಡಿಲ್ಲ. ಹೊರಗೆ ಮಳೆಯ ಅಬ್ಬರ ಜೋರಾಗುತ್ತಿದೆ. ಕರೆಂಟಿಲ್ಲದ ಕೋಣೆಯಲ್ಲಿ ಮೇಣದ ಬತ್ತಿಯ ಮಂದ ಬೆಳಕು, ನೆಟ್‌ವರ್ಕ್ ಸಿಗದೆ ತೆಪ್ಪಗಾಗಿರುವ ಫೋನ್... ನಾವು ನಾವಾಗಿರುವ ಕ್ಷಣಗಳೆಂದರೆ ಇವೇ.
ಮಳೆ... ನೆನಪುಗಳ ಕಂತೆಯನ್ನು ಬಿಚ್ಚುವ ಮಾಯಾವಿ. ಗುಡುಗು ಮಿಂಚಿನಿಂದ ಅಬ್ಬರಿಸಿ ಬರುವ ಮಳೆಗೆ ಇಲ್ಲಿನ ಜನರು ಭಯಭೀತರಾದರೆ ನನಗೆ ನಮ್ಮೂರಿನ ಮಳೆಯ ಅನುಭವ. ಮಳೆಯ ಜತೆ ಅದೆಷ್ಟು ನೋವು, ನಲಿವುಗಳು ಅಂಟಿಕೊಂಡಿದೆ ಅಲ್ವಾ? ಮಳೆಯಲ್ಲಿ ಅಳುವುದು ನನಗಿಷ್ಟ, ನನ್ನ ಕಣ್ಣೀರು ಯಾರಿಗೂ ಕಾಣಿಸುವುದಿಲ್ಲವಲ್ಲಾ ಎಂದಾತ ಚಾರ್ಲಿ ಚಾಪ್ಲಿನ್. ಬದುಕಿನ ಹೋರಾಟದಲ್ಲಿ ನಿಸ್ಸಹಾಯಕಳಾದಾಗ ಅತ್ತು ಬಿಡುತ್ತೇನೆ. ಆವಾಗೆಲ್ಲಾ ಮಳೆ ಸುರಿಯಬಾರದೇ? ಎಂಬ ಪುಟ್ಟ ಪ್ರಾರ್ಥನೆಯೊಂದು ಮನಸ್ಸಲ್ಲಿರುತ್ತದೆ.
ವರುಷಗಳ ಹಿಂದೆ ನನ್ನ ಬದುಕನ್ನು ನಾನೇ ರೂಪಿಸಿಕೊಳ್ಬೇಕು ಎಂದು ಭಂಡ ಧೈರ್ಯದಿಂದ ಇಲ್ಲಿಗೆ ಬಂದಾಗ ಕನಸುಗಳ ಪಟ್ಟಿಯೂ ದೊಡ್ಡದಾಗಿತ್ತು. ಹರೆಯದ ಸೆಳೆತ, ಆಕರ್ಷಣೆಗೆ ಜತೆಯಾದ 'ಅವನೂ' ಇದೇ ಮಾಯಾನಗರಿಯಲ್ಲಿದ್ದ ಎಂಬ ಪುಳಕವೂ ಜತೆಗಿತ್ತು. ಆದರೆ ಮಾಯಾನಗರಿಯ ಥಳುಕು ಬಳುಕಲ್ಲಿ ಅವನು ಬದಲಾಗಿದ್ದ ಎಂಬುದನ್ನು ಅರಿಯಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ನನ್ನ ಮುಗ್ಧತೆ ಅವನಿಗೆ ಸಿಲ್ಲಿ ಅನಿಸಿದರೆ, ಮನಸ್ಸಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವಷ್ಟು ಸಮಯ ಅವನಲ್ಲಿರಲಿಲ್ಲ.
ಬ್ಯುಸಿ ಲೈಫಲ್ಲಿ ಎಲ್ಲವೂ ಮರೆತುಹೋಗುತ್ತೆ, ಎಲ್ಲವನ್ನೂ ಮರೆಯುವಂತೆ ಮಾಡುವ ಶಕ್ತಿ ಈ ಮಹಾನಗರಿಗೆ ಇದೆ ಎಂದು ಹೇಳಿ ಅವನು ಬ್ಯುಸಿಯಾಗಿಬಿಟ್ಟ. ಮಾತು ಮೌನದ ಮೊರೆ ಹೋದರೂ ಕಣ್ಣುಗಳು ಮಾತ್ರ ಅವನಿಗಾಗಿ ಹುಡುಕುತ್ತಿದ್ದವು. ಸದಾ ಗಿಜಿಗಿಡುವ ಮಹಾನಗರಿಯಲ್ಲಿ ನಾನು ಅಕ್ಷರಶಃ ಒಂಟಿಯಾಗಿದ್ದೆ. ಆ ಸಂಜೆ ಹೊತ್ತು ನನ್ನನ್ನು ಸಂತೈಸಿದ್ದು ಇದೇ ಮಳೆ. ಮಳೆಯೊಂದಿಗೆ ಕಣ್ಣೀರು ಕರಗುವ ಹೊತ್ತಲ್ಲಿ ಬದುಕು ಇಲ್ಲಿಗೇ ಮುಗಿಯುವುದಿಲ್ಲವಲ್ಲಾ ಎಂದು ಸ್ವಯಂ ಸಮಾಧಾನ ಹೇಳಿಕೊಂಡೆ. ಹೆಜ್ಜೆ ಹೆಜ್ಜೆಗೂ ಕಣ್ಣೀರು, ಮಳೆಯ ಸಾಂತ್ವನ ನನಗೆ ಸಾಥ್ ನೀಡಿತು.
ಅವನು ಹೇಳಿದ್ದು ನಿಜ, ಬ್ಯುಸಿ ಲೈಫ್ ಎಲ್ಲವನ್ನೂ ಮರೆಯುವಂತೆ ಮಾಡಿತ್ತು. ಆದರೆ ಅವನ ಪ್ರೀತಿಯ ನೆನಪೊಂದನ್ನು ಬಿಟ್ಟು. ಹಳೆಯದೆಲ್ಲಾ ನೆನಪಿಗೆ ಬಂದು ಒಂಟಿತನ ಕಾಡುವಾಗ ಮನಸ್ಸು ಊರಿನತ್ತ ಮರಳುವಂತೆ ಮಾಡುತ್ತದೆ. ಆದರೆ ಬದುಕು ಕಟ್ಟಿಕೊಟ್ಟ ಈ ಊರನ್ನು ಬಿಟ್ಟು ಮರಳಲು ಸಾಧ್ಯವಾಗುತ್ತಿಲ್ಲ.
ಬದುಕಿನ ಹಳೇ ಪುಟಗಳನ್ನು ತಿರುವಿ ನೋಡಿದಾಗ, ನಾನು ಬದಲಾಗಿದ್ದೇನೆ. ಇಲ್ಲಿ ಬಂದ ಮೇಲೆ ಬದುಕು ಎಷ್ಟೊಂದು ಬದಲಾಯಿತು ಅಲ್ವಾ? ಎಂದು ಅನಿಸುತ್ತಿದೆ. ಆದರೆ ಮರುಕ್ಷಣದಲ್ಲೇ ಕಾಡುವ ಒಂಟಿತನ ನನ್ನನ್ನು ಊರಿನತ್ತ ಸೆಳೆಯುತ್ತಿದೆ. ಮುಂದೇನು? ಎಂಬ ಪ್ರಶ್ನೆಗೆ ಸದ್ಯ ನನ್ನಲ್ಲಿ ಉತ್ತರವಿಲ್ಲ.
ಮುಸ್ಸಂಜೆಗೂ ಮೊದಲೇ ಈ ಮಳೆಯಲ್ಲಿ ಲೇಖನಿ ಬದಿಗಿಟ್ಟು ಖಾಲಿ ಹಾಳೆಯಿಂದ ಮಾಡಿದ ಪುಟ್ಟ ದೋಣಿ ತೇಲುವುದನ್ನು ನೋಡಿ ಖುಷಿ ಪಡುತ್ತಾ ನಿಂತಿದ್ದೇನೆ.
ಸಂಜೆ ಸುರಿಯಲಾರಂಭಿಸಿದ ಮಳೆ ಇನ್ನೂ ನಿಂತಿಲ್ಲ...
= ಇಬ್ಬನಿ
loveibbani@gmail.com