ಒಂದು ವಾರ ಊರಿನಿಂದ ರಜೆ ಮುಗಿಸಿ ಬಂದ ಮಾರನೇ ದಿನವೇ 'ಇಂಟರ್ನಲ್ಸ್ ಪರೀಕ್ಷೆಯಿತ್ತು. ನಿದ್ದೆಗೆಟ್ಟು ಓದುವುದು ಬದಿಗಿರಲಿ, ನಿದ್ದೆ ಬರುವ ವರೆಗೆ ಓದುವ ಜಾಯಮಾನ ನಮ್ಮದಲ್ಲ. ಹೇಗೂ ಪರೀಕ್ಷೆ 25 ಅಂಕದ್ದು, ಪಾಸ್ ಅಂತೂ ಆಗೇ ಆಗ್ತೀನಿ ಅನ್ನೋ ಓವರ್ ಕಾನ್ಪಿಡೆನ್ಸ್. ಪರೀಕ್ಷೆಯ ಪುಸ್ತಕವನ್ನು ಬೆಳಿಗ್ಗೆ ಓದೋಣ ಎಂದುಕೊಂಡು ನಿದ್ರೆಗೆ ಜಾರಿದೆ. ಆದರೆ ಬೆಳಿಗ್ಗೆ ಎಚ್ಚರವಾಗಿದ್ದು 8ಗಂಟೆಗೆ. ಹಾಳಾದ್ ನಿದ್ರೆಗೆ ಮಿತಿ ಬೇಡವೇ? ಎಂದು ನನ್ನನ್ನೇ ನಾ ಬೈದುಕೊಳ್ಳುತ್ತಾ ತರಾತುರಿಯಲ್ಲಿ ತಯಾರಾದೆ.
ಪ್ರಶ್ನೆ ಪತ್ರಿಕೆ ಕೈಗೆ ಬಂದ ಕೂಡಲೇ ಕರೆಂಟ್ ಶಾಕ್ ಹೊಡೆದಂತಾಯ್ತು. ಪ್ರಶ್ನೆ ಪತ್ರಿಕೆ ಕೊಟ್ಟಿರೋವ್ರು ಕೈಗೆ ಸಿಕ್ಕರೆ ಬಡಿದು ಸಾಯಿಸಿಬಿಡಬೇಕು ಎಂದೆನಿಸಿತು. ಪ್ರಶ್ನೆಯಲ್ಲಿರುವ ಒಂದು ಶಬ್ಧವೂ ಎಲ್ಲೂ ಕೇಳಿದಂತಿರಲಿಲ್ಲ. ಮಹಾಭಾರತ, ರಾಮಾಯಣ ಬರೆದರೆ, ಸೊನ್ನೆ ಸಿಗುವುದು ಖಚಿತ. ಅಕ್ಕ ಪಕ್ಕದ ಸ್ನೇಹಿತರು ಐ.ಎ.ಎಸ್. ಪರೀಕ್ಷೆಯಷ್ಟು ಸೀರಿಯಸ್ಸಾಗಿ ಒಂದು ಬಾರಿಯೂ ನನ್ನ ಕಡೆ ನೋಡದೇ ಬರೆಯುತ್ತಿದ್ದರು. ಮುಂದಿರುವ ಸ್ನೇಹಿತೆಯ ಬಳಿ ಏನಾದರೂ ಕೇಳೋಣವೆಂದರೆ, ಅಲ್ಲೇ ಶಾಶ್ವತ ಮೂರ್ತಿಯಂತೆ ಸೂಪರ್‌ವೈಸರ್ ನಿಂತು ದುರುದುರು ನೋಡುತ್ತಿದ್ದರು.
ಜೀವನದಲ್ಲಿ ಮೊದಲ ಬಾರಿಗೆ, ಹೇಗಾದ್ರೂ ಮಾಡಿ ಕಾಪಿ ಹೊಡಿಲೇಬೇಕು ಎಂದೆನಿಸಿತು. ಹಾಗೆ ಮಾಡದೆ ವಿಧಿಯಿಲ್ಲವೆಂದೂ ಮನಸ್ಸು ಆಗಾಗ ಹೇಳುತ್ತಿತ್ತು. ಕಾಪಿ ಹೇಗೆ ಹೊಡೆಯೋದು ಅಂತ ಯೋಚಿಸುತ್ತಲೇ 10 ನಿಮಿಷ ಕಳೆದಿತ್ತು. ಬಲಬದಿಗೆ ಕೂತವನೊಬ್ಬ ಸನ್ನೆ ಮಾಡುತ್ತಾ 3ನೇ ಪ್ರಶ್ನೆಗೆ ಯಾವ ಉತ್ತರ ಎಂದು ಕೇಳುತ್ತಿದ್ದ. ಒಂದೇ ಒಂದು ಪ್ರಶ್ನೆಗೂ ಉತ್ತರ ಗೊತ್ತಿಲ್ಲದ ನನಗೆ ಸಿಟ್ಟುಬಂತು.
ಕ್ಲಾಸಿನಲ್ಲಿ ಕೇಳಿದ್ದ ಪಾಠವೆಲ್ಲಾ ಕೈ ಕೊಟ್ಟಿತ್ತು. ಬದಿಗೆ ಇದ್ದವಳ ಪೇಪರ್‌ನಲ್ಲಿ ಏನಾದರೂ ಕಾಣಿಸುತ್ತೋ ಎಂದು ಕಣ್ಣು ಹಾಯಿಸಿದೆ. ಆದರೆ ಆಕೆಯೋ ಸೂಕ್ಷ್ಮದರ್ಶಕ ಹಾಕಿ ನೋಡುವಷ್ಟು ಚಿಕ್ಕದಾಗಿ ಬರೆಯುತ್ತಿದ್ದಳು. ಅದ್ಯಾಕೆ ಇಷ್ಟು ಚಿಕ್ಕದಾಗಿ ಬರೀತಾರೋ, ಪೇಪರ್ ಖಾಲಿಯಾದ್ರೆ ಅದು ಕಾಲೇಜಿಂದು ಅನ್ನೋ ಸಾಮಾನ್ಯ ಜ್ಞಾನವೂ ಇಲ್ಲ. ಕಂಜೂಸ್‌ಗಳು! ಎನ್ನುತ್ತಾ ಮುಂದೆ ನೋಡಿದಾಗ, 'ಡೂ ಯು ವಾಂಟ್ ಸಪ್ಲಿಮೆಂಟ್' ಎಂದು ಮತ್ತೆ ಸೂಪರ್‌ವೈಸರ್ ಕೇಳಿದ. ನಗಬೇಕೋ, ಅಳಬೇಕೋ ಗೊತ್ತಾಗದ ಪರಿಸ್ಥಿತಿ. 'ಇರೋ ಪೇಪರನ್ನೇ ವಾಪಸ್ ಕೊಡುವಷ್ಟು ಖಾಲಿಯಿದೆ, ಸುಮ್ನಿರಪ್ಪಾ!' ಎಂದು ಮನಸ್ಸಿನಲ್ಲೇ ಗೊಣಗಿಕೊಂಡೆ.
ಪರೀಕ್ಷೆ ಮುಗಿಯಲು 10 ನಿಮಿಷ ಇದ್ದಾಗ ಅದ್ಯಾವ ದಿವ್ಯಶಕ್ತಿ ಹೊಕ್ಕಿತೋ, ಒಂದು ಪ್ರಶ್ನೆಗೆ ಉತ್ತರ ಹೊಳೆದಿತ್ತು. ಅರ್ಧ ಉತ್ತರ ಬರೆಯೋದ್ರಲ್ಲಿ ಇನ್ನೊಂದು ಪ್ರಶ್ನೆಗೂ ಉತ್ತರ ಊಹಿಸಿದ್ದೆ. ನಾನು ಜೋರಾಗಿ ಬರೆಯುತ್ತಿರುವುದನ್ನು ನೋಡಿ, ಸೂಪರ್‌ವೈಸರ್ ಮತ್ತೆ ಬಳಿ ಬಂದು 'ಪೇಪರ್ ಮುಚ್ಕೊಂಡು ಬರೀರಿ, ಹಿಂದೆ ಕೂತವರು ನೋಡ್ಕೊಂಡು ಬರೀತಾರೆ' ಎಂದಾಗ, ಯಾಕೋ ಇದು ತುಂಬಾ ಕಾಮಿಡಿ ಅಂತ ಅನಿಸಿತು. ಬರೆದಿರೋ ಅರ್ಧ ಮರ್ಧ ಉತ್ತರ ಯಾರ್ ನೋಡ್ಕೊಂಡ್ ಬರೀತಾರೆ ಅನ್ನೋ ಸತ್ಯ ಅವರಿಗೆ ಗೊತ್ತಿಲ್ಲ. ಬರೀಯೋದನ್ನು ಚಂದವಾಗಿ ಬರೀಬೇಕು ಎಂದು ನಾಲ್ಕು ಸಾಲುಗಳಿಗಾದರೂ, ಕೆಳಗಡೆ ಗೆರೆಗಳನ್ನೆಲ್ಲಾ ಹಾಕಿದ್ದೆ. ಆಗಲೇ ಅನಿಸಿದ್ದು, ಪರೀಕ್ಷೇಲಿ ಕಾಪೀ ಹೊಡಿಯೋಕೂ ಬುದ್ದಿ ಬೇಕು, ಯಾವುದಾದ್ರೂ ಟ್ರೈನಿಂಗ್ ಇದ್ರೆ ಸೇರ್ಕೊಳ್ಳಬಹುದಿತ್ತು ಅಂತ ಅನ್ನಿಸಿದ್ದೂ ಹೌದು. ಹೆಂಗೆ ಕಾಫಿ ಹೊಡೀಲಿ ಅಂತ ಯೋಚಿಸ್ತಾ ಯೋಚಿಸ್ತಾನೇ, ಪರೀಕ್ಷೆ ಮುಗಿಯುವ ಗಂಟೆ ಹೊಡೆದಿತ್ತು. ಆವತ್ತೇ ನಿರ್ಧರಿಸಿಬಿಟ್ಟೆ, ಇನ್ಯಾವತ್ತೂ ಪರೀಕ್ಷೆಗೆ ಓದದೇ ಬರಬಾರದೆಂದು.
-ಪದ್ಮಾ ಭಟ್ ಇಡಗುಂದಿ
ಎಂ.ಸಿ.ಜೆ. ವಿಭಾಗ, ಎಸ್.ಡಿ.ಎಂ. ಕಾಲೇಜ್, ಉಜಿರೆ