ಎಷ್ಟಾದರೂ ಮನುಷ್ಯ. ನೆನಪುಗಳಿರುವುದು ತಪ್ಪಲ್ಲ. ಅವಳು ನಡೆಯುವ ದಾರಿಯುದ್ದಕ್ಕೂ ಕಳೆದ ದಿನಗಳ ನೆನಪುಗಳಿವೆ. ಎಷ್ಟಾದರೂ ನಟಿ. ಬರಿಯ ಮನುಷ್ಯಳಾದರೆ ಕಷ್ಟವಿರಲಿಲ್ಲ. ಕವಿತೆಯಂತಹ ಕೋಮಲತೆ ಅವಳ ಮೈಯಲ್ಲಿ ಆವರಿಸಿ ಜತೆಗೆ ಯೌವನವೂ ಕೂಡಿ ಎಲ್ಲವನ್ನೂ ಕಣ್ಣಲ್ಲೆ ಹೇಳುವ ಶಕ್ತಿಯನ್ನು ದೇವರು ಕೊಟ್ಟ ಮೇಲೆ ಅವಳ ತಪ್ಪಾದರೂ ಏನಿದೆ? ಹಳೆಯ ಮೊಹಲ್ಲಾಗಳಲ್ಲಿ ಹಾದು ಹೋದಾಗ ಮೊಹಲ್ಲಾಗಳು ಹಾಗೆಯೇ ಇರುವುದು, ಅಲ್ಲಿ ಪುಟ್ಟ ಮಕ್ಕಳು ಆಡುತ್ತಿರುವುದು, ಅವಳ ಬಾಲ್ಯದ ನೆನಪು ಅಗಾಧ ಕಾಡುವುದು, ಅವಳಿಗೆ ಮಾತ್ರವಲ್ಲ ವೀಕ್ಷಕರ ಕಣ್ಣನ್ನು ತೇವಗೊಳಿಸುವುದು. ಮುಸ್ಲಿಮಳಾಗಿ ಹುಟ್ಟಿ ಹಿಂದೂಗುರುವನ್ನು ಪಡೆದುದು ಅವಳ ತಪ್ಪೆಂದು ಯಾರಿಗೂ ಅನಿಸುವುದಿಲ್ಲ. ಭರತನಾಟ್ಯದ ಅನುರಕ್ತ ನಾಯಕಿಯಾಗಿ ನಾಯಕನಾದ ಮುರಲೀ ಮೋಹನನ ಮೇಲೆ ಅವಳಿಗೆ ಅಗಾಧ ಆರ್ತತೆ ಬಂದಿದೆ. ಅಲ್ಲಿಯ ನವಿಲು ಗರಿ ಅವಳ ಪುಸ್ತಕದ ಹಾಳೆಗಳಲ್ಲಿ ಬಾಲ್ಯದಲ್ಲಿ ಜೀವ ಪಡೆದುದೂ ಇದೆ. ಆದರೆ ಪರದೆಯೊಳಗಿನ ತುಮುಲ ಯಾವತ್ತೂ ಸಾಮಾನ್ಯವಲ್ಲ. ಅಡುಗೆ ಮನೆಯೊಳಗಿನ ಬೆಂಕಿ ಒಡಲಿನಲ್ಲಿ ಇಟ್ಟುಕೊಂಡು ಅವಳು ಎಷ್ಟೋ ಕತೆಗಳಲ್ಲಿ ನಾಯಕಿಯಾಗಿ ನಟಿಸಿದಳು. ಗುರುಗಳ ಸಮಾಧಿಯ ಭಾವಪರವಶಳಾಗಿ ನಿಂತ ಅವಳನ್ನು ನೋಡುವಾಗ ಯಾರಾದರೂ ಮನುಷ್ಯರೇ ಆದರೆ ಗದ್ಗದಿತರಾಗಲೇಬೇಕು. ದಾರಿಗಳನ್ನು ನೆನಪುಗಳನ್ನು ಸೃಷ್ಟಿಸಿದ ದೇವರು ಎಷ್ಟೋಂದು ಭಾವಜೀವಿಯಾಗಿದ್ದಾನೆ. ಬಾಲ್ಯದ ದಿನಗಳಿಗಾಗಿ ಹಪಹಪಿಸುವುದು ಎಲ್ಲರಂತೆ ಅವಳೂ ಅವಳಂತೆ ಎಲ್ಲರೂ ಸರಿಯೆ. ತಂದೆ ತಾಯಿ ಬಂಧು ಬಳಗ ಸ್ನೇಹಿತರು ಎಲ್ಲರೂ ಪಾತ್ರಧಾರಿಗಳಂತೆ ಕಾಣುವ ಜೀವನ ಚಲನಚಿತ್ರದಂತೆ ಸರಿದು ಹೋಗುವಾಗ ಅವಳ ಬದುಕು ಮತ್ತದೇ ಒಂಟಿ ಮೊಹಲ್ಲಾದಲ್ಲಿ ಮಸೀದಿಗಳ ದಾರಿಯಲ್ಲಿ ಪಾರಿವಾಳಗಳ ಗುಟುರುಗಳಲ್ಲಿ ಕಳೆದು ಹೋಗುವುದನ್ನು ನೋಡುವಾಗ ಜಾತಿಗೆ ಅದರದ್ದೇ ಆದ ಧರ್ಮವಿದೆ. ದುಃಖಕ್ಕೆ ನೆನಪುಗಳಿವೆ ಕಾರಣಗಳಾಗಿ ಅನಿಸಿದರೆ ತಪ್ಪಲ್ಲ. ಕಾಡುವ ಇವೆಲ್ಲವುಗಳಿಂದ ಅವಳು ತಪ್ಪಿಸಿಕೊಳ್ಳಲು ಅವಳು ಹಳಿಯ ಪಕ್ಕ ನಿಂತು ರೈಲು ಹೋಗುವ ರಭಸವನ್ನು ಗಮನಿಸುತ್ತಾಳೆ. ಹಾಗಿದ್ದರೆ ಆತ್ಮಹತ್ಯೆ ಅವಳ ಮನಸ್ಸಿನಲ್ಲಿ ಹಾದು ಹೋಗಿದೆಯೆ? ಹಾದು ಹೋದರು ಕೂಡ ಸಹಜ ಸಾವಿನ ಬಗ್ಗೆ ಅವಳಿಗೆ ಅಸಾಧಾರಣ ಗೌರವವಿದೆ ಎಂದು ಯಾತ್ರಿಕರ ಕಡೆ ಅವಳು ಕೈ ಬೀಸುವಾಗ ತಿಳಿಯುತ್ತದೆ. ಅವಳ ಕೂದಲೂ ಮುಖವನ್ನು ಮುಚ್ಚಿ ಗಾಳಿಯ ಜತೆ ತಾನೂ ಹಾರುತ್ತಿರುತ್ತದೆ.
-ಗುರುರಾಜ ಮಾರ್ಪಳ್ಳಿ