ಬೈಟುಕಾಫಿ

ಮಳೆ ನಿಂತ ಮೇಲೆ

Mainashree

ಮೊನ್ನೆ ಮೊನ್ನೆಯಷ್ಟೇ ಪ್ರೇಮಿಗಳ ದಿನ ಮುಗಿದಿದೆ. ಪ್ರೇಮಿಗಳು ತಮಗಿಷ್ಟದ ಚಿತ್ರದ ಹೀರೊ, ಹೀರೋಯಿನ್‌ಗಳನ್ನು ಅನುಕರಿಸಿ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ತೆರೆಯ ಮೇಲಿನ ಪ್ರೇಮಕಥಾನಕಗಳೇ ಇಂದಿಗೂ ಎಂದಿಗೂ ಪ್ರೇಮಿಗಳಿಗೆ ಆದರ್ಶ. ಇವೆಲ್ಲದರ ನಡುವೆ ತೆರೆಮರೆಯನ್ನೂ ಒಲುಮೆಯಲ್ಲಿ ಒಂದಾಗಿ ದಾಂಪತ್ಯದ ಸವಿಯುಣ್ಣುತ್ತಿರು ಹಲವು ಜೋಡಿಗಳಿವೆ. ಪ್ರೇಮದ ಬಗ್ಗೆ ಅವರ ಅಭಿಪ್ರಾಯವೇನೆಂದು ಕೆದಕಿ ಹೊರಟ ಬೈಟು ಕಾಫಿಗೆ ಕಂಡ ಪ್ರೇಮ ಕಾವ್ಯ ನಿತ್ಯ ನೂತನ.

ನಾಗಾಭರಣ- ನಾಗಿಣಿ
ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಟಿ.ಎಸ್. ನಾಗಾಭರಣರದ್ದು ಪ್ರೇಮ ವಿವಾಹ. ಇದು ಉದ್ಯಮದ ಹೊರಗಿರುವ ಬಹಳಷ್ಟು ಮಂದಿಗೆ ತಿಳಿದಿಲ್ಲದ ವಿಷಯ. ನಾಗಾಭರಣರ ಮನದನ್ನೆ ನಾಗಿಣಿ. ಬಹುಶಃ ಮದುವೆಯ ಬಳಿಕ ಹೆಸರು ಬದಲಿಸಿದ್ದಿರಬೇಕೆಂದು ಬಹಳಷ್ಟು ಮಂದಿಗೆ ಸಂಶಯ. ಆದರೆ ಆ ಹೆಸರು ಕೂಡ ಇವರ ಸಮಾನ ಮನಸ್ಸಿನಂತೆ ಸಮಾನತೆಯ ಒಂದಂಶ. 1978ರ ಡಿಸೆಂಬರ್ 10ರಂದು ವಿವಾಹಿತರಾದ ಇವರ ದಾಂಪತ್ಯಕ್ಕೆ 35ರ ಹೊಸ್ತಿಲು.  ಮಗ ಪನ್ನಗಾ ಮತ್ತು ಮಗಳು ಶ್ರುತ. ಬ್ಯಾಕ್ ಸ್ಟೇಜಿನಿಂದ ರಂಗಭೂಮಿಯ ಕೆಲಸವಾರಂಭಿಸಿದ ಇವರಿಬ್ಬರೂ ಈಗ ಕಲಾವಿದರಾಗಿಯೂ ಜನಪ್ರಿಯರು. ಇಂದಿಗೂ ಜೊತೆಯಾಗಿ ಕೆಲಸ ಮಾಡುವುದರ ನಡುವೆ ಅವರೊಳಗಿನ ಅನ್ಯೋನ್ಯತೆ ಕಂಡರೆ ಯುವ ಜೋಡಿಗಳೂ ಕರುಬುವಂತಿರುತ್ತದೆ. ಆದರೆ ವ್ಯಾಲೆಂಟೈನ್ ಡೇ ಆಚರಣೆಯ ಬಗ್ಗೆ ಇವರಿಗೆ ಆಸಕ್ತಿಯಿಲ್ಲ. ಹೋಳಿಯ ಬಣ್ಣದ ಮುಂದೆ ಪಾಶ್ಚಾತ್ಯರ ಕಮರ್ಷಿಯಲ್ ಅಂಧಾನುಕರಣೆ ಅನಗತ್ಯವೆನ್ನುತ್ತಾರೆ ನಾಗಾಭರಣ. ಆಚರಣೆಯ ಮೂಲಕ ಪ್ರೀತಿಯನ್ನು ಒಂದು ದಿನಕ್ಕಷ್ಟೇ ಸೀಮಿತಗೊಳಿಸದಿರಲು ನಾಗಿಣಿಭರಣ ಅಪೇಕ್ಷಿಸುತ್ತಾರೆ.

ಸುದರ್ಶನ್- ಶೈಲಶ್ರೀ
ತೆರೆಯಮೇಲೆ ಖಳನಾದರೂ ಬದುಕಿನಲ್ಲಿ ಆದರ್ಶವಾಗಿ ನಿಂತವರು ಆರ್.ಎನ್. ಸುದರ್ಶನ್. ಆರಂಭಕಾಲದಲ್ಲಿ ನಾಯಕನಾಗಿ ನಟಿಸುತ್ತಿದ್ದಾಗ ಪ್ರೀತಿಸಿದ್ದು ನಾಯಕಿ ಶೈಲಶ್ರೀಯವರನ್ನು. ಪರಸ್ಪರ ಒಪ್ಪಿಗೆಯಿದ್ದ ಮಾತ್ರಕ್ಕೆ ಅವಸರದಲ್ಲಿ ತಾಳಿಕಟ್ಟುವ ಕಾಲ ಅದಾಗಿರಲಿಲ್ಲ. ಸಮಸ್ಯೆಗಳೇನಿದ್ದರೂ ಅವನ್ನೆಲ್ಲ ಸಂಪೂರ್ಣವಾಗಿ ನಿವಾರಿಸಿಕೊಂಡು ಐದು ವರ್ಷದ ಬಳಿಕ ಸಂಭ್ರಮದಲ್ಲಿ ವಿವಾಹಿತರಾದರು. ನನ್ನ ಮಾತು, ಧೈರ್ಯ, ಬುದ್ಧಿವಂತಿಕೆ ಅವರಿಗೆ ಇಷ್ಟವಾಯಿತಂತೆ. ನನಗೆ ಅವರ ಗಂಭೀರತೆ ಮತ್ತು ಸೌಂದರ್ಯ ಇಷ್ಟವಾಯಿತೆಂದು ಮನಬಿಚ್ಚಿ ಹೇಳುತ್ತಾರೆ ಶೈಲಶ್ರೀ.
ನಿಜವಾದ ಪ್ರೀತಿ ಬದುಕಿನ ಕೊನೆಯ ಉಸಿರಿರುವ ತನಕವೂ ಇರುತ್ತದೆ ಎಂಬುದು ಸುದರ್ಶನ್ ಮಾತು. ದಿನಾಚರಣೆಯ ಹೆಸರಲ್ಲಿ ಪ್ರೀತಿಗೆ ಅವಮಾನವಾಗುವ ಘಟನೆ ನಡೆಯದಿದ್ದಲ್ಲಿ ನಿಜವಾದ ಪ್ರೇಮಿಗಳು ಖುಷಿಪಡುತ್ತಾರೆ ಎಂದು ಅವರು ಹೇಳುತ್ತಾರೆ. ಶೈಲಶ್ರೀಯವರ ಪ್ರಕಾರ ಪ್ರೀತಿ ಒಂದು ದಿನಕ್ಕಷ್ಟೇ ಸೀಮಿತವಲ್ಲ. 'ನನಗೆ ಲವ್ ಮ್ಯಾರೇಜ್‌ನಲ್ಲಿ ಆಸಕ್ತಿಯಿರಲಿಲ್ಲ. ಆದರೆ ಆಗುವಂತೆ ಪ್ರೇರೇಪಿಸುವಲ್ಲಿ ಅವರ ಮೇಲೆ ನನಗಿದ್ದ ವಿಶ್ವಾಸ ಪ್ರಮುಖ ಪಾತ್ರವಹಿಸಿತು' ಎಂದರು. 1973ರ ಆಗಸ್ಟ್ 3ರಂದು ವಿವಾಹಿತರಾದ ಇವರ ದಾಂಪತ್ಯಕ್ಕೆ ಈ ವರ್ಷ ನಾಲ್ಕು ದಶಕ ಪೂರೈಸುತ್ತದೆ. ಯುವ ಪ್ರೇಮಿಗಳು ಇವರಿಂದ ಕಲಿಯಬೇಕಾದ ಹಲವಾರು ಸಂಗತಿಗಳಿವೆ. ಪ್ರೀತಿಸಿ ಮದುವೆಯಾದರೂ ಇಲ್ಲದ ನೆಪವೊಡ್ಡಿ ಎರಡೇ ದಿನದಲ್ಲಿ ವಿಚ್ಛೇದನಕ್ಕೆ ಮುಂದಾಗುವವರಿದ್ದಾರೆ. ಆದರೆ ಮಕ್ಕಳಿಲ್ಲವೆಂಬುದು ಕೊರಗಾಗಿ ಕಾಡಿದರೂ ಇವರು ಅದಕ್ಕಾಗಿ ಪರಸ್ಪರ ಆಪಾದಿಸಿಕೊಳ್ಳಲಿಲ್ಲ. ತಮಗೆ ತಾವೇ ಮಕ್ಕಳಾಗಿ ಬಾಳುತ್ತಿದ್ದಾರೆ. ಇಳಿ ವಯಸ್ಸಿನಲ್ಲಿಯೂ ತಮ್ಮ ಪ್ರೇಮದ ದಿನಗಳನ್ನು ಮೆಲುಕು ಹಾಕಿಕೊಂಡು ಸ್ವಾಭಿಮಾನದಿಂದ ಬದುಕುತ್ತಿರುವ ಈ ಕಲಾದಂಪತಿ ನಿಜಕ್ಕೂ ಇಂದಿನ ಸಮುದಾಯಕ್ಕೆ ಆದರ್ಶ.

ವೀಣಾ ಸುಂದರ್

ಕಿರುತೆರೆಯ ನೈಜ ಜೋಡಿಗಳಲ್ಲಿ ವೀಣಾ ಮತ್ತು ಸುಂದರ್ ಪ್ರಮುಖರು. ಸೌಂದರ್ಯ ಮತ್ತು ನಟನೆಯಿಂದ ನೆನಪಿನಲ್ಲಿ ಉಳಿದಿರುವ ಕಲಾವಿದರು. ವೀಣಾರನ್ನು ಕಂಡ ಆರಂಭದಲ್ಲೇ ಸುಂದರ್ ಮದುವೆ ಪ್ರಪೋಸಲ್‌ನೊಂದಿಗೆ ಸಮೀಪಿಸಿದ್ದರಂತೆ. ಆಗಿನ್ನೂ ವಿದ್ಯಾರ್ಜನೆ ನಡೆಸುತ್ತಿದ್ದ ವೀಣಾ, ಮದುವೆಯ ಬಗ್ಗೆ ಅಷ್ಟೊಂದು ಆಸಕ್ತಿ ಹೊಂದಿರಲಿಲ್ಲವಂತೆ. ಆದರೆ ಸುಂದರ್‌ರ ಬಗ್ಗೆ ಹೆಚ್ಚು ತಿಳಿದಾಗ, ಮುಖ್ಯವಾಗಿ ಅವರ ಸಹನಶೀಲತೆ ಕಂಡಾಗ ಮದುವೆಯಾಗುವುದೇ ಉತ್ತಮವೆನಿಸಿತಂತೆ. ಆ ಅನಿಸಿಕೆ ಇಂದಿಗೂ ಸರಿಯಾಗಿ ಉಳಿಸಿಕೊಂಡಿದ್ದಾರೆ. ಇನ್ನು ಸುಂದರ್ ಪ್ರಕಾರ ಯಾವುದನ್ನೂ ಮುಂದಾಲೋಚನೆ ಮಾಡಿ ನಿರ್ಧರಿಸುವ ಮತ್ತು ಆ ಬಳಿಕ ಆತ್ಮ ವಿಶ್ವಾಸದಿಂದ ಮುನ್ನುಗ್ಗುವ ವೀಣಾರ ಗುಣವೇ ಪ್ರಥಮ ಆಕರ್ಷಣೆಯಾಗಿತ್ತೆಂದರು. 1997 ಜೂನ್8ರಂದು ವಿವಾಹಿತರಾದ ಇವರಿಗೆ ಅಭಿಜ್ಞಾ ಮತ್ತು ಅನರ್ಘ್ಯ ಎಂಬ ಇಬ್ಬರು ಮಕ್ಕಳಿದ್ದಾರೆ. ಮದುವೆಗೆ ಮೊದಲು ತಾವು ಕೂಡ ಪ್ರೇಮಿಗಳ ದಿನದಲ್ಲಿ ಸರಳವಾಗಿ ಸಂಭ್ರಮಿಸಿದ್ದಿದೆ. ಆದರೆ ಇಂದು ಆಚರಣೆಗೆ ಒಂದು ನೆಪ ಹುಡುಕುವ ವಾಣಿಜ್ಯ ಪ್ರಪಂಚದ ಸೋಗಿಗೆ ಮಾರುಹೋದ ಯುವಜನಾಂಗ ವ್ಯಾಲೆಂಟೈನ್ ಡೇ ಹೆಸರಿನಲ್ಲಿ ಅದರ ದುರ್ಬಳಕೆ ಮಾಡುವಂತಾಗುತ್ತಿರುವುದು ದುರಂತ ಎನ್ನುತ್ತಾರೆ ಸುಂದರ್. ಆಚರಣೆಗಿಂತ ಜೋಡಿಗಳ ನಡುವಿನ ನಂಬಿಕೆ ಮುಖ್ಯ ಎನ್ನುವ ವೀಣಾರದ್ದೂ ಅದೇ ಅಭಿಪ್ರಾಯ.

- ಶಶಿಕರ ಪಾತೂರು

SCROLL FOR NEXT