ಆನೆ ಜೋಡಿಯ ಪ್ರಣಯ
ಪ್ರಣಯಾವೇಶ, ಪ್ರೇಮನಿವೇದನೆ, ಸರಸಸಲ್ಲಾಪಗಳು ಬರಿಯ ಮಾನವರ ಸೊತ್ತೇ? ಹಾಗೇನೂ ಇಲ್ಲ. ನಮ್ಮ ಸುತ್ತಮುತ್ತಲೇ, ಸಾಕುಪ್ರಾಣಿಗಳ, ಹಕ್ಕಿಗಳ ಬೆದೆಕಾಲದ ಮಿಡಿತಗಳು ಪ್ರತಿನಿತ್ಯವೆಂಬಂತೆ ನಮಗೆ ಕಾಣುತ್ತಿರುತ್ತವೆ. ಮನುಷ್ಯ ಪ್ರಣಯಾಸಕ್ತಿಯನ್ನು ಹೇಗೆ ಬಗೆಬಗೆಯಾಗಿ ವ್ಯಕ್ತಪಡಿಸಬಲ್ಲನೋ, ಹಾಗೆಯೇ ಪ್ರಾಣಿಗಳೂ ತೋರಿಸಬಲ್ಲವು. ಇಲ್ಲಿರುವ ಸೊಗಸಾದ ಪದ್ಯ ಭವಭೂತಿಯ 'ಉತ್ತರರಾಮಚರಿತ' ನಾಟಕದ್ದು. ಬೆದೆಗೆ ಬಂದ ಎರಡು ಆನೆಗಳು ವರ್ತಿಸುವ ರೀತಿಯನ್ನು ಇದು ವರ್ಣಿಸಿದೆ.
ಲೀಲೋತ್ಖಾತಮೃಣಾಲಕಾಂಡಕವಲಚ್ಛೇದೇಷು ಸಂಪಾದಿತಾಃ
ಪುಷ್ಯತ್ ಪುಷ್ಕರವಾಸಿತಸ್ಯ ಪಯಸೋ ಗಂಡೂಷಸಂಕ್ರಾಂತಯಃ
ಸೇಕಃ ಸೀಕರಿಣಾ ಕರೇಣ ವಿಹಿತಃ ಕಾಮಂ ವಿರಾಮೇಪುನ
ರ್ಯತ್ ಸ್ನೇಹಾದನರಾಲನಾಲನಲಿನೀಪದ್ಮಾತಪತ್ರಂ ಧೃತಮ್
ಗಂಡಾನೆ, ಹೆಣ್ಣಾನೆಯ ಸುತ್ತಮುತ್ತ ಸುಳಿಯುತ್ತಿದೆ. ಕಮಲಪುಷ್ಪಗಳ ದಂಟನ್ನು ಕಿತ್ತು ಹೆಣ್ಣಿಗೆ ಜಗಿಯಲು ಕೊಡುತ್ತಿದೆ. ತಾವೆರ ದಳಗಳಿಂದ ಸುವಾಸಿತವಾದ ನೀರನ್ನು ತಾನೇ ಎತ್ತಿ ಪ್ರಿಯತಮೆಗೆ ಕುಡಿಯಲು ಕೊಡುತ್ತಿದೆ. ಬಿಸಿಲಿನ ಬೇಗೆಯಿಂದ ಬೆಂದ ಹೆಣ್ಣಿನ ಮೈಗೆ ತಾನೇ ಸೊಂಡಿಲಿಂದೆತ್ತಿ ನೀರನ್ನು ಸುರಿದು ತಣಿಸುತ್ತಿದೆ. ಸಾಕಾಗಲಿಲ್ಲವೋ ಏನೋ ಎಂದುಕೊಂಡು, ತಾವರೆಯ ದೊಡ್ಡ ಎಲೆಯನ್ನು ದಂಟು ಸಮೇತ ಕಿತ್ತು ಕೊಡೆಯಂತೆ ಹೆಣ್ಣಿಗೆ ನೆರಳಾಗಿ ಹಿಡಿಯುತ್ತಿದೆ!
ಗಂಡಾನೆ ಇಷ್ಟೆಲ್ಲಾ ಮಾಡುತ್ತಿದ್ದರೂ ಹೆಣ್ಣಾನೆ ಅದಕ್ಕೆಲ್ಲ ಮನಸೋಲದವರ ಥರ ನಾಟಕ ಮಾಡುತ್ತಿತ್ತೆಂಬುದರಲ್ಲಿ ನಮಗೆ ಸಂಶಯವಿಲ್ಲ. ನಖರಾ ಮಾಡುವುದು ಹೆಣ್ಣಿನ ಸಹಜ ಗುಣ ತಾನೆ!
-ಹರಿಹರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.