ಸಾಪ್ತಾಹಿಕಪ್ರಭ

ಕಠಿಣ ಮಾತೇ ಅಸ್ತ್ರ ರಾಜನಾಥ ಸಿಂಗ್

ಉತ್ತರ ಪ್ರದೇಶದ ಚಂದ್ರೌಳಿ ಜಿಲ್ಲೆಯ ಬಭೋರಾ ಗ್ರಾಮದಲ್ಲಿ ಅರವತ್ತೆರಡು ವರ್ಷಗಳ ಹಿಂದೆ ಒಂದು ರಜಪೂತ ರೈತ ಕುಟುಂಬದಲ್ಲಿ ಹುಟ್ಟಿದ ರಾಜನಾಥ ಸಿಂಗ್, ಉತ್ತರ ಪ್ರದೇಶದ ರಾಜ್ಯದಲ್ಲಿ, ಕೇಂದ್ರದಲ್ಲಿ, ರಾಜಕೀಯಸ್ಥರಿಗೆ ಲಭ್ಯವಿರುವ ಎಲ್ಲ ಸ್ಥಾನಗಳಲ್ಲಿ (ಪ್ರಧಾನಿ ಪೀಠವನ್ನು ಬಿಟ್ಟು) ಕೆಲಸ ಮಾಡಿದ ಅನುಭವವನ್ನು ಹೊಂದಿರುವ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು
ಅವರು ವೃತ್ತಿಯಲ್ಲಿ ಶಿಕ್ಷಕರು. ಎಂಎಸ್ಸಿ ಪದವೀಧರರಾಗಿ, ಮಿರ್ಜಾಪುರದ ಕಾಲೇಜಿನಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿದ್ದರು. ಶಿಕ್ಷಣ ಅವರ ವೃತ್ತಿಯಾದರೂ, ಪ್ರವೃತ್ತಿ ರಾಜಕೀಯವೇ. ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಭಾವ ಅವರ ಮೇಲೆ ದಟ್ಟವಾಗಿ ಬಿದ್ದಿತ್ತು. ಮಿರ್ಜಾಪುರದಲ್ಲಿ, ಕಾಲೇಜಿನಲ್ಲಿರುವಾಗಲೇ ಜಿಲ್ಲಾ ಜನಸಂಘದ ಅಧ್ಯಕ್ಷರೂ ಆಗಿದ್ದರು. ಅಲ್ಲಿಂದಲೇ ವಿಧಾನಸಭೆಯ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾದಾಗ, ಶಿಕ್ಷಣ ಕ್ಷೇತ್ರದಿಂದ ದೂರವಾಗಿ ರಾಜಕೀಯವನ್ನೇ ತಮ್ಮ ಪೂರ್ಣಾವಧಿ ಉದ್ಯೋಗವನ್ನಾಗಿ ಮಾಡಿಕೊಂಡರು. ಸಂಘ ಪರಿವಾರದ ನಿಷ್ಠಾವಂತ ವ್ಯಕ್ತಿ ರಾಜನಾಥ ಸಿಂಗ್.
ಉತ್ತರ ಪ್ರದೇಶದಲ್ಲಿ ಶಾಸಕ, ಅನಂತರ ಪಕ್ಷ ಅಧಿಕಾರಕ್ಕೆ ಬಂದ ಕಾಲದಲ್ಲಿ ಮಂತ್ರಿ, ಮುಖ್ಯಮಂತ್ರಿ, ಅದಾದ ಮೇಲೆ ಲೋಕಸಭೆ ಸದಸ್ಯ, ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ.
ಮಿರ್ಜಾಪುರದ ಜಿಲ್ಲಾ ಸಮಿತಿಯ ಅಧ್ಯಕ್ಷ, ಉತ್ತರ ಪ್ರದೇಶದ ಅಧ್ಯಕ್ಷರಾಗಿ ಕೆಲಸ ಮಾಡಿದ ಅನಂತರ, ಆಡ್ವಾಣಿಯವರು ದಿಢೀರನೆ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಕೊಟ್ಟಾಗ ರಾಜನಾಥ ಸಿಂಗ್ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷರೂ ಆದರು. ಆ ಸಮಯದಲ್ಲಿ ಬಿಜೆಪಿ ಹಲವು ರಾಜ್ಯಗಳಲ್ಲಿ ಸೋತಿತು. ಕೇಂದ್ರದಲ್ಲೂ ಅಧಿಕಾರಕ್ಕೆ ಬರಲಿಲ್ಲ. ಸಹಜ ರಾಜಕೀಯ ನ್ಯಾಯದಂತೆ ರಾಜನಾಥ ಸಿಂಗ್ ಆ ಸ್ಥಾನಕ್ಕೆ ರಾಜಿನಾಮೆ ನೀಡಿದರು.
ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ ಅನಂತರ ರಾಜನಾಥ ಸಿಂಗ್ ಹೆಚ್ಚು ಉತ್ತರ ಪ್ರದೇಶದ ರಾಜಕೀಯಲ್ಲೇ ಕಾಲ ಕಳೆದರೂ, ನಿತಿನ್ ಗಡ್ಕರಿ ಅವರಿಗೆ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಕಾರಣಾಂತರಗಳಿಂದ ಸಿಗದೇ ಹೋದಾಗ, ಸಂಘ ಪರಿವಾರಕ್ಕೆ ಬಿಜೆಪಿಯನ್ನು ರಾಷ್ಟ್ರಮಟ್ಟದಲ್ಲಿ ಮುನ್ನಡೆಸಲು ಅರ್ಹ ವ್ಯಕ್ತಿ ಎಂದು ಕಂಡು ಬಂದಿದ್ದು ರಾಜನಾಥ ಸಿಂಗ್ ಅವರೇ.
ಸಾಮಾನ್ಯವಾಗಿ ಹಿಂದಿಯಲ್ಲೇ ಮಾತನಾಡುವ ರಾಜನಾಥ ಸಿಂಗ್ ನಗುವುದು ಕಡಿಮೆ. ಮಾತನಾಡುವುದೂ ಕಡಿಮೆ. ಆದರೆ ಏನನ್ನು ಹೇಳಿದರೂ ಸ್ಪಷ್ಟವಾಗಿ, ಪೂರಕ ಪ್ರಶ್ನೆಗೆ ಅವಕಾಶವೇ ಇಲ್ಲದಂತೆ ಖಡಕ್ಕಾಗಿ ಗಟ್ಟಿ ದನಿಯಲ್ಲೇ ಹೇಳುತ್ತಾರೆ. ಅಲ್ಲಿ ದ್ವಂದಾರ್ಥಕ್ಕೆ ಅವಕಾಶವೇ ಇಲ್ಲ.
ಈಗಲೂ 'ಅಯೋಧ್ಯೆಯಲ್ಲಿ ಗುರ್ತಿಸಲಾಗಿರುವ' ರಾಮಜನ್ಮ ಸ್ಥಾನದಲ್ಲೇ ರಾಮಮಂದಿರವನ್ನು ನಿರ್ಮಿಸಲೇಬೇಕೆನ್ನುವುದಕ್ಕೆ ರಾಜನಾಥ ಸಿಂಗ್ ಬದ್ಧ. ಅಂತಹ ಕಾಲ ಬಂದೇ ಬರುತ್ತೆ ಎಂದೇ ಅವರು ಭಾವಿಸಿರುವಂತಿದೆ.
ಪಕ್ಷದಲ್ಲಿ ಶಿಸ್ತನ್ನು ಕಾಪಾಡುವುದರಲ್ಲಿ ಅವರು ಯಾವುದಕ್ಕೂ ಹಿಂದೆ ಮುಂದೆ ನೋಡುವುದಿಲ್ಲ. ಕರ್ನಾಟಕದಲ್ಲೇ ಯಡಿಯೂರಪ್ಪ ಅವರು ಮುಖ್ಯಮಂತ್ರಿಯ ಸ್ಥಾನವನ್ನು ಬಿಡಬೇಕೆಂದು ಪಕ್ಷದ ಹಿರಿಯರು (ಅವರೂ ಸೇರಿದಂತೆ) ನಿರ್ಧರಿಸಿದಾಗ, ಹಿಂದೆ-ಮುಂದೆ ನೋಡದೇ ಐದು ಗಂಟೆಯ ಗಡುವನ್ನು ವಿಧಿಸಿದ್ದೂ ರಾಜನಾಥ ಸಿಂಗ್ ಅವರೇ.
ಈಗ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಹಂಚುವಾಗಲೂ ಅದೇ ರೀತಿ ಕಡ್ಡಿ ಮುರಿದರೆ ತುಂಡಾದಂತೆಯೇ ಮಾತನಾಡುತ್ತಿದ್ದಾರೆ.  ಯಡಿಯೂರಪ್ಪ ಅವರ ಬಂಡಾಯ, ಬಳ್ಳಾರಿ ಸೀಮೆಯಲ್ಲಿ ಪಕ್ಷದ ಮೇಲೆ ಭದ್ರವಾದ ಹಿಡಿತವನ್ನು ಸಾಧಿಸಿದ್ದ ರೆಡ್ಡಿ ಗಣಿಧಣಿಗಳ ನಿರ್ಗಮನ, ಭ್ರಷ್ಟಾಚಾರದ ಆರೋಪಗಳು, ಜಾತಿ ಜಾತಿಗಳ ಜಗಳಗಳ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ದೊಡ್ಡ ರೀತಿಯಲ್ಲಿ ಗೆಲ್ಲುವ ವಿಶ್ವಾಸ ಇಲ್ಲ. ಅದು ರಾಜನಾಥ ಸಿಂಗ್ ಅವರಿಗೂ ಗೊತ್ತು.
ಆದರೆ ಗೆದ್ದರೂ ಗೆಲ್ಲಬಹುದೇನೋ ಎಂಬ ಆಸೆ ಅವರಲ್ಲೂ ಇದ್ದಂತಿದೆ. ಆದರೂ ಅವರು ಈಗ ಜಪಿಸುತ್ತಿರುವ ಮಂತ್ರ ಎಂದರೆ ಕರ್ನಾಟಕದಲ್ಲಿ ಪಕ್ಷ ಸೋತರೂ, ಹೆಸರು ಕೆಡಿಸಿಕೊಳ್ಳಬಾರದು. ಅಧಿಕಾರ ಸಿಗದಿದ್ದರೂ ಪರವಾಗಿಲ್ಲ ಭ್ರಷ್ಟಾಚಾರ, ಅನಾಚಾರ, ಅತ್ಯಾಚಾರಗಳ ಆರೋಪದಲ್ಲಿ ಸಿಕ್ಕಿ ಬೀಳಬಾರದು.
ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಕೂಡಲೇ ರಾಜನಾಥ ಸಿಂಗ್ ಅವರ ಮುಂದೆ ದೊಡ್ಡ ರೀತಿಯಲ್ಲಿ ಬಂದು ನಿಂತ ಸಮಸ್ಯೆ ರಾಷ್ಟ್ರೀಯ ಕಾರ್ಯಕಾರಿಣಿ, ಪದಾಧಿಕಾರಿಗಳು, ಸಂಸದೀಯ ಮಂಡಳಿಗಳ ರಚನೆ. ಬಿಜೆಪಿಯಲ್ಲಿ ಯಾರೇ ಅಧ್ಯಕ್ಷರಾಗಿರಲಿ, ಅವರ ಪಾಲಿಗೆ ಈ ಸ್ಥಾನಗಳಿಗೆ ಸೂಕ್ತವ್ಯಕ್ತಿಗಳನ್ನು ಆರಿಸುವುದು ಒಂದು ದೊಡ್ಡ ಸವಾಲೇ.
ರಾಜನಾಥ ಸಿಂಗ್, ರಾಷ್ಟ್ರೀಯ ಮಟ್ಟದಲ್ಲಿ ಸಮಿತಿಗಳ ರಚನೆಯಲ್ಲಿ ತೊಡಗಿದ್ದಾಗಲೇ ಅಕ್ಟೋಬರ್- ನವಂಬರ್‌ನಲ್ಲೇ ಲೋಕಸಭೆ ಚುನಾವಣೆ ನಡೆಯುವ ಸಂಭವ ಕುರಿತ ವದಂತಿ ಆಧರಿತ ವರದಿಗಳ ಭರಾಟೆ ಆರಂಭವಾಗಿತ್ತು. ಒಂದು ರೀತಿಯಲ್ಲಿ ಮತ್ತೆ ರಾಜನಾಥ ಸಿಂಗ್ ಪರ್ವಕಾಲದ ಅಧ್ಯಕ್ಷರಾಗಿ ಪರಿವರ್ತನೆಯಾಗಲೇಬೇಕಾಯಿತು.
 ಭಾರತೀಯ ಜನತಾ ಪಾರ್ಟಿಯಲ್ಲಿ ರಾಜನಾಥ ಸಿಂಗ್ ರಚಿಸಿರುವ ಸಮಿತಿಗಳ ವಿಚಾರದಲ್ಲಿ ಎಷ್ಟರ ಮಟ್ಟಿಗೆ ವಿವಾದ ಇದೆಯೋ ಗೊತ್ತಿಲ್ಲ. ಆದರೆ ಆ ಪಟ್ಟಿ ಮಾಧ್ಯಮ ಪ್ರಪಂಚದಲ್ಲಿ ಸುಂಟರಗಾಳಿಯನ್ನೇ ಸೃಷ್ಟಿಸಿದ್ದು ನಿಜ.
ನಿಜ ರಾಜಕಾರಣದಲ್ಲಿ ತೊಡಗಿರುವವರಿಗಿಂತಲೂ ಹೆಚ್ಚಾಗಿ ಮಾಧ್ಯಮ ಪ್ರಪಂಚದ ಅತಿರಥ- ಮಹಾರಥರು ನರೇಂದ್ರ ಮೋದಿ ಅವರ ರಾಜಕೀಯ ಮೌಲ್ಯಮಾಪನದಲ್ಲಿ ವಿಪರೀತವಾಗಿ ಧ್ರುವೀಕರಣಕ್ಕೆ ಒಳಗಾಗಿದ್ದಾರೆ. ಪ್ರಾಯಶಃ ಇಡೀ ದೇಶದಲ್ಲಿ ಈ ಪ್ರಮಾಣದ ರಾಜಕೀಯ ವಾದ- ವಿವಾದವನ್ನು ಸೃಷ್ಟಿಸಿದ ಇನ್ನೊಬ್ಬ ಪ್ರಾದೇಶಿಕ ನಾಯಕ ಇಲ್ಲ.
ರಾಜನಾಥ ಸಿಂಗ್ ನರೇಂದ್ರ ಮೋದಿ ಅವರನ್ನು ಕೇಂದ್ರ ಸಂಸದೀಯ ಮಂಡಳಿಯ ಸದಸ್ಯರನ್ನಾಗಿ ನೇಮಿಸಿದಾಗ ಪ್ರಕಟವಾದ ವರದಿಗಳು ಜಗಳದ ರೂಪದಲ್ಲೇ ಇದ್ದವು. ಟಿ.ವಿ. ಸುದ್ದಿ ನಿರೂಪಕರಂತೂ, ಮೋದಿ ಪರ- ವಿರೋಧಿ ಹೋರಾಟದ ದಂಡನಾಯಕರಂತೆಯೇ ವರ್ತಿಸಿದರು. ಅದು ಈಗಲೂ ನಿಂತಿಲ್ಲ.
ಮೋದಿ ಅವರನ್ನು ಆ ಮಂಡಳಿಗೆ ನೇಮಿಸಿದ್ದಕ್ಕೆ ರಾಜನಾಥ ಸಿಂಗ್ ಕೊಟ್ಟ ಸರಳ ಸಮಾಧಾನ; ನರೇಂದ್ರ ಮೋದಿ ಈಗ ಪಕ್ಷದ ಅತಿ ಹಿರಿಯ ಹಾಗೂ ಜನಪ್ರಿಯ ಮುಖ್ಯಮಂತ್ರಿ. ಅಂತಹ ಉತ್ತರವನ್ನು ಮೆಚ್ಚುವುದೂ ಕಷ್ಟ- ತೆಗಳುವುದೂ ಕಷ್ಟ.
ಮಾಧ್ಯಮ ಪ್ರಪಂಚದಲ್ಲಿ ಈ ಸಂಬಂಧದಲ್ಲಿ ವಿಪರೀತ ಚರ್ಚೆಗೆ ಗುರಿಯಾಗಿದ್ದ ಇನ್ನೆರಡು ಹೆಸರುಗಳು: ಯಶವಂತ ಸಿನ್ಹಾ, ಜಸವಂತ ಸಿಂಗ್. ಅದಕ್ಕೂ ಅವರದ್ದು ಸರಳವಾದ ಉತ್ತರವೇ: ಅವರು ಹಿಂದೆಯೂ ಇರಲಿಲ್ಲ, ಈಗಲೂ ಇಲ್ಲ (ಸಂಸದೀಯ ಮಂಡಳಿಯಲ್ಲಿ). ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿದ್ದರು. ಈಗಲೂ ಇದ್ದಾರೆ.
ರಾಜನಾಥ ಸಿಂಗ್ ಅವರ ಮುಂದೆ ಇರುವ ಸಮಸ್ಯೆಗಳು ಹಲವಾರು. ಅದರಲ್ಲಿ ಪ್ರಮುಖವಾದದ್ದು ಆರು ದೊಡ್ಡ ರಾಜ್ಯಗಳಲ್ಲಿ ಬಿಜೆಪಿ ಬಾವುಟ ಹಾರಾಡುವ ಗುಡಿಸಲೂ ಇಲ್ಲವಾಗಿರುವುದು. ಅಲ್ಲಿ ಪಕ್ಷಕ್ಕೆ ವಿಶ್ವಾಸಾರ್ಹ ಸಂಗಾತಿಗಳು ಸಿಕ್ಕರೆ ಬಿಜೆಪಿ ಅದೃಷ್ಟಶಾಲಿ. ಸಂಗಾತಿಗಳನ್ನು ಹುಡುಕುವ ಕೆಲಸ ರಾಜನಾಥ ಸಿಂಗ್ ಅವರದ್ದು.

-ಸತ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ