ಸಾಪ್ತಾಹಿಕಪ್ರಭ

'ಶಾಂತ' ಸಾಗರದ ಕತೆಗಳು

ಶಾಂತಾದೇವಿ ಕಣವಿಯವರು ತಮ್ಮ ಮೊದಲ ಕತೆಯನ್ನು ಬರೆದದ್ದು 1958ರಲ್ಲಿ. ಅಲ್ಲಿಂದ ಇಲ್ಲಿಗೆ ಸರಿಸುಮಾರು ಐವತ್ತೈದು ವರ್ಷಗಳೇ ಕಳೆದುಹೋಗಿವೆ. ಈ ನಡುವೆ ಅವರು ಬರೆದು ಪ್ರಕಟಿಸಿದ ಕಥಾಸಂಕಲನಗಳು ಏಳು. ಕಥಾ ಸಂಕಲನದಲ್ಲಿ ಬಾರದೆ ಇರುವ ಕೆಲವು ಕತೆಗಳನ್ನು ಸೇರಿಸಿದರೆ ನೂರಹತ್ತರಷ್ಟು ಕತೆಗಳನ್ನು ಶಾಂತಾದೇವಿಯವರು ಬರೆದಿರುವರು. ಹೆಚ್ಚೂಕಡಿಮೆ ವರ್ಷಕ್ಕೆ ಎರಡು ಕತೆಗಳಂತೆ ಅನ್ನಿ.
ಶಾಂತಾದೇವಿ ಕಣವಿಯವರ ಈ ವರೆಗಿನ ಎಲ್ಲ ಕತೆಗಳನ್ನು ಸೇರಿಸಿ ಸಮಗ್ರ ಸಂಪುಟವನ್ನು ಬೆಂಗಳೂರಿನ ಸಪ್ನ ಬುಕ್ ಹೌಸ್ ಹೊರತಂದಿದೆ. ಅವರಿಗೆ ಸರಿಯಾದ ವಿಮರ್ಶೆಯ ನ್ಯಾಯವನ್ನು ಒದಗಿಸುವ ರೀತಿಯಲ್ಲಿ ಗಿರಡ್ಡಿ ಗೋವಿಂದರಾಜ್ ಅವರು ಸವಿಸ್ತಾರವಾದ ಮುನ್ನುಡಿ ಬರೆದಿರುವರು. ಕಣವಿ ಕತೆಗಳ ಅಧ್ಯಯನಕ್ಕೆ ಇದೊಂದು ಪ್ರವೇಶಿಕೆಯಾಗಿದೆ.
ಶಾಂತಾದೇವಿ ಕಣವಿಯವರ ಕತೆಗಳನ್ನು ಓದಿದಾಗ ಅದರಲ್ಲಿ ನಿಮಗೆ ಒಂದು ಕತೆಯನ್ನು ಓದಿದ ತೃಪ್ತಿ ಸಿಗುತ್ತದೆ. ಯಾವುದೇ ಕತೆಗೆ ಇರಬೇಕಾದ ಕನಿಷ್ಠ ಅರ್ಹತೆ ಅದು. ಅವರು ಕುಟುಂಬಗಳ ಬಗ್ಗೆ ಇರುವ ಸಾಂಪ್ರದಾಯಿಕ ಮೌಲ್ಯಗಳ ಪ್ರತಿಪಾದನೆ ಮಾಡುತ್ತಾರೆ. ಸಹನೆ, ಹೊಂದಾಣಿಕೆಯನ್ನು ಅವರು ಬೀಜಮಂತ್ರವಾಗಿ ಹೇಳುತ್ತಾರೆ. ಕತೆಯಲ್ಲಿ ಅವರು ಸೂಚಿಸುವ ಪರಿಹಾರ ಸರ್ವಸಮ್ಮತವಲ್ಲದೆ ಇರಬಹುದು. ಆದರೆ ಅದೂ ಒಂದು ಮಾರ್ಗ ಎಂಬುದನ್ನು ಒಪ್ಪಲೇಬೇಕಾಗುತ್ತದೆ. ಸ್ವಾತಂತ್ರ್ಯ ಹೋರಾಟ ಮತ್ತು ಸ್ವಾತಂತ್ರ್ಯ ದೊರೆತ ಸಂಭ್ರಮದ ಸಮಯದ ತಲೆಮಾರಿನಲ್ಲಿ ಜನಿಸಿ ಬಾಲ್ಯವನ್ನು ಕಳೆದ ಅವರಿಗೆ ಸಹಜವಾಗಿಯೇ ಸನಾತನ ಧರ್ಮದ ಮೌಲ್ಯಗಳು ಪ್ರತಿಪಾದನೆಗೆ ಯೋಗ್ಯವಾಗಿ ಕಂಡವು.
ಉತ್ತರ ಕರ್ನಾಟಕದ ಧಾರವಾಡ ಸೀಮೆಯ ಗ್ರಾಮೀಣ ಭಾಷೆಯ ಸೊಗಡು ಅವರ ಕತೆಗಳಲ್ಲಿದೆ. ಯಾವುದೋ ಅಮೂರ್ತವಾದ ಸಿದ್ಧಾಂತವನ್ನು ಅವರು ತಮ್ಮ ಕತೆಗಳಲ್ಲಿ ಹೇಳಲು ತೊಡಗುವುದಿಲ್ಲ. ಕತೆಗೊಂದು ಆರಂಭ, ಮಧ್ಯ ಮತ್ತು ಅಂತ್ಯಗಳು ಎಂಬ ಸಾಂಪ್ರದಾಯಿಕ ರಚನೆ. ಪುರುಷಪ್ರಧಾನವಾದ ನಮ್ಮ ಕೌಟುಂಬಿಕ ವ್ಯವಸ್ಥೆಯಲ್ಲಿ ಹೆಣ್ಣಿನ ತೊಳಲಾಟ ಅವರ ಸಂವೇದನಾಶೀಲ ಮನಸ್ಸನ್ನು ತಾಕಿದೆ. ಇದನ್ನು ಅವರು ಉತ್ಕಟವೆನ್ನಿಸುವ ಹಾಗೆ ಚಿತ್ರಿಸುತ್ತಾರೆ. ಗ್ರಾಮೀಣ ಮಹಿಳೆಯ ಚಿತ್ರಣ ಇದ್ದಾಗ ಈ ಮಾತು ಹೆಚ್ಚು ಸತ್ಯವೆನಿಸುತ್ತದೆ.
ಶಾಂತಾದೇವಿ ಕಣವಿಯವರು ತೆರೆದಿಡುವ ಇನ್ನೊಂದು ಪ್ರಪಂಚ, ಸುಶಿಕ್ಷಿತ ಮಧ್ಯಮ ವರ್ಗದ ಮಹಿಳೆ. ಇಲ್ಲಿಯೂ ಕುಟುಂಬದ ಸೂತ್ರ ಹರಿಯದಿರಲು ಸಹನೆಯನ್ನೇ ಅವರು ಪ್ರತಿಪಾದಿಸುತ್ತಾರೆ. ಇಲ್ಲಿ ದೈಹಿಕ ಹಿಂಸೆಗಿಂತ ಮಹಿಳೆ ಮಾನಸಿಕ ಹಿಂಸೆಗೆ ಗುರಿಯಾಗುವುದನ್ನು ಅವರು ಚಿತ್ರಿಸುತ್ತಾರೆ. ತನ್ನ ಸ್ವಾತಂತ್ರ್ಯದ ಹೆಜ್ಜೆಯಿಂದ ಕುಟುಂಬ ವ್ಯವಸ್ಥೆ ಮುರಿದುಬಿದ್ದು ಅದರಿಂದ ತನ್ನ ಮಕ್ಕಳ ಸ್ಥಿತಿ ಹಾಳಾಗಬಾರದು ಎಂಬುದು ಸ್ತ್ರೀವಾದಿ ಚಿಂತನೆಯು ಪ್ರಖರವಾಗಿರುವ ಇಂದಿನ ಕಾಲದಲ್ಲಿಯೂ ಮಹಿಳೆಯ ಅಂತರ್ಯದಲ್ಲಿರುವ ಭಾವ. ಶಾಂತಾದೇವಿ ಕಣವಿಯವರೂ ಅದನ್ನೇ ಪ್ರತಿಪಾದಿಸಿದ್ದಾರೆ. ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಅವರಿಗೆ ಅಪಾರವಾದ ಶ್ರದ್ಧೆ ಇದೆ. ಇದನ್ನು ಅವರ ಎಲ್ಲ ಕತೆಗಳ ಅಂತಃಪ್ರವಾಹ ಎನ್ನಬಹುದು.
ಕುಟುಂಬ ವ್ಯವಸ್ಥೆಯ ಎಲ್ಲ ಬಿರುಕುಗಳಿಗೂ ಗಂಡೇ ಕಾರಣವೆ? ಹೆಣ್ಣಿನ ತಪ್ಪಿನಿಂದ ಗಂಡೂ ಪೇಚಿಗಿಟ್ಟುಕೊಳ್ಳುವುದಿಲ್ಲವೆ? ಗಂಡಿನ ದೃಷ್ಟಿಯಿಂದ ಶಾಂತಾದೇವಿ ಕಣವಿಯವರ ಪಾತ್ರಗಳು ಪರಿಪೂರ್ಣವಲ್ಲವೇನೋ ಅನ್ನಿಸುವುದು. ಹೆಣ್ಣಿನ ಒಳತೋಟಿಯನ್ನು ತೀವ್ರವಾಗಿ ದಾಖಲಿಸುವ ಶಾಂತಾದೇವಿಯವರು ಕುಟುಂಬ ವ್ಯವಸ್ಥೆ ಉಳಿದು ಬರಲು ಹೆಣ್ಣಿಗೆ ತಾಳ್ಮೆ ಬೇಕು ಎಂಬುದನ್ನು ಪ್ರತಿಪಾದಿಸುತ್ತಾರೆ. ಅವರ ಒಟ್ಟೂ ಆಶಯ ಮಾತ್ರ ಗಂಡುಹೆಣ್ಣು ಕೂಡಿ ಬಾಳಿದರೆ ಸ್ವರ್ಗಸುಖ ಎನ್ನುವುದೇ ಆಗಿದೆ.
ಶಾಂತಾದೇವಿ ಕಣವಿಯವರು ತಮ್ಮ ಕತೆಗಳನ್ನು ಬರೆಯಲು ಆರಂಭಿಸಿದಾಗ ಪ್ರಗತಿಶೀಲರ ಅಬ್ಬರ ಮತ್ತು ನವ್ಯದವರ ಜೋರು ಅತಿಯಾಗಿತ್ತು. ನವೋದಯ ಕಾಲದ ಮಾಸ್ತಿಯವರ ಮೌಲ್ಯ ಪ್ರತಿಪಾದನೆಯ ಕತೆಗಳು ತಮ್ಮದೇ ಒಂದು ಮಾರ್ಗವನ್ನು ಸ್ಥಾಪಿಸಿದ್ದವು. ಶಾಂತಾದೇವಿ ಕಣವಿಯವರ ಸಮಕಾಲೀನರಾದ ಶಾಂತಾದೇವಿ ಮಾಳವಾಡ, ಗೀತಾ ನಾಗಭೂಷಣ, ಗೀತಾ ಕುಲಕರ್ಣಿ, ತ್ರಿವೇಣಿ ಮೊದಲಾದವರು ಸಶಕ್ತ ಕತೆಗಳನ್ನು ಬರೆದರು. ಇವರೆಲ್ಲ ಸೇರಿ ಮಹಿಳೆಯರ ಪ್ರಾತಿನಿಧ್ಯವನ್ನು ಸರಿಯಾಗಿಯೇ ಪ್ರತಿಪಾದಿಸಿದ್ದರು. ಶಾಂತಾದೇವಿ ಕಣವಿಯವರಿಗೆ ಮಾಸ್ತಿಯವರ ಮಾರ್ಗವೇ ಪ್ರಿಯವಾದಂತೆ ತೋರುತ್ತದೆ.
'ನಮ್ಮ ಸಮಾಜದಲ್ಲಿ ಹೆಣ್ಣು ಎದುರಿಸುತ್ತಿರುವ ಸಮಸ್ಯೆಗಳು ಅವರಿಗೆ ತೀವ್ರ ಆಸ್ಥೆಯ ವಿಷಯಗಳಾಗಿವೆ. ಇಂದಿನ ಸಾಮಾಜಿಕ ಸಂದರ್ಭದಲ್ಲಿ ಮಹಿಳೆಯರನ್ನು ಕುರಿತ ಎಲ್ಲ ಗಂಭೀರ ಬರಹಗಳಲ್ಲಿಯೂ ಪ್ರತಿಭಟನೆ ಅನಿವಾರ್ಯವಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಇವರ ಕಥೆಗಳಲ್ಲಿ ಅದು ಘೋಷಣೆಯ ಸರಳ ರೂಪವನ್ನು ತಾಳುವುದಿಲ್ಲ... ಮಾಸ್ತಿ ಸಂಪ್ರದಾಯದ ಮುಖ್ಯ ಗುಣವಾದ ವಸ್ತುನಿಷ್ಠತೆ ಶಾಂತಾದೇವಿಯವರ ಕಥನದ ಗುಣವೂ ಆಗಿದೆ' ಎಂಬ ಮಾತನ್ನು ಡಾ.ಜಿ.ಎಸ್. ಆಮೂರ ಹೇಳಿದ್ದಾರೆ.
'ಮಹಿಳೆಯಲ್ಲಾದ ವಿಚಾರಕ್ರಾಂತಿ, ದೃಷ್ಟಿ ವೈಶಾಲ್ಯ, ಹಿಮ್ಮೆಟ್ಟುತ್ತಿರುವ ಗೋಡೆ, ಅಂಗಳು, ದಿಗಂತಗಳು- ಇವುಗಳಿಗೆ ಈ ಕಥೆಗಳೇ ಸಾಕ್ಷಿ' ಎಂಬ ಮಾತನ್ನು ಡಾ. ಶಂಕರ ಮೊಕಾಶಿ ಪುಣೇಕರ ಹೇಳಿದ್ದಾರೆ.
'ಯಾವ ತತ್ವವಾಗಲಿ, ಆದರ್ಶವಾಗಲಿ, ಅಮೂರ್ತವಾಗಿ ಎಷ್ಟೇ ಅಪೇಕ್ಷಣೀಯವಾಗಲಿ, ಬಾಳಿನ ಸಂದರ್ಭದಲ್ಲಿ ಅದಕ್ಕೆ ಮಾನವೀಯತೆಯ ಸ್ಪರ್ಶ ಆಗಲೇಬೇಕೆಂಬ ತಿಳಿವಳಿಕೆ ಎಲ್ಲ ಕಥೆಗಳನ್ನು ನಡೆಸುತ್ತದೆ' ಎಂಬ ಮಾತನ್ನು ಪ್ರೊ. ಎಲ್.ಎಸ್. ಶೇಷಗಿರಿರಾವ್ ಹೇಳಿದ್ದಾರೆ.
ಇಂಥ ವಿಮರ್ಶೆಯ ಮಾತುಗಳಿದ್ದರೂ ಉಳಿದ ಲೇಖಕಿಯರ ಹಾಗೆಯೇ ಶಾಂತಾದೇವಿ ಕಣವಿಯವರೂ ವಿಮರ್ಶಕರ ಅವಗಣನೆಗೆ ತುತ್ತಾದವರೇ. ಅವರಿಗೆ ಸಲ್ಲಬೇಕಿದ್ದ ನ್ಯಾಯಯುತ ವಿಮರ್ಶೆ ನಡೆದಿಲ್ಲ. ಒಂದೋ ಎರಡೋ ಬಿಟ್ಟರೆ ಇವರ ಕತೆಗಳು ಯಾವುದೇ ಪ್ರಾತಿನಿಧಿಕ ಸಂಕಲನಗಳಲ್ಲಿ ಸೇರ್ಪಡೆಯಾಗಿಲ್ಲ. ಸೃಜನಶೀಲ ಲೇಖಕಿಯರ ಹಾಗೆ ವಿಮರ್ಶಕಿಯರ ಒಂದು ಒಂದು ಬಲವಾದ ಪಡೆಯೇ ರೂಪುತಳೆಯಬೇಕಾದ ಅಗತ್ಯ ಕಂಡುಬರುತ್ತಿದೆ.
ಶಾಂತಾದೇವಿ ಕಣವಿಯವರು ಕನ್ನಡದ ಹಿರಿಯ ಕವಿ ಚೆನ್ನವೀರ ಕಣವಿಯವರ ಪತ್ನಿ. ಚೆನ್ನವೀರ ಕಣವಿಯವರು ಸಮನ್ವಯ ಕವಿಯೆಂದು ಪ್ರಸಿದ್ಧರಾದವರು. ಪತಿಯ ಕಾವ್ಯ ಧೋರಣೆ ಪತ್ನಿಯ ಕಥಾರಚನೆಯ ಮೇಲೆ ಪ್ರಭಾವ ಬೀರಿರಬಹುದು. ಇದು ಒಂದು ಆಸಕ್ತಿದಾಯಕ ಅಧ್ಯಯನದ ವಿಷಯವಾಗಿದೆ. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಶಾಂತಾದೇವಿ ಕಣವಿಯವರ ಸ್ಥಾನವೇನು? ಉಳಿದ ಲೇಖಕಿಯರಿಂದ ಅವರು ಎಲ್ಲಿ ಭಿನ್ನವಾಗಿ ನಿಲ್ಲುತ್ತಾರೆ? ಅವರ ಕತೆಗಳನ್ನು ಬೇರೆ ಯಾವ ಯಾವ ಮಾನದಂಡಗಳಿಂದ ಅಳೆಯಬಹುದು ಇತ್ಯಾದಿಗಳ ಕುರಿತು ನಾಡಿನ ವಿಮರ್ಶಕರು ಚರ್ಚಿಸಬೇಕು. ಅವರ ಗಮನ ಸೆಳೆಯಲಷ್ಟೆ ಈ ಬರೆಹ.ಟಿ



ಕೃತಿ:ಕಥಾಮಂಜರಿ
ಪ್ರಕಾರ: ಶಾಂತಾದೇವಿ ಕಣವಿ-ಇದುವರೆಗಿನ ಕತೆಗಳು
ಏಕೆ ಓದಬೇಕು?: ಓದಿನ ಖುಷಿಗೆ
ಪ್ರ: ಸಪ್ನ ಬುಕ್‌ಹೌಸ್, ಬೆಂಗಳೂರು,
ಪುಟಗಳು 652 (ಎ5)
ಬೆಲೆ ರು.   550

----------


ಖಲಿಲ್ ಜಿಬ್ರಾನ್
ಖಲಿಲ್ ಜಿಬ್ರಾನ್ ಬಹುಮುಖ ಪ್ರತಿಭೆಯ ದಾರ್ಶನಿಕ, ಕವಿ, ಚಿತ್ರಕಾರ ಎಲ್ಲ ಆಗಿದ್ದ. ತಂದೆ ಕಹಲಿಲ್, ತಾಯಿ ಕಮಿಲಾ. ಅವರು ಕ್ರೈಸ್ತರು. ತಾಯಿಯು 1895ರಲ್ಲಿ ಜಿಬ್ರಾನ್‌ನೊಂದಿಗೆ ಅಮೆರಿಕದ ಬೋಸ್ಟನ್‌ಗೆ ವಲಸೆ ಹೋಗುತ್ತಾಳೆ. ಖಲಿಲ್‌ನ ಮೂಲ ಹೆಸರು ತಂದೆಯ ಹೆಸರಾದ ಕಹಲಿಲ್ ಎಂದೇ ಆಗಿತ್ತು. ಬೋಸ್ಟನ್‌ನಲ್ಲಿ ಶಾಲೆಗೆ ಹಚ್ಚುವಾಗ ತಪ್ಪಾಗಿ ಖಲಿಲ್ ಎಂದು ನಮೂದಿಸಿದ್ದು ಆ ಹೆಸರಿನಲ್ಲಿಯೇ ಆತ ಮುಂದೆ ಪ್ರಸಿದ್ಧನಾಗುತ್ತಾನೆ. 17ನೇ ವಯಸ್ಸಿಗೇ ಆತ ಚಿತ್ರಕಲೆಯಲ್ಲಿ ಪರಿಣತ. ಜಿಬ್ರಾನ್ ತಾಯಿಯ ಆಸೆಯಂತೆ ಲೆಬನಾನ್‌ನ ರಾಜಧಾನಿ ಬಿರುಟ್‌ಗೆ ಬಂದು ಕಾಲೇಜು ಸೇರುತ್ತಾನೆ. ಅರಬ್ಬಿ ಭಾಷೆಯಲ್ಲಿ ಪಾರಂಗತನಾಗುತ್ತಾನೆ. ಜಿಬ್ರಾನ್ ಕ್ರಾಂತಿಕಾರಿ ಲೇಖನಗಳನ್ನು ಬರೆದು ಚರ್ಚ್‌ನಿಂದ ಬಹಿಷ್ಕೃತನಾಗುತ್ತಾನೆ. ಆತನ ಪ್ರಸಿದ್ಧ ಕೃತಿ 'ಪ್ರವಾದಿ'. ಬದುಕು ಸಾವುಗಳ ಬಗ್ಗೆ ತೀವ್ರ ಅನುಭಾವದಿಂದ ಬರೆದಿದ್ದಾನೆ. ಇದು 30ಕ್ಕೂ ಅಧಿಕ ಭಾಷೆಗಳಿಗೆ ತರ್ಜುಮೆಗೊಂಡಿದೆ. ಈ ಕೃತಿಯನ್ನು ಮಹಿಪಾಲ ದೇಸಾಯಿಯವರು ಕನ್ನಡಕ್ಕೆ ಅನುವಾದಿಸಿರುವರು. ಕೃತಿಯಲ್ಲಿ ಜಿಬ್ರಾನ್‌ನ ಚಿತ್ರಗಳನ್ನು ಸಾಂದರ್ಭಿಕವಾಗಿ ಬಳಸಿಕೊಳ್ಳಲಾಗಿದೆ.



ಕೃತಿ: ಪ್ರವಾದಿ
ಪ್ರಕಾರ: ಅನುವಾದ
ಏಕೆ ಓದಬೇಕು?: ಜಿಬ್ರಾನ್‌ನನ್ನು ಅರಿಯಲು
ಪ್ರ: ಕಾಮಧೇನು ಪುಸ್ತಕ ಭವನ, ಬೆಂಗಳೂರು, ಪುಟಗಳು 162 ಬೆಲೆ ರು.   150

---------------
ನಗೆ ನವಿಲು
ಹಲವು ರೋಗಗಳಿಗೆ ನಗುವಿನ ಥೆರಪಿ ಇದೆ. ಒತ್ತಡದ ಇಂದಿನ ಬದುಕಿನಲ್ಲಿ ಹಲವರು ನಗುವುದನ್ನೇ ಮರೆತವರಂತೆ ಇದ್ದಾರೆ. ಅಂಥವರು ಡಾ. ಜ್ಯೋತ್ಸ್ನಾ ಕೃಷ್ಣಾನಂದ ಕಾಮತ್ ಅವರ 'ನಗೆ ನವಿಲು'- ಲಘು ಲೇಖನ, ಹರಟೆ, ನಗೆ ಬರೆಹಗಳ ಸಂಕಲನವನ್ನು ಒಮ್ಮೆ ಓದಲೇಬೇಕು. ಇದರಲ್ಲಿ ನಗೆಯುಕ್ಕಿಸುವ 17 ಬರೆಹಗಳಿವೆ. ಇದು ಲೇಖಕಿಯ ನಾಲ್ಕನೆಯ ಹಾಸ್ಯ ಪ್ರಬಂಧಗಳ ಸಂಕಲನ. ಜ್ಯೋತ್ಸ್ನಾ ಅವರಿಗೆ ಹಾಸ್ಯ ಬರೆವಣಿಗೆಯ ಶೈಲಿ ಸಿದ್ಧಿಸಿದೆ. ದೈನಂದಿನ ವ್ಯವಹಾರದಲ್ಲಿಯ ಹಾಸ್ಯಮಯ ಪ್ರಸಂಗಗಳನ್ನೇ ಅವರು ಎತ್ತಿಕೊಳ್ಳುತ್ತಾರೆ. ಇದನ್ನು ಓದಿದಾಗ ನಿಮ್ಮ ಬದುಕಿನಲ್ಲಿಯೂ ಇಂಥ ಘಟನೆಗಳು ಜರುಗಿದ್ದು ನೆನಪಿಗೆ ಬಂದು ಅದರ ಜೊತೆ ಇದೂ ಸೇರಿ ಓದಿನ ಸ್ವಾರಸ್ಯ ತುಂಬಾನೆ ಅಧಿಕಗೊಳ್ಳಬಹುದು. ಹಾಸ್ಯ ಪ್ರಸಂಗಗಳನ್ನು ಇತರರೊಂದಿಗೆ ಹಂಚಿಕೊಂಡಾಗಷ್ಟೇ ಅದರ ಸ್ವಾರಸ್ಯ ಹೆಚ್ಚುವುದು. ಸಾಮಾನ್ಯ ಜ್ಞಾನವನ್ನೂ ಹೆಚ್ಚಿಸುವ ಈ ಕೃತಿಯನ್ನು ನೀವೂ ಓದಿ, ಇತರರಿಗೂ ಹೇಳಿ.


ಕೃತಿ: ನಗೆ ನವಿಲು
ಪ್ರಕಾರ: ಹಾಸ್ಯ ಬರೆಹ
ಏಕೆ ಓದಬೇಕು?: ನಕ್ಕು ಹಗುರಾಗುವುದಕ್ಕೆ
ಪ್ರ: ನವಕರ್ನಾಟಕ ಪ್ರಕಾಶನ, ಬೆಂಗಳೂರು, ಪುಟಗಳು 88 ಬೆಲೆ ರು.   55

------------------
ಧ್ಯಾನಿ ವೈದೇಹಿ
ನಮ್ಮ ಸಮಕಾಲೀನ ಲೇಖಕಿಯರಲ್ಲಿ ಭಾವ ತೀವ್ರತೆಯೊಂದಿಗೆ ಬರೆಯುತ್ತಿರುವವರಲ್ಲಿ ವೈದೇಹಿ ಒಬ್ಬರು. ಲಂಕೇಶ ಪತ್ರಿಕೆಯ ಮೂಲಕ ಬರೆಹಗಾರ್ತಿಯಾಗಿ ಬೆಳಕಿಗೆ ಬಂದ ಅವರು ಇಂದು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮ ಹೆಜ್ಜೆ ಮೂಡಿಸಿದ್ದಾರೆ. ಲಂಕೇಶದಲ್ಲಿನ ಅವರ ಆರಂಭದ ಬರೆಹಗಳ ಸಂಕಲನ 1996ರಲ್ಲಿಯೇ 'ಮಲ್ಲಿನಾಥನ ಧ್ಯಾನ' ಹೆಸರಿನಲ್ಲಿ ಪ್ರಕಟವಾಗಿತ್ತು. ಇದೀಗ ಅದರ ಎರಡನೆಯ ಮುದ್ರಣ ಬಂದಿದೆ. ಇಲ್ಲಿಯ ಬರೆಹಗಳನ್ನು ಓದಿದಾಗ ಅಪ್ರಯತ್ನಪೂರ್ವಕವಾಗಿ ಬರೆದವುಗಳ ಹಾಗೆ ಕಾಣುತ್ತದೆ. ಯಾವುದನ್ನೂ ಅವರು ತಿಣುಕಾಡಿ ಹೇಳಿಲ್ಲ. ತಮಗೆತಾವೇ ಅಂದುಕೊಳ್ಳುವಂತೆ ನಿಧಾನವೇ ಅವರ ಶೈಲಿ. ಅದು ಎಷ್ಟು ಆಪ್ತವಾಗುತ್ತದೆ ಎಂದರೆ ಮತ್ತೊಮ್ಮೆ ಓದಬೇಕೆಂಬ ಹುಕಿಯನ್ನು ನಿಮ್ಮಲ್ಲಿ ಹುಟ್ಟುಹಾಕುತ್ತದೆ. ಅನುಭವಗಳ ಸರಳ ನಿರೂಪಣೆಯ ಜೊತೆಗೇ ಕೊನೆಯಲ್ಲಿ ಒಂದು ಗಹನವಾದ ಸಂದೇಶವೊಂದನ್ನು ಅವರು ನಿಮ್ಮ ಉಡಿಯಲ್ಲಿ ಹಾಕಿಬಿಡುತ್ತಾರೆ. ಅದೇ ವೈದೇಹಿಯವರ ಶಕ್ತಿ.    



ಕೃತಿ: ಮಲ್ಲಿನಾಥನ ಧ್ಯಾನ
ಪ್ರಕಾರ: ಅಂಕಣ ಬರೆಹ
ಏಕೆ ಓದಬೇಕು?:
ಓದುವ ಖುಷಿಗಾಗಿ
ಪ್ರ: ವಸಂತ ಪ್ರಕಾಶನ,
ಬೆಂಗಳೂರು,
ಪುಟಗಳು 304 ಬೆಲೆ ರು.   180

---------------

ಕುವೆಂಪು ವಿಮರ್ಶೆ
ಕನ್ನಡ ಸಾಹಿತ್ಯದ ಅಚ್ಚರಿಗಳಲ್ಲೊಂದು ಕುವೆಂಪು. ಹೊಸಗನ್ನಡ ಸಾಹಿತ್ಯಕ್ಕೆ ಮಾರ್ಗ ನಿರ್ದೇಶನ ಮಾಡಿದವರಲ್ಲಿ ಅವರು ಪ್ರಮುಖರು. ಅವರ ಕೃತಿಗಳ ಮೇಲೆ ದೊಡ್ಡ ಪ್ರಮಾಣದಲ್ಲಿಯೇ ವಿಮರ್ಶೆಗಳು ಬಂದಿವೆ. ಅವರ ಹತ್ತು ಕೃತಿಗಳ ಬಗ್ಗೆ ಬಂದಿರುವ ವಿಮರ್ಶೆಯನ್ನು ಜಿ.ಎಸ್. ಭಟ್ಟ ಅವರು ಇಲ್ಲಿ ಸಂಪಾದಿಸಿಕೊಟ್ಟಿದ್ದಾರೆ. ಅದಕ್ಕೆ ಒಂದು ವಿವರವಾದ ಪ್ರಸ್ತಾವನೆಯನ್ನೂ ಅವರು ಬರೆದಿರುವರು. ಕುವೆಂಪು ವ್ಯಕ್ತಿಚಿತ್ರವನ್ನು ಎಚ್ಚೆಸ್ಕೆ ನೀಡಿರುವರು. ಶ್ರೀರಾಮಾಯಣ ದಶನಂ - ಡಾ. ಪ್ರಧಾನ್ ಗುರುದತ್ತ, ಬೆರಳ್ಗೆ ಕೊರಳ್- ಡಾ.ಪ್ರಭುಶಂಕರ, ಕೋಗಿಲೆ ಮತ್ತು ಸೋವಿಯೆಟ್ ರಷ್ಯಾ- ದೇಜಗೌ, ಮಲೆಗಳಲ್ಲಿ ಮದುಮಗಳು- ಪ್ರೊ.ಎಚ್.ಎಂ. ಚನ್ನಯ್ಯ, ಚಿತ್ರಾಂಗದಾ- ಪ್ರೊ.ಪ.ವಿ. ಚಂದ್ರಶೇಖರ್, ಕಾನೂರು ಹೆಗ್ಗಡತಿ- ಪ್ರೊ.ಕೆ.ಎಸ್. ಭಗವಾನ್, ಶ್ಮಶಾನ ಕುರುಕ್ಷೇತ್ರಂ- ಡಾ.ಸಿಪಿಕೆ, ಚಂದ್ರಹಾಸ- ಡಾ.ಜಿ.ಟಿ. ನಾರಾಯಣರಾವ್ ಮತ್ತು ರಕ್ತಾಕ್ಷಿ ಕುರಿತು ಡಾ. ಮಳಲಿ ವಸಂತಕುಮಾರ್ ವಿಮರ್ಶೆ ಬರೆದಿರುವರು. ಕುವೆಂಪು ಅಭ್ಯಾಸಿಗಳಿಗೆ ಉಪಯುಕ್ತ ಕೃತಿ ಇದು.



ಕೃತಿ: ಕುವೆಂಪು ಅವರ ಹತ್ತು ಕೃತಿಗಳು
ಪ್ರಕಾರ: ವಿಮರ್ಶೆ
ಏಕೆ ಓದಬೇಕು?: ಕುವೆಂಪು ಅರಿಯಲು
ಪ್ರ: ತನು ಮನು ಪ್ರಕಾಶನ, ಮೈಸೂರು, ಪುಟಗಳು 208 ಬೆಲೆ ರು.   130
-------------

ಸಾಹಿತ್ಯ ಸಂಭ್ರಮಕ್ಕೆ ಪ್ರತಿಕ್ರಿಯೆ
ಜೈಪುರ ಸಾಹಿತ್ಯ ಉತ್ಸವದ ಮಾದರಿಯಲ್ಲಿ ಇತ್ತೀಚೆಗೆ ಧಾರವಾಡದಲ್ಲಿ 'ಧಾರವಾಡ ಸಾಹಿತ್ಯ ಸಂಭ್ರಮ'ವೊಂದು ನಡೆಯಿತು. ಅಲ್ಲಿಯ ಮನೋಹರ ಗ್ರಂಥ ಮಾಲೆಯು ಸರ್ಕಾರದ ನೆರವು ಪಡೆದು ಏರ್ಪಡಿಸಿದ್ದ ಈ ಸಾಹಿತ್ಯ ಸಂಭ್ರಮಕ್ಕೆ ಸಾಹಿತ್ಯಾಸಕ್ತರಿಗೆ ಮುಕ್ತ ಪ್ರವೇಶವಿರಲಿಲ್ಲ. 3 ದಿನದ ಈ ಸಮ್ಮೇಳನದಲ್ಲಿ ಭಾಗವಹಿಸುವವರು ರು.   1500 ಪ್ರತಿನಿಧಿ ಶುಲ್ಕ ಪಾವತಿಸಬೇಕಿತ್ತು. (ಅದನ್ನು ನಂತರ ರು.   500ಕ್ಕೆ ಇಳಿಸಿದರಂತೆ.) ಅಲ್ಲದೆ ಸಾಹಿತ್ಯ ಸಂಭ್ರಮದ ಕೆಲವು ನಿಬಂಧನೆಗಳಲ್ಲಿ, ಪ್ರತಿನಿಧಿಗಳು ಮದ್ಯಪಾನ ಮಾಡಬಾರದು, ಚಾಕು ಚೂರಿಯಂಥ ಹರಿತವಾದ ಆಯುಧಗಳನ್ನು ತರಬಾರದು, ಮಧ್ಯೆಮಧ್ಯೆ ಪ್ರಶ್ನೆಗಳನ್ನು ಕೇಳಬಾರದು ಪ್ರಮುಖವಾದವು. ಇಂಥ ಸಾಹಿತ್ಯ ಸಂಭ್ರಮದಲ್ಲಿ ಜನಪರವಾದ ಯಾವ ವಿಷಯವೂ ಇರಲಿಲ್ಲ ಎಂಬ ಆರೋಪ ಕೇಳಿಬಂತು. ಇದಕ್ಕೆ ಪರ್ಯಾಯವಾಗಿ ಬೇರೆ ಸಮ್ಮೇಳನ ನಡೆಸಬೇಕು ಎಂಬ ಮಾತೂ ಕೇಳಿಬಂದಿತ್ತು. ಧಾರವಾಡ ಸಾಹಿತ್ಯ ಸಂಭ್ರಮಕ್ಕೆ ನಾಡಿನ ಹಿರಿಯ ಚಿಂತಕರು ಪ್ರತಿಕ್ರಿಯಿಸಿದ್ದಾರೆ. ಅದನ್ನು ದೊಣೆಹಳ್ಳಿ ಗುರುಮೂರ್ತಿ ಸಂಪಾದಿಸಿದ್ದಾರೆ. ಇದೊಂದು ಸಾಂಸ್ಕೃತಿಕ ದಾಖಲೆಯಾಗಿ ಉಳಿಯಲಿದೆ.
ಕೃತಿ: ಸಾಹಿತ್ಯ ಮತ್ತು ಖಾಸಗೀಕರಣ, ಪ್ರಕಾರ: ಪ್ರತಿಕ್ರಿಯೆ
ಏಕೆ ಓದಬೇಕು?: ಸಾಹಿತ್ಯ ಚರ್ಚೆಯಲ್ಲಿ ಭಾಗಿಯಾಗಲು, ಪ್ರ: ವಚನಶ್ರೀ ಬೆಂಗಳೂರು, ಪುಟಗಳು 88 ಬೆಲೆ ರು.   60

---------------

ಮಾಯಾಬಜಾರ್
ನಗರಗಳು ಬೆಳೆದಂತೆ ಅವುಗಳ ಜೊತೆಯಲ್ಲಿ ಸ್ಲಂಗಳೂ ಬೆಳೆಯುತ್ತವೆ. ಈ ನಗರ ಸ್ಲಂಗಳ ಶೋಷಣೆಯ ಸ್ವರೂಪವೇ ಬೇರೆ. ಬೆಂಗಳೂರಿನ 'ಮಾಯಾಬಜಾರ್‌' ಎಂಬ ಸ್ಲಂನ ಇಬ್ಬರು ಹುಡುಗರು ತಾವು ನರಕದಲ್ಲಿದ್ದೇವೆ ಎಂಬು ಭಾವಿಸಿ ಮನೆಯಿಂದ ತಪ್ಪಿಸಿಕೊಂಡು ಬರುತ್ತಾರೆ. ಅಲ್ಲಿಂದಾಚೆ ತೆರಳಿದ ಅವರನ್ನು ಒಬ್ಬ ವ್ಯಕ್ತಿ ಹೋಟೆಲಿನವರಿಗೆ ಮಾರುವುದು, ಅಲ್ಲಿಂದ ಇನ್ನೊಬ್ಬರಿಗೆ ಹೋಟೆಲ್ ಮಾಲೀಕ ಅವರನ್ನು ಮಾರಲು ಯತ್ನಿಸುವುದು, ಶಿಕ್ಷಕರೊಬ್ಬರು ಅವರನ್ನು ಪಾರುಮಾಡುವುದು..... ಈ ಕಥಾಹಂದರದ ಈ ಮಕ್ಕಳ ನಾಟಕವು ಶೋಷಣೆಯ ವಿವಿಧ ಮುಖಗಳನ್ನು ತೆರೆದಿಟ್ಟಿದೆ. ಲೇಖಕಿ ಎಸ್. ಮಾಲತಿ ಹಿರಿಯ ರಂಗತಜ್ಞೆ ಕೂಡ. ಈ ನಾಟಕವನ್ನು ರಂಗದ ಮೇಲೂ, ಬೀದಿ ನಾಟಕವಾಗಿಯೂ ಅಭಿನಯಿಸಬಹುದು. ಉದ್ಯಾನ ನಗರಿ ಎಂಬ ಬಿರುದು ಹೊತ್ತ ಬೆಂಗಳೂರಿನಲ್ಲಿಯೇ 'ಮಾಯಾಬಜಾರ್‌'ನಂಥ ಕೊಳಗೇರಿ ಇರುವುದು, ಅಲ್ಲಿನವರು ಶಿಕ್ಷಣ, ಆರೋಗ್ಯ, ಶುದ್ಧ ನೀರು- ಹವೆ, ಪೌಷ್ಟಿಕ ಆಹಾರಗಳಿಂದ ವಂಚಿತರಾಗಿರುವ ಚಿತ್ರಣ ಸರ್ಕಾರದ ಕಣ್ಣು ತೆರೆಸುವಂತಿದೆ.
ಕೃತಿ: ಮಾಯಾ ಬಜಾರ್, ಪ್ರಕಾರ: ಮಕ್ಕಳ ನಾಟಕ, ಏಕೆ ಓದಬೇಕು?: ನಗರದ ನೋವು ಅರಿಯಲು
ಪ್ರ: ಬಂಡಾಯ ಪ್ರಕಾಶನ, ಅರೇಅಂಗಡಿ, ಪುಟಗಳು 32 ಬೆಲೆ ರು.   25


- ಡಾ. ವಾಸುದೇವ ಶೆಟ್ಟಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್