ಪ್ರೇಮ್‌ಕುಮಾರ್, ಕರ್ಣಂಗೇರಿ ಗ್ರಾಮ, ಕೊಡಗು ಜಿಲ್ಲೆ
ಪಿತ್ರಾರ್ಜಿತ ಆಸ್ತಿಯನ್ನು ತಂದೆಯ ಕಾಲಾನಂತರ ಇಬ್ಬರು ಗಂಡುಮಕ್ಕಳು 2003ರಲ್ಲಿ ವಿಭಾಗ ಮಾಡಿಕೊಂಡು ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಪತ್ರ ನೋಂದಣಿಯಾಗಿರುತ್ತದೆ. ಆದರೆ ವಿಭಾಗ ಪತ್ರಕ್ಕೆ ಗಂಡು ಅಥವಾ ಹೆಣ್ಣುಮಕ್ಕಳ ಸಹಿ ಇರುವುದಿಲ್ಲ. ಈಗ 2007ರಲ್ಲಿ ನಾನು ಒಂದು ಗಂಡು ಮಗನ ಆಸ್ತಿ ಖರೀದಿಸಿ ಸ್ವಾಧೀನದಲ್ಲಿದ್ದೇನೆ. 2007ರಲ್ಲಿ ಸಹೋದರಿಯರು ತಮ್ಮ ಪಾಲಿಗಾಗಿ ಸಿವಿಲ್ ಕೋರ್ಟ್‌ನಲ್ಲಿ ದಾವಾ ಹಾಕಿದ್ದಾರೆ. ಇದರ ಬಗ್ಗೆ ಕಾನೂನು ಏನು ಹೇಳುತ್ತದೆ?
- ಗಂಡು ಹಾಗೂ ಹೆಣ್ಣು ಮಕ್ಕಳ ಸಹಿಯೇ ಇಲ್ಲದಿದ್ದರೆ ಅದು ವಿಭಾಗ ಪೂರ್ಣವೆನಿಸುವುದಿಲ್ಲ. ಒಂದು ವೇಳೆ ತಂದೆ ತಾವೇ ಭಾಗ ಮಾಡಿ ಪತ್ರ ನೋಂದಣಿ ಮಾಡಿಸಿರಬಹುದು. ಆದರೂ ಅವರ ಸ್ವಯಾರ್ಜಿತವಾಗಿದ್ದರೆ ಹಾಗೆ ಮಾಡಲು ಅವರಿಗೆ ಅಧಿಕಾರವಿದೆ. ಒಂದು ವೇಳೆ ಅದು ಅವರಿಗೂ ಪಿತ್ರಾರ್ಜಿತವಾಗಿದ್ದರೆ ಆಗ ಗಂಡುಮಕ್ಕಳು ಹಾಗೂ ಅವರ ತಾಯಿಗೆ ತಲಾ ಒಂದೊಂದು ಭಾಗ ಬರುತ್ತದೆ. ತಂದೆಯ ನಿಧನದ ನಂತರ ಅದು ವಿಭಾಗವಾಗಿದ್ದು, ನೋಂದಣಿಯಾಗಿದ್ದರೆ ಅದರಲ್ಲಿ ಗಂಡುಮಕ್ಕಳ ಸಹಿ ಇರಲೇಬೇಕು. 2004 ಡಿಸೆಂಬರ್ 20ಕ್ಕೆ ಮೊದಲು ಆದ (ನೋಂದಣಿಯಾದ) ವಿಭಾಗಕ್ಕೆ ತಿದ್ದುಪಡಿಯಾದ ಕಾನೂನು ಅನ್ವಯಿಸುವುದಿಲ್ಲ. ಅಂದರೆ ಹೆಣ್ಣುಮಕ್ಕಳಿಗೆ ಅಧಿಕಾರವಿಲ್ಲ. ಅಲ್ಲದೇ ನೋಂದಣಿಯಾದ ಪತ್ರವನ್ನು ರದ್ದುಪಡಿಸಲು ಲಿಮಿಟೇಷನ್ ಕಾಯ್ದೆಯ ಆರ್ಟಿಕಲ್ 59ರಂತೆ ಮೂರು ವರ್ಷ ವಾಯ್ದೆ ಇರುತ್ತದೆ. ಆದ್ದರಿಂದ ಈಗ ಅದರ ವಾಯ್ದೆ ಮುಗಿದಿದೆ. ಇನ್ನು ಹೆಣ್ಣುಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡುಮಕ್ಕಳಂತೆ ಸಮಾನ ಹಕ್ಕು ಇದೆ ಎಂದು 9.9. 2005ರಿಂದಲೇ ಜಾರಿಗೆ ಬಂದಿದೆ. ಇದರ ಬಗ್ಗೆ ವಿವಾದವಿಲ್ಲ. ಅಲ್ಲದೇ ಅದೇ ಕಾನೂನಿನ (ಕಲಂ 6(4)(5)ರ ವಿವರಣೆಯಂತೆ ವಿಭಾಗ ಪತ್ರ 20 ಡಿಸೆಂಬರ್ 2004ಕ್ಕೆ ಮೊದಲು ನೋಂದಣಿಯಾಗಿದ್ದರೆ, ಅದನ್ನು ಆನಂತರ ಪ್ರಶ್ನಿಸುವ ಅಧಿಕಾರವಿಲ್ಲ. ಇದರ ಬಗ್ಗೆ ಯಾವ ಜಾಹೀರು ಕೂಡ ಅಗತ್ಯವಿಲ್ಲ.
ದಾವಾ ಹಾಕಿ ಪ್ರಕಾಶ್, ಮಂಡ್ಯ
ತಂದೆಯವರು ದೇವಸ್ಥಾನದ ಜಾಗವನ್ನು (ದೀರ್ಘಕಾಲದ ಗುತ್ತಿಗೆ) ತಲಾಂತರದಿಂದ ಅನುಭವಿಸುತ್ತಿದ್ದು, ಅಲ್ಲಿಗೆ ಒಂದು ಮನೆ ಹಾಗೂ ಮಳಿಗೆ ಕಟ್ಟಿಸಿದ್ದಾರೆ. ಅಲ್ಲದೇ, ನಗರದ ಹೊರವಲಯದಲ್ಲಿ ಒಂದು ನಿವೇಶನ ಖರೀದಿಸಿ ಅಲ್ಲಿಯೂ ಮನೆ ಹಾಗೂ ಒಂದು ಮಳಿಗೆ ಕಟ್ಟಿಸಿದ್ದಾರೆ. ತಂದೆಗೆ ನಾವಿಬ್ಬರು ಗಂಡುಮಕ್ಕಳಿದ್ದು, ನನಗೆ ದೇವಸ್ಥಾನದ ಜಾಗ ಹಾಗೂ ಅಣ್ಣನಿಗೆ ಹೊರವಲಯದ ಜಾಗ.. ಹೀಗೆ ವಿಭಾಗ ಮಾಡಿಕೊಟ್ಟರು. ಅಣ್ಣ ತಕರಾರು ಮಾಡಿದ್ದರಿಂದ ನನ್ನ ಭಾಗದ ಅಂಗಡಿ ಬಾಡಿಗೆಯಲ್ಲಿ ಅರ್ಧ ಕೊಡಬೇಕೆಂದು ಒಪ್ಪಂದವಾಗಿ 2005ರಿಂದ 2011ರವರೆಗೆ ನಡೆಯಿತು. ಈಗ ನನ್ನ ಜಾಗ(ದೇವಸ್ಥಾನದ್ದು)ವನ್ನು ಖಾಲಿ ಮಾಡಬೇಕೆಂದು ಹೈಕೋರ್ಟ್‌ನಿಂದ ಆದೇಶವಾಗಿದೆ. ನನಗೆ ಪರಿಹಾರವೇನು?
- ಈಗ ನಿಮ್ಮ ತಂದೆ ಸಂಪಾದಿಸಿದ ಹೊರವಲಯದ ಆಸ್ತಿಯೊಂದೇ ಇರುವುದರಿಂದ ಅದರಲ್ಲಿ ಇಬ್ಬರಿಗೂ ಸಮಪಾಲು ಎಂದು ನೀವು ಕೋರ್ಟಿನಲ್ಲಿ ದಾವಾ ಹಾಕಬಹುದು.
ಯಾವಾಗ ಬೇಕಾದರೂ ದೂರು ನೀಡಬಹುದು
ಎ.ಪಿ. ನಂಜುಂಡ, ಹೆಗ್ಗಳ, ವಿರಾಜಪೇಟೆ ತಾಲೂಕು
ಒತ್ತುವರಿ ಜಮೀನನ್ನು ತೆರವುಗೊಳಿಸಬೇಕೆಂದು ಕೇಳಿದ ಆದೇಶ ಜಾರಿಯಾಗದೇ ಇದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಕಾಗದ ಬರೆದಿದ್ದೇನೆ. ಇದುವರೆಗೂ ಯಾವುದೇ ಜವಾಬಿಲ್ಲ. ಲೋಕಾಯುಕ್ತಕ್ಕೆ ದೂರು ನೀಡಲು ಎಷ್ಟು ದಿನಗಳು ಕಾಯಬೇಕು?
- ಲೋಕಾಯುಕ್ತಕ್ಕೆ ದೂರು ನೀಡಲು ಕಾನೂನಿನಲ್ಲಿ ಕಾಲಾವಧಿ ನಿಗದಿಪಡಿಸಲು ಯಾವಾಗ ಬೇಕಾದರೂ ದೂರು ನೀಡಬಹುದು.
ಬೇರೆ ಯಾರಿಗೂ ಹಕ್ಕಿಲ್ಲ
ವೆಂಕಟಾಚಲ ಮೂರ್ತಿ, ಕೆಂಚನಕೋಣಿ, ಕೊಪ್ಪಳ ಜಿಲ್ಲೆ
ನನ್ನ ತಂದೆಯ ತಂದೆಗೆ ಸರ್ಕಾರದಿಂದ ಎರಡು ಎಕರೆ ಜಮೀನು ಮಂಜೂರಾಗಿದ್ದು, ಈಗ ಅವರ ತಮ್ಮಂದಿರು ಅದರಲ್ಲಿ ಪಾಲು ಕೇಳುತ್ತಿದ್ದಾರೆ. ಅವರು 60-70 ವರ್ಷಗಳ ಹಿಂದೆಯೇ ಪಿತ್ರಾರ್ಜಿತ ಆಸ್ತಿ ವಿಭಾಗ ಮಾಡಿಕೊಂಡಿರುತ್ತಾರೆ. ಈ ಮಂಜೂರಾದ ಆಸ್ತಿಗೆ ಮಕ್ಕಳು ಹಕ್ಕುದಾರರೇ?
- ಸರ್ಕಾರದಿಂದ ಮಂಜೂರಾದ ಜಮೀನು ನಿಮ್ಮ ತಾತನಿಗೆ ಆದ್ದರಿಂದ ಅದರ ಮೇಲೆ ಬೇರೆ ಯಾರಿಗೂ ಹಕ್ಕಿಲ್ಲ. ಅವರ ನಂತರ ಅವರ ಮಕ್ಕಳು, ಮೊಮ್ಮಕ್ಕಳು... ಹೀಗೆ ವಿಭಜನೆಯಾಗುತ್ತ ಹೋಗುತ್ತದೆ.
-ಎಚ್.ಆರ್. ಕಸ್ತೂರಿರಂಗನ್