ಕುಡಿತ ಫೇಸ್ಬುಕ್ ಇದ್ದಹಾಗೆ. ಇಷ್ಟವಿದ್ದವರು ಲೈಕ್ ಮಾಡುತ್ತಾರೆ, ಇಲ್ಲದವರು ಕಾಮೆಂಟು ಮಾಡುತ್ತಾರೆ. ಒಮ್ಮೆ ಈ ಲೋಕ ಹೊಕ್ಕರೆ ಸ್ನೇಹಿತರು ಸಿಗುತ್ತಾ ಹೋಗುತ್ತಾರೆ. ಮಿನಿಮಮ್ಮು 15 ಸ್ನೇಹಿತರು ಅಂತಿಟ್ಟುಕೊಳ್ಳಿ. ಹದಿನೈದು ದಿನಕ್ಕೊಬ್ಬ ಸಿಕ್ಕರೂ ಆಗುವುದು ದಿನವೂ ಪಾರ್ಟಿಯೇ. ಆದರೆ, ಮುಖ್ಯವಾಗಿ ಎದುರಾಗುವುದು ಪಾರ್ಟಿಗೆ ಫಂಡಿನ ಸಮಸ್ಯೆ. ಬೀchiಗೆ, ಹಿರಣ್ಣಯ್ಯನವರಿಗೆ ಪಾರ್ಟಿ ಫಂಡಿನ ಸಮಸ್ಯೆ ಇದ್ದಿರಲಿಲ್ಲ!
ಪೆಗ್ ಸಿಸ್ಟಮ್ಮನ್ನು ಬದಿಗಿಟ್ಟು ಮಗ್ ಸಿಸ್ಟಮ್ಮನ್ನು ಜಾರಿಗೆ ತಂದ ಇವರಿಬ್ಬರೂ ಹಿಂದೊಮ್ಮೆ ಬಳ್ಳಾರಿಯಲ್ಲಿ 'ಮದ್ಯ'ವರ್ತಿಗಳು. ಬೀchi ಆಗ ಪೊಲೀಸ್ ಅಧಿಕಾರಿ. ಅಲ್ಲಿ ಇಲ್ಲಿ ಕಳ್ಳಭಟ್ಟಿ ಅಡ್ಡೆ ಮೇಲೆ ದಾಳಿ ಇದ್ದಿದ್ದೇ. ಒಟ್ಟು 10 ಕ್ಯಾನು ಸಿಕ್ಕರೆ, ಅದರಲ್ಲಿ 6 ಕ್ಯಾನುಗಳನ್ನಷ್ಟೇ ಎಫ್ಐಆರ್ ಫೈಲಿಗೆ ದಾಖಲಿಸಿ, ಮಿಕ್ಕ 4ರಲ್ಲಿ ತೀರ್ಥಸ್ನಾನ. ಕುಡಿತಕ್ಕೆ ಗೋಧೂಳಿ ಮುಹೂರ್ತವೇ ಪ್ರಶಸ್ತ ಎಂಬುದನ್ನು ನಂಬದೆ ಹಿರಣ್ಣಯ್ಯನಿಗೆ ಹೇಳುತ್ತಿದ್ದರು, 'ಮಾಲು ಸಿಕ್ಕಿದೆ ನಡೀ'. 'ಅಲ್ಲಯ್ಯಾ, ಬೆಳಗ್ಗೆ ಇನ್ನೂ 10 ಗಂಟೆ...' ಅಂತ ಹಿರಣ್ಣಯ್ಯನವರದ್ದು ಅರೆಮನಸ್ಸಿನ ರಾಗ. 'ನೋಡು ಈ ಮಾಲು, ಎದುರು ಮನೆ ಹುಡುಗಿ ಇಬ್ಬರೂ ಒಂದೇ. ಸಿಕ್ದಾಗ ಕರ್ಕೊಂಡ್ ಹೋಗ್ತಿರ್ಬೇಕು' ಎಂದು ಬೀchi ಅಂದಾಗ, ಹಿರಣ್ಣಯ್ಯ ನೋ ಅಬ್ಜೆಕ್ಷನ್.
ಬಿಸಿಲು ನೆತ್ತಿಗೆ ಬಿದ್ದಷ್ಟು, ಕುಡಿತದ ಪ್ರಭಾವವೂ ದ್ವಿಗುಣ. ಬಳ್ಳಾರಿ ಹೊರವಲಯದ ಕಾಲೇಜಿನ ಹಿಂಬದಿ ಕುಡಿದು, ಸೈಕಲ್ ರಿಕ್ಷಾ ಏರುವಾಗ ಮಧ್ಯಾಹ್ನ 12. ಇವರು ಕುಡಿದು ಬರುವ ತನಕವೂ ಆ ಸೈಕಲ್ ರಿಕ್ಷಾದವ ಕಾಯುತ್ತಲೇ ಇದ್ದ. ಕಾರಣ, ಬೀchi ಪೊಲೀಸ್. ಇಬ್ಬರೂ ರಿಕ್ಷಾ ಏರಿದರು. ಸ್ವಲ್ಪ ದೂರ ಹೋಗುತ್ತಿದ್ದಂತೆ, ಪೆಡಲ್ ತುಳಿಯುತ್ತಿದ್ದ ಡ್ರೈವರನ ಮುಖ- ಮೈನಲ್ಲಿ ಬೆವರಿನ ಟಿಸಿಲೊಡೆಯಲು ಶುರು. ಸಾಮಾನ್ಯವಾಗಿ ಕುಡಿದಾಗ ಎಲ್ಲಿಲ್ಲದ ದುಃಖ, ಕರುಣೆ, ಮಾನವೀಯತೆ ದಿಢೀರ್ ಆವರಿಸಿಕೊಳ್ಳುತ್ತದೆ. ಅವನ ಕಷ್ಟ ನೋಡಿ ಬೀchiಯು ದುಃಖ ಧರೆಗಿಳಿಯಿತು. ಪಕ್ಕದಲ್ಲಿದ್ದ ಹಿರಣ್ಣಯ್ಯ ಸಮಾಧಾನಿಸಿದರು. 'ನರಸಿಮ್ಮೂರ್ತಿ, ನೋಡೋ ಪಾಪ ಎಷ್ಟು ಕಷ್ಟಪಡ್ತಿದ್ದಾನೆ' ಎಂದು ಗಳಗಳನೆ ಅಳುತ್ತಾ ಹೇಳಿದರು ಬೀchi. ಮಾಸ್ಟರ್ಗೂ ಹೌದೆನಿಸಿತು. 'ಇಲ್ಲಾ ಕಣಯ್ಯಾ, ನಾವು ಇವ್ನಿಗೇನಾದ್ರೂ ಹೆಲ್ಪ್ ಮಾಡ್ಲೇಬೇಕು' ಎಂದರು ಬೀchi. 'ಸರಿಹಾಗಿದ್ರೆ, ಅವನೇ ಹಿಂಬದಿ ಕೂರ್ಲಿ. ನಾವಿಬ್ರು ಸೈಕಲ್ ತುಳಿಯೋಣ' ಮಾಸ್ಟರ್ ಕೊಟ್ಟ ಈ ಪ್ಲ್ಯಾನ್ ಬೀchiಗೆ ಹಿಡಿಸಿತು. ಭೇಷ್ ಅಂದರು.
ಚಾಲಕನಿಗೆ ದಿಗಿಲು. 'ಬೇಡ ಸಾಮಿ, ನೀವು ಮದ್ಲೇ ಟೇಟ್ ಆಗೀರ' ಅಂದ. ಬೀchi ಬಿಡ್ತಾರಾ? ಪೊಲೀಸ್ ಭಾಷೆ ಪ್ರಯೋಗಿಸಿದರು; 'ಏಯ್ ಬೂಟಲ್ ಒದ್ಬಿಡ್ತೀನಿ ಸೂಳೆಮಗ್ನೆ. ಬಾ ಹಿಂದೆ'. ಚಾಲಕ ಕಂಪಿಸುತ್ತಲೇ ಬೇಡ ಅಂತ ತಲೆ ಅಲ್ಲಾಡಿಸಿದ. 'ಬಾರಾ ಮೂರ್ತಿ, ಇವ್ನು ಒಳ್ಳೇಮಾತ್ ಕೇಳೋನಲ್ಲ' ಅಂತ ಬೀchi ಡ್ರೈವರನ ಕಾಲು ಹಿಡಿದರು. ಹಿರಣ್ಣಯ್ಯ ತಲೆಬದಿ ಹಿಡಿದರು. ಅವನನ್ನು ಹಿಂದೆ ಕೂರಿಸಿಯೇಬಿಟ್ಟರು. ಚಾಲಕ ಚೀರುತ್ತಲೇ ಇದ್ದ. ಬೀchi ಹ್ಯಾಂಡಲ್ ಹಿಡಿದರು. ಮಾಸ್ಟರ್ ಪೆಡಲ್ ತುಳಿದರು. ರಿಕ್ಷಾ ಹೊರಟಿತು. ರಸ್ತೆ ಮೂರಾಗಿ ಕಾಣಿಸುತ್ತಿತ್ತು. ಯಾವುದು ಪಯಣದ ದಿಕ್ಕು? ರಿಕ್ಷಾ ಚರಂಡಿಯೊಳಗೆ ದಢಾಲನೆ ಬಿತ್ತು. ಬೀchi, ಹಿರಣ್ಣಯ್ಯ ಕೊಸರಾಡುತ್ತಾ ಖುಷಿಯಲ್ಲೇ ಎದ್ದರು. ಬೀchi ಹೇಳಿದರು, 'ಅಂತೂ ಇವ್ನಿಗೆ ಹೆಲ್ಪ್ ಮಾಡೇಬಿಟ್ವಿ ಮೂರ್ತಿ. ಈಗ ತೃಪ್ತಿಯಾಯ್ತು'. ಚಾಲಕ ಮಾತ್ರ ಡ್ಯಾಮೇಜಾಗಿದ್ದ ರಿಕ್ಷಾ ನೋಡಿ ಬಿಕ್ಕಿ ಬಿಕ್ಕಿ ಅಳತೊಡಗಿದ್ದ. ಈ ಆಸಾಮಿಗಳು ಅವನಿಗೆ ಬಾಡಿಗೆನೂ ಕೊಡದೆ ನಡೆದುಬಂದರು. ಈಗ ನೀವು ಹಿರಣ್ಣಯ್ಯನವರನ್ನು ಕಟಕಟೆಗೆ ನಿಲ್ಲಿಸಿ ಕೇಳಿ. 'ಸಮಾಜದ ಅವ್ಯವಸ್ಥೆ ವಿರುದ್ಧ, ಭ್ರಷ್ಟಾಚಾರದ ವಿರುದ್ಧ ಮಾತಾಡುವ ನೀವು ಹೀಗೆ ಮಾಡಿದ್ದು ಸರೀನಾ? ಬೀchi ಮಾಡಿದ್ದು ಭ್ರಷ್ಟಾಚಾರವಲ್ಲವೇ? ಇದು ದೌರ್ಜನ್ಯವಲ್ಲವೇ?' ಅಂತ.
ಆದರೆ, ಪ್ರಾಮಾಣಿಕ ಹಿರಣ್ಣಯ್ಯ- ಬೀchiಯೊಳಗೆ ನಶೆ ಎಂಬ ರಾಕ್ಷಸ ಹೊಕ್ಕಿದ್ದಾನಲ್ಲ ನೋಡಿ, ಅವನಿಗೆ ಭ್ರಷ್ಟಾಚಾರ ಯಾವುದು? ಅನ್ಯಾಯ ಯಾವುದು ಎಂಬ ನೈತಿಕಜ್ಞಾನವಿಲ್ಲ. ಅಪರಾಧವು ಕುಡಿತದ ಶಿಶು. ಹಿರಣ್ಣಯ್ಯರಂಥ ಸಜ್ಜನರನ್ನೂ ಅದು ಬಿಟ್ಟಿಲ್ಲ. 33 ವರ್ಷದ ಕುಡಿತದ ಸಹವಾಸ ಬಿಟ್ಟಮೇಲೆ 'ಇಷ್ಟು ಚೆಂದದ ಬದುಕನ್ನು ಸಾರಾಯಿಯೊಳಗೆ ಅದ್ದಿ ತೆಗೆದೆನಲ್ಲ', ವ್ಯಥೆಪಡುತ್ತಾರೆ ಮಾಸ್ಟರ್.
ಬ್ಯಾಟರಿ ಶೆಲ್ಲನ್ನು ಬೆರೆಸಿದ, ಕೋಳಿಯ ಮಲ ಹಾಕಿ ಕದಡಿದ ಕಳ್ಳಭಟ್ಟಿಯೂ ಶಾಂಪೇನ್ಗಿಂತ ರುಚಿ ಕೊಡುತ್ತದಂತೆ. ಆ ಕಳ್ಳಭಟ್ಟಿ ರುಚಿಯೆಲ್ಲ ಈಗ ಮರೆತುಹೋಗಿದೆ. ಅಷ್ಟಕ್ಕೂ ಇವರೇಕೆ ಮದ್ಯವ್ಯಸನಿಯಾದರು?
ಆಗಿನ್ನೂ ಇವರು ಎಸ್ಸೆಸ್ಸೆಲ್ಸಿ. ತಾಯಿ ತೀರಿಕೊಂಡಿದ್ದರು. ಮಾಸ್ಟರ್ಗೆ ಎರಡನೇ ಎಕ್ಸಾಮಿನ ದಿನ ವಿಪರೀತ ತಲೆನೋವು ಬಂತು. ಜವಾನ ನರಸಿಂಹನ್ಗೆ, 'ಓದೋದಿಕ್ಕೇ ಆಗ್ತಿಲ್ಲ. ನಾಳೆ ಬೆಳಗ್ಗಾದ್ರೆ ಎಕ್ಸಾಮು. ಏನ್ ಬರೆಯೋದು ಟೆನ್ಷನ್ನಾಗ್ತಿದೆ' ಅಂದರಂತೆ. ಆತ 'ಬುದ್ದಿ, ನಾನೊಂದು ಮೆಡಿಸಿನ್ ಕೊಡ್ತೀನಿ. ಆದ್ರೆ, ಅದನ್ನು ಇವತ್ತು ಮಾತ್ರ ತಗೊಳ್ಬೇಕು' ಎಂದು ಹೇಳಿ ಡಾಕ್ಟರ್ಸ್ ಬ್ರಾಂದಿಗೆ ತುಸು ಮೆಣಸನ್ನು ಗುದ್ದಿ ಒಂದೇ ಗುಟುಕಿನಲ್ಲಿ ಕುಡಿಯಲು ಕೊಟ್ಟ. ಐದೇ ನಿಮಿಷ... ಗರ್ಭದಿಂದ ಹೊರಬಂದ ಮಗುವಿನಷ್ಟು ಫ್ರೆಶ್ಶಾದರು ಮಾಸ್ಟರ್. ಚೆನ್ನಾಗಿ ಓದಿದರು. ಒಳ್ಳೆಯ ನಿದ್ದೇನೂ ಬಂತು. ಪರೀಕ್ಷೆಯಂತೂ ತುಂಬಾ ಸುಲಭವಿತ್ತು.
ಮರುದಿನ ಅದೇ ಸಮಯಕ್ಕೇ ಮತ್ತೆ ತಲೆನೋವು ಬರಬೇಕಾ? ಆದರೆ, ಆ ಜವಾನ ಪುನಃ ಬ್ರಾಂದಿ ಕೊಡಲು ನಿರಾಕರಿಸಿದ. ಮಾಸ್ಟರ್ ಹಠಮಾಡಿ, ಯಜಮಾನಿಕೆ ಪ್ರದರ್ಶಿಸಿ ತರಿಸಿ ಕುಡಿದರು. ಸೈಕಲ್ಲನ್ನು ಕಲಿಸಲಿಕ್ಕೆ ಹಿಂದೆ ಯಾರಾದರೂ ಹಿಡಿದಿರಬೇಕು, ವಿಮಾನ ಕಲಿಸಲು ಹಿಂದೆ ಯಾರೂ ಬೇಡ! ಪರೀಕ್ಷೆ ಮುಗಿದ ಬಳಿಕ ತಾವೇ ಹುಡುಕಿ ಹೊರಟರು ಮಾಸ್ಟರ್.
ಮದ್ಯ ಸೃಷ್ಟಿಸುವ ಜಗತ್ತು ಈ ಜಗತ್ತಿಗಿಂತ ಮಿಥ್ಯ. ಅದು ದೈವೀ ಆನಂದವಲ್ಲ. ದೇವರಾಜು ಅರಸು, ಅನಕೃ, ಜೆ.ಎಚ್. ಪಟೇಲ್, ಅನಂತನಾಗ್ ಜತೆಗೆಲ್ಲ ಮತ್ತೇರಿಸಿಕೊಂಡ ಮಾಸ್ಟರ್, ಯಾಕೆ ಆ ನಶೆಯ ಜಗತ್ತಿನಲ್ಲಿ 33 ವರ್ಷ ನೆಲೆಯೂರಿದರು? ಅದಕ್ಕೂ ಅವರ ಬಳಿ ರೋಚಕ ಕಾರಣವಿದೆ. ಬಹುಶಃ ಆ ಕಾರಣಕ್ಕೆ ಅವರಿಂದು ಮಾಸ್ಟರ್ ಹಿರಣ್ಣಯ್ಯ, ಇಲ್ಲದಿದ್ದರೆ ಖಾಲಿ ಮಿಸ್ಟರ್ ಹಿರಣ್ಣಯ್ಯ ಆಗಿರುತ್ತಿದ್ದರು! ಮುಂದೆ ನೋಡೋಣ...
- ಕೀರ್ತಿ
kolgarkeerthi@gmail.com