ಪಂಚಮಿ ಹಬ್ಬ
ನಾಡಿನ ಹಬ್ಬ
ನಾಗರ ಪಂಚಮಿ
ಜೀಕಲು ಕಟ್ಟಿದೆ ಜೋಕಾಲಿ
ಅಂಗಳದಲ್ಲಿ
ಬಾಗಿಲ ಮುಂದೆ
ಅಮ್ಮನು ಹಾಕಿದ ರಂಗೋಲಿ
ತರ ತರ ತಿಂಡಿ
ಅಳ್ಳಿಟ್ಟು ಉಂಡಿ
ಡಬ್ಬಿಲಿ ತುಂಬಿದೆ ಚಕ್ಕುಲಿ
ಜೋಳ ಹುರಿದು
ಮಾಡಿದ ಅರಳು
ಕೈಯಲಿ ಕೊಬ್ಬರಿಯ ಬುಗುರಿ
ಎತ್ತಿನ ಜೋಡಿ
ಗಿಲ್ ಗಿಲ್ ಗಾಡಿ
ಅಕ್ಕ ಬಂದಳು ಹರುಷದಲಿ
ಬಣ್ಣದ ಅಂಗಿ
ತೊಟ್ಟು ತಂಗಿ
ತೂಗಲು ಕರೆದಳು ಉಯ್ಯಾಲಿ
ಮಣ್ಣನು ಕುಟ್ಟಿ
ಶಿಲೆಯಲಿ ಕೆತ್ತಿ
ಮಾಡಿದ ನಾಗ ಕಟ್ಟೆಯಲಿ
ಎಲ್ಲರ ಪಾಲು
ಎರೆದು ಹಾಲು
ಜೀಕಿದರೆಲ್ಲರು ಜೋಕಾಲಿ
ಎತ್ತರಕ್ಕೇರಲು
ಅಂಜಿಕೆ ದೂಡಲು
ತೂಗಿದೆ ಹಗ್ಗ ಗಾಳಿಯಲಿ
ವಿಷದ ಹಾವಿಗೆ
ಹಾಲನು ಎರೆವ
ಪಂಚಮಿ ಹಬ್ಬ ನಾಡಿನಲಿ
-ಲಲಿತಾ ಕೆ. ಹೊಸಪ್ಯಾಟಿ