ಸಾಪ್ತಾಹಿಕಪ್ರಭ

ಬಯಲು ಸೀಮೆಯಲ್ಲಿ ಕತೆಯ ಬೆಳೆ

ಜಡೇಕುಂಟೆ ಮಂಜುನಾಥ ಅವರ 'ಜೋಗಣ್ಣನ ಹಾಡು ಮತ್ತು ಇತರ ಕತೆಗಳು' ಸಂಕಲನದಲ್ಲಿ ಎಂಟು ಕತೆಗಳಿವೆ. ಇವುಗಳ ಶಕ್ತಿ ಎಂದರೆ ಓದಿದವರಿಗೆ ಇದು ಕೊಡುವ ಖುಷಿ. ಅದಕ್ಕಿಂತ ಹೆಚ್ಚಾಗಿ ನಿಮ್ಮಲ್ಲೊಂದು ತಲ್ಲಣವನ್ನುಂಟುಮಾಡುತ್ತದೆ. ಬಯಲುಸೀಮೆಯ ಜನರ ಸೀಮೆ ಇಲ್ಲದಷ್ಟು ನೋವು, ಆಸೆ, ಆಕಾಂಕ್ಷೆಗಳನ್ನು ಇವರ ಕತೆಗಳಲ್ಲಿ ನಾವು ಕಾಣಬಹುದು. ಗ್ರಾಮೀಣ ಬದುಕಿನಲ್ಲಿ ವ್ಯಕ್ತಿಗಳ ಸಂಬಂಧಗಳು ಸಂಕೀರ್ಣವಾದವು. ಕೆಲವೊಮ್ಮೆ ಅವು ವ್ಯಾಖ್ಯಾನಕ್ಕೆ ಸಿಗದಂಥವು. ಅಗ್ನಿಸಾಕ್ಷಿಯಾಗಿ ನಡೆದ ಮದುವೆಗಿಂತ ಕೂಡಿಕೆಯ ಸಂಬಂಧಗಳು ಗಟ್ಟಿಯಾಗಿರುವುದನ್ನು ಇಲ್ಲಿ ಕಾಣಬಹುದು. ಕ್ಷುಲ್ಲಕ ಕಾರಣಕ್ಕಾಗಿ ಒಣಪ್ರತಿಷ್ಠೆಯಿಂದ ಕೋರ್ಟು, ಕಚೇರಿ ಎಂದು ಲಕ್ಷಾಂತರ ರುಪಾಯಿ ಕಳೆದುಕೊಳ್ಳುವವರು ಇಲ್ಲಿದ್ದಾರೆ. ಗ್ರಾಮೀಣರ ಬದುಕನ್ನು ಹಲವು ನೆಲೆಯಲ್ಲಿ ಮಂಜುನಾಥ ಅವರು ಹಿಡಿದಿಟ್ಟಿದ್ದಾರೆ. ಮನುಷ್ಯ ಸಂಬಂಧಗಳ ನಡುವಿನ ಸತ್ಯಾನ್ವೇಷಣೆ ಇಲ್ಲಿಯ ಕತೆಗಳು.
ಕೃತಿ: ಜೋಗಜ್ಜನ ಹಾಡು
ಪ್ರಕಾರ: ಕತೆ
ಏಕೆ ಓದಬೇಕು?: ಬಯಲು ಸೀಮೆ ಬದುಕು ಅರಿಯಲು
ಪ್ರ: ದಿಗಂತ ಪುಸ್ತಕ ಪ್ರಕಾಶನ, ಜಡೇಕುಂಟೆ, ತಾ.ಚಳ್ಳಕೆರೆ. ಪುಟಗಳು 120, ಬೆಲೆ ರು. 80

ವೇದ ದರ್ಶನ ರತ್ನಗರ್ಭ
ಕೆ. ಕೃಷ್ಣಶೆಟ್ಟಿ (ಕುಡುಮಲ್ಲಿಗೆ) ಇವರು ಜನಸಾಮಾನ್ಯರಿಗೆ ಪ್ರಾಚೀನ ಜ್ಞಾನವನ್ನು ಕರಗತಮಾಡಿಸಬೇಕೆಂದು ಈಗಾಗಲೇ ಕೆಲವು ಗ್ರಂಥಗಳನ್ನು ರಚಿಸಿದ್ದಾರೆ. ಸಂಸ್ಕೃತದಲ್ಲಿ ಪಾಂಡಿತ್ಯ ಹೊಂದಿರುವ ಅವರು ಇದೀಗ 'ವೇದದರ್ಶನ ರತ್ನಗರ್ಭ' ಎಂಬ ಕೃತಿಯನ್ನು ರಚಿಸಿರುವರು. ಈ ಗ್ರಂಥ ವೇದಗಳ ಜೊತೆಯಲ್ಲಿ ವೇದಾಂಗ ಮತ್ತು ಶಾಸ್ತ್ರ ವಿದ್ಯೆಗಳನ್ನು ಪರಿಚಯಿಸಿ ಓದುಗರಲ್ಲಿ ವೇದಗಳ ಬಗ್ಗೆ ಕುತೂಹಲ ಹುಟ್ಟಿಸುವಂತೆ ಮಾಡಿದೆ. ಇದು ಏಳು ಪರಿಚ್ಛೇದಗಳನ್ನು ಹೊಂದಿದೆ. ಲೇಖಕರ ದೃಷ್ಟಿ ಜನಸಾಮಾನ್ಯನಿಗೂ ವೇದದ ಅರಿವು ಮೂಡಿಸುವುದು. ಆ ದಿಶೆಯಲ್ಲಿ ಇದು ಯಶಸ್ವಿಯಾಗಿದೆ. ವೇದವೆಂದರೇನು, ವಿವಿಧ ಧರ್ಮಗಳಲ್ಲಿರುವ ವೇದ ಚಿಂತನೆ ಯಾವವು ಎಂಬುದರ ಕಡೆಗೆ ಗಮನ ಸೆಳೆಯುವರು. ಧರ್ಮದ, ಸತ್ಯದ, ನ್ಯಾಯದ, ನೀತಿಯ ಮೂಲ ನೆಲೆ ಸೆಲೆಗಳಿರುವುದೂ ವೇದಗಳಲ್ಲಿಯೇ ಎನ್ನುವ ಮಾತನ್ನು ಹೇಳಿದ್ದಾರೆ. ವೇದಗಳು ಮಾನವನ ಜೀವಿತದ ಕಾಮಿತಾರ್ಥ ಪ್ರದಾಯಕ ಧರ್ಮಸೂತ್ರ ಎಂದು ವಿವರಿಸುತ್ತಾರೆ. ವೇದಗಳನ್ನು ಕೆಲವು ಜನವರ್ಗದವರು ತಮ್ಮದನ್ನಾಗಿಸಿಕೊಂಡು ಇತರರನ್ನು ಶೋಷಿಸುವುದಕ್ಕೆ ಸಾಧನ ಮಾಡಿಕೊಂಡರು. ಆದರೆ ಈ ಜ್ಞಾನ ಎಲ್ಲರಿಗೂ ಸಿಗಬೇಕು. ಅದಕ್ಕಾಗಿ ಕೆ. ಕೃಷ್ಣ ಶೆಟ್ಟಿಯವರು ಪ್ರಶ್ನೋತ್ತರ ರೂಪದಲ್ಲಿಯೂ ಕೆಲವು ವಿಷಯಗಳನ್ನು ವಿವರಿಸುವುದಕ್ಕೆ ಪ್ರಯತ್ನಿಸಿದ್ದಾರೆ. ಸ್ಥಿತಪ್ರಜ್ಞತೆ ಎಂದರೇನು, ಅರಣ್ಯಕಗಳೆಂದರೇನು, ಸಂಹಿತೆ ಎಂದರೇನು, ಉಪನಿಷತ್ತುಗಳೆಷ್ಟು, ಯಾವವು, ವೇದಾಂಗಗಳು ಯಾವವು, ಸಿದ್ಧಾಂತ, ಸಂಹಿತಾ, ಹೋರಾಗಳೆಂದರೇನು, ಪಂಚಾಂಗವೆಂದರೇನು, ಪಂಚಾಗವನ್ನು ಹೇಗೆ ನಿರ್ಣಯಿಸಬೇಕು, ಗಾಯತ್ರಿಮಂತ್ರ, ಶಾಸ್ತ್ರಗಳೆಷ್ಟು, ಅವು ಯಾವವು... ಹೀಗೆ ನೂರಾರು ವಿಷಯಗಳನ್ನು ಅತ್ಯಂತ ಸರಳವಾಗಿ ವಿವರಿಸಿದ್ದಾರೆ. ಜ್ಞಾನಾಪೇಕ್ಷಿಗಳ ಮನೆಗಳಲ್ಲಿ ಈ ಗ್ರಂಥ ಇರಬೇಕು.
ಕೃತಿ: ವೇದದರ್ಶನ ರತ್ನಗರ್ಭ  , ಪ್ರಕಾರ: ವೇದಾಧ್ಯಯನ, ಏಕೆ ಓದಬೇಕು?: ವೇದ ಅರಿಯಲು
ಪ್ರ: ಪರಿಣಿತ ಪ್ರಕಾಶನ, ಮಂಗಳೂರು,, ಪುಟಗಳು 220, ಬೆಲೆ ರು. 250

ಕೈಲಾಸಂ ಅರಿಯಲ್ಲೊಂದು ಕಿಂಡಿ
ಟಿ.ಪಿ. ಕೈಲಾಸಂ ಅವರನ್ನು ಟಿಪಿಕಲ್ ಕೈಲಾಸಂ ಎಂದು ಕರೆದವರಿದ್ದಾರೆ. ಕೈಲಾಸಂ ರೀತಿಯಲ್ಲಿ ಬರೆಯುವುದು ಬದುಕುವುದು ಅನ್ಯರಿಂದ ಅಸಾಧ್ಯವಾದ ಕಾರಣ ಅವರು ಅನನ್ಯಸಾಧಾರಣ ವ್ಯಕ್ತಿಯಾಗಿ ಟಿಪಿಕಲ್ ಅನಿಸಿಕೊಂಡಿದ್ದು. ಕನ್ನಡ ನಾಟಕ ಕ್ಷೇತ್ರಕ್ಕೆ ಹೊಸತನವನ್ನು ಕೊಟ್ಟವರು ಅವರು. ಬದುಕು ಆಧುನಿಕತೆಗೆ ಒಗ್ಗತೊಡಗಿದಾಗ ಹಿಂದಿನಿಂದ ಬಂದ ಎಷ್ಟೋ ವ್ಯವಸ್ಥೆಗಳು ನಿರುಪಯುಕ್ತವೂ ತೊಡಕಿನದೂ ಆಗಿ ಗೋಚರಿಸುತ್ತಿದ್ದವು. ಅದನ್ನು ಕೈಲಾಸಂ ತಮ್ಮ ನಾಟಕಗಳಲ್ಲಿ ವಿಡಂಬಿಸಿ ಬದಲಾವಣೆಯ ಗತಿಗೆ ವೇಗವರ್ಧಕರಾಗಿ ಪರಿಣಮಿಸಿದರು. ಇಂಥ ಕೈಲಾಸಂ ಅವರ ಅಭಿಮಾನಿಗಳಾದ ಬಿ.ಎಸ್. ಕೇಶವರಾವ್ ಅವರು ಕೈಲಾಸಂ ಅವರ ಬದುಕು ಬರೆಹಗಳನ್ನು ಇಲ್ಲಿ ಪರಿಚಯಿಸಿದ್ದಾರೆ. ಕೈಲಾಸಂ ಅವರ ಒಡನಾಡಿಗಳಾದ ಹಲವರನ್ನು ಸಂಪರ್ಕಿಸಿ ಅವರಿಂದ ಪಡೆದ ವಿವರಗಳನ್ನು ದಾಖಲಿಸಿದ್ದಾರೆ. ಕೈಲಾಸಂ ಅವರ ಬಗ್ಗೆ ಇದುವರೆಗೆ ಬಂದ ಕೃತಿಯಲ್ಲಿಯ ಅಂಶಗಳನ್ನೆಲ್ಲ ತೆಗೆದುಕೊಂಡು ಅದನ್ನು ಕ್ರಮಬದ್ಧವಾಗಿ ಜೋಡಿಸಿದ್ದಾರೆ. ಆರಾಧನೆಯ ಭಾವದಲ್ಲಿ ಅತಿಶಯೋಕ್ತಿಯೆನ್ನುವಂತೆ ಯಾವುದನ್ನೂ ಇಲ್ಲಿ ಬರೆದಿಲ್ಲ. ಅಂದಹಾಗೆ ಇದು ಈ ಕೃತಿಯ ಐದನೆಯ ಮುದ್ರಣ. ಇದರಲ್ಲಿ ಕೆಲವು ಹೊಸ ಲೇಖನಗಳನ್ನು ಸೇರಿಸಿದ್ದಾರೆ. ಕೈಲಾಸಂ ಅವರನ್ನು ಅರಿಯುವುದಕ್ಕೆ ಈ 'ಕನ್ನಡಕ್ಕೊಬ್ಬನೆ ಕೈಲಾಸಂ' ಒಂದು ಅರಿವಿನ ಕಿಂಡಿ.
ಕೃತಿ: ಕನ್ನಡಕ್ಕೊಬ್ಬನೇ ಕೈಲಾಸಂ,  ಪ್ರಕಾರ: ಬದುಕು ಬರೆಹ
ಏಕೆ ಓದಬೇಕು?: ಕೈಲಾಸಂ ಅರಿಯಲು
ಪ್ರ: ಅಂಕಿತ ಪುಸ್ತಕ, ಬೆಂಗಳೂರು, ಪುಟಗಳು 280, ಬೆಲೆ ರು. 195

ಕನ್ನಡದಲ್ಲಿ ಡಿವೈನ್ ಕಾಮಿಡಿ
ಇಟಲಿಯ ಮಹಾಕವಿ ಡಾಂಟೆ ಅಲಿಘಿಯೇರಿ ಅವರ ಮಹಾಕಾವ್ಯ 'ಡಿವೈನ್ ಕಾಮಿಡಿ'ಯನ್ನು ಪ್ರೊ. ಕೆ.ಎಂ. ಸೀತಾರಾಮಯ್ಯ ಅವರು ಕನ್ನಡಕ್ಕೆ ತಂದಿದ್ದಾರೆ. ಪಾಶ್ಚಾತ್ಯ ಮಾರ್ಗ ಕಾವ್ಯಗಳಲ್ಲಿ ಡಿವೈನ್ ಕಾಮಿಡಿ ಒಂದು ಮೇರುಕೃತಿ. ಇದರ ಮೊದಲ ಭಾಗ ಇನ್‌ಫರ್ನೊ (ನರಕಲೋಕ) ಅನುವಾದ ಇಲ್ಲಿದೆ. ಮುಂದಿನ ಎರಡು ಭಾಗಗಳು ಬರಬೇಕಾಗಿವೆ. ಇದರ ಮುಂದಿನ ಭಾಗ ಪರ್ಗೆಟೋರಿಯೊ (ಪ್ರಾಯಶ್ಚಿತ್ತ ಲೋಕ) ಮತ್ತು ಪ್ಯಾರಡೈಸೋ (ಪರಮಾನಂದ ಲೋಕ). ಇಂಗ್ಲಿಷ್ ಅನುವಾದದ ಮೂಲಕ ಇದು ಕನ್ನಡಕ್ಕೆ ಬಂದಿದೆ. ಡಿವೈನ್ ಕಾಮಿಡಿಯನ್ನು ಮೀರಿಸುವ ಕೃತಿ ಇಟಲಿ ಭಾಷೆಯಲ್ಲಿ ಮತ್ತೊಂದಿಲ್ಲ. ಇದು ಋಷಿದರ್ಶನ. ಇಲ್ಲಿಯ ಆತ್ಮದರ್ಶನ ಒಂದು ಅಭಿಪ್ರಾಯದ ಪ್ರಕಾರ, 1300ನೇ ವರ್ಷದ ಮಾರ್ಚ್ 24 (ಗುಡ್‌ಫ್ರೈಡೆ ದಿನ)ರಿಂದ ಏಪ್ರಿಲ್ 1ನೇ ತಾರೀಖಿನ ಅವಧಿಯಲ್ಲಿ ಮನಸ್ಸಿಗೆ ಹೊಳೆದದ್ದು ಎಂಬ ನಂಬಿಕೆ ಇದೆ. ಡಾಂಟೆ ನಮ್ಮ ಪಂಪನ ಹಾಗೆ ಕವಿಯೂ ಹೌದು ಕಲಿಯೂ ಹೌದು. ಗಡಿಪಾರು ಶಿಕ್ಷೆಗೆ ಗುರಿಯಾದ ಆತ ತನ್ನ ತೊಳಲಾಟದ ದಿನಗಳಲ್ಲಿ ಈ ಕಾವ್ಯವನ್ನು ಬರೆದನಂತೆ. ದೇವರ ಸೃಷ್ಟಿಯಲ್ಲಿ ಮೊದಲು ನರಕ ಲೋಕವೇ ಇರಲಿಲ್ಲ. ತನ್ನ ವಿರುದ್ಧ ದಂಗೆಯೆದ್ದ ಲ್ಯೂಸಿಫರನನ್ನು ಶಿಕ್ಷಿಸಲು ದೇವರು ನರಕವನ್ನು ಸೃಷ್ಟಿಸುತ್ತಾನೆ. ಈ ಕಾವ್ಯದಲ್ಲಿ ಯಾವ ಆಕರ್ಷಕವಾದ ಕತೆಯೂ ಇಲ್ಲ. ಆದರೂ ಇದು ಓದಿನ ಆಕರ್ಷಣೆ ಕಳೆದುಕೊಳ್ಳುವುದಿಲ್ಲ. ಇದೇ ಈ ಕೃತಿಯ ವಿಶೇಷ.
ಕೃತಿ: ಡಿವೈನ್ ಕಾಮಿಡಿ, ಪ್ರಕಾರ: ಕಾವ್ಯ, ಏಕೆ ಓದಬೇಕು?: ಇಟಲಿಯ ಮಹಾಕಾವ್ಯ ಅರಿಯಲು
ಪ್ರ: ಅಂಕಿತ ಪುಸ್ತಕ, ಬೆಂಗಳೂರು, ಪುಟಗಳು 256, ಬೆಲೆ ರು. 195

ತಾತಾಸಾಹೇಬ ಬಾಂಗಿ ಬದುಕು
'ತುಂಬಿದುದು ತುಳುಕದು ನೋಡಾ' ಎಂಬಂತೆ ಬದುಕಿದವರು ತಾತಾಸಾಹೇಬ ಬಾಂಗಿಯವರು. ಜಮಖಂಡಿ ಸಂಸ್ಥಾನದ ಮುಖ್ಯಮಂತ್ರಿಯಾಗಿದ್ದವರ ಪುತ್ರ ಇವರು. ವೃತ್ತಿಯಿಂದ ವಕೀಲರು. ಸಮಾಜಸೇವೆಯಲ್ಲಿ ಎತ್ತಿದ ಕೈ ಇವರು. ಜಮಖಂಡಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜನಪರ ಚಳವಳಿಗಳಲ್ಲಿ ಇವರು ಸಕ್ರಿಯವಾಗಿ ತೊಡಗಿಸಿಕೊಂಡವರು. ಇಳಿವಯಸ್ಸಿನಲ್ಲಿ ಅವರು ತಮ್ಮ ಜೀವನ ಕತೆಯನ್ನು 'ಸೇವೆಗಾಗಿ ಬಾಳು' ಹೆಸರಿನಲ್ಲಿ ಬರೆದ್ದಾರೆ. ಆತ್ಮಕಥನಗಳು ವ್ಯಕ್ತಿಯ ಚರಿತ್ರೆಯಾಗುವುದರ ಜೊತೆಯಲ್ಲಿಯೇ ಸಮಕಾಲೀನ ಸಮಾಜದ ಚರಿತ್ರೆಯೂ ಆಗಿರುತ್ತದೆ. ಇದರಲ್ಲಿ ಅವರು ತಮ್ಮ ತಂದೆಯ ಕುರಿತೂ ಬರೆದಿದ್ದಾರೆ. ಇದು ಅಂದಿನ ಚರಿತ್ರೆಯ ಭಾಗ. ನಮ್ಮ ಸ್ವಾತಂತ್ರ್ಯ ಕಾಲದ ಚರಿತ್ರೆಯನ್ನು ಬರೆದವರು ಇದನ್ನು ಬರೆದಿರಲಿಕ್ಕಿಲ್ಲ. ಇದು ಚರಿತ್ರಕಾರರ ಮಿತಿಯನ್ನು ತೋರಿಸುತ್ತದೆ. ಅದೇ ಕಾಲಕ್ಕೆ ಇಂಥ ಆತ್ಮಕಥನಗಳು ಹೇಗೆ ಇತಿಹಾಸದ ಸರಕಾಗಬಲ್ಲುದು ಎಂಬುದನ್ನೂ  ಹೇಳುತ್ತದೆ. ಆತ್ಮಕಥೆಗಳು ಹೇಗೆ ಮರಾಠಿ ಸಾಹಿತ್ಯದಲ್ಲಿ ಹೊಸತನವನ್ನು ತಂದಿದೆಯೋ ಅದೇ ರೀತಿ ಕನ್ನಡ ಸಾಹಿತ್ಯಕ್ಕೂ ಹೊಸತನವನ್ನು ನೀಡಬಲ್ಲುದು. ಈ ದಿಸೆಯಲ್ಲಿ ಈ ಕೃತಿ ಸ್ವಾಗತಾರ್ಹವಾದದ್ದು.
ಕೃತಿ: ಸೇವೆಗಾಗಿ ಬಾಳು  , ಪ್ರಕಾರ: ಆತ್ಮಚರಿತ್ರೆ
ಏಕೆ ಓದಬೇಕು?: ಸಮಾಜ ಸೇವೆಯ ಪ್ರೇರಣೆ ಪಡೆಯಲು
ಪ್ರ: ಲೇಖಕರೇ ಪ್ರಕಾಶಕರು, ಜಮಖಂಡಿ, ಪುಟಗಳು 380, ಬೆಲೆ ರು. 200

ಚಾರಿತ್ರ್ಯವೇ ಜೀವನ
ನ್ಯಾಯಾಂಗದಲ್ಲಿ ಉನ್ನತ ಹುದ್ದೆಯನ್ನು ನಿರ್ವಹಿಸಿ ನಿವೃತ್ತರಾಗಿ ಬಳಿಕ ರಾಜಕೀಯದಲ್ಲೂ ಪ್ರಧಾನ ಪಾತ್ರವಹಿಸಿದ ಹಿರಿಯರಾದ ಮಂಡಗದ್ದೆ ರಾಮಾ ಜೋಯಿಸ್ ಅವರು ಸ್ವಾಮಿ ವಿವೇಕಾನಂದರ ಬೋಧನೆಯ ಪ್ರಭಾವಕ್ಕೆ ಒಳಗಾದವರು. ನಮ್ಮ ಶಿಕ್ಷಣ ಚಾರಿತ್ರ್ಯವಂತ ಯುವಕರನ್ನು ತಯಾರಿಸಬೇಕೆಂಬ ವಿವೇಕಾನಂದರ ವಾಣಿಯಲ್ಲಿ ನಂಬಿಕೆ ಇಟ್ಟವರು. ಸರ್ಕಾರ ಶಿಕ್ಷಣ ನೀತಿಯನ್ನು ಸುಧಾರಿಸುವುದಕ್ಕೆ ಕಾಯದೇ ಮಕ್ಕಳಿಗೂ ಯುವಕರಿಗೂ ಹಾಗೂ ಹಿರಿಯರಿಗೂ ಧರ್ಮಾಚರಣೆ ಮಾಡಿ ಚಿರಂಜೀವಿಯಾಗಿ ಬಾಳಲು ಮಾರ್ಗದರ್ಶನ ನೀಡಬಲ್ಲ ಸಂಸ್ಕೃತ ಶ್ಲೋಕಗಳನ್ನು ರಾಮಾಯಣ, ಮಹಾಭಾರತ, ಭಗವದ್ಗೀತೆ, ಮನುಸ್ಮೃತಿ, ಹಿತೋಪದೇಶ, ಪಂಚತಂತ್ರ, ಸುಭಾಷಿತ ರತ್ನಭಂಡಾಗಾರ ಇತ್ಯಾದಿ ಗ್ರಂಥಗಳಿಂದ ಸಂಗ್ರಹಿಸಿ 'ಚಾರಿತ್ರ್ಯವೇ ಜೀವನ' ಎಂಬ ಶಿರೋನಾಮೆಯಲ್ಲಿ ಬರೆದಿದ್ದಾರೆ.ಪುಸ್ತಕ ಚಿಕ್ಕದಾದರೂ ಇದರ ಮೌಲ್ಯ ದೊಡ್ಡದು. ಮೂಲ ಶ್ಲೋಕಗಳಿಗೆ ಜೋಯಿಸರು ತಮ್ಮ ಅನುಭವದಿಂದ ಬಲತುಂಬಿದ್ದಾರೆ. ಕಾಂತಾಸಮ್ಮಿತ ಶೈಲಿ ಮನಮುಟ್ಟುತ್ತದೆ.
ಕೃತಿ: ಚಾರಿತ್ರ್ಯವೇ ಜೀವನ, ಪ್ರಕಾರ: ಚಿಂತನ, ಏಕೆ ಓದಬೇಕು?: ಜೀವನ ಮೌಲ್ಯ ಅರಿಯಲು, ಪ್ರ: ಅಂಕಿತ ಪುಸ್ತಕ, ಬೆಂಗಳೂರು, ಪುಟಗಳು 120, ಬೆಲೆ ರು. 95



-ಡಾ. ವಾಸುದೇವ ಶೆಟ್ಟಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; 2 ದಿನಗಳ ಡೆಡ್‌ಲೈನ್‌!

ಸಂಶಯ ಬಂದ್ರೆ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ವಿವಿ ಫ್ರಟರ್ನಿಟಿ ಕಾರ್ಯಕ್ರಮದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ‘ನನ್ನ ಸರದಿ ಯಾವಾಗ?’ ಎಂದು ಕೂಗಿದ ಪುರುಷರು!

ಹೊಸ ಪಕ್ಷದ ಹೆಸರು ಘೋಷಿಸಿದ ಮಾಜಿ IAS ಅಧಿಕಾರಿ ದಿವ್ಯಾ ಮಿತ್ತಲ್; 2027ರ ಯುಪಿ ಚುನಾವಣೆಗೆ ಸ್ಪರ್ಧೆ

SIR ವಿವಾದ: ಚುನಾವಣಾ ಆಯೋಗ, ಜ್ಞಾನೇಶ್ ಕುಮಾರ್​ಗೆ ಸುಪ್ರೀಂ ಕೋರ್ಟ್ ನೋಟಿಸ್; ರಾಹುಲ್ ಗಾಂಧಿಗೂ ತರಾಟೆ