ಕರ್ನಾಟಕದ ಅರಣ್ಯದಲ್ಲಿ ಬಿಳಿ ಹುಲಿಗಳಿಲ್ಲ. ಅವನ್ನು ನೋಡಬೇಕಾದರೆ ನೀವು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೋ, ಮೈಸೂರು ಮೃಗಾಲಯಕ್ಕೋ ಹೋಗಬೇಕು. ಬನ್ನೇರುಘಟ್ಟದಲ್ಲಿರುವ ಬಿಳಿ ಹುಲಿಯ ಗಾತ್ರ ಬೆರಗುಗೊಳಿಸುವಂತಿದೆ, ಮೈ ನವಿರೇಳಿಸುವಂತಿದೆ.
ಬಿಳಿ ಹುಲಿಯೆಂಬುದು ಹುಲಿಯ ಜಾತಿಯಲ್ಲ. ಅದು ಸಾಮಾನ್ಯ ಹುಲಿಗಳಲ್ಲೇ ಮೈ ಬಣ್ಣದಲ್ಲಿ ವ್ಯತ್ಯಾಸವಾಗಿ ಉಂಟಾಗುವಂಥದು. ಮೈಬಣ್ಣವನ್ನು ನಿರ್ಧರಿಸುವ ಮೆಲನಿನ್ ಅಂಶ ಹೆಚ್ಚುಕಡಿಮೆಯಾಗುವುದರಿಂದ ಇಂಥ ಸ್ಥಿತಿ ಉಂಟಾಗುತ್ತದೆ. ಸಾಮಾನ್ಯವಾಗಿ ಬಂಗಾಳ ಹುಲಿಗಳಲ್ಲಿ ಇದು ಘಟಿಸುತ್ತದೆ. ಬಿಳಿ ಹುಲಿಯ ಮರಿಗಳು ಬಿಳಿಯಾಗಿರಬೇಕೆಂದೇನೂ ಇಲ್ಲ. ರೇವಾದ ಮಹಾರಾಜ ಮಾರ್ತಾಂಡ ಸಿಂಗ್, ಈ ಹುಲಿಯನ್ನು ಮೊದಲ ಬಾರಿಗೆ ಹಿಡಿದು ಮರಿಗಳನ್ನು ಪಡೆದ ಹೆಗ್ಗಳಿಕೆ ಹೊಂದಿದ್ದಾನೆ.