ಸಾಪ್ತಾಹಿಕಪ್ರಭ

ಶೂ ಒಳಗಿನ ಸ್ವರ್ಗ (ಗಾಂಧಿ ಸೀಟು)

 
ಚಿತ್ರ: ಚಿಲ್ಡ್ರನ್ ಆಫ್ ಹೆವನ್ (1998)
ಭಾಷೆ: ಪರ್ಷಿಯನ್
ನಿರ್ದೇಶನ: ಮಾಜಿದ್ ಮಜಿದಿ
ಅವಧಿ: 89 ನಿಮಿಷ
ತಾರಾಗಣ: ಅಮಿರ್ ಫಾರೊಕ್ ಹಶೇಮಿಯನ್, ಬಹೇರ್ ಸಿದ್ಧಿಕ್ಕಿ, ರೆಝಾ ನಾಜಿ, ಫೆರೆಷ್ಟ್ ಸರಬಂದಿ.

ಚಿತ್ರಜಗತ್ತೇ ಅಚ್ಚರಿ ಪಡುವಂಥ ಕಥೆಗಳನ್ನು ಕೊಡುವಲ್ಲಿ ಇರಾನಿ ನಿರ್ದೇಶಕ ಮಾಜಿದ್ ಮಜಿದಿಯದ್ದು ಎತ್ತಿದ ಕೈ. 'ಬರನ್‌', 'ಚಿಲ್ಡ್ರನ್ ಆಫ್ ಹೆವನ್‌', 'ಕಲರ್ ಆಫ್ ಪ್ಯಾರಡೈಸ್‌', 'ಸಾಂಗ್ ಆಫ್ ಸ್ಪ್ಯಾರೋಸ್‌', 'ಫಾದರ್‌' ಚಿತ್ರಗಳಲ್ಲಿ ಅದು ಸಾಬೀತಾಗಿದೆ. ಮನುಷ್ಯ ಸಂಬಂಧಗಳ ನಡುವಿನ ಸಂದಿಗ್ಧತೆಗಳನ್ನು ಆಳವಾಗಿ ತೆರೆದಿಡುವುದು ಇವರ ಚಿತ್ರಗಳ ಹೆಚ್ಚುಗಾರಿಕೆ. ಅದರಲ್ಲೂ 'ಚಿಲ್ಡ್ರನ್ ಆಫ್ ಹೆವನ್‌' ಸಿನಿಮಾಸಕ್ತರ ಮೆಚ್ಚಿನ ಚಿತ್ರ.
ಕಿತ್ತೋಗಿರುವ ತಂಗಿಯ ಶೂಗಳನ್ನು ಸರಿಮಾಡಿಸಿಕೊಂಡು ಬರುವಾಗ ಅವುಗಳನ್ನು ಕಳೆದುಕೊಂಡು ಮನೆಗೆ ಬರುವ ಅಣ್ಣ, ಶೂಗಳಿಲ್ಲದೆ ಶಾಲೆಗೆ ಹೋಗುವುದು ಹೇಗೆ? ಎನ್ನುವ ತಂಗಿ, ಒಂದೇ ಜೊತೆ ಶೂಗಳನ್ನು ಸರದಿಯಂತೆ ಬಳಸುವ ಅವರ ಒಪ್ಪಂದ. ಹೀಗೆ ಮೂರ್ನಾಲ್ಕು ಸಾಲಿನಲ್ಲಿ ಹೇಳಬಹುದಾದ ಸಿಂಪಲ್ ಕಥೆ ಇದು. ಆದರೆ, ಇದರಲ್ಲಿ ಬೆರೆತ ಮಾನವೀಯ ಸಂಬಂಧಗಳು, ಬಡವನ ಅಸಹಾಯಕತೆ, ಮಕ್ಕಳ ಮುಗ್ಧ ಮನಸು ರೋಚಕ. ಆಲಿ ತನ್ನ ತಂಗಿಯ ಶೂಗಳನ್ನು ಸರಿಪಡಿಸಿಕೊಳ್ಳುವ ದೃಶ್ಯದೊಂದಿಗೆ ಚಿತ್ರ ಆರಂಭವಾಗುತ್ತದೆ. ಶೂ ಸರಿಮಾಡಿಕೊಂಡು ಬರುವ ದಾರಿಯಲ್ಲಿ ತರಕಾರಿ ಅಂಗಡಿಯಲ್ಲಿ ಆಲೂಗಡ್ಡೆ ತೆಗೆದುಕೊಳ್ಳುವಾಗ ಕಸದ ಗಾಡಿಯವನು ಹಳೆ ಶೂಗಳನ್ನು ಕಸಕ್ಕೆ ಹಾಕಿಕೊಂಡು ಹೋಗುತ್ತಾನೆ. ನಂತರ ಶೂಗಳು ಕಾಣದೆ ಒದ್ದಾಡುವ ಆಲಿ, ತಂಗಿ ಜಹ್ರಾ ಬಳಿ ಹೇಳಿಕೊಳ್ಳುತ್ತಾನೆ. ಆಕೆ ತಾನು ಶೂಗಳಿಲ್ಲದ ಶಾಲೆಗೆ ಹೋಗಲಾರೆ ಎಂದು ತಂದೆಗೆ ಹೇಳಲು ಹೋದಾಗ 'ದಯವಿಟ್ಟು ಹೇಳಬೇಡ' ಎಂದು ಅಳುತ್ತಾನೆ ಆಲಿ.
ಆಲಿಯ ಹಳೆ ಶೂಗಳನ್ನೇ ಇಬ್ಬರು ಬಳಸುವ ನಿರ್ಧಾರಕ್ಕೆ ಬರುತ್ತಾರೆ. ಬೆಳಗ್ಗೆ ಜಹ್ರಾಳ ಸರದಿ, ಮಧ್ಯಾಹ್ನ ಆಲಿ ಸರದಿ. ಹೀಗೆ ಒಂದೇ ಜೊತೆ ಶೂಗಳನ್ನು ಇಬ್ಬರೂ ಬಳಸುತ್ತಿರುತ್ತಾರೆ. ಶಾಲೆ ಬಿಟ್ಟ ಕೂಡಲೇ ಓಡಿ ಬಂದು ದಾರಿ ಮಧ್ಯೆ ಅಣ್ಣನಿಗೆ ಶೂಗಳನ್ನು ಕೊಡುತ್ತಾಳೆ. ಇದರಿಂದ ಆಲಿ ದಿನಾ ಶಾಲೆಗೆ ತಡವಾಗಿ ಹೋಗುತ್ತಾನೆ. ಶಿಕ್ಷಕನಿಂದ ನಿಂದಿಸಿಕೊಳ್ಳುತ್ತಾನೆ. ಒಮ್ಮೆ ಜಹ್ರಾ ಓಡಿ ಬರುವಾಗ ಒಂದು ಶೂ ಕಾಲಿನಿಂದ ಕಳಚಿ ಚರಂಡಿಯೊಳಕ್ಕೆ ಬೀಳುತ್ತದೆ. ಕೊಚ್ಚೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ಶೂವೊಂದನ್ನು ತೆಗೆದುಕೊಳ್ಳುವ ಜಹ್ರಾಳ ಚಡಪಡಿಕೆ ಹೇಳತೀರದು. ನಾಪತ್ತೆಯಾಗಿದ್ದ ಪಿಂಕ್ ಬಣ್ಣದ ಶೂಗಳು ತನ್ನ ಸಹಪಾಠಿಯ ಕಾಲಿನಲ್ಲಿ ಜಹ್ರಾಗೆ ಕಾಣುತ್ತದೆ. ಸಹಪಾಠಿಯ ಮನೆ ಪತ್ತೆ ಹಚ್ಚಿ ಶಾಲೆ ಬಿಟ್ಟ ಮೇಲೆ ಅಣ್ಣನೊಂದಿಗೆ ಆಕೆಯ ಮನೆಗೆ ಹೋಗುವ ಜಹ್ರಾ ಮತ್ತು ಆಲಿಗೆ ನಿರಾಸೆಯಾಗುತ್ತದೆ. ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿರುವ ನಿರ್ಗತಿಕನ ಮಗಳಿಂದ ಶೂಗಳನ್ನು ಮರಳಿ ಪಡೆಯಲು ಮನಸ್ಸು ಒಪ್ಪುವುದಿಲ್ಲ. ಮಕ್ಕಳ ಮುಗ್ಧತೆ, ಕನಸುಗಳನ್ನು ಕಣ್ತುಂಬಿಕೊಳ್ಳಲು ಫಿಲಾಸಫಿಗಳ ಬೋಧನೆಯ ಅಗತ್ಯವಿಲ್ಲ ಎನ್ನುವ ಇಂಥ ದೃಶ್ಯಗಳು ಸಾಕಷ್ಟಿವೆ.
ನಿತ್ಯ ಓಡುವುದೇ ಜೀವನದ ಭಾಗವಾಗಿಸಿಕೊಂಡಿರುವ ಆಲಿ, ಮಧ್ಯಮ ಹಾಗೂ ಶ್ರೀಮಂತರ ಮಕ್ಕಳೇ ತುಂಬಿಕೊಂಡಿರುವ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಾನೆ. ಸ್ಪರ್ಧೆಯಲ್ಲಿ 3ನೇ ಬಹುಮಾನ ಒಂದು ಜೊತೆ ಹೊಸ ಶೂಗಳು. ಹೇಗಾದರೂ ಮಾಡಿ ತಂಗಿಗೆ ಹೊಸ ಶೂಗಳನ್ನು ಕೊಡಬೇಕೆಂಬ ಏಕೈಕ ಗುರಿ ನೆತ್ತಿ ಸುಡುವ ಸೂರ್ಯನ ಕಿರಣಗಳು, ಪಾದಗಳಿಗೆ ಬೆಂಕಿ ಉಂಡೆಗಳ ಅನುಭವ ನೀಡುವ ಡಾಂಬರು ರಸ್ತೆಯ ಹಿಂಸೆ ಕೂಡ ಆತನ ಹೆಜ್ಜೆಯ ರಭಸಕ್ಕೆ ತಡಬಡಾಯಿಸುತ್ತದೆ. ಓಡುವ ಕುದುರೆಯಂತೆ ಮೊದಲ ಸ್ಥಾನಕ್ಕೆ ಬಂದರೂ ಇಬ್ಬರನ್ನು ಮುಂದೆ ಬಿಟ್ಟು 3ನೇ ಸ್ಥಾನಕ್ಕೆ ಬರುತ್ತಾನೆ. ಆದರೆ ಆ ಸ್ಥಾನವನ್ನೂ ಇನ್ನೊಬ್ಬ ಹೈಜಾಕ್ ಮಾಡಲು ಹೊರಟಾಗ ಹುಚ್ಚನಂತೆ ಓಡಿ ಗೆಲ್ಲುತ್ತಾನೆ. ಆದರೂ ಆಲಿಗೆ ಶೂಗಳು ಸಿಗಲ್ಲ! ಅವನು ಗೆದ್ದಿದ್ದು ಮೊದಲ ಸ್ಥಾನ. ಆದರೆ ಮೊದಲ ಬಹುಮಾನವಾಗಿ ಬರುವ ಕಪ್‌ಗಿಂತ ಥರ್ಡ್ ಪ್ರೈಸ್ ಶೂಗಳ ಮೇಲೆ ಆಲಿಗೆ ಕಣ್ಣು.
ಮಧ್ಯಮ ಕೆಳ ಮಧ್ಯಮ ಕುಟುಂಬಗಳ ಬದುಕಿನ ಜಂಜಾಟಗಳು, ಅವುಗಳನ್ನು ಎದುರಿಸುವ ಬದುಕಿನ ಹೋರಾಟವನ್ನು ಕಟ್ಟಿಕೊಡುವ ಪ್ರಾಮಾಣಿಕತೆ ಪ್ರತಿ ಫ್ರೇಮ್‌ನಲ್ಲೂ ಕಾಣಬಹುದು. ಟೀಗೆ ಸಕ್ಕರೆ ಇಲ್ಲದಿದ್ದರೂ ಮನೆಯಲ್ಲಿರುವ ಮಸೀದಿ ಸಕ್ಕರೆಯನ್ನು ಬಳಸದ, ಅನಾರೋಗ್ಯದಿಂದ ಬಳಲುತ್ತಿದ್ದರೂ ಪಕ್ಕದ ಮನೆಯ ವೃದ್ಧ ದಂಪತಿಗೆ ಊಟ ಕೊಡುವ ಕುಟುಂಬ. ಪ್ರೇಕ್ಷಕರನ್ನು ಆಕರ್ಷಿಸಲು ಬೇಕಿರುವುದು ಹಾಲಿವುಡ್ ತಂತ್ರಗಳೇ ಹೊರತು ಬಾಲಿವುಡ್ ನಾಯಕಿಯರಲ್ಲ.
ಟೆಹರನ್‌ನಲ್ಲಿ ಅಪ್ಪನೊಂದಿಗೆ ಸೈಕಲ್‌ನಲ್ಲಿ ಪಯಣಿಸುವ ಆಲಿಗೆ ಬಹುಮಹಡಿ ಕಟ್ಟಡಗಳು, ವೈಭವದ ಬಂಗಲೆಗಳು, ವಿವಿಧ ಕಂಪನಿಗಳ ಉತ್ಪನ್ನಗಳು ಕಾಣುತ್ತವೆ. ಅವನ ನೋಟದಲ್ಲಿ ನಮ್ಮ ನೋಟವೂ ಸೇರಿಕೊಂಡು 'ಅರೆ! ಇಷ್ಟು ದೊಡ್ಡ ಮಟ್ಟದಲ್ಲಿ ಮುಂದುವರಿದ ನಗರದ ಪಕ್ಕದಲ್ಲಿರುವ ಕುಟುಂಬದ ಆಲಿಗೆ ಒಂದು ಜೊತೆ ಶೂ ತೆಗೆದುಕೊಳ್ಳುವುದು ದೊಡ್ಡ ಕಷ್ಟವೇ?' ಎನ್ನುವ ಪ್ರಶ್ನೆ ಮೂಡುತ್ತದೆ. ಆ ಹುಡುಗನಿಗೆ ಕಾಡುವುದೂ ಅದೇ ಪ್ರಶ್ನೆ!


= ಆರ್. ಕೇಶವಮೂರ್ತಿ
keshavarkm1@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': 'ಜೈಲರ್ 2' ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!