ಶಿವರಾಮ ಕಾರಂತರು ಯಾರನ್ನು ಉದ್ದೇಶಿಸಿ ಹಾಗಂದರೋ ಸ್ಪಷ್ಟವಿಲ್ಲ, 'ರಕ್ತಗತವಾಗಿ ಬರುವುದು ರೋಗ. ಕಲೆಯಲ್ಲ.' ಬಹುಶಃ ಗೌರೀಶ್ ಕಾಯ್ಕಿಣಿ ಮತ್ತು ಜಯಂತ ಕಾಯ್ಕಿಣಿಯವರನ್ನು ಗಮನಿಸಿದಾಗ ಕಾರಂತರ ಆ ಗ್ರಹಿಕೆ ಸುಳ್ಳೆಂದು ಮತ ನೀಡಬಹುದು. ಅದಿರಲಿ, ಕೆಲವೊಮ್ಮೆ ರಕ್ತಗತವಾಗಿ ಚಟಗಳೂ ಬರುವುದುಂಟು. ಜಯಂತ ಕಾಯ್ಕಿಣಿಗಿರುವ ಟೀ ಚಟ, ಅಪ್ಪನಿಂದಲೇ ಟ್ರಾನ್ಸ್ಫರ್ ಆಗಿರುವಂಥದ್ದು.
ಹೆಸರಾಂತ ಐರಿಷ್ ನಾಟಕಕಾರ ಜಾನ್ ಮಿಲಿಂಗ್ಟನ್ ಸಿಂಜ್ ಬಗ್ಗೆ ಹೇಳಿಯೇ ಕಾಯ್ಕಿಣಿ ಬಗ್ಗೆ ಮಾತುದುರಿಸಬೇಕು. ಸಿಂಜ್, ದಿನಗಟ್ಟಲೆ ಜಡಗಟ್ಟಿ ಶವದಂತೆ ಕೂರುವ ಋಷಿಭೀಕರ ಮೌನಿ. ಅನಾಗರಿಕರೊಳಗಿನ ಕಥೆಗಳನ್ನು ಬಗೆಯಲು ಈತ ತನ್ನದೇ ನಾಡಿನ ಆರನ್ ದ್ವೀಪಗಳಲ್ಲಿ ನೆಲೆಯೂರಲು ಹೋಗುತ್ತಾನೆ. ಈತನ ಕೈಯಲ್ಲಿ ವಾಚ್ ಇದ್ದ ಕಾರಣ ಆ ಮುಗ್ಧರು ಕೇಳುತ್ತಿದ್ದರು, 'ಟೈಮೆಷ್ಟು?'. ಈತ ಹೇಳುತ್ತಿದ್ದ. ಮತ್ತೆ ಅವರು ಕೇಳುತ್ತಿದ್ದರು, 'ಸೂರ್ಯ ಮುಳುಗಲು ಇನ್ನೆಷ್ಟು ಹೊತ್ತು ಬೇಕು?'. ಇವನು ಕಂಗಾಲಾಗುತ್ತಿದ್ದ. ಆಗ ವಾಚ್ ಹೊಸ ಪರಿಚಯವಾಗಿದ್ದ ಕಾರಣ (1897), ಅದನ್ನು ಕಟ್ಟಿಕೊಳ್ಳುವುದು ಸಿಂಜ್ಗಿದ್ದ ದೊಡ್ಡ ಗೀಳು. ಸ್ನಾನದ ವೇಳೆಯೂ ಕಟ್ಟಿ, ಎಷ್ಟೋ ವಾಚುಗಳ ಅಕಾಲಿಕ ಮರಣಕ್ಕೆ ಕಾರಣನಾಗಿದ್ದ. ಒಮ್ಮೆ ಅದೇ ದ್ವೀಪದಲ್ಲೊಂದು ರಾತ್ರಿ ರಂಗಪ್ರಯೋಗ. ವಾಚು ಕಟ್ಟಿ ನಟಿಸುತ್ತಿದ್ದ ಸಿಂಜ್ ಸಂಭಾಷಣೆ ಅನುಸಾರ ಬಲಗೈಯನ್ನು ನೋಡಿ ಹೀಗೆ ಹೇಳಬೇಕಾಗಿ ಬಂತು, 'ಓಹ್, ಗಂಟೆ ಬೆಳಗ್ಗೆ ಎಂಟಾಯಿತು'. ನಾಟಕ ನೋಡುತ್ತಿದ್ದ ಆ ದ್ವೀಪದ ಮುಗ್ಧ ಪ್ರೇಕ್ಷಕರು, 'ಬೆಳಗ್ಗೆ ಆಯ್ತಂತೆ, ದೋಣಿ- ಬಲೆ ಹಿಡಿದು ಸಮುದ್ರಕ್ಕೆ ಹೋಗೋಣ ನಡೀರೋ' ಅಂತ ಎದ್ದು ಹೊರಟರು.
ಧಾರವಾಡದಲ್ಲಿ ಓದುತ್ತಿದ್ದಾಗ ಜಯಂತ್ ಕಾಯ್ಕಿಣಿ ಹಲವು ನಾಟಕಗಳನ್ನಾಡಿದವರು. ಬಹುಶಃ ಇವತ್ತಿಗೂ ಅದೊಂದು ದೃಶ್ಯ, ನಮ್ಮ ನಾಟಕಗಳ ಬಡಸ್ಥಿತಿಯನ್ನು ಪ್ರತಿನಿಧಿಸುತ್ತಿದೆ. ಕಲಾವಿದರು ರಂಗದ ಮೇಲೆ ಕಾಫಿ, ಟೀ ಕುಡಿಯುವ ದೃಶ್ಯ. ಖಾಲಿ ಕಪ್ನ ತುದಿಗೆ ತುಟಿಯಿಟ್ಟು, ಅದರೊಳಗೆ ಇಲ್ಲದ ಪೇಯವನ್ನು ಕಲಾವಿದ ಚಪ್ಪರಿಸುತ್ತಿರುತ್ತಾನೆ. ಪ್ರೇಕ್ಷಕನಿಗೂ ಗೊತ್ತಿರುತ್ತದೆ. ಅದರೊಳಗೆ ಕಾಫಿ, ಟೀ ಇಲ್ಲ ಅಂತ. ಆದರೆ, ಅಂದು ಪಾತ್ರಧಾರಿಯಾಗಿದ್ದ ಜಯಂತ್ ಕಾಫಿಯ ಮಗ್ಗನ್ನೇ ವೇದಿಕೆ ಮೇಲೆ ಒಯ್ದು, ಕಪ್ಗೆ ಬಗ್ಗಿಸಿ ಕುಡಿಯತೊಡಗಿದರು. ಈ ಕೃತ್ಯದಿಂದ ಅವರೆಷ್ಟು ಎಕ್ಸೈಟ್ ಆದರೆಂದರೆ ಯಾವುದೋ ಪರಂಪರೆಯನ್ನು ಮುರಿದು, ಹೊಸತು ಸೃಷ್ಟಿಸಿದ ಸಂಭ್ರಮದಲ್ಲಿ ಹೇಳಬೇಕಾಗಿದ್ದ ಡೈಲಾಗ್ಗಳನ್ನೇ ಮರೆತುಬಿಟ್ಟರು!
ಕಾಯ್ಕಿಣಿಯವರಿಗೆ ಹುಟ್ಟಿನಿಂದಲೇ ಪ್ರೇಯಸಿಯಾಗಿದ್ದ ಟೀ, ಮುಂಬೈಗೆ ಹೋದ ಮೇಲೆ ಹೆಂಡತಿಯೇ ಆಗಿಹೋಯಿತು. ಇರಾನಿ ಕೆಫೆಗಳ ಟೀ, ಅವರಿಗೆ ಬಲುಪ್ರೀತಿ. ಬಾಂಬೆಯ ಇರಾನಿ ಚಾಯ್, ಲೋಕದಲ್ಲೇ ಭಿನ್ನರುಚಿ. 70-80ರ ದಶಕದಲ್ಲಿ ಪ್ರತಿ ಸರ್ಕಲ್ಲಿನ ಕಟ್ಟಡಗಳ ಮೂಲೆಯಲ್ಲಿ ಈ ಕೆಫೆಗಳಿರುತ್ತಿದ್ದವು. ಅಲ್ಲಿ ಇಡೀ ದಿನ ಕೂತರೂ, ಇರಾನಿ ಮಾಲೀಕರು ಎದ್ದೋಗಿ ಎಂದು ಹೇಳುವವರಲ್ಲ. ಈ ಇರಾನಿ ಕೆಫೆಗಳ ಐಷಾರಾಮಿ ಆವೃತ್ತಿಯೇ ಇಂದಿನ ಕಾಫಿ ಡೇಗಳು. ಸಾಹಿತಿಗಳು, ರಾಜಕಾರಣಿಗಳು, ನಾಟಕಕಾರರು, ಚಿತ್ರನಟರ ಚಿಂತನೆ, ಹರಟೆಗಳಿಗೆ ಇರಾನಿ ಕೆಫೆಗಳು ವೇದಿಕೆ. ಆದರೆ, ಕೋಮುಗಲಭೆಯ ಆರ್ಭಟ ತಾಳಲಾರದೆ, ಸಾವಿರಾರು ಸಂಖ್ಯೆಯಲ್ಲಿದ್ದ ಇರಾನಿ ಕೆಫೆಗಳಿಂದು ಇಪ್ಪತ್ತೈದಕ್ಕಿಳಿದಿವೆ. ಆ ಇರಾನಿ ಕೆಫೆಗಳ ಜಾಗದಲ್ಲಿ ಬಿಯರ್ ಬಾರ್ಗಳು ಬಂದು ಕುಳಿತಿವೆ. ಆದರೆ, ಕಾಯ್ಕಿಣಿ ಮಾತ್ರ, ಬಿಯರ್ಗೆ ಜಂಪ್ ಆಗಲಿಲ್ಲ.
ಪದೇ ಪದೆ ಟೀ ಮಾಡುವುದು ಹೆಂಡ್ತಿಗೆ ಕಷ್ಟವಾಗಬಹುದು ಮತ್ತು ಇದು ಡೈವೋರ್ಸಿಗೆ ಕಾರಣವಾಗಬಾರದು ಅಂತ ಥರ್ಮಾಸ್ ಫ್ಲಾಸ್ ತಂದರು ಕಾಯ್ಕಿಣಿ. ಅದು ಕೂಡ ಗಂಟೆಯೊಳಗೆ ಖಾಲಿ. ಫ್ಲಾಸ್ಕ್ ತಂದ ಮೇಲೆ ಟೀ ಸೇವನೆ ಅಳತೆ ಮೀರಿತು. ಕಾಯ್ಕಿಣಿ ನಿತ್ಯ 20 ಲೋಟ ಟೀ ಕುಡಿಯುತ್ತಾರೆ. ಅವರ ಪ್ರಕಾರ, ಟೀ ಕೂಡ ಬ್ಯೂಟಿಪಾರ್ಲರ್ಗೆ ಹೋಗಿಬಂದಿದೆಯಂತೆ. ಟೀಯಲ್ಲಿ ಮಸಾಲೆ, ಗ್ರೀನ್, ಶುಂಠಿ, ಲೆಮನ್ ಟೀ ಅಂತೆಲ್ಲ ಆಕರ್ಷಕ ವೆರೈಟಿಗಳು ಬಂದಿವೆ. ಆದರೆ, ಇವುಗಳೊಂದಿಗೆ ಬೆಸುಗೆ ಬೆಸೆಯಲು ಕಾಯ್ಕಿಣಿಗೆ ಮನಸ್ಸಿಲ್ಲ. ಸಾದಾ ಟೀಯೇ ಅವರಿಗಿಷ್ಟ. ಹೋಟೆಲ್ಲುಗಳಿಗಿಂತ ರಸ್ತೆ ಬದಿಯ ಟೀಯಲ್ಲೇ ಸ್ವಾದ ಹೆಚ್ಚು. ಮುಂಬೈನ ಚಿತ್ರಕಲಾವಿದೆ ಕಮಲಾಕ್ಷಿ ಶೆಣೈರ ಟೀ ಸೇವನೆಯಿಂದ ಕಾಯ್ಕಿಣಿ ಸ್ಫೂರ್ತಿಗೊಂಡರಂತೆ.
ಕಾಯ್ಕಿಣಿ ಆತ್ಮಸಂತೋಷಕ್ಕಾಗಿ ಟೀ ಕುಡಿಯುತ್ತಾರೆ. ಒಳಗಿನ ಕವಿಯನ್ನು ಟೀ ಮೂಲಕ ಎಚ್ಚರಿಸುತ್ತಾರೆ. ಬರೀ ಹಾಲಿನಲ್ಲಿ ಮಾಡಿದ ಟೀ ಅವರಿಗೆ ಒಗ್ಗದು. ನೀರಿನಿಂದ ಮಾಡಿದ ಟೀ ಇಷ್ಟ. ಬೆಂಗಳೂರಿನಲ್ಲಿ ಇವತ್ತಿಗೂ ಅವರಿಗೆ ಒಳ್ಳೆಯ ಟೀ ಸಿಕ್ಕಿಲ್ಲ. ಕಲಬೆರಕೆಯ ಸೊಪ್ಪು, ಹಾಲು, ಸಕ್ಕರೆ ಹಾಕಿ ಮಾಡುವ ಇಲ್ಲಿನ ಚಹಾವನ್ನು ಕಾಯ್ಕಿಣಿ 'ಟೀ ಕೆಟಗೆರಿ'ಗೆ ಸೇರಿಸುವುದಿಲ್ಲ. ಇಂಥ ಕಲಬೆರಕೆ ಟೀ ಕುಡಿದರೆ, ನಾಲಗೆ ಮೇಲೆ ಬಣ್ಣ ಬಿಡುತ್ತದೆ. ಆದರೆ, ಕರಾವಳಿಯ ಟೀಗಳ ಮೇಲೆ ಇಂಥ ಯಾವುದೇ ಮೊಕದ್ದಮೆಗಳನ್ನು ಅವರು ದಾಖಲಿಸುವುದಿಲ್ಲ.
ಕಾಯ್ಕಿಣಿ ಟೀ ಕುಡಿಯುವುದನ್ನು ಬಹಳ ಮಂದಿ ಚಕಿತರಾಗಿ ನೋಡುತ್ತಾರೆ. ಸ್ಟವ್ವಿನಿಂದ ಆಗಷ್ಟೇ ಇಳಿಸಿದ ಬಿಸಿ ಬಿಸಿ ಟೀಯನ್ನು, ವಿಷ ಕುಡಿದಂತೆ ಗಟಗಟನೆ ಕುಡಿಯುವ ಟೀಕಂಠ ಇವರದ್ದು. ಟೀ ಸ್ವಲ್ಪ ಆರಿದರೂ, ಕೆನೆಗಟ್ಟಿದರೂ ಕುಡಿಯಲು ಹಿಂದೆಮುಂದೆ ನೋಡುತ್ತಾರೆ. ಕಾಯ್ಕಿಣಿಗೆ ಟೀ ಎಷ್ಟು ಇಷ್ಟವೆನ್ನುವುದಕ್ಕೆ ಅಂತಿಮ ಉದಾಹರಣೆ, ಸಂವೇದನಾಶೀಲ ಪತ್ರಕರ್ತ ಚಹ ರಘುನಾಥರನ್ನು ಮೆಚ್ಚುವ ಅವರ ಕಾರಣಗಳಲ್ಲಿ 'ಚಹ'ವೂ ಒಂದು! <
= ಕೀರ್ತಿ
kolgarkeerthi@gmail.com