ಆಷಾಢ ಮಾಸ ಬಂದರೆ ಸಾಕು ನವದಂಪತಿಗಳಿಗೆ ವಿರಹವೋ ವಿರಹ. ಈ ಪ್ರೇಮ ಸಂಕಟವನ್ನು ಸ್ವಾಮಿ ಚಾಮರಾಜೇಶ್ವರ ದೂರ ಮಾಡುತ್ತಾನೆ!
ನವದಂಪತಿಗಳನ್ನು ಆಷಾಢದಲ್ಲಿ ಒಂದುಗೂಡಿಸುವಂತೆ ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಚಾಮರಾಜೇಶ್ವರ ರಥೋತ್ಸವ ನಡೆಯುತ್ತದೆ. ಈ ಜಾತ್ರೆಯಲ್ಲಿ ನವ ಜೋಡಿಗಳು ಪರಸ್ಪರ ಕೈ ಹಿಡಿದು ಜಾತ್ರೆಯ ನೋಟ ಸವಿಯುತ್ತಾ ಅಡ್ಡಾಡುವುದನ್ನು ಕಾಣಬಹುದು. ಅಂದು ಜಿಲ್ಲೆಯ, ಹೊರಗಿನ ನವದಂಪತಿಗಳು ರಥಕ್ಕೆ ಹಣ್ಣ ದವನವನ್ನು ಜೊತೆಯಾಗಿ ಎಸೆಯುತ್ತಾರೆ. ಇಷ್ಟಗಳನ್ನು ನೆರವೇರಿಸುವಂತೆ ಪ್ರಾರ್ಥಿಸುತ್ತಾರೆ. ಇದಕ್ಕೆ ಪೋಷಕರ ಪ್ರೋತ್ಸಾಹವೂ ಇರುತ್ತದೆ.
ಮೂಲಮಾಸವೆಂದು ಕರೆಯುವ ಆಷಾಢದಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಆದರೆ, ಚಾಮರಾಜೇಶ್ವರ ದೇವಸ್ಥಾನದ ರಥೋತ್ಸವಕ್ಕೆ ಇದು ಅನ್ವಯಿಸುವುದಿಲ್ಲ. ಈ ವರ್ಷ ಜುಲೈ 14ರಂದು ಅಂಕುರಾರ್ಪಣವಾಗಿದ್ದು, 21ರಂದು ರಥೋತ್ಸವ. ಪಂಚರಥೋತ್ಸವ ಮೆರವಣಿಗೆ. ಚಾಮರಾಜೇಶ್ವರನ ದೊಡ್ಡ ರಥದ ಜೊತೆ ಮೈಸೂರು ಮಹಾರಾಜರ ವಿಗ್ರಹವುಳ್ಳ ರಥ, ಚಂಡಿಕೇಶ್ವರ ಮತ್ತು ಗಣಪತಿ ರಥ, ಸುಬ್ರಮಣ್ಯೇಶ್ವರ ರಥ, ಮನೋಮ್ಮಣಿ ಅಮ್ಮನವರ ರಥಗಳು ದೇವಸ್ಥಾನಕ್ಕೆ ಪ್ರದಕ್ಷಣೆ ಹಾಕುತ್ತವೆ. ಸಾವಿರಾರು ಮಂದಿಯ ನಡುವೆ ನವವಿವಾಹಿತರು ರಥಗಳಿಗೆ ಪ್ರೀತಿ ಭಕ್ತಿಯಿಂದ ಹಣ್ಣು ದವನ ಎಸೆಯುವುದೇ ವಿಶೇಷ. ಆಗ ಅರಿಕುಠಾರ ಎಂಬ ಗ್ರಾಮವಾಗಿದ್ದ ಇಲ್ಲಿ 1774ರಲ್ಲಿ ಚಾಮರಾಜ ಒಡೆಯರ್ ಜನಿಸಿದರು. ಈ ದೇವಾಲಯ ಸ್ಥಾಪನೆಯಾದದ್ದು ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ. ಇಲ್ಲಿನ ವಾಸ್ತುಶಿಲ್ಪ ಹೊಯ್ಸಳರ ಕಲೆಯನ್ನು ನೆನಪಿಸುತ್ತವೆ.
- ದೇವರಾಜು ಕಪ್ಪಸೋಗೆ