'ಭಾರತ ಮತ್ತು ಪಾಕಿಸ್ತಾನ - ಕಾಶ್ಮೀರ' ಈ ಕೃತಿಯಲ್ಲಿ ಡಾ.ಸಿ. ಚಂದ್ರಪ್ಪ ಅವರು ಇತಿಹಾಸದ ಒಂದು ಇಣುಕು ನೋಟವನ್ನು ಒದಗಿಸಿದ್ದಾರೆ. ಅದನ್ನು ಅವಲೋಕಿಸುವ ಮೊದಲು ತಿಳಿದುಕೊಳ್ಳಬೇಕಾದ ಮುಖ್ಯ ಅಂಶ ಇತಿಹಾಸದ ಅರ್ಥ ಮತ್ತು ಅದರ ಉದ್ದೇಶ. ಇತಿಹಾಸ ಮನುಷ್ಯನ ಗತ ಬದುಕಿನ ಅಭ್ಯಾಸದ ಒಂದು ವಿಶ್ಲೇಷಣೆ ಮತ್ತು ವ್ಯಾಖ್ಯಾನ. ಅದು ಕಾಲದ ಗತಿಯಲ್ಲಿ ಜನ ಹೇಗೆ ಬದಲಾಗುತ್ತ ಹೋಗುತ್ತಾರೆ ಎನ್ನುವುದರ ಬಗ್ಗೆ ಒಂದು ತನಿಖೆ ಮತ್ತು ಕಲ್ಪನೆ ಕೂಡ. ಹಾಗೆ ಮಾಡುವಾಗ ಇತಿಹಾಸಕಾರರು, ಸಂಶೋಧಕರು- ಎಲ್ಲ ಬಗೆಯ ಸಾಕ್ಷಿ, ದಾಖಲೆ ಮತ್ತು ಆಧಾರಗಳನ್ನು ಪರಿಶೀಲಿಸುತ್ತಲೇ, ಪುನಃ ಅಲ್ಲಿಗೆ ಹೋಗಿ, ಮತ್ತೆ ವ್ಯಾಖ್ಯಾನಿಸುತ್ತಾರೆ. ಆದ್ದರಿಂದಲೇ ಇತಿಹಾಸ ನಮಗೆ ಆಗಿಹೋಗಿದ್ದರ ಜತೆಗೆ ವರ್ತಮಾನವನ್ನೂ ಅರ್ಥಮಾಡಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ.
ಈ ಹಿನ್ನೆಲೆಯಲ್ಲಿ ಕೃತಿಯನ್ನು ಅವಲೋಕಿಸಿದಾಗ, ಕಾಶ್ಮೀರ ಸ್ವತಂತ್ರ ಭಾರತದ ತಲೆನೋವಾಗಿ ಪರಿಣಮಿಸಿರುವುದಕ್ಕೆ ನೈಜ ಕಾರಣಗಳನ್ನು ಹುಡುಕಹೊರಟಿದ್ದಾರೆ ಡಾ.ಸಿ. ಚಂದ್ರಪ್ಪ ಅವರು. ಹಾಗೆ ಹುಡುಕುವುದಕ್ಕೆ ತಾವು ನೆಚ್ಚಿಕೊಂಡ ಅನೇಕ ವರದಿಗಳ, ದಾಖಲೆಗಳ ಮತ್ತು ಕೃತಿಗಳ ಬಹು ದೊಡ್ಡಪಟ್ಟಿಯನ್ನೇ ನೀಡಿದ್ದಾರೆ, ಆಕರ ಗ್ರಂಥಗಳ ಸೂಚಿಯಡಿ. ಇಷ್ಟೆಲ್ಲಾ ಇದ್ದರೂ ಕೂಡ ಇದೊಂದು ಸ್ವತಂತ್ರ ಕೃತಿಯೋ, ಇಲ್ಲವೆ ಕೆಲವು ಲೇಖನಗಳಿಂದ ಆಯ್ದ ಭಾಗಗಳ ಅನುವಾದವೋ ಎನ್ನುವ ಅನುಮಾನ ಮೂಡುತ್ತದೆ. ಏಕೆಂದರ 20 ಅಧ್ಯಾಯಗಳ ವಿಸ್ತಾರವಾದ ಬರವಣಿಗೆ ಎಲ್ಲಿಯೂ ಒಂದು ಸಾವಯವ ಸಂಬಂಧ ಕಟ್ಟಿಕೊಳ್ಳದೆ, ಬಿಡಿ ಲೇಖನಗಳ ತುಣುಕುಗಳಂತೆ ಭಾಸವಾಗುತ್ತದೆ. ಅವುಗಳನ್ನು ಒಂದೆಡೆ ಸೇರಿಸಿ, ಸರಿಯಾಗಿ ಸಂಯೋಜಿಸಿ, ತದನಂತರ ಓದಿದರೆ... ಬರೀ ಓದಿದರೆ ಸಾಲದು. ಅಭ್ಯಸಿಸಿದರೆ, ಆಗ ಕಾಶ್ಮೀರ ತನ್ನದೇ ವಿಶಿಷ್ಟ ಧಾರ್ಮಿಕ, ಸಾಂಸ್ಕೃತಿಕ ವೈವಿಧ್ಯಗಳ ಕಾರಣದಿಂದಾಗಿ, ಈ 65 ವರ್ಷಗಳಲ್ಲಿ ಭಾರತದೊಳಕ್ಕೆ ರಾಜಕೀಯವಾಗಿ ಸಂಪೂರ್ಣವಾಗಿ ವಿಲೀನಗೊಳ್ಳಲು ನಿರಾಕರಿಸುತ್ತಾ ಈ ಉಪಖಂಡದ ನಿರಂತರ ಅಶಾಂತಿಗೆ ಕಾರಣವಾಗಿರುವ ಸಂಗತಿಗಳು ಕಂಡುಬರುತ್ತವೆ.
ಕಾಶ್ಮೀರ 5000 ವರ್ಷಗಳಿಗಿಂತ ಹಿಂದಿನಿಂದಲೂ ಇದ್ದಿರಬೇಕು. ಸರಿ ಸುಮಾರು ಈ ಅವಧಿಯಲ್ಲೇ ನಾಗರಿಕತೆಗೊಳಪಟ್ಟ ಜನತೆ ಅಲ್ಲಿದ್ದಿತು ಎನ್ನುವುದನ್ನು ವೈಜ್ಞಾನಿಕ ಪುರಾವೆಗಳು ಸಾಬೀತುಪಡಿಸುತ್ತವೆ. ಹಿಂದೊಮ್ಮೆ ಕಾಶ್ಮೀರ ತನ್ನದೇ ಆದ ಏಕರೂಪದ ಸಂಸ್ಕೃತಿಯನ್ನು ಹೊಂದಿತ್ತು. ಅಲ್ಲಿ ಹೆಚ್ಚಿನವರು ಮಾತಾಡುವುದು ತಮ್ಮ ಮಾತೃಭಾಷೆ ಕಾಶ್ಮೀರಿಯಲ್ಲಿ. ಅದು ಕಶೂರು ಎಂದು ಕರೆಯುವ ಭಾಷೆ. ಅದು ಡಾರ್ಡಿಕ್ ಮೂಲದಿಂದ ಬಂದಿದೆ.
ಕಾಶ್ಮೀರದ ಪ್ರಾಚೀನತೆ ಮೊಹೆಂಜೊದಾರೊ ನಾಗರಿಕತೆಗೆ ಸಮಕಾಲೀನವಾದದ್ದೇ ಆದರೂ, ಅದಕ್ಕೇ ತನ್ನದೇ ಆದ ಸ್ವತಂತ್ರ ಲಕ್ಷಣಗಳಿವೆ. ಮೊದಲಿನಿಂದಲೂ ನಾಗಪೂಜೆ ಇತ್ತು ಮತ್ತು ಅದು ಬೌದ್ಧರ ನಂತರವೂ ಉಳಿದು ಬಂತು. ಉಪಖಂಡಕ್ಕೆ ಆರ್ಯನ್ನರ ಆಗಮನದ ಮೊದಲೇ, ನಾಗ ಮತ್ತು ಇತಿಹಾಸ ಪೂರ್ವ ಬುಡಕಟ್ಟು ಜನಾಂಗ ಅಲ್ಲಿ ವಾಸಿಸುತ್ತಿದ್ದರು ಎನ್ನುವ ಸೂಚನೆಗಳಿವೆ. ನಾಗ-ಪ್ರಾಚೀನ ಬುಡಕಟ್ಟುಗಳ ಚಿಂತನೆಯ ಪ್ರಭಾವದಿಂದಾಗಿ, ಬೌದ್ಧ ಸಿದ್ಧಾಂತ ಪರಿವರ್ತನೆಗೊಂಡು ಕಾಶ್ಮೀರಿ ರೂಪ ಪಡೆಯಿತು. ಬೌದ್ಧ ಸಿದ್ಧಾಂತ ಭಾರತದಲ್ಲಿ ದುರ್ಬಲಗೊಳ್ಳುತ್ತಾ ಹೋದಂತೆ ಮತ್ತು ಅದು ಮುಖ್ಯವಾಹಿನಿ ಧರ್ಮ ಚಿಂತನೆಗಳಲ್ಲಿ ಹಿಂಗಿ ಹೋಗುತ್ತಿದ್ದಂತೆ, ಕಾಶ್ಮೀರದಲ್ಲೂ ಆ ರೀತಿಯ ಪ್ರಕ್ರಿಯೆ ಆರಂಭವಾಯಿತು. ಆದರೆ ಇದು ಪ್ರಜ್ಞಾಪೂರ್ವಕ ಅನುಸಂಧಾನ ರೂಪದಲ್ಲಿ ನಡೆಯಿತು. ಕಾಶ್ಮೀರ ಶೈವತ್ವವನ್ನು ಸ್ವೀಕರಿಸಿತು.
ಏಕದೇವೋಪಾಸನೆಯ ಕಾಶ್ಮೀರಿ ಶೈವತ್ವ ಇಸ್ಲಾಂಗೆ ತುಂಬಾ ಹತ್ತಿರವಾದದ್ದು. ಹೀಗಾಗಿ ಕಾಶ್ಮೀರ ಇಸ್ಲಾಂ ಧರ್ಮವನ್ನು ನೇತ್ಯಾತ್ಮಕವಾಗಿ ಸ್ವೀಕರಿಸಲಿಲ್ಲ. ಬದಲಿಗೆ ಅದು ಸ್ವೀಕರಿಸಿದ್ದು ತನ್ನ ಹೆಮ್ಮೆಯ ಆಧ್ಯಾತ್ಮಿಕ ಪರಂಪರೆಯ ಅತ್ಯಂತಿಕ ಪರಿಣಾಮದ ರೂಪದಲ್ಲಿ. ಕಾಶ್ಮೀರಿ ಜನ ಸಾಮೂಹಿಕವಾಗಿ ಇಸ್ಲಾಂಗೆ ಮತಾಂತರಗೊಂಡಿದ್ದರ ಹಿಂದೆ ಕಾಶ್ಮೀರದ ಪಿತೃ ಸಂತನೆನೆಸಿದ ಅಲಮ್ದರ್-ಎ-ಕಾಶ್ಮೀರ್ ಷೇಕ್ ನೂರುದ್ದೀನ್ ನೂರಾನಿಯವರಂತಹ (14ನೇ ಶತಮಾನ), ಈ ಮಣ್ಣಿನಿಂದ ಹೊಮ್ಮಿದ ಅನನ್ಯ ವ್ಯಕ್ತಿತ್ವದ ಪ್ರಭಾವವಿದೆ. ಇವರು ಇಸ್ಲಾಂ ಅನ್ನು ಕಾಶ್ಮೀರಿ ಅಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ನುಡಿಗಟ್ಟುಗಳಿಗೆ ಅನುವಾದಿಸಿ, ಒಂದು ಬೃಹತಭಾವ ಸ್ಪೋಟಕ್ಕೆ ಕಾರಣವಾದರು. ಇವರ ಕಾವ್ಯ ಶೈವತ್ವ ಮತ್ತು ಸೂಫಿಸಂನ ಮಿಶ್ರಣವಾಗಿದೆ.
ಕಾಶ್ಮೀರದ ಇತಿಹಾಸ ಮತ್ತು ಭೌಗೋಳಿಕತೆ ಮತ್ತು ಜನರ ಧಾರ್ಮಿಕ ನಂಬಿಕೆಗಳು ಕಹಿ ಮತ್ತು ದ್ವೇಷಕ್ಕೆ ಕಾರಣವಾಗಿರುವಂತೆ ಹೊರನೋಟಕ್ಕೆ ಕಂಡುಬರುತ್ತವೆ. ಆದರೆ, ಅದು ಹಾಗೆ ಇರಲಿಲ್ಲ. 13ನೇ ಶತಮಾನದಲ್ಲಿ ಇಸ್ಲಾಂ ದೊಡ್ಡ ಧರ್ಮವಾಗಿ ಹೊರಹೊಮ್ಮಿದರೂ, ಹಿಂದೂಗಳು ಮತ್ತು ಮುಸ್ಲಿಮರು ಸಾಮರಸ್ಯದಿಂದ ಅಕ್ಕಪಕ್ಕದಲ್ಲಿ ಕೂಡಿ ಬಾಳುತ್ತಿದ್ದರು. ಕಾಶ್ಮೀರಿ ಹಿಂದೂಗಳ ಋಷಿ ಸಂಪ್ರದಾಯ, ಸೂಫಿ ಇಸ್ಲಾಂನ ಬದುಕುವ ರೀತಿ ಒಂದಕ್ಕೊಂದು ಪೂರಕವಾಗಿದ್ದವು. ಹೀಗೆ ಇದ್ದ ಕಾಶ್ಮೀರ, ಸ್ವತಃ ತನ್ನೊಳಗಿನ ಅಶಾಂತಿ, ಸಾವು ನೋವುಗಳಲ್ಲದೆ, ನೆರೆಯ ಪಾಕಿಸ್ತಾನದೊಡನೆ ಯಾವಾಗ ಬೇಕಾದರೂ ಯುದ್ಧ ಸಂಭವಿಸುವ ಸಾಧ್ಯತೆಗಳನ್ನು ನಮ್ಮ ಮುಂದೆ ತೆರೆದಿಟ್ಟಿದೆ. ಇದಕ್ಕೆ ಕಾರಣಗಳನ್ನು ಹುಡುಕುವುದೇ ಈ ಕೃತಿಯ ಮತ್ತೊಂದು ಉದ್ದೇಶವಿದ್ದಂತೆ ಕಂಡು ಬರುತ್ತದೆ.
ಕಾಶ್ಮೀರದ ಇತಿಹಾಸದ ನಿರ್ಣಾಯಕ ಘಟ್ಟ ಉಪಖಂಡ ನಂಬಿರುವಂತೆ, ಮುಸ್ಲಿಂ ಆಳ್ವಿಕೆಯ ಆರಂಭವಲ್ಲ. ಬದಲಿಗೆ ಆಳ್ವಿಕೆ ಕಾಶ್ಮೀರಿಗಳಿಂದ ಕಾಶ್ಮೀರೇತರರ ಕೈಗೆ ಬದಲಾದ ಕಾಲ. ಕಾಶ್ಮೀರಿಗಳ ಅಭಿಪ್ರಾಯದಲ್ಲಿ, 1589 ರಿಂದ 1947 ರವರೆಗಿನ ಇಡೀ ಅವಧಿ ಹೊರಗಿನವರ ಆಳ್ವಿಕೆಯೇ. ಆಳಿದವರು ಹಿಂದೂ, ಮುಸ್ಲಿಂ ಅಥವ ಸಿಖ್ ಆಗಿದ್ದರೂ ಕೂಡ. ಹಿಂದೂ ಮತ್ತು ಬೌದ್ಧರ ಹಲವು ಶತಮಾನಗಳ ಆಳ್ವಿಕೆಯ ನಂತರ 15ನೇ ಶತಮಾನದಲ್ಲಿ ಮುಸ್ಲಿಂ ಮೊಘಲ್ ಚಕ್ರಾಧಿಪತ್ಯ. 18ನೇ ಶತಮಾನದಲ್ಲಿ ಅಪ್ಘನ್ ದಾಳಿಕೋರರ ವಶ. 19ನೇ ಶತಮಾನದಲ್ಲಿ ಬ್ರಿಟಿಷರು ಕಾಶ್ಮೀರವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರಾದರೂ ಪುಡಿಗಾಸಿಗೆ ಇಡೀ ಕಣಿವೆಯನ್ನು, ಅತ್ಯಂತ ಕ್ರೂರಿಯಾದ ಜಮ್ಮುವಿನ ಹಿಂದೂ ರಾಜ ಗುಲಾಬ್ ಸಿಂಗ್ಗೆ ಮಾರಾಟ ಮಾಡಿದರು. ಈತನ ಆಳ್ವಿಕೆಯಲ್ಲಿಯೇ ಕಾಶ್ಮೀರ ಕಣಿವೆ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಭಾಗವಾಗಿ ಸೇರ್ಪಟ್ಟಿತು. ಕಾಶ್ಮೀರದಲ್ಲಿ ಸಂಘಟಿತ ಆಧುನಿಕ ರಾಜಕೀಯ ಆಂದೋಲನಗಳು ಆರಂಭವಾದದ್ದು 1931ರಲ್ಲಿ ಮತ್ತು ಕೊನೆಗೊಂಡದ್ದು 1946ರ 'ಕಾಶ್ಮೀರ ಬಿಟ್ಟು ತೊಲಗಿ' ಆಂದೋಲನದಲ್ಲಿ.
ರಾಷ್ಟ್ರ ವಿಭಜನೆ ಮತೀಯ ಅಧಾರದ ಮೇಲೆ ನಡೆದದ್ದು ದುರಂತ. ಹಿಂದೂ ಮಹಾರಾಜನೊಬ್ಬನ ವಿರುದ್ಧ ಕಾಶ್ಮೀರಿ ಜನರು ನಡೆಸಿದ ಹೋರಾಟಕ್ಕೆ ಕಾಂಗ್ರೆಸ್ ನೀಡಿದ ಬೆಂಬಲ ಮತ್ತು ಅದರಲ್ಲಿ ವಹಿಸಿದ ಪಾತ್ರ ಮತ್ತು ಮುಸ್ಲಿಂ ಲೀಗ್ ಇದನ್ನು ಬಹಿರಂಗವಾಗಿ ಖಂಡಿಸಿದ್ದರ ಪರಿಣಾಮವಾಗಿ ಕಾಶ್ಮೀರಿ ಜನರ ಮತ್ತು ಕಾಂಗ್ರೆಸ್ ನಡುವೆ ಒಂದು ಆಳವಾದ ತಾತ್ವಿಕ ಸಂಬಂಧ ಸ್ಥಾಪಿತವಾಯಿತು. ರಾಜಾಡಳಿತವಿರುವ ರಾಜ್ಯವೊಂದು ಯಾವ ರಾಷ್ಟ್ರಕ್ಕೆ ಸೇರಬೇಕೆಂಬ ಆಯ್ಕೆಯ ಹಕ್ಕಿರುವುದು ಅದರ ಜನತೆಗೇ ಹೊರತು ಅದರ ರಾಜನಿಗಲ್ಲ ಎಂದು ನೆಹರೂ ಮತ್ತು ಗಾಂಧಿ ಘೋಷಿಸಿದರು. ಇದೆಲ್ಲಕ್ಕಿಂತಲೂ ಹೆಚ್ಚಾಗಿ, ಅದರ ವಿಶಿಷ್ಟ ಪಾರಂಪರಿಕ ಸಾಂಸ್ಕೃತಿಕ ಅಸ್ಮಿತೆಗನುಗುಣವಾಗಿ ಭಾರತಕ್ಕೆ ಸೇರಿ, ಈ ರಾಷ್ಟ್ರ ನಂಬಿರುವ ಧರ್ಮನಿರಪೇಕ್ಷತೆಯ ತತ್ವಕ್ಕೆ ಉಜ್ವಲ ಸಾಕ್ಷಿಯಾಗಿ ಉಳಿದಿದೆ. ಆದರೆ ಈ ವಿದ್ಯಮಾನದ ಸಾಂದರ್ಭಿಕ ಸಂಕೀರ್ಣತೆಯನ್ನರಿಯದ ಭಾರತ ಮತ್ತು ಪಾಕಿಸ್ತಾನಗಳೆರಡರ ರಾಜಕೀಯ ಕಾರಣಗಳಿಗಾಗಿ ಕಾಶ್ಮೀರ ವಿವಾದದ ವಿಷಯವಾಗಿದೆ.
1947ರಲ್ಲಿ ಕಾಶ್ಮೀರಿಯಲ್ಲದ ಜಮ್ಮು ರಾಜನಿಂದ ಅಧಿಕಾರ ವಹಿಸಿಕೊಂಡ ಷೇಕ್ ಅಬ್ದುಲ್ಲಾ ತಾನು ದಾಸ್ಯತ್ವದ ನಾಲ್ಕು ಶತಮಾನಗಳ ನಂತರ ಕಾಶ್ಮೀರಕ್ಕೆ ಆಜಾದಿ ತಂದುಕೊಟ್ಟಿರುವುದಾಗಿ ಹೇಳಿದರೂ, ಜನರಿಗೆ ನಿಜವಾದ ಸ್ವಾತ್ರಂತ್ರ್ಯ ನೀಡದೇ ಹೋಗಿದ್ದು ದುರಂತ. ಇದರಲ್ಲಿ ದೆಹಲಿಯ ನಾಯಕರದ್ದೂ ಸಾಕಷ್ಟು ಪಾಲಿದೆ.
ಇಂದಿನ ಸಂದರ್ಭದಲ್ಲಿ ಕಾಶ್ಮೀರದ ಉಳಿವು ನಿಂತಿರುವುದು ಭಿನ್ನಾಭಿಪ್ರಾಯಕ್ಕೆ ಗೌರವ ನೀಡುವ ಮನೋಭಾವ ಬೆಳೆಸಿಕೊಳ್ಳುವುದರ ಮೇಲೆ. ಕಾಶ್ಮೀರಿ ಪಂಡಿತರಿಲ್ಲದೆ, ಕಾಶ್ಮೀರಿ ಅಸ್ಮಿತೆಯೇ ಅಪೂರ್ಣವಾಗುತ್ತದೆ ಎನ್ನುವುದನ್ನು ಕಾಶ್ಮೀರಿಗಳು, ಅದರಲ್ಲೂ ಮುಖ್ಯವಾಗಿ ಮುಸಲ್ಮಾನರು ತಿಳಿದುಕೊಳ್ಳಬೇಕಿದೆ. ಇವತ್ತಿನ ಕಾಶ್ಮೀರ ಹಿಂದೆಂದೂ ಕಾಣದಂತಹ ಸವಾಲುಗಳನ್ನು ಎದುರಿಸುತ್ತಿದೆ. ಈ ಸವಾಲುಗಳ ಸ್ವರೂಪ ಮತ್ತು ಅವುಗಳನ್ನು ಎದುರಿಸುವ ಬಗ್ಗೆ ಮುಕ್ತ ಸಂವಾದ ನಡೆಯಬೇಕಿದೆ. ಅಂತಿಮವಾಗಿ, ರಾಜ್ಯಕ್ಕೆ ಯಾವ ರೀತಿಯ ಸ್ಥಾನಮಾನ ಬೇಕೆಂದು ಅವರು ಬಯಸುವರೋ ಅದು ಪ್ರತಿ ಪ್ರಜೆಯ ನಾಗರಿಕ ಸ್ವಾತಂತ್ರ್ಯ ಮತ್ತು ಎಲ್ಲ ಪ್ರದೇಶಗಳ ಮತ್ತು ಜನಾಂಗಗಳ ಅಸ್ಮಿತೆ ಮತ್ತು ಆಶೋತ್ತರಗಳನ್ನು ಈಡೇರಿಸುವಂತಾಗಬೇಕು.
ೆಮೇಲಿನ ಸಮೀಕ್ಷೆ - ಕೃತಿಯಲ್ಲಿ ಅಲ್ಲಲ್ಲಿ ಕಲ್ಲಿದ್ದಲಿನ ನಡುವೆ ಕಾಣಸಿಗುವ ವಜ್ರಗಳನ್ನು ಆಯ್ದು ತೆಗೆದಾಗ ರೂಪುಗೊಳ್ಳುತ್ತದೆ. ಕೃತಿಯ ಪ್ರತಿ ಪುಟದಲ್ಲೂ ಹೇರಳವಾಗಿ ಕಂಡುಬರುವ ಕಾಗುಣಿತದ ತಪ್ಪುಗಳು ಇರಿಸುಮುರಿಸು ಉಂಟು ಮಾಡುತ್ತವೆ. ಇದೊಂದು ಸಾಹಿತ್ಯೇತರ ಕೃತಿಯಾದರೂ, ವಿಷಯವನ್ನು ತಪ್ಪಾಗಿ ಗ್ರಹಿಸುವಂತೆ ಮಾಡಬಲ್ಲ ವಾಕ್ಯ ರಚನೆಯ ದೋಷಗಳು ಪುಸ್ತಕದುದ್ದಕ್ಕೂ ಇವೆ. ಉದಾಹರಣೆಗೆ: 'ವಾಸ್ತವಿಕವಾಗಿ 1947ರಲ್ಲಿ ಪಾಕಿಸ್ತಾನವು ಉದಯವಾಗುವುದಕ್ಕಿಂತ ಮುನ್ನ ಅನೇಕ ಶತಮಾನಗಳು ಎರಡೂ ಒಂದೇ ಆರ್ಥಿಕ ಹಾಗೂ ರಾಜಕೀಯ ವ್ಯವಸ್ಥೆಯನ್ನು ಹೊಂದಿದ್ದವು.'
ಕೃತಿಕಾರರು ಕೆಲವು ಕಡೆ ಸಂಗತಿಗಳನ್ನು ಮಂಡಿಸುವಾಗ, ಸ್ಥಿಮಿತ ಕಳೆದುಕೊಂಡು ಆವೇಶಕ್ಕೆ ಒಳಗಾಗಿರುವುದೂ ಉಂಟು. 'ಪಾಕಿಸ್ತಾನದಿಂದ ಲಕ್ಷಾಂತರ ಹಿಂದೂಗಳು ಭಾರತಕ್ಕೆ ಬಂದರು. ಬಂದರು ಎನ್ನುವುದಕ್ಕಿಂತ ಹೊರದಬ್ಬಲಾಯಿತು ಎನ್ನುವುದೇ ಸೂಕ್ತವಾದದ್ದು. ಭಾರತದಿಂದಲೂ ಮುಸ್ಲಿಮರು ಪಾಕಿಸ್ತಾನಕ್ಕೆ ವಲಸೆ ಹೋದರು.' ಪುಸ್ತಕವನ್ನು ಅಚ್ಚುಹಾಕಿದ ಮಾತ್ರಕ್ಕೆ ಪ್ರಕಾಶಕರ ಜವಾಬ್ದಾರಿ ಅಲ್ಲಿಗೇ ಮುಗಿಯುವುದಿಲ್ಲ. ಲೇಖಕರ ಕಣ್ಣಿಂದ ಈ ತಪ್ಪುಗಳು ತಪ್ಪಿಸಿಕೊಂಡು ಒಂದು ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿವೆ. ಒಂಬತ್ತನೆಯ ಅಧ್ಯಾಯ, ಪುಟ 148 ರಲ್ಲಿ 'ಕೋಲ್ಕತ್ತಾದಲ್ಲಿ ನಾನಿದ್ದ ದಿನಗಳ ಕಾಲದಿಂದಲೂ ನನ್ನ ಅನುಭವಕ್ಕೆ ಬಂದಿದೆ'
ಎಂದಿದೆ. ಲೇಖಕರು ಅಲ್ಲಿ ಇದ್ದ ಕಾಲವನ್ನು ಓದುಗರು ಊಹಿಸಿಕೊಳ್ಳಬೇಕಾಗುತ್ತದೆ. ಇಂತಹ ತಪ್ಪುಗಳೂ ಸಾಕಷ್ಟಿವೆ. ಸ್ವಲ್ಪ ಧ್ಯಾನಿಸಿ ಸಂಶ್ಲೇಷಣೆಗೊಳಪಡಿಸಿದ್ದರೆ, ಇದೊಂದು ಒಳ್ಳೆಯ ಕಾಣ್ಕೆಯಾಗುತ್ತಿತ್ತು.
ಕನ್ನಡದಲ್ಲಿ ಕಾಶ್ಮೀರ ಕುರಿತಾದ ಪುಸ್ತಕಗಳು ಹೆಚ್ಚಾಗಿ ಬಂದಿಲ್ಲ. ಕಾಶ್ಮೀರದ ಇತಿಹಾಸವನ್ನು ವಿಶ್ಲೇಷಿಸುವಾಗ, ಕಾಶ್ಮೀರಿಗಳ ಸಂಸ್ಕೃತಿಯಲ್ಲಿ ಮಿಂದು ಬೆಳೆಯಬೇಕಾಗುತ್ತದೆ. ಆಗ ಮಡಕೆಯಲ್ಲಿ ಕುದಿಯುತ್ತಿರುವ ಕಾಶ್ಮೀರ ಮತ್ತು ಮತ್ತದರ ಸವಾಲುಗಳನ್ನು ಅರ್ಥೈಸಿಕೊಳ್ಳುವುದಕ್ಕೆ ಸಾಧ್ಯವಾಗಬಹುದು.
ಭಾರತ ಮತ್ತು ಪಾಕಿಸ್ತಾನ ಕಾಶ್ಮೀರ, ಲೇಖಕರು: ಡಾ. ಸಿ. ಚಂದ್ರಪ್ಪ, ಪ್ರಕಾಶಕರು: ಸೃಷ್ಟಿ ಪಬ್ಲಿಕೇಷನ್ಸ್, ವಿಜಯನಗರ, ಬೆಂಗಳೂರು-40, ಪುಟ: 336, ಬೆಲೆ:ರು. 225.
-ಎಂ.ಎಸ್. ರುದ್ರೇಶ್ವರಸ್ವಾಮಿ