ಹೊಸದಾಗಿ ವೈದ್ಯ ಶಿಕ್ಷಣ ಮುಗಿಸಿದ್ದ ಮನೋವೈದ್ಯ, ವಸ್ಥುಸ್ಥಿತಿ ತಿಳಿದುಕೊಳ್ಳಲು ದೊಡ್ಡ ಮಾನಸಿಕ ಆಸ್ಪರ್ತೆಗೆ ಹೋದ. ಆ ಆಸ್ಪರ್ತೆಯಲ್ಲೇ ವೈದ್ಯರಾಗಿದ್ದ ಹಿರಿಯ ಡಾಕ್ಟರೊಬ್ಬರು ಅವನನ್ನು ತೋರಿಸಲು ಕರೆದುಕೊಂಡುಹೋದರು.
ಒಂದು ಸಣ್ಣ ಕೋಣೆಯಲ್ಲಿ ಕುರ್ಚಿಯ ಮೇಲೆ ಕುಳಿತಿದ್ದವನು, ಹಿಂದೆ ಮುಂದೆ ತಲೆತೂಗಿಸುತ್ತಾ 'ಲೀಲೂ, ಲೀಲೂ, ಲೀಲೂ' ಅಂತ ಹಲುಬುತ್ತಿದ್ದ.
'ಇವನು ಇಲ್ಲಿಗೆ ಬಂದಿದ್ದು ಯಾಕೆ?', ಅಂತ ಕೇಳಿದ ಹೊಸ ಡಾಕ್ಟ್ರಿಗೆ 'ಇವನು ಲೀಲೂ ಅನ್ನುವವಳನ್ನು ಗಾಢವಾಗಿ ಪ್ರೀತಿಸುತ್ತಿದ್ದ. ಅವಳು ಕೈಕೊಟ್ಟು ಬೇರೆಯವನನ್ನು ಮದುವೆ ಮಾಡಿಕೊಂಡಳು. ಇವನು ಇಲ್ಲಿಗೆ ಬಂದ. ಪ್ರೀತಿ ಅತಿಯಾದಾಗ ವಿಫಲವಾದರೆ ಹುಚ್ಚು ಹಿಡಿಯುತ್ತೆ' ಅಂತ ವಿವರಿಸಿದರು ಅನುಭವಿ ಡಾಕ್ಟ್ರು.
ಇದೇ ಆಸ್ಪರ್ತೆಯ ಇನ್ನೊಂದು ಕಟ್ಟಡದಲ್ಲಿ ಇನ್ನೊಬ್ಬ, ವಿಶೇಷ ಕೋಣೆಯಲ್ಲಿದ್ದ. ಇವನು ಗೋಡೆಗೆ ತಲೆ ಚಚ್ಚಿಕೊಳ್ತಾ, 'ಲೀಲೂ, ಲೀಲೂ, ಲೀಲೂ' ಅಂತ ಕಿರುಚಿಕೊಳ್ಳುತ್ತಿದ್ದ.
ಹೊಸ ಡಾಕ್ಟ್ರು, ಹಿರಿಯ ಡಾಕ್ಟ್ರ ಕಡೆಗೆ ತಿರುಗಿ, 'ಲೀಲೂ ತುಂಬಾ ಸುಂದರಿಯಾಗಿದ್ದಿರಬೇಕು, ಇಲ್ಲದಿದ್ದರೆ ಬೇರೆ ಬೇರೆ ಪ್ರೇಮಿಗಳಿಗೆ ಬೇರೆ ಬೇರೆ ಸಮಯಗಳಲ್ಲಿ ಕೈಕೊಡಬೇಕಂದ್ರೆ' ಅಂತ ಮಾತು ಮುಗಿಸುವುದಕ್ಕೆ ಮೊದಲೇ ಆತ ಹೇಳಿದ. 'ಇಲ್ಲ ಇಲ್ಲ, ಇವನೇ ಲೀಲೂಳನ್ನು ಮದುವೆ ಮಾಡಿಕೊಂಡವನು'
ಹೊಸ ಡಾಕ್ಟ್ರು ಯೋಚಿಸಲು ಆರಂಭಿಸಿದ. 'ಪ್ರೇಮ ಫಲಿಸದಿದ್ದರೂ ಹುಚ್ಚು, ಪ್ರೇಮಿಸಿದವಳನ್ನು ಕೈಹಿಡಿದರೂ ಹುಚ್ಚು. ಹಾಗಾದರೆ ಪ್ರೇಮಿಸುವುದು ತಪ್ಪೋ? ಮದುವೆಯಾಗುವುದು ತಪ್ಪೋ? ಪ್ರೇಮ ಎಂಬ ಉತ್ಕಟ ಭಾವನೆಯೇ ತಪ್ಪೇ?'
ಹಿರಿಯ ಡಾಕ್ಟ್ರು ಹೊಸಬನ ಕಡೆ ನೋಡುತ್ತಾ ಹೇಳಿದ, 'ನಿನ್ನ ಅನುಮಾನ ನನ್ನನ್ನೂ ಹಿಂದೆ ಕಾಡಿತ್ತು. ಇನ್ನೂ ಅದಕ್ಕೆ ಸರಿಯಾದ ಉತ್ತರ ಸಿಕ್ಕಿಲ್ಲ.'
- ಸಂಪಟೂರು ವಿಶ್ವನಾಥ್