ಒಮ್ಮೆ ನೋಡಿದ ಸಿನಿಮಾವನ್ನು ಮತ್ತೆ ನೋಡುವ ಮತ್ತು ಓದಿಗೆ ಪಾತ್ರವಾಗುವಂಥ ದೃಶ್ಯ ಕಥೆಗಳು ಸಾಕಷ್ಟಿವೆ. ಹೀಗೆ ಪದೇ ಪದೆ ಸಿನಿಮಾಸಕ್ತರನ್ನು ಸೆಳೆಯುವ ಹತ್ತಾರು ಜಾಗತಿಕ ಸಿನಿಮಾ ನಿರ್ದೇಶಕರ ಪೈಕಿ ಅಕಿರಾ ಕುರೋಸಾವಾ ಪ್ರಮುಖರಾಗಿ ಕಾಣುತ್ತಾರೆ. ಅಬ್ಬರವಿರಲ್ಲ, ವೈಭವವಂತೂ ಕಾಣಸಿಗದು, ಪಾತ್ರಗಳಲ್ಲಿ ನಾಟಕೀಯತೆ, ಕೃತಕ ಭಾವನೆಗಳು ರವಷ್ಟೂ ಗೋಚರಿಸಲ್ಲ. ಆದರೆ ಪ್ರತಿ ಚಿತ್ರ, ಪಾತ್ರ ಸಾಂಸ್ಕೃತಿಕ ನೆಲೆಯ ಜೊತೆಗೆ ನೋಡುಗನ ಪ್ರಜ್ಞಾಲೋಕವನ್ನು ಕದಡುತ್ತವೆ.
ಪಾಶ್ಚಿಮಾತ್ಯರ ಪ್ರಭಾವಕ್ಕೆ ಮುಕ್ತವಾಗುತ್ತಲೇ ದೇಸಿತನದ ನೆಲೆಯಲ್ಲೇ ಚಿತ್ರಗಳನ್ನು ಕಟ್ಟಿದ ಜಪಾನಿ ನಿರ್ದೇಶಕರಲ್ಲಿ ಕುರೋಸಾವಾ ಮೊದಲಿಗರು. ಜಾಗತೀಕರಣದ ಹೆಸರಿನಲ್ಲಿ ಜಗತ್ತಿನ ಹಿರಿಯ ರಾಷ್ಟ್ರಗಳು ಏಕ ಸಂಸ್ಕೃತಿಯಡಿ ತೃತೀಯ ರಾಷ್ಟ್ರಗಳನ್ನು ನಿಯಂತ್ರಿಸಲು ಹೊರಡುತ್ತಿರುವ ಸಂದರ್ಭದಲ್ಲಿ ಕುರೋಸಾವಾನ ಸಿನಿಮಾಗಳು ಹೊಸ ಸಾಂಸ್ಕೃತಿಕ ದಾರಿಗಳನ್ನು ತೋರಿಸುತ್ತವೆ. ಈ ಕಾರಣಕ್ಕೆ ಭಾರತದಂತೆ ಸಾಮ್ರಾಜ್ಯಶಾಹಿಯ ಮುಖಗಳನ್ನು ಎದುರಿಸುತ್ತ ಬಂದಿರುವ ಕುರೋಸಾವಾನ ಚಿತ್ರಗಳು ಎಂದಿಗೂ ಪ್ರಸ್ತುತ. ಈತನ 'ರಾಶೋಮನ್' ಚಿತ್ರವನ್ನೇ ತೆಗೆದುಕೊಳ್ಳಿ. ಬೆಂಗಳೂರಿನಲ್ಲಿ ನಡೆದ ವಕೀಲರು, ಮಾಧ್ಯಮಗಳ ಹಾಗೂ ಪೊಲೀಸರ ನಡುವಿನ ವೃತ್ತಿಗಲಭೆ ಅಥವಾ ಚೆನ್ನೈನಲ್ಲಿ ನಡೆದ ಭಾರತೀಯ ಚಿತ್ರರಂಗದ ಶತಮಾನೋತ್ಸವದ ಸುತ್ತಲಿನ ಅವ್ಯವಸ್ಥೆಗಳ ಬಗ್ಗೆ ಒಬ್ಬೊಬ್ಬರದ್ದು ಒಂದೊಂದು ಅಭಿಪ್ರಾಯ. ಹಾಗೆ ಒಂದೇ ಘಟನೆ ಸುತ್ತ ಹತ್ತಾರು ಅಭಿಪ್ರಾಯಗಳನ್ನು ತೇಲಿಬಿಡುವ 'ರಾಶೋಮನ್' ಚಿತ್ರ ನೆನಪಾಗುವುದು ಈ ಕಾರಣಕ್ಕೆ. ಇಲ್ಲೂ ಒಂದೇ ಘಟನೆ. ವಿವರಣೆ ಮಾತ್ರ ಒಂದೇ ಆಗಿರಲ್ಲ. ನಾವು ಕಾಣುವ, ಕೇಳಿರುವ ಸಂಗತಿಗಳಲ್ಲಿ ಒಂದೇ ಬಗೆಯ ಸತ್ಯ ಇರಲು ಸಾಧ್ಯವೆ? ನಮ್ಮ ನಮ್ಮ ಅಭಿಪ್ರಾಯಗಳು ಏಕಮುಖವಾಗಿರಬಹುದೆ? ಇಂಥ ಪ್ರಶ್ನೆಗಳಲ್ಲಿ ತೆರೆದುಕೊಳ್ಳುವ ಈ ಚಿತ್ರ, ಪ್ರೇಕ್ಷಕನನ್ನೂ ಆತ್ಮಾವಲೋಕನಕ್ಕೆ ಹಚ್ಚುತ್ತದೆ.
ಕುರೋಸಾವಾ ಎಂದಾಕ್ಷಣ ಒಂದಿಷ್ಟು ಚಿತ್ರಗಳು ಕಣ್ಮುಂದೆ ಬರುತ್ತವೆ. ಅದರಲ್ಲಿ ಮುಖ್ಯವಾಗಿ 'ದಿ ಸೆವೆನ್ ಸಮುರಾಯ್', 'ದಿ ಥ್ರೋನ್ ಆಫ್ ಬ್ಲಡ್', 'ದಿ ಹಿಡನ್ ಫಾಸ್ಟರ್', 'ಇಕಿರು', 'ಲೋವರ್ ಡೆಪ್ತ್', 'ಡರ್ಸೂ ಉಜಾಲಾ' ಮುಂತಾದವು. ಇವುಗಳ ಸಾಲಿಗೆ ಸೇರುವ 'ರಾಶೋಮನ್' ಅನ್ನು ನೋಡದವರು ಕಡಿಮೆ. ಮನುಷ್ಯನ ಮಿತಿ ಮತ್ತು ಸ್ವಾರ್ಥಗಳನ್ನು ಅದ್ಭುತವಾಗಿ ಚಿತ್ರೀಕರಿಸಿದ ಸಿನಿಮಾ ಇದು. ಜಪಾನಿನ ಸ್ಮಾರಕವನ್ನೇ ಶೀರ್ಷಿಕೆಯನ್ನಾಗಿಸಿಕೊಂಡಿರುವ ಈ ಚಿತ್ರ, ಕಟ್ಟಿಗೆ ಕಡಿಯುವ ವ್ಯಕ್ತಿ, ಪೂಜಾರಿ ಹಾಗೂ ಕೆಲಸವಿಲ್ಲದವ ಈ ಮೂವರ ನಡುವಿನ ಸಂಭಾಷಣೆಯಲ್ಲಿ ಕಥೆ ಸಾಗುತ್ತದೆ. ಜೋರಾಗಿ ಮಳೆ ಬರುತ್ತಿದೆ. ಸ್ಮಾರಕ ಆಗಲೇ ಪಾಳು ಬಿದ್ದಿದಂತಿದೆ. ಅಲ್ಲಿ ಸೇರುವ ಮೂವರ ಸಂಭಾಷಣೆಯಲ್ಲಿ ಕೆಲ ದಿನಗಳ ಹಿಂದೆ ನಡೆದ ಕೊಲೆಯ ಕಥೆ ತೆರೆದುಕೊಳ್ಳುತ್ತದೆ. ಈ ಕಥೆಯಲ್ಲಿ ಮುಖ್ಯ ಪಾತ್ರಗಳು ಮೂವರು. ಸಮುರಾಯ್, ಆತನ ಪತ್ನಿ ಹಾಗೂ ಡಕಾಯಿತ ತಜೋಮಾರು. ಈಗ ಸಮುರಾಯ್ ಕೊಲೆಯಾಗಿದ್ದಾನೆ. ಆತನ ಕೊಲೆ ನಡೆದಿದ್ದಾರೂ ಹೇಗೆ? ಎನ್ನುವ ವಿಚಾರಣೆ ಶುರುವಾಗುತ್ತದೆ. ಒಬ್ಬೊಬ್ಬರಾಗಿ ಬಂದು ಸಾಕ್ಷಿ ನುಡಿಯುತ್ತಾರೆ.
ಕಾಡಿನಲ್ಲಿ ಸಮುರಾಯ್ನೊಂದಿಗೆ ಬರುತ್ತಿದ್ದ ಆತನ ಪತ್ನಿ ಸುಂದರವಾಗಿ ಕಂಡಳು. ಆಕೆಯ ಗಂಡನನ್ನು ವಂಚಿಸಿ ಕಟ್ಟಿ ಹಾಕಿದೆ. ಆಕೆ ಮುಂದೆ ತನಗೆ ಸಮ್ಮತಿಸಿ ತಾನು ಹೇಳಿದಂತೆ ಕೇಳಿದಳು... ಇದು ತಜೋಮಾರು ಹೇಳುವ ಕಥೆ. 'ಗಂಡನೆದುರು ನನ್ನ ಮೇಲೆ ಬಲತ್ಕಾರ ನಡೆಯಿತು. ಇದರಿಂದ ಗಂಡ ತಿರಸ್ಕಾರದ ನೋಟ ಬೀರುತ್ತಾನೆ. ನನಗೆ ತಲೆ ಸುತ್ತು ಬಂದು ಬಿದ್ದೆ. ಎಚ್ಚರಗೊಂಡಾಗ ಚೂರಿಯಿಂದ ಇರಿದುಕೊಂಡು ಗಂಡ ಸತ್ತಿದ್ದ' ಎಂದು ಸಮುರಾಯ್ ಪತ್ನಿ ಹೇಳುತ್ತಾಳೆ. ಸಮುರಾಯ್ ಕೂಡ ಸಾಂಕೇತಿಕವಾಗಿ ಮಾತನಾಡುತ್ತಾನೆ. ತನ್ನ ಪತ್ನಿ ಮೇಲೆ ಬಲತ್ಕಾರ ಮಾಡಿದ ಮೇಲೆ ತಜೋಮಾರು ಆಕೆಯನ್ನು ಮದುವೆಯಾಗಲು ಒತ್ತಾಯಿಸಿದ. ಆಕೆ ಒಪ್ಪಿ ತಾನು ಇಬ್ಬರಿಗೂ ಸೇರುಲು ಸಾಧ್ಯವಿಲ್ಲ ಎಂದು ತನ್ನ ಗಂಡನನ್ನು ಕೊಲ್ಲುವಂತೆ ಹೇಳಿದಳು. ಸಿಟ್ಟಾಗುವ ತಜೋಮಾರು ಸಮುರಾಯ್ನನ್ನು ಬಿಡುಗಡೆಗೊಳಿಸಿದ. ಆಗಲೇ ಅಲ್ಲಿಂದ ತಪ್ಪಿಸಿಕೊಂಡು ಓಡುವ ತನ್ನ ಪತ್ನಿಯನ್ನು ತಜೋಮಾರು ಬೆನ್ನಟ್ಟಿದ. ಇದು ಸಮುರಾಯ್ ವಿವರಣೆ.
ಇದರಲ್ಲಿ ಸತ್ಯ ಯಾವುದು? ಇಡೀ ಘಟನೆ ಬಗ್ಗೆ ಕಟ್ಟಿಗೆ ಕಡಿಯುವ ವ್ಯಕ್ತಿ ಬೇರೊಂದು ರೀತಿಯಲ್ಲಿ ಹೇಳುತ್ತಾನೆ. ವಾಸ್ತವವಾಗಿ ಈತ ಹೇಳುವುದೇ ಸತ್ಯವಾಗಿರಬಹುದೇ? ಗೊತ್ತಿಲ್ಲ. ಆದರೆ, ಈತ ನ್ಯಾಯ ವಿಚಾರಣೆಯಲ್ಲಿ ಸತ್ಯವನ್ನು ಮರೆಮಾಚುತ್ತಾನೆ. ಆ ಮೂಲಕ ಮನುಷ್ಯನ ಮಿತಿ ಮತ್ತು ಸ್ವಾರ್ಥಕ್ಕೆ ಈ ಚಿತ್ರ ಕನ್ನಡಿ ಹಿಡಿಯುತ್ತದೆ. ನೆರಳು- ಬೆಳಕಿನ ಆಟದಲ್ಲಿ ಅತ್ಯಂತ ಸೊಗಸಾಗಿ ಕಥೆಯನ್ನು ಹಲವು ಕೋನಗಳಲ್ಲಿ ನಿರೂಪಿಸುವ 'ರಾಶೋಮನ್', ಸತ್ಯವನ್ನು ತೆರೆದಿಡುವ ಸಾಧ್ಯತೆಗಳನ್ನು ಹುಡುಕುತ್ತದೆ. ಸ್ಮಾರಕದ ಬಳಿ ಕಂಡ ಅನಾಥ ಮಗುವನ್ನು ಎತ್ತಿಕೊಳ್ಳುವ ದೃಶ್ಯದಲ್ಲಿ ನಡೆಯುವ ಸಂಭಾಷಣೆ, ಸತ್ಯ ಗೊತ್ತಿದ್ದೂ ಹೇಳದವರ ಮನಃಸ್ಥಿತಿ, ಸ್ವಾರ್ಥಕ್ಕಾಗಿ ತನಗೆ ಬೇಕಾದಂತೆ ಸತ್ಯವನ್ನು ತಿರುಚುವ ವ್ಯಕ್ತಿತ್ವಗಳನ್ನು ಬೆತ್ತಲು ಮಾಡುತ್ತದೆ.
ಜಪಾನಿ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಕುರೋಸಾವಾನ ಚಿತ್ರಗಳನ್ನು ನೋಡುವುದೇ ಒಂದು ಖುಷಿ. ಸಮುರಾಯ್ ಪರಂಪರೆ ಆಚೆಗೂ ಸಿನಿಮಾ ಕಟ್ಟಿದವನು. ಸಮುದಾಯದ ಪ್ರಜ್ಞೆಯನ್ನು ಒಳಗೊಂಡಿರುವ ಕುರೋಸಾವಾನ ಚಿತ್ರಗಳ ಹಿಂದಿನ ಬಹುದೊಡ್ಡ ಶಕ್ತಿ ಜಪಾನಿನ ಸಾಂಪ್ರದಾಯಿಕ ನೆರಳು. ಅಧುನಿಕತೆಯಲ್ಲಿ ತೇಲುತ್ತಿರುವ ಯುರೋಪಿನ ಚಿತ್ರಗಳ ಬಗ್ಗೆ ಎಷ್ಟೇ ಮಾತನಾಡಿದರೂ ಜಪಾನಿ ಚಿತ್ರಗಳನ್ನು ಕೇವಲವಾಗಿ ಕಾಣುವಂತಿಲ್ಲ. ಅಲ್ಲದೆ ಕುರೋಸಾವಾನ ಬುಹುತೇಕ ಚಿತ್ರಗಳು ಜಪಾನಿನ ಸಮಕಾಲೀನ ಬದಲಾವಣೆಗಳು, ಅಲ್ಲಿನವರ ಮಾನಸಿಕ ತೊಳಲಾಟಗಳನ್ನು ಕೇಂದ್ರೀಕರಿಸುತ್ತವೆ. ಶೇಕ್ಸ್ಪೀಯರ್ನ 'ಮ್ಯಾಕ್ಬೆತ್'ನಿಂದ ಪ್ರೇರಣೆಯಾದ 'ದ ಥ್ರೋನ್ ಆಫ್ ಬ್ಲಡ್' ಹಾಗೂ ಮ್ಯಾಕ್ಸಿಮ್ ಗಾರ್ಕಿಯ 'ಲೋವರ್ ಡೆಪ್ತ್' ಕೃತಿ ಚಿತ್ರವಾದಾಗ ಇಲ್ಲಿ ಆದ ಬದಲಾವಣೆಗಳು ಕೇವಲ ಸಿನಿಮಾ ರೂಪಕಗಳಲ್ಲ. ನಶಿಸುತ್ತಿರುವ ಸಾಮುದಾಯಿಕ ಬದುಕಿನ ಒಳ ಮತ್ತು ಹೊರಗಿನ ಸ್ಥಿತ್ಯಂತರಗಳನ್ನು ನಿರೂಪಿಸುತ್ತವೆ. ಈ ಹಿನ್ನೆಲೆಯಲ್ಲಿ ಮನುಷ್ಯನ ಸ್ವಾರ್ಥಗಳಿಗೆ ಹಾಗೂ ತಾನು ಹೇಳಿದ್ದೇ ಸತ್ಯ ಎಂದು ಬೀಗುವ ಮನಸ್ಥಿತಿಗಳನ್ನು ತಂದು ನಿಲ್ಲಿಸುವ ರೈನೊಸುಕೆ ಅಟುಕುವಾರ ಕಥೆಯನ್ನು ಆಧರಿಸಿದ 'ರಾಶೋಮನ್' ಚಿತ್ರವನ್ನು ನೋಡಬೇಕಿದೆ.
- ಆರ್. ಕೇಶವಮೂರ್ತಿ
keshavarkm1@gmail.com