- 1-
ನನಗೆ ಗಣಪನಷ್ಟೇ
ಚಂದಿರನ ಮೇಲೆ ಪ್ರೀತಿ
ಛೆ! ಮರೆತು ನೋಡಿಬಿಟ್ಟೆ
ಇಂದು ಚೌತಿ. ಈಗ
ಅಪವಾದ ಭೀತಿ.
-2-
ಇಂದೇ ಸಂಕಷ್ಟಗಳ ಕೊನೆ
ಎಲ್ಲರ ಎಣಿಕೆ.
ಬಾಜ ಬಜಂತ್ರಿಯೊಂದಿಗೆ
ನೋವುಗಳೆಲ್ಲ ಹೊರಟಿವೆ
ಗಣಪನೊಂದಿಗೆ ಮೆರವಣಿಗೆ.
-3-
ಗಣಪನೊಂದಿಗೆ ಮುಳುಗುತ್ತಿವೆಯಲ್ಲ
ಕುದಿಯುವ ನೋವುಗಳು
ಅದೋ ಕೈ ತಟ್ಟಿ ಚಪ್ಪಾಳೆ ಹಾಕುತ್ತಿವೆ
ದಡದಲ್ಲಿ ನಿಂತ ನಲಿವುಗಳು.
-4-
ಕಾಯಿ ಕಡುಬು ಮೋದಕ
ದೇವರ ಗುಡಿಯಲ್ಲಿ
ಅರೆ! ಎಲ್ಲಾ ಖಾಲಿಯಾಗಿದೆಯಲ್ಲ!
ಮೂಷಿಕನನ್ನು ಕಳುಹಿಸಿದ್ದು ನೀನು
ಯಾವ ಮಾಯಕದಲ್ಲಿ?
-5-
ಭಕ್ತಿಯ ಸೆಳೆತ ಮಾಸುತ್ತಾ
ಮೈ ಮರೆತು ಕುಣಿತ
ಗಣಪನ ಕಣ್ಣು ನಿಜಕ್ಕೂ ಈಗ
ಕಿರಿದಾಗುತ್ತಿದೆ. ನೀರಿಗೆ ಒಯ್ಯುವ
ಮುನ್ನವೇ ತಾನೇ ಹಾರಿ ಮುಳುಗಿದ್ದು
ಎಂಥ ದುರಂತ!
-6-
ಗಾನ ನೃತ್ಯ ತಾಳ ಮೇಳ
ವೇದಿಕೆಯ ಮೇಲೆ ಶುಷ್ಕ
ಆಡಂಬರ.
ಗಣಪನಿಗೋ ಸಣ್ಣಕೆ ಆಕಳಿಕೆ
ಹೊತ್ತು ಬೇಕಾದಷ್ಟಿದೆಯಲ್ಲ
ನಿದ್ದೆಗೇನು ಬರ?
-7-
ಎಲ್ಲಾ ಸಮಯದಲ್ಲೂ
ಮೊದಲು ನೆನಪಾಗುವುದು ನೀನೆ
ನೋವಿಗೂ ನಲಿವಿಗೂ ತಮಾಷೆಗೂ...
ಗೆಳತಿಯೆನ್ನುವೆ ನಿನ್ನ ಅಡ್ಡಿ ಇಲ್ಲ ತಾನೆ?
-8-
ಈ ಸಲಕ್ಕೆ ಬೇಕಾದಷ್ಟಾಗಿದೆ
ದುಃಖ ದುಗುಡ ಕಣ್ಣೀರು ಅಳಲು
ಹೊಟ್ಟೆ ಬಿರಿಯುವಷ್ಟು ಅಹವಾಲು
ಯಾರಿಗೂ ಕಾರಣ ಗೊತ್ತಿಲ್ಲ,
ಸುಮ್ಮಗೆ ನಗುತ್ತಾರಷ್ಟೆ. ಗಣಪಗೆ
ಹೊಟ್ಟೆ ಬಲು ದೊಡ್ಡದು.
-9-
ಹಬ್ಬವೂ ಮುಗಿದಿದೆ,
ನೀನೂ ಮುಳುಗಿರುವೆ
ತಕರಾರುಗಳೆಲ್ಲಾ ಮುಗಿದಿದೆ
ಈಗ ಬಾ ಒಂದಷ್ಟು ದಿನ
ಉಸಿರಾಡಬಹುದು ನಿರಾಳ.
-10-
ಇಕೋ ನಿದ್ದೆಗೆಟ್ಟು ಬರೆದಿದ್ದೇನೆ
ಇಷ್ಟೆಲ್ಲ ಕವಿತೆ ನಿನಗಾಗಿ
ಗಣಪ.
ನಾನಲ್ಲ ಚಂದಿರನೇ ನನ್ನ
ನೋಡಿ ನಕ್ಕಿದ್ದು. ಇದು ಸತ್ಯ
ಮನ್ನಿಸಿಬಿಡು. ಅಪ್ಪಿ ತಪ್ಪಿ ಆಗುವ
ತಪ್ಪು ಅಪರಾಧ ಅಲ್ಲ ತಾನೆ?
-ಸ್ಮಿತಾ ಅಮೃತರಾಜ್ ಸಂಪಾಜೆ