ಸಾಪ್ತಾಹಿಕಪ್ರಭ

ಕಾಶ್ಮೀರದ ಕತೆ

ಭಾರತ ಪಾಕಿಸ್ತಾನ ಹಾಗೂ ಚೈನಾ ಮೂರು ಪರಮಾಣು ರಾಷ್ಟ್ರಗಳ ನಡುವೆ ಸುತ್ತುವರಿದ, ಕಷ್ಯಪನಿಂದ ನಿರ್ಮಿತ ಕಾಶ್ಮೀರ ಕಣಿವೆ ನಾವು ಪತ್ರಿಕೆ ಓದಲು...

ಭಾರತದ ಯಾವುದೇ ಪತ್ರಕರ್ತನಿಗೆ ಕಾಶ್ಮೀರದ ಬಗ್ಗೆ ಕುತೂಹಲ ಸಹಜ. ಭಾರತ ಪಾಕಿಸ್ತಾನ ಹಾಗೂ ಚೈನಾ ಮೂರು ಪರಮಾಣು ರಾಷ್ಟ್ರಗಳ ನಡುವೆ ಸುತ್ತುವರಿದ, ಕಷ್ಯಪನಿಂದ ನಿರ್ಮಿತ ಕಾಶ್ಮೀರ ಕಣಿವೆ ನಾವು ಪತ್ರಿಕೆ ಓದಲು ಆರಂಭಿಸಿದಾಗಿನಿಂದ ಬಹುತೇಕ ದಿನವೂ ಮುಖಪುಟದಲ್ಲಿ ಕಾಣಸಿಗುವ ಹೆಸರು.
1989ರಲ್ಲಿ ನಾವು ಸ್ಕೂಲಿಗೆ ಹೋಗುವಾಗಲೇ ಕಾಶ್ಮೀರ ಹೊತ್ತಿ ಉರಿಯತೊಡಗಿತ್ತು. ಅದನ್ನೆಲ್ಲ ದೂರದಿಂದಲೇ ಗಮನಿಸಿ ಓದಿಕೊಳ್ಳುತ್ತಿದ್ದ ನಾನು ಇತ್ತೀಚೆಗೆ ಕಾಶ್ಮೀರಕ್ಕೆ ಹೋಗಿದ್ದೆ. ನಾನು ಶ್ರೀನಗರ ವಿಮಾನ ನಿಲ್ದಾಣದಲ್ಲಿ ಇಳಿದಾಗ ಅವತ್ತು ಪ್ರಧಾನಿ ಹಾಗು ಸೋನಿಯಾ ಗಾಂಧಿ ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ವಿಮಾನ ನಿಲ್ದಾಣದ ಅಂಗಡಿಗಳಿಂದ ಹಿಡಿದು ದಲ್ ಸರೋವರದ ವರೆಗೂ ಎಲ್ಲವೂ ಬಂದ್. ಒಂದು ಕಡೆ ದೇಶದ ಪ್ರಧಾನಿ ಕಾಶ್ಮೀರಕ್ಕೆ ಹಣದ ಸುರಿಮಳೆ ಮಾಡುತ್ತಿದ್ದರೆ ಇನ್ನೊಂದು ಕಡೆ ಕಾಶ್ಮೀರದ ಜನತೆ ಪರಂಪರೆಯೇನೋ ಎಂಬಂತೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ 'ಆಜಾದಿ' ಜಪ ಮಾಡುತ್ತಿದ್ದರು. ಶ್ರೀನಗರದ ಹೆಜ್ಜೆ ಹೆಜ್ಜೆಗೂ ಕಾಶ್ಮೀರದ ಪೊಲೀಸರು, ರಾಷ್ಟ್ರೀಯ ರೈಫಲ್ ಜವಾನರು, ಗಡಿ ಭದ್ರತಾ ಪಡೆಯ ಯೋಧರು, ಸಿ ಆರ್‌ಪಿಎಫ್ ತುಕಡಿಗಳು ಸುತ್ತುವರೆದು ಪ್ರಧಾನಿ ಪ್ರವಾಸಕ್ಕೆ ಭದ್ರತೆ ಒದಗಿಸಿದ್ದರೆ ಶ್ರೀನಗರದ ಜನತೆ ಮಾತ್ರ ಯಾರೋ ಶತ್ರು ರಾಷ್ಟ್ರದ ಮುಖ್ಯಸ್ಥ ಬಂದ  ರೀತಿ ವ್ಯವಹಾರ ಮಾಡುತ್ತಿದ್ದರು. 9 ವರ್ಷ ಹಿಂದೆ ಕಾಶ್ಮೀರಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ನೀಡಿದ್ದು ಬರೋಬ್ಬರಿ 37 ಸಾವಿರ ಕೋಟಿ ಪ್ಯಾಕೇಜ್. ಆದರೆ ಕಾಶ್ಮೀರದ ಜನತೆ ತಮ್ಮ ಪ್ರಧಾನಿಯನ್ನು ಸ್ವಾಗತಿಸಿದ್ದು ಮಾತ್ರ ಇಡಿ ಕಣಿವೆಯನ್ನು ಬಂದ್ ಮಾಡುವುದರ ಮೂಲಕ.
ನಮ್ಮನ್ನು ಶ್ರೀನಗರ ವಿಮಾನ ನಿಲ್ದಾಣದಿಂದ ಹೋಟೆಲ್‌ಗೆ ಕರೆದುಕೊಂಡು ಬಂದ ಚಾಲಕ ಶೌಕತ್, ಪ್ರಧಾನಿ ಹಾಗು ಸೋನಿಯಾ ಗಾಂಧಿಗೆ ಹಿಡಿಶಾಪ ಹಾಕುತ್ತಿದ್ದ. 'ಕಾಶ್ಮೀರದಲ್ಲಿ ಸೇನೆಗೆ ನೀಡಿದ ವಿಶೇಷ ಕಾನೂನು ಹಿಂದೆ ತೆಗೆದುಕೊಳ್ಳುವವರೆಗೆ ಕಾಶ್ಮೀರದ ಜನತೆ ದೆಹಲಿಯನ್ನು ನಂಬುವುದಿಲ್ಲ. ಒಂದು ಕಡೆ 15ರಿಂದ 20 ವರ್ಷದ ಯುವಕರ ಮೇಲೆ ದಿನವೂ ಗುಂಡು ಹಾರಿಸಿ ನಂತರ ಇಂಥ ಪ್ಯಾಕೇಜ್ ನೀಡಿದರೆ ಏನು ಅರ್ಥ? ನಿಮ್ಮ ದೆಹಲಿ ನಮ್ಮ ಯುವಕರನ್ನು ಇರುವೆಗಳಂತೆ ಹೊಸಕಿ ಹಾಕುತ್ತಿದೆ' ಎಂದು ಹೇಳುತ್ತಾ ಸುಮಾರು 20 ಕಿಲೋಮೀಟರ್ ಸುತ್ತು ಹಾಕಿ ನಮ್ಮನ್ನು ಹೇಗೋ ಹೋಟೆಲ್‌ಗೆ ತಂದು ಬಿಟ್ಟ. 'ಇವತ್ತು ಎಲ್ಲಿಯೂ ಹೊರಗೆ ಹೋಗಬೇಡಿ. ನಾಳೆ ಪ್ರಧಾನಿ ಶ್ರೀನಗರದಿಂದ ದೆಹಲಿಗೆ ಹಾರಿದ ಮೇಲೆ ಎಲ್ಲವೂ ನಾರ್ಮಲ್ ಆಗುತ್ತದೆ. ಹೋಟೆಲ್ ರೂಂನಲ್ಲೆ ಇರಿ. ಕೆಹೆವಾ ಚಾಯ್ ಕುಡಿಯಲು ಮರೆಯಬೇಡಿ' ಎಂದು ಹೇಳಿ ಹೊರಟುಹೋದ.
ಕೆಹೆವಾ ಕಾಶ್ಮೀರದ ಜನಪ್ರಿಯ ಚಹಾ. ಗ್ರೀನ್ ಟೀಗೆ ದಾಲ್ಚೀನಿ ಇಲಾಚಿ  ಸೇರಿಸಿ ನಂತರ ಕಾಶ್ಮಿರದಲ್ಲೇ ಬೆಳೆಯಲಾಗುವ ಕೇಸರ್ ಸೇರಿಸಿದರೆ ತಯಾರಾಗುವ ಚಹಾ ಕಾಶ್ಮೀರದ ಪ್ರಸಿದ್ಧ ಕೇಹೆವಾ ಚಾಯ್. ಹೆಚ್ಚು ಚಳಿ ಇರುವ ಕಾಶ್ಮೀರ ಕಣಿವೆಯಲ್ಲಿ ಬೆಚ್ಚಗಿನ ಕಲರ್‌ಫುಲ್ ಪ್ಹೆರನ್ ಬಟ್ಟೆ ಧರಿಸಿ ಕಾಂಗಡಿ ಎಂಬ ಇದ್ದಿಲು ಹಾಕಿ ಕಾಯಿಸಿಕೊಳ್ಳುವ ಕಟ್ಟಿಗೆಯ ಬುಟ್ಟಿ ಕೈಯಲ್ಲಿ ಹಿಡಿದು ಕೆಹೆವಾ ಚಾಯ್ ಕುಡಿಯುತ್ತ ಆಕಾಶದ ಕಡೆ ನೋಡುತ್ತಾ ಕೂರುವುದೇ ಕಾಶ್ಮೀರಿಗರ ಇಷ್ಟದ ಟೈಂಪಾಸು.
ಹಾಗೆ ನೋಡಿದರೆ 90ರ ದಶಕದಲ್ಲಿ ಉಗ್ರರ ಚಟುವಟಿಕೆಗಳಿಂದ ನಲುಗಿದ ಕಾಶ್ಮೀರ ಈಗ ಶಾಂತವಾಗಿದೆ. ದಿನಕ್ಕೊಂದರಂತೆ ನಡೆಯುತ್ತಿದ್ದ ಉಗ್ರರ ಅಟ್ಟಹಾಸಗಳ ಸಂಖ್ಯೆ ಕಡಿಮೆಯಾಗಿದೆ. ವಿಶ್ವದ ಪ್ರಸಿದ್ಧ ಪ್ರವಾಸಿ ತಾಣ ಮತ್ತೆ ಯಾತ್ರಿಗಳಿಂದ ತುಂಬಿ ತುಳುಕುತ್ತಿದೆ. ಕಳೆದ ವರ್ಷ ಸುಮಾರು 15 ಲಕ್ಷಪ್ರವಾಸಿಗರು ಶ್ರೀನಗರಕ್ಕೆ ಬಂದು ಹೋಗಿದ್ದಾರೆ. 1989ರಲ್ಲಿ ಜೆಕೆಎಲ್‌ಎಫ್ ಉಗ್ರರು ಕಾಶ್ಮೀರದ ಪೋಲಿಸ್ ಮಹಾನಿರ್ದೇಶಕನನ್ನು ಹತ್ಯೆಗೈದ ನಂತರ ಸುಮಾರು 18 ವರ್ಷ ಹತೋಟಿ ಮೀರಿ ನಡೆದ ಘಟನೆಗಳು ಈಗ ನಿಧಾನವಾಗಿ ಇಳಿಕೆಯಾಗುತ್ತಿವೆ. ಭಯೋತ್ಪಾದನೆ ಮತ್ತು ಪ್ರವಾಸೋದ್ಯಮ ಎರಡು ಕೂಡ ನೇರವಾಗಿ ಸಂಬಂಧ ಪಡುವುದರಿಂದ ಸ್ಥಳೀಯ ಜನತೆ ಪ್ರವಾಸೋದ್ಯಮವನ್ನು ಆಯ್ದುಕೊಳ್ಳುತ್ತಿದ್ದಾರೆ. ಇದು ಅಲ್ಲಿನ ಜನರಿಗೆ ದೆಹಲಿಯ ಮೇಲೆ ಪ್ರೀತಿ ಉಂಟಾಗಿದೆ ಎಂದು ಅರ್ಥವಲ್ಲ. ಆದರೆ ಭಾರತ ಎಷ್ಟು ಅನಿವಾರ್ಯ ಎಂಬುದು ಆರ್ಥಿಕ ಕಾರಣಗಳಿಂದ ನಿಧಾನವಾಗಿ ಅರ್ಥವಾಗುತ್ತಿದೆ.
ದಾಲ್ ಲೇಕ್‌ನಲ್ಲಿ ಸಂಜೆ ಶಾಲು ಮಾರುವ ಆದಿಲ್ ಖಾನ್ '24 ವರ್ಷಗಳ ನಿರಂತರ ಭದ್ರತಾ ಪಡೆಗಳ ಜೊತೆಗಿನ ಕಾದಾಟದ ನಂತರ ನಾವು ದಣಿದಿದ್ದೇವೆ. ಸುಮಾರು 2 ಲಕ್ಷಯುವಕರನ್ನು ಕಾಶ್ಮೀರ ಕಳೆದುಕೊಂಡಿದೆ. ಇದೊಂದು ವಿಷಚಕ್ರ. ಮೊದಲು ನಾವು ಶಸ್ತ್ರ ಹಿಡಿದೆವು. ಪರಿಣಾಮ ಬಂದಿದ್ದು ವಿಶಾಲ ಭಾರತೀಯ ಸೇನೆ. ನಮ್ಮವರು ಒಂದು ದಾಳಿ ನಡೆಸಿದರೆ ಸೇನೆಯವರು ಹತ್ತು ಪ್ರತಿ ದಾಳಿ ನಡೆಸುತ್ತಾರೆ. ನಮ್ಮ ಕುಟುಂಬ ಮಹಿಳೆಯರು ಮಕ್ಕಳು ಇದರ ಪರಿಣಾಮ ಎದುರಿಸಬೇಕಾಗುತ್ತದೆ. ಹೀಗೆಯೇ ದಾಳಿ ಪ್ರತಿ ದಾಳಿಯ ಚಕ್ರದಲ್ಲಿ ಸಿಲುಕಿದರೆ ತಿನ್ನುವುದು ಏನು? ವಿದೇಶಿ ಪ್ರವಾಸಿಗರು ಹೋಗಲಿ ನಿಮ್ಮ ದೆಹಲಿಯವರೇ ಇಲ್ಲಿ ಬರುವುದಿಲ್ಲ. ನಮ್ಮ ಉತ್ಪನ್ನದ ಮೂಲವೇ ಪ್ರವಾಸೋದ್ಯಮ. ಹೀಗಾಗಿ ಸ್ಥಳಿಯರು ಈಗ ಉಗ್ರರಿಗೆ ಸಹಕಾರ ನೀಡುವುದಿಲ್ಲ. ಬೆಂಬಲ ಇಲ್ಲ ಎಂದು ಇದರ ಅರ್ಥ ಅಲ್ಲ. ಆದರೆ ಸಹಕಾರ ನೀಡುವ ಸ್ಥಿತಿಯಲ್ಲಿ ನಾವಿಲ್ಲ' ಎಂದು ಬಡಬಡಾಯಿಸುತ್ತಿದ್ದ.
ಕಾಶ್ಮೀರದ ಯಾವುದೇ ಯುವಕರನ್ನು ಸ್ವಲ್ಪ ವಿಶ್ವಾಸದಿಂದ ಮಾತನಾಡಿಸಿದರೆ ಸಾಕು. ಗತಿಸಿದ ದಿನಗಳ ಕಥೆಯನ್ನೇ ಕಣ್ಣ ಮುಂದೆ ತೆರೆದಿಡುತ್ತಾರೆ.
ವಿ.ಪಿ. ಸಿಂಗ್ ಸರ್ಕಾರದಲ್ಲಿ ಆಗ ತಾನೇ ಗೃಹಮಂತ್ರಿಯಾಗಿದ್ದ ಮುಫ್ತಿ ಮೊಹಮ್ಮದ್ ಸಯಿದ್ ಪುತ್ರಿಯನ್ನು ಕೆಲ ಯುವಕರು ಮೆಡಿಕಲ್ ಕಾಲೇಜ್ ಬಸ್‌ನಿಂದ ಅಪಹರಿಸಿ ಬಂದೂಕಿನ ಮೊನೆಯ ಮೇಲೆ ಕೇಂದ್ರ ಸರ್ಕಾರವನ್ನು ತನ್ನ ಬೇಡಿಕೆಗಳಿಗೆ ಮಣಿಯುವಂತೆ ಮಾಡಿದ ಸಂಜೆ ಶ್ರೀನಗರದ ಓಲ್ಡ್ ಸಿಟಿಯಿಂದ ಹೊರಟ ಮೆರವಣಿಗೆ ನೋಡಿದರೆ, ಮುಂಜಾನೆಯ ಸೂರ್ಯ ಉದಯಿಸುವಾಗ ನಾವು ಭಾರತದಿಂದ ಬೇರೆಯಾಗುತ್ತೇವೆ ಎಂದು ಅನಿಸಿತ್ತಂತೆ. ಒಂದು ಕಡೆ ಬಡತನ ನಿರುದ್ಯೋಗ ಇನ್ನೊಂದು ಕಡೆ ಪ್ರತ್ಯೇಕತೆಯ ಭ್ರಮೆ. ಒಂದು ಕಡೆ ಪಾಕಿಸ್ತಾನದ ಹಣದ ಆಮಿಷ ಇನ್ನೊಂದು ಕಡೆ ಜಿಹಾದ್ ಭ್ರಮೆ. ಹೀಗೆ  ಅನೇಕ ಕಾರಣಗಳಿಂದ ಬಂದೂಕು ಹಿಡಿದಿದ್ದ ಕಾಶ್ಮೀರದ ಸುಮಾರು ಒಂದೂವರೆ ಲಕ್ಷಯುವಕರು ಹತರಾಗಿದ್ದಾರೆ. 'ಜಿಸ್ ಕೊ ಹೈ ಖುದಾ ಸೆ ಖೌಫ್ ಉಠಾಲೊ ಕಲಾಶ್ನಿಕೋವ್‌' ಅಂದರೆ ಅಲ್ಲಾನಿಗೆ ಹೆದರುವ ಯುವಕರೇ ಕಲಾಶ್ನಿಕೋವ್ ಎತ್ತಿಕೊಳ್ಳಿ ಎಂದು ಶ್ರೀನಗರದಲ್ಲಿ ಘೋಷಣೆ ಕೂಗುತ್ತಿದ್ದ ಬಹುತೇಕ ಯುವಕರು ಈಗ ಭಯೋತ್ಪಾದನೆಯ ಬಗ್ಗೆ ಭ್ರಮನಿರಸನಗೊಂಡವರಂತೆ ಮಾತನಾಡುತ್ತಾರೆ. ನಾವು ಇಳಿದುಕೊಂಡಿದ್ದ ಹೋಟೆಲ್‌ನಲ್ಲಿ ಕೆಲಸ ಮಾಡುವ ಯುವಕನೊಬ್ಬ ಹೇಳಿದ್ದಪ ಹೀಗೆ- 'ಭಾರತದಿಂದ ಸ್ವಾತಂತ್ರ್ಯ ನಮ್ಮ ಕನಸು. ಆದರೆ ಬಂದೂಕಿನಿಂದ ಇದು ಸಿಗುವುದಿಲ್ಲ. ಹತ್ತು ವರ್ಷಗಳ ಹಿಂದೆ ನಾವೆಲ್ಲರೂ ಬಂದೂಕು ನೋಡಿದವರೇ. ಆದರೆ ಅದರಿಂದ ಏನೂ ಸಾಧ್ಯವಿಲ್ಲ. ನಾವು ಪಷ್ಮಿನಾ ಶಹತೂಶ್ ಶಾಲುಗಳಿಗಾಗಿ ವಿಶ್ವದಲ್ಲೆಡೆ ಹೆಸರು ಪಡೆದಿದ್ದೇವೆ. ಅದನ್ನೇ ಮುಂದುವರೆಸಿಕೊಂಡು ಹೋಗಬೇಕೆಂದು ನಮಗೆ ಅರಿವಾಗತೊಡಗಿದೆ' ಎಂದು ಹೇಳುತ್ತಿದ್ದ. ಈ ಯುವಕನ ಮೂರು ಬಾಲ್ಯಮಿತ್ರರು ಬಂದೂಕು ಹಿಡಿದು ಭದ್ರತಾ ಪಡೆಗಳ ಎನ್‌ಕೌಂಟರ್‌ನಲ್ಲಿ ಅಸು ನೀಗಿದ್ದಾರೆ.
ಕಾಶ್ಮೀರದ ಪಷ್ಮಿನಾ ಶಾಲು ವಿಶ್ವಪ್ರಸಿದ್ಧ. ಅಮೆರಿಕದ ಬಿಲ್ ಕ್ಲಿಂಟನ್‌ನಿಂದ ಹಿಡಿದು ವಾಜಪೇಯಿ ವರೆಗೆ ಎಲ್ಲರೂ ಪಷ್ಮಿನಾದ ಫ್ಯಾನ್‌ಗಳೇ. ಹಿಮಾಲಯದ ಎತ್ತರದಲ್ಲಿ ಇರುವ ಮೇಕೆಗಳ ಉಣ್ಣೆಯಿಂದ ತಯಾರಾಗುವ ಶಾಲುಗಳು 15 ಸಾವಿರವರೆಗೂ ಬೆಲೆ ಬಾಳುತ್ತವೆ. ಶಹತೂಶ್ ಎನ್ನುವ ಶಾಲ್ ತಯಾರಿಕೆಯನ್ನು ಪ್ರಾಣಿ ಹತ್ಯೆಯ ಕಾರಣದಿಂದ ಸರ್ಕಾರ ನಿಷೇಧಿಸಿದೆಯಾದರೂ, ಈ ಶಾಲ್‌ಗಳು ಇನ್ನೂ ಇಲ್ಲಿ ಸಿಗುತ್ತವೆ. ಉಗ್ರರ ಅತಿರೇಕದ ದಿನಗಳಲ್ಲಿ ಕೂಡ ಕಾಶ್ಮೀರದ ಆರ್ಥಿಕತೆಯನ್ನು ಕಾಪಾಡಿದ್ದು ಇವೇ.
ಸದ್ಯ ಕಾಶ್ಮೀರದಲ್ಲಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಗೆ ಒಳ್ಳೆಯ ಹೆಸರಿದೆ. ಉಮರ್ ಮಾಡುತ್ತಿರುವ ಅಭಿವೃದ್ಧಿ ಕೆಲಸಗಳು ಜನಪ್ರಿಯತೆ ಗಳಿಸಿವೆ. ಒಂದು ಕಾಲದಲ್ಲಿ ಶ್ರೀನಗರದಲ್ಲಿ ಹರತಾಳದ ಹುಕುಮತ್ ನಡೆಸುತ್ತಿದ್ದ ಹುರಿಯತ್ ನಾಯಕರ ಬಗ್ಗೆ ಜನರಿಗೆ ಒಳ್ಳೆಯ ಅಭಿಪ್ರಾಯ ಇದ್ದಂತೆ ಕಾಣುವುದಿಲ್ಲ. ಓಲ್ಡ್ ಸಿಟಿಯಲ್ಲಿ ಹುರಿಯತ್ ಪ್ರಾಬಲ್ಯವಿದೆಯಾದರೂ ಬಹುತೇಕ ಜನ ಈ ನಾಯಕರು ತಮ್ಮ ಮಕ್ಕಳನ್ನು ಅಮೆರಿಕದಲ್ಲಿ ಓದಿಸಿ ಇಲ್ಲಿನ ಯುವಕರನ್ನು ಸೇನೆಯ ಮೇಲೆ ಕಲ್ಲು ಹೊಡೆಯುವ ಕೆಲಸಕ್ಕೆ ಹಚ್ಚುವುದರ ಬಗ್ಗೆ ಕಿಡಿ ಕಾರುತ್ತಾರೆ.
90ರ ದಶಕದ ಮೊದಲು ಕಾಶ್ಮೀರದಲ್ಲಿ 13 ಚಿತ್ರಮಂದಿರಗಳಿದ್ದವು. ಆದರೆ ಈಗ ಒಂದೂ ನಡೆಯುವುದಿಲ್ಲ. ಉಗ್ರರು ಚಿತ್ರ ವೀಕ್ಷಣೆ ಇಸ್ಲಾಂಗೆ ವಿರುದ್ಧ ಎಂದು ಘೋಷಿಸಿದ ನಂತರ ಇವು ಬಾಗಿಲು ತೆರೆದಿಲ್ಲ. ಜೀನ್ಸ್‌ಧಾರಿಗಳೇ ತುಂಬಿಕೊಂಡಿರುವ ಕಾಲದಲ್ಲಿ ಕಾಶ್ಮೀರದಲ್ಲಿ ಜೀನ್ಸ್ ಕಾಣ ಸಿಗುವುದಿಲ್ಲ. ಎಲ್ಲ ಮಹಿಳೆಯರು ಬುರ್ಖಾ ಹಾಕಿಕೊಳ್ಳುವುದಿಲ್ಲವಾದರೂ ಸ್ಕಾರ್ಫ್‌ಧಾರಣೆ ಕಡ್ಡಾಯ. ಉಗ್ರರ ಪರಾಕಾಷ್ಠೆಯ ಕಾಲದಲ್ಲಿ ಕಾಶ್ಮೀರ ಕಣಿವೆಯಲ್ಲಿ ಇಸ್ಲಾಂ ಕಾನೂನಿನ ಅಡಿಯಲ್ಲಿ ಮದ್ಯದ ಅಂಗಡಿಗಳು ಮುಚ್ಚಿದವು. ಈಗಲೂ ಒಂದೆರಡು ಅಂಗಡಿಗಳು ಇರಬಹುದು ಅಷ್ಟೇ. ಇಲ್ಲಿನ ಯುವಕರು ಮದ್ಯ ಕುಡಿಯುವುದು ಕಡಿಮೆ. ಆದರೆ ಚಳಿ ಕಾರಣದಿಂದ ಅತಿಯಾಗಿ ಸಿಗರೇಟು ಸೇದುತ್ತಾರೆ.
15 ವರ್ಷ ಹಿಂದೆ ಶ್ರೀನಗರದಲ್ಲಿ ಕಾಫಿ ಕುಡಿಯುವುದೆಂದರೆ ಭಾರತದ ಜೊತೆ ಗುರುತಿಸಿಕೊಂಡಂತೆ. ಆದರೆ ಈಗ ಲಾಲ್‌ಚೌಕ್ ಹತ್ತಿರವೇ ಕೆಫೆ ಅರೇಬಿಯಾ ಹಾಗು ಕೆಫೆ ಕಾಫೀ ಡೇ ತೆರೆದುಕೊಂಡಿವೆ. ಜೋಡಿಗಳು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದೇ ನಿಷಿದ್ಧ ಎಂಬ ದಿನಗಳು ದೂರವಾಗಿ ಇಲ್ಲಿನ ಯುವಕ ಯುವತಿಯರು ನಿಧಾನವಾಗಿ ಕಾಣಿಸಿಕೊಳ್ಳತೊಡಗಿದ್ದಾರೆ.
ಇವೆಲ್ಲವೂ ಹೊಸ ಶ್ರೀನಗರದ ಕಥೆಯಾದರೆ, ಓಲ್ಡ್ ಸಿಟಿ ಮಾತ್ರ ಇನ್ನೂ ಪ್ರತ್ಯೇಕತೆಯ ಕೇಂದ್ರ ಸ್ಥಾನ. ನೀವು ಒಂದು ಸಲ ಒಳಪ್ರವೇಶಿಸಿದರೆ 'ಗೋ ಇಂಡಿಯಾ ಗೋ' ಎಂಬ ಗೋಡೆ ಬರಹಗಳು ಉರ್ದುವಿನಲ್ಲಿ ಬರೆದ ಭಾರತ ವಿರೋಧಿ ಪೋಸ್ಟರ್‌ಗಳು ಕಾಣಸಿಗುತ್ತವೆ. ಗಲ್ಲಿ ಗಲ್ಲಿಗಳಲ್ಲಿ ಸೇನೆಯ ಯೋಧರು ಕಾಣಸಿಗುತ್ತಾರೆ. ಕಳೆದ 5 ತಿಂಗಳಲ್ಲಿ ಇಲ್ಲಿ ಸೇನೆಯ ಮೇಲೆ 10 ದಾಳಿಗಳು ನಡೆದಿವೆ. ಪ್ರಧಾನಿ ಭೇಟಿಯ ಹಿಂದಿನ ದಿನ ನಡೆದ ದಾಳಿ ಕೂಡ ನಡೆದಿದ್ದು ಓಲ್ಡ್‌ಸಿಟಿಗೆ ಹತ್ತಿಕೊಂಡೇ ಇರುವ ಹಯ್ದರ್ಪೋರಾ ಬಾರಾಮುಲ್ಲಾಗೆ ಹೋಗುವ ರಸ್ತೆಯಲ್ಲಿ. ನಮ್ಮನ್ನು ಅಲ್ಲಿಗೆ ಕರೆದುಕೊಂಡು ಹೋದ ಆಟೋ ಚಾಲಕ ಶಾಹಿದ್ ಹೇಳುವ ಪ್ರಕಾರ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುವ ಮುಜಾಹಿದೀನ್‌ಗಳನ್ನೂ ಓಲ್ಡ್‌ಸಿಟಿಯ ಜನ ಅಳಿಯನನ್ನು ನೋಡಿಕೊಂಡಂತೆ ಸತ್ಕರಿಸುತ್ತಾರೆ. ಆದರೆ ಇಲ್ಲೇ ವಾಸಿಸುವ ಚಹಾ ಅಂಗಡಿ ನಡೆಸುವ ಇರ್ಫಾನ್ ಭಟ್ ಪ್ರಶ್ನಿಸುವುದು ಹೀಗೆ- 'ದೆಹಲಿಯಲ್ಲಿ ಅತ್ಯಾಚಾರದ ಘಟನೆ ಖಂಡಿಸಿ ಯುವಕರು ಬೀದಿಗೆ ಇಳಿದು ಕಲ್ಲುಗಳಿಂದ ಅಟ್ಯಾಕ್ ಮಾಡಿದಾಗ ಬರೀ ನೀರು ಹೊಡೆಯುವ ನಿಮ್ಮ ಸರ್ಕಾರ ನಮ್ಮ ಯುವಕರು ಬೀದಿಗೆ ಇಳಿದ ತಕ್ಷಣ ಗುಂಡು ಹೊಡೆಯುವುದು ಏಕೆ?'
ಇದೇ ಓಲ್ಡ್ ಸಿಟಿಯಲ್ಲಿ ಕಾಶ್ಮೀರಿ ಪಂಡಿತರ ಮೂರು ಗಲ್ಲಿಗಳಿದ್ದವು. ಆದರೆ ಈಗ ಅಲ್ಲಿ ಯಾವೊಬ್ಬ ಹಿಂದುವೂ ಇಲ್ಲ. ಹಿಂದೂಗಳ ಸಣ್ಣ ಸಣ್ಣ ಮಂದಿರಗಳು ಕೂಡ ಇಲ್ಲ. ಏನಿದ್ದರು ಇಸ್ಲಾಂ ರಾಜ್ಯ. ಶ್ರೀನಗರದಿಂದ ಗಂಡೆರ್‌ಬಾಲಗೆ ಹೋಗುವ ದಾರಿಯಲ್ಲಿರುವ ಪಂಡಿತರ ಆರಾಧ್ಯ ದೈವತೆ ಖೀರ್‌ಭವಾನಿ ಮಂದಿರಕ್ಕೆ ಹೋದರೆ ನಿಜಕ್ಕೂ ಪಂಡಿತರ ಪರಿಸ್ಥಿತಿ ಅರ್ಥವಾಗುತ್ತದೆ. ಮಂದಿರದ ಸುತ್ತಲು ಮುಸ್ಲಿಂ ಕುಟುಂಬಗಳು. ಪೂಜೆ ನಡೆಸುವ ಹಿಂದೂ ಅರ್ಚಕರ ಕುಟುಂಬಗಳು ಮಂದಿರದ ಪ್ರಾಂಗಣದ ಒಳಗೆ ಬಿಎಸ್‌ಎಫ್ ಭದ್ರತೆಯಲ್ಲಿ ಬದುಕುವ ಅನಿವಾರ್ಯತೆ. ಇಲ್ಲಿನ ಸ್ಥಳೀಯ ವಯಸ್ಕ ಮುಸ್ಲಿಮರೇನೋ ಪಂಡಿತರು ಮತ್ತೆ ಕಣಿವೆಗೆ ಬಂದು ನೆಲೆಸಲಿ ಎನ್ನುತ್ತಾರೆ. ಆದರೆ ಉಗ್ರರು ನಡೆಸಿದ ಅಟ್ಟಹಾಸವನ್ನು ಕಣ್ಣಾರೆ ನೋಡಿರುವ ಪಂಡಿತರು ವಾಪಸಾಗಲು ತಯಾರಿಲ್ಲ. ನಾವು ಜಮ್ಮುಗೆ ಹೋದಾಗ ಸಿಕ್ಕಿದ್ದ ಕಾಶ್ಮೀರಿ ಪಂಡಿತ, ಸುಪ್ರಿಂ ಕೋರ್ಟ್ ಹಿರಿಯ ವಕೀಲರೊಬ್ಬರು 'ನಮಗೆ ಕಾಶ್ಮೀರದ ಬಗ್ಗೆ ಸಹಜ ಸೆಳೆತವಿದೆ. ಆದರೆ ಅಲ್ಲಿ ಹೋಗಿ ನೆಲೆಸಲು ಈಗ ಸಾಧ್ಯವಿಲ್ಲ. ನಮ್ಮ ಮಕ್ಕಳಿಗಂತೂ ಕಾಶ್ಮೀರ ಬೇಡ ಎನಿಸಿಬಿಟ್ಟಿದೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕಷ್ಟಪಟ್ಟು ಕೊಟ್ಟಿದ್ದೇವೆ. ಮತ್ತೆ ಅಲ್ಲಿ ಹೋಗಿ ನರಕದಲ್ಲಿ ಬದುಕುವುದು ಏಕೆ?' ಎಂದು ಖಾರವಾಗಿ ಕೇಳುತ್ತಾರೆ.
ನಮ್ಮನ್ನು ಬಾರಾಮುಲ್ಲ ಹಾಗು ಗುಲ್‌ಮಾರ್ಗ್‌ಗೆ ಕರೆದುಕೊಂಡು ಹೋಗಿದ್ದ 55 ವರ್ಷದ ಅಬ್ದುಲ್ ಮಜಿದ್ ಹೇಳುವ ಪ್ರಕಾರ, ಕಾಶ್ಮೀರದ ದೊಡ್ಡ ಶತ್ರು ಪಾಕಿಸ್ತಾನ ಎನ್ನುವುದು ನಮ್ಮ ಯುವಕರಿಗೆ ಅರ್ಥವಾದಾಗ ಮಾತ್ರ ಕಾಶ್ಮೀರ ಸಮಸ್ಯೆ ಕೊನೆಗಾಣುತ್ತದೆ. ಶಿಕ್ಷಿತ ಯುವಕರಿಗೆ ಇದು ಅರ್ಥವಾಗುತ್ತಿದೆ. ಆದರೆ ಇಲ್ಲಿರುವ ದೊಡ್ಡ ಸಮಸ್ಯೆ, ಚೆನ್ನಾಗಿ ಕಲಿತರೂ ಕಾಶ್ಮೀರಿಗರು ಎನ್ನುವ ಕಾರಣಕ್ಕಾಗಿ ದೆಹಲಿ ಮುಂಬೈನಲ್ಲಿ ಸಂದೇಹದಿಂದಾಗಿ ನೌಕರಿ ಸಿಗುತ್ತಿಲ್ಲ. ಇಲ್ಲಿ ಪ್ರವಾಸೋದ್ಯಮ ಬಿಟ್ಟು ಬೇರೆ ನೌಕರಿಗಳಿಲ್ಲ. ಇತ್ತೀಚೆಗೆ ಜೋಜಿಲಾ ಪಾಸ್‌ನನ  ಬಂಡೆಯ ಮೇಲೆ 'ವೆಲ್ಕಂ ಟು ತಾಲಿಬಾನ್‌' ಎಂದು ಬರೆಯಲಾಗಿತ್ತಂತೆ. ಅಪಘಾನಿಸ್ತಾನದಿಂದ ಅಮೆರಿಕ ಪಡೆಗಳು ತೆರಳಿದ ಮೇಲೆ ಅಲ್ಲಿನ ತಾಲಿಬಾನ್ ಮುಜಾಹಿದಿನ್‌ಗಳು ಕಾಶ್ಮೀರಕ್ಕೆ ಬರುತ್ತಾರೆ ಎಂಬುದು ಇದರ ಅರ್ಥ. ಕಾಶ್ಮೀರದಲ್ಲಿ ಈಗ ಎಲ್ಲೆಡೆ ಇದೇ ಚರ್ಚೆ. ಸ್ವರ್ಗವೆಲ್ಲಿಯಾದರೂ ಇದ್ದರೆ ಅದು ಕಾಶ್ಮೀರದಲ್ಲೇ ಎಂದು ಸೂಫಿ ಕವಿಗಳು ಹೊಗಳಿದ ನಾಡು ನಿಧಾನವಾಗಿ ಬದಲಾಗುತ್ತಿದೆ ಎನ್ನುವುದೇ ಸಮಾಧಾನದ ಸಂಗತಿ.

- ಪ್ರಶಾಂತ್ ನಾತು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!

"ತಿರಂಗಾ ಹಾರಿಸುವುದು ಅಪರಾಧವಲ್ಲ ಎಂಬುದನ್ನು ತೋರಿಸುತ್ತೇವೆ": ಅಕ್ಟೋಬರ್ 16ಕ್ಕೆ ತ್ರಿವರ್ಣ ಧ್ವಜದೊಂದಿಗೆ ಬನ್ನಿ- ಅಭಿಜಿತ್ ದೀಪ್ಕೆ ಕರೆ

ಸುಪ್ರೀಂಕೋರ್ಟ್​ಗೆ ನನ್ನ ಬಗ್ಗೆ ತಪ್ಪು ಮಾಹಿತಿ: ಸರ್ಕಾರದ ವಿರುದ್ಧ ಡಿಜಿಪಿ ಅಲೋಕ್ ಕುಮಾರ್ ಅಸಮಾಧಾನ!