ಚಿಗುರು ಎಂಬ ಮಾವಿನ ಮರವಿತ್ತು. ಅಲ್ಲಿ ಗಾನಾ ಎಂಬ ಕೋಗಿಲೆ ಇತ್ತು. ಮಾವಿನ ಚಿಗುರು ತಿಂದು ಬದುಕುತ್ತಿದ್ದ ಈ ಗಾನಾ ದೊಡ್ಡದಾದ ಗೂಡು ಕಟ್ಟಿದ್ದಳು. ಗಾನಾ ಬಡವ, ಅಶಕ್ತರ ಕಷ್ಟಕ್ಕೆ ಕರಗುತ್ತಿದ್ದಳು. ಅವಳ ಮಾತು ಮಧುರ. ಹಾಡು ಮಂಜುಳ ಗಾನ.
ಒಂದು ದಿನ ಮಾವಿನ ಮರದಲ್ಲಿ ಕೆಂಬೂತ ಬೆಂಕಿಯ ಕಿಡಿ ಸಿಡಿದು ಚೀರುತ್ತಿದ್ದ. ಅವನ ಅಳುವಿಗೆ ಕಾರಣ ಕೇಳಿದಳು ಈ ಗಾನಾ. ಅಲ್ಲದೇ ಮೆಲ್ಲಗೆ ಕೈ ಹಿಡಿದು ಗೂಡಿಗೆ ಕರೆತಂದಳು. ಔಷಧಿ ಹಚ್ಚಿದಳು. 'ನೋವನ್ನು ತಡೆದುಕೊಳ್ಳಬಹುದು ಹಸಿವನ್ನು ತಡೆಯಲಾಗದು.' ಇರು ಹಣ್ಣು ತರುವೆ ಎಂದು ಹೋದಾಗಿ ಸಿಹಿ ಹಣ್ಣಿನೊಂದಿಗೆ ಮರಳಿ ಬಂದಾಗ ಗೂಡು ಕೆಳಗೆ ಜಾರಿದೆ. ಅಲ್ಲದೇ ಕೆಂಬೂತ ಇವಳ ಮೊಟ್ಟೆಗಳನ್ನು ತುಳಿದು ಹಾಳು ಮಾಡಿ ಹಾರಿ ಹೋಗಿದೆ. ಇದನ್ನೆಲ್ಲ ನೋಡಿ ಕಣ್ಣೀರು ಹಾಕಿ ತನಗೆ ತಾನೇ ಸಮಾಧಾನ ಮಾಡಿಕೊಂಡು ಸುಮ್ಮನಾದಳು.
ಮತ್ತೆ ಕೆಲವು ದಿನ ಕಳೆಯಲು ಮತ್ತೊಂದು ಸುಂದರ ಗೂಡು ಹೆಣೆದಳು. ಮೊಟ್ಟೆ ಇಟ್ಟು ಮರಿ ಮಾಡಲು ಸಿದ್ಧಳಾದಳು. ಆಗ ಗೆಳತಿ ಗೀಜಗ ಅಲ್ಲಿಗೆ ಬಂದು ತನ್ನಲ್ಲೇ ಲೆಕ್ಕಾಚಾರ ಹಾಕಿಕೊಳ್ಳುತ್ತಾ... 'ದಯಾಳುವಿನ ಮುಂದೆ ದೀನ ಬೇಡಿದರೆ ತಾಣ ಸಿಗುವುದು' ಎಂಬ ಹಿರಿಯರ ಮಾತು ಸುಳ್ಳಲ್ಲ ಎಂದೆಣಿಸಿ. ಗಾನಾಳಲ್ಲಿ ಹೀಗೆಂದೆತು, ಗೆಳತಿ ಕೋಗಿಲಾ, 'ನನ್ನ ಗಂಡ ಗೂಡು ಕಟ್ಟಲು ಹೋದವ ಇನ್ನೂ ಬಂದಿಲ್ಲ. ನನಗೆ ನಿನ್ನಲ್ಲಿ ಜಾಗ ಕೊಡು ಕೋಗಿಲಾ..' ಎಂದಳು. ಬೆಳ್ಳಗಿದ್ದುದ್ದೆಲ್ಲಾ ಬೆಳಂದಿಗಳೆಂದು ನಂಬಿದ ಈ ಕೋಗಿಲೆ ಗೆಳತಿ ಗೀಜಗಳಿಗೆ ಜಾಗ ಕೊಟ್ಟಳು. ಈ ಗೆಳತಿಗಾಗಿ ತಿನ್ನಲು ಕಾಳು ತರಲು ಹಾರಿ ಹೋದಳು. ಮರಳಿ ಬಂದು ನೋಡುತ್ತಾಳೆ, ಗೆಳತಿಯ ಗಂಡ ಬಂದಿದ್ದಾನೆ, ಮೊಟ್ಟೆಗಳನ್ನು ನುಂಗಿದ್ದಾನೆ. ಅಲ್ಲದೇ ಗೂಡು ತನ್ನದೆಂದು ಬಾಗಿಲಿಗೆ ಅಡ್ಡವಾಗಿ ನಿಂತಿದ್ದಾನೆ. ಎದೆಯಲ್ಲಿ ಬೆಂಕಿ ಇಟ್ಟಂತಾಯಿತು. ಏನೂ ಮಾಡಲು ತೋಚದೇ ಅಳುತ್ತಾ ಮರದ ತುದಿಗೇರಿ ಕಣ್ಣೀರು ಸುರಿಸುತ್ತಾ ಕುಳಿತಳು.
ಸೂರ್ಯ ಮುಳುಗೆದ್ದ. ದಿನಗಳು ಉರುಳಿದವು. ಮತ್ತೆ ಹೊಸ ಗೂಡು ಕಟ್ಟಿದಳು ಈ ಕೋಗಿಲೆ. ಈಗ ಒಂದು ನಿರ್ಧಾರ ಕೈಕೊಂಡಳು. ಈ ಸಾರಿ ಯಾರೇ ಬರಲಿ ತನ್ನ ಗೂಡು ಬಿಟ್ಟು ಕೊಡಲಾರೆ, ಎಂದು. ಹಾಗೆ ಅಂದುಕೊಳ್ಳುವ ಹೊತ್ತಿಗೆ ಎದುರಿಗೆ ಮಳೆಯಲ್ಲಿ ತೋಯ್ದು ಬಂದ ಕಾಗೆ... ಕೋಗಿಲಕ್ಕಾ.. ಕೋಗಿಲಕ್ಕಾ.. ಎಂದು ಕರೆಯಿತು. 'ನೋದವರ ನೋವು ನೋದವರೇ ಬಲ್ಲರಂತೆ', ನನ್ನ ಗೂಡು ಗಾಳಿ ಮಳೆಗೆ ಬಿದ್ದು ಹೋಗಿದೆ. ಮೊಟ್ಟೆಯಿಡಬೇಕು ನಿನ್ನ ಗೂಡಿನಲ್ಲಿ ಜಾಗ ಕೊಡಮ್ಮಾ ಎಂದು ಬೇಡಿದಳು. 'ಯಾರದೋ ಸಿಟ್ಟು ಇನ್ನಾರಿಗೋ ಪೆಟ್ಟು' ಎಂಬಂತೆ 'ನಡಿ ಆಚೆ... ನಿಮ್ಮಂತಹ ಉಪಕಾರಗೇಡಿಗಳಿಗೆ ಜಾಗ ಕೊಟ್ಟು ಕಷ್ಟ ಪಟ್ಟಿದ್ದು ಸಾಕು. ಜಾಗವೂ ಇಲ್ಲ ಏನೂ ಇಲ್ಲ ಹೋಗು' ಎಂದು ಕಾಗೆಗೆ ಕೋಲಿನಿಂದ ಬಾರಿಸಿ ಕಳಿಸಿ ಬಾಗಿಲು ಹಾಕಿಕೊಂಡಿಳು.
ಮುಂದೆ ಕೋಗಿಲೆ ಬೆಚ್ಚನೆ ಗೂಡಿನಲ್ಲಿ ಮೊಟ್ಟೆ ಇಟ್ಟು ಅಬ್ಬಾ.. ಇನ್ನು ಯಾರ ತಂಟೆಯಿಲ್ಲ ಎನ್ನುತ್ತಾ ನೆಮ್ಮದಿಯಿಂದ ಇತ್ತು. ಹಸಿವ ನೀಗಿಸಲು ಕಾಳನರಸಿ ಗೂಡಿನಿಂದ ಹೊರಗೆ ಹೋದಳು. ಮರಳಿ ಬರಲು ತಡವಾಯಿತು. ಅಷ್ಟರಲ್ಲೇ ಧೋ ಧೋ ಎಂದು ಮಳೆ, ಗುಡುಗು ಮಿಂಚುಗಳ ಆರ್ಭಟ ಈ ಕೋಗಿಲೆಗೆ ಭಯಹುಟ್ಟಿಸಿತು ತನ್ನ ಮೊಟ್ಟೆಗಳ ಬಗ್ಗೆ ಆತಂಕದಿಂದಲೇ ಮಳೆಯಲ್ಲೇ ತೊಯ್ಯುತ್ತಾ ಹಾರಿ ಬಂದು ನೋಡಿದರೆ ಅಲ್ಲಿ ತನ್ನ ಮೊಟ್ಟೆಗಳಿಲ್ಲ! ಅಲ್ಲದೇ ಗೂಡು ಗಾಳಿಯ ಹೊಡೆತಕ್ಕೆ ಸಿಕ್ಕಿ ತೂರಾಡುತ್ತಿದೆ. ಮೇಲೆ ನೋಡಿದರೆ ಕಾಗೆ ತಾನೂ ಒಂದು ಗೂಡು ಕಟ್ಟಿಕೊಂಡಿತ್ತು. ತನ್ನ ಗೂಡಲ್ಲಿ ಕೂತು ಕಾವ್ ಕಾವ್ ಎನ್ನುತ್ತಿದ್ದುದ್ದನ್ನು ಕಂಡು ಈ ಕಾಗೆಯದೇ ಕುತಂತ್ರ, ತನ್ನ ಮೊಟ್ಟೆಗಳನ್ನು ಹಾಳು ಮಾಡಿರುವುದು ಕೂಡ ಇದೇ ಎಂದು ತೀರ್ಮಾನಿಸಿತು. ತಕ್ಷಣವೇ ಕಾಗೆಯ ಗೂಡಿಗೆ ನುಗ್ಗಿತು. ಏನಾಶ್ಚರ್ಯ ಈ ಕೋಗಿಲೆಯ ಮೊಟ್ಟೆಗಳು ಕಾಗಕ್ಕನ ಗೂಡಿನಲ್ಲಿ! ಬೆಚ್ಚಗೆ ಕಾವು ಕೊಡುತ್ತಾ ಕಾಗಕ್ಕ ಆರೈಕೆ ಮಾಡುತ್ತಿದ್ದಾಳೆ. ಅಯ್ಯೋ, 'ಕಾಗೆ ಬಣ್ಣ ಕಪ್ಪಾದರೂ ಗುಣ ಕಪ್ಪಲ್ಲ..' ತನ್ನ ಮರಿಗಳಿಗೆ ಇವಳೇ ಚಿಕ್ಕವ್ವ ಎಂದು ಮುಂದೆ ತಾನು ಗೂಡು ಕಟ್ಟುವುದು ಬೇಡವೆಂದು ತೀರ್ಮಾನಿಸಿದಳು. ಅಂದಿನಿಂದ ಕಾಗೆ ಗೂಡಿನಲ್ಲೇ ಮೊಟ್ಟೆ ಇಡತೊಡಗಿದಳು. ಕಾಗಕ್ಕನ್ನೂ ಸಹ ಕೋಗಿಲೆಯ ಮಕ್ಕಳನ್ನು ಮಮತೆಯಿಂದ ಜೋಪಾನ ಮಾಡಿದಳು. ಹೊಡೆಸಿಕೊಂಡ ಹೊಡೆತ ಕಾಗೆ ಮರೆತರೂ, ಮಾಡಿದ ಉಪಕಾರವನ್ನು ಕೋಗಿಲೆ ಮರೆಯಲಿಲ್ಲ. ಅದಕ್ಕೆ ಈಗಲೂ ಸಹ ಚಿ...ಕ್ಕವ್ವ... ಚಿ...ಕ್ಕವ್ವ... ಎಂದು ಉಪಕಾರವನ್ನು ಸ್ಮರಿಸುತ್ತಾ ಕರೆಯುತ್ತಾಳೆ.
-ಲಲಿತಾ.ಕೆ, ಹೊಸಪೇಟೆ