ಕೆಲ ತಿಂಗಳ ಹಿಂದಷ್ಟೇ ಅವರಿಬ್ಬರು ಮುಖಾಮುಖಿಯಾಗಿದ್ದರು. ಕ್ರಮೇಣ ಸ್ನೇಹಿತರಾದರು, ಪ್ರೇಮಿಗಳಾದರು ಮತ್ತು ಮದುವೆಯೂ ಆದರು. ಮೂರೇ ತಿಂಗಳಿಗೆ ಅವಳಿಗೆ ಅದೇನ್ ಅನಿಸಿತೋ...ಅವನು ತನ್ನನ್ನು ಬಲವಂತವಾಗಿ ಕರೆದೊಯ್ದು ಮದುವೆಯಾದ ಎಂದು ಪೊಲೀಸರಿಗೆ ದೂರು ನೀಡಿದಳು. ಪೊಲೀಸರು ಮನೆ ಬಳಿ ಬಂದು ರಂಪ ಮಾಡಿ ಅವನನ್ನು ಠಾಣೆಗೊಯ್ದರು. ಇದನ್ನು ಕಂಡು ಆಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾದ ಆತನ ಅಪ್ಪ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದರು. ಪತಿ ಅಗಲಿಕೆ, ಪುತ್ರನ ಪರಿಸ್ಥಿತಿ ಎರಡನ್ನೂ ಕಂಡ ತಾಯಿ ಕೂಡ ಆಘಾತಕ್ಕೀಡಾಗಿ ಆಸ್ಪತ್ರೆ ಸೇರಿದರು...
ಹೀಗೆ ಎಲ್ಲೋ ಇದ್ದ ಯುವಕ- ಯುವತಿಯನ್ನು ಮುಖಾಮುಖಿಯಾಗಿಸಿ ಇಷ್ಟೆಕ್ಕೆಲ್ಲಾ ರಂಪಾಟಕ್ಕೆ ಕಾರಣವಾದದ್ದು ಬೇರಾರೂ ಅಲ್ಲ, ಫೇಸ್‌ಬುಕ್. ಅರ್ಥಾತ್ ಮುಖಪುಸ್ತಕ!
ಹೌದು.. ಈ ಮುಖಪುಸ್ತಕದ ಒಂದೊಂದೇ ಪುಟಗಳನ್ನು ತೆರೆಯುತ್ತಾ ಹೋದರೆ ಇಂತಹ ದಾರುಣ ಅಧ್ಯಾಯಗಳಿಗೆ ಬರ ಇಲ್ಲ. ಆದರೆ ಅವುಗಳಲ್ಲಿ ಬೆಳಕಿಗೆ ಬರುವುದು ಮಾತ್ರ ಕೆಲವೇ ಕೆಲವು. ಇತ್ತೀಚೆಗಷ್ಟೇ ಮಡಿಕೇರಿಯಲ್ಲಿ ನಡೆದ ಮೇಲಿನ ಘಟನೆ ಅಂಥವುಗಳಿಗೊಂದು ತಾಜಾ ಉದಾಹರಣೆ.
ವಿಷಯ ಏನೆಂದರೆ ಬಹುತೇಕ ಎಲ್ಲರೂ ಟೈಂಪಾಸ್‌ಗೆಂದು ಬಳಸುತ್ತಿರುವ ಫೇಸ್‌ಬುಕ್ ಎಂತೆಂಥದೋ ಟೈಂಗಳನ್ನು ಫೇಸ್ ಮಾಡಬೇಕಾದಂತಹ ಸನ್ನಿವೇಶ ಸೃಷ್ಟಿಸುತ್ತಿದೆ. ಮುಖಪುಸ್ತಕ ತನಗೆ ಮುಖಾಮುಖಿಯಾದವರಲ್ಲಿ ಕೆಲವರ ನೆಮ್ಮದಿ ಕಸಿದುಕೊಂಡರೆ, ಮತ್ತೆ ಕೆಲವರ ಬದುಕನ್ನೇ ಕಿತ್ತುಕೊಂಡಿದೆ. ಇದಕ್ಕೆಲ್ಲಾ ಪ್ರಮುಖ ಕಾರಣ ಫೇಸ್‌ಬುಕ್ ಆಗಿ ಉಳಿಯದೇ ಫೇಕ್‌ಬುಕ್ ಆಗಿರುವುದು.
ಆಗಷ್ಟೇ ಕಂಡ ಮುಖದ ಹಿಂದಿನ ಗುಣ, ಆಗಷ್ಟೇ ತೆರೆದ ಪುಸ್ತಕದ ಮುಂದಿನ ಪುಟದಲ್ಲಿನ ವಿಷಯ ಏನು ಎಂಬುದನ್ನು ತಕ್ಷಣಕ್ಕೆ ನಿರ್ಧರಿಸುವುದು ಹೇಗೆ ಕಷ್ಟವೊ ಹಾಗೆಯೇ 'ಮುಖಪುಸ್ತಕ'ದಲ್ಲಿರುವ ಮುಖದ ಹಿಂದಿನ ವ್ಯಕ್ತಿತ್ವ ಕೂಡ.
ಏಕೆಂದರೆ ಇಲ್ಲಿ ನೈಜ ಮುಖಗಳಿಗಿಂತ ಮುಖವಾಡಗಳೇ ಹೆಚ್ಚು. ಒಂದು ವೇಳೆ ಮುಖಪುಸ್ತಕದಲ್ಲಿ ಕಂಡ ಮುಖ ನಿಜವಾಗಿದ್ದರೂ ಆ ಮುಖ ಮುಖೇನ ವ್ಯಕ್ತವಾಗುವ ಭಾವನೆಗಳು ಬಹಳಷ್ಟು ಬಾರಿ ನಿಜವಾಗಿರುವುದಿಲ್ಲ. ಕಾರಣ, ಆ ವ್ಯಕ್ತಿಗೆ ಭಾವನೆ ಮುಖ್ಯವಾಗಿರುವುದಿಲ್ಲ. ಇಂತಹ ಮುಖೇಡಿ ಮನುಷ್ಯರು ಭಾವನೆಗಳೊಂದಿಗೆ ಆಡುವ ಚೆಲ್ಲಾಟ ಮುಖಾಮುಖಿಯಾದ ಮತ್ತೊಬ್ಬರಿಗೆ ಸಂಕಟವನ್ನು ತಂದೊಡ್ಡುತ್ತವೆ. ಕೆಲವೊಮ್ಮೆ ಅವು ಸಂಕಟವಾಗುಳಿಯದೇ ಬದುಕಿಗೆ ಕಂಟಕವಾದ ಉದಾಹರಣೆಗಳೂ ಇವೆ ಮತ್ತು ಇಂಥ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿವೆ. ಅದರಲ್ಲಿ ನೀವೂ ಒಬ್ಬರಾಗಬಾರದೆಂದರೆ ಕೆಲ ಎಚ್ಚರಿಕೆಗಳನ್ನು ಪಾಲಿಸುವುದು ಮುಖ್ಯ.